ಮೊದಲ ಕವಿತೆಯ ರೋಮಾಂಚನ
ಎ ಎಸ್. ಮಕಾನದಾರ
80ರ ದಶಕದ ಕೊನೆ ಅಂಚಿನಲಿ ನಿರಂತರ ಸಾಹಿತ್ಯ ವೇದಿಕೆ ಗಜೇಂದ್ರಗಡ ದಲ್ಲಿ ಹುಟ್ಟಿಕೊಂಡಿತು. ಹುಬ್ಬಳ್ಳಿ ಗುಂಡಪ್ಪ ಪುಂಡಲೀಕ ಕಲ್ಲಿಗನೂರ್ ಇಬ್ಬರೂ ಹಿರಿಯರು ಕವನ ಕುಂಜ ಸಂಪಾದಿತ ಕವನ ಸಂಕಲನ ಪ್ರಕಟಿಸಿದರು. ಹುಬ್ಬಳ್ಳಿ ಗುಂಡಪ್ಪ ಗುಂಡಿನ ಗಿರಾಕಿ. ನಾನಾಗ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದೆ. ಅಂಗಡಿ ಬಾಗಿಲು ತೆರೆದೊಡನೆ ಮೊದಲ ಗಿರಾಕಿ ಗುಂಡಪ್ಪ. ಬಗಲಲ್ಲಿ ಹತ್ತಾರು ಪತ್ರಿಕೆ ತರುತ್ತಿದ್ದರು. ಗುಂಡಿನ ಮತ್ತು ಏರಿದಂತೆ ಕಾವ್ಯಝರಿ ಸರಾಗವಾಗಿ ಬರುತ್ತಿತ್ತು. ಬೆಳಿಗ್ಗೆ ಗಿರಾಕಿಗಳು ಇಲ್ಲದಿದ್ದಾಗ ಸ್ನ್ಯಾಕ್ಸ್ ಜೊತೆಗೆ ಪತ್ರಿಕೆ ಓದಲು ಕೊಡುತ್ತಿದ್ದರು.
ಸೇಂಗಾ ಕಾಳು ಒಂದೊಂದೇ ಮೆಲ್ಲುತ್ತ ಪೇಪರ್ ವಾರಪತ್ರಿಕೆ ತಿರುವಿ ಹಾಕುತ್ತ ಟೇಪ್ ರೆಕಾರ್ಡ್ ನಲ್ಲಿ ಸಣ್ಣಗೆ ಹಿಂದಿ ಹಾಡು ಬೇಷಾಕ್ ಮಂದಿರಮೆ ಬೈಠಕೆ ನ ರೂನಾ ಹಾಡು ಕೇಳುವುದೇ ಒಂದು ಸಂಭ್ರಮ ವಾಗಿತ್ತು.
ನಾನಾಗ 8ನೆ ತರಗತಿ ಪಾಸ್ ಆಗಿದ್ದೆ. ಮುಂದೆ ಶಾಲೆಗೆ ಓದಲು ಹೋಗಲು ಮನೆಯಲ್ಲಿ ಬಡತನವೆಂಬ ಬೇತಾಳ ನನ್ನ ಪಾಟಿ ಚೀಲ ಕಸೆದು ಕೊಂಡು ಮೂಲೆಗೆ ಎಸೆದಿತ್ತು.
ನನ್ನ ಎಳೆ ಹೆಗಲ ಮೇಲೆ ಬೇತಾಳನ ಸವಾರಿ ಭಾರ ವಾಗಿದ್ದರೂ ತೆವಳುತ್ತ ತೆವಳುತ್ತ ಸಾಗ ಬೇಕಿತ್ತು.
ಮಕಾನದಾರ ನೀವೂ ಕವಿತ ಬರೀರಿ. ನಾ ಬರೆದ ಈ ಕವಿತೆ ಹೆಂಗೆ ಅದೆ ನೋಡ್ರಿ ಈ ಕವಿತಾ ಓದಿ ಅಂತಾ ತಾವು ಬರೆದ ಕವಿತೆ ಗಳ ಡೈರಿ ಕೊಡುತ್ತಿದ್ದರು.
ನಮ್ಮೂರಲ್ಲಿ ಕುಡಿಯುವ ನೀರಿನ ಬವಣಿ ಹೇಳತೀರದ್ದು. ಆ ಸಂದರ್ಭದಲ್ಲಿ
ಉಪಮೆ
ನಮ್ಮೂರ ನಲ್ಲಿಯನೀರು
ನಲ್ಲೆಯ
ಕಣ್ಣೀರಿನ ಹನಿ ಯಂತೆ
ಹನಿ
ಹನಿ
ಜಿನುಗಿತು
ಈ ಚುಟುಕು ಬರೆದು ತೋರಿಸಿದೆ
ಗುಂಡಪ್ಪ ಲಂಕೇಶ್ ಪತ್ರಿಕೆ ಅಂಕಣ ಕಾರ ಪುಂಡಲೀಕಶೇಟ್ ಅವರ ಪುಂಡಲೀಕ್ ವಾರ ಪತ್ರಿಕೆ ಗಾಗಿ ನನಗೆ ಗೊತ್ತಿಲ್ಲ ದಂತೆ ಪೋಸ್ಟ್ ಮಾಡಿದ್ದರು. ಮರು ವಾರ ಪತ್ರಿಕೆ ಯಲ್ಲಿ ಪ್ರಕಟಣೆ ಯಾಯ್ತು. ನನಗೆ ಮುಗಿಲು ಮೂರೇ ಗೇಣು
ಅಷ್ಟು ಖುಷಿ ಯಲಿ ಸಂತಸ ಪಟ್ಟಿದ್ದೆ. ಮತ್ತೆ ಬರೆಯಿರಿ ಅಂತಾ ಒತ್ತಾಯ ಮಾಡಿದರು
ಮುತ್ತು
ಮುಖದ ಮೇಲೆ
ಮುತ್ತಿನಂತೆ ಮೂಡಿದ್ದ ಬೆವರಹನಿಗಳು
ನಾ ಮುತ್ತಿಟ್ಟಾಗ ಅಲ್ಲವೇ ಗೆಳತಿ
ಮೂಡಿದ್ದು
####
ಮುಖವಾಡ
ಯತಿ ಆಶ್ರಮದಲ್ಲಿ
ಸನ್ಯಾಸಿ ವೇಷದಲಿ
ಸಂಸಾರಿ !
ರತಿ ಆಶ್ರಮದಲಿ
ಸಂಸಾರಿ ವೇಷದಲಿ
ಸನ್ಯಾಸಿ !
ವಿಮರ್ಶೆ
ನಿಮ್ಮ ಸಾಹಿತ್ಯ ಪಕ್ವವಾಗಿ
ಬೆಂದಿಲ್ಲವೆಂದ ವಿಮರ್ಶಕ !
ಸಾಹಿತ್ಯಕ್ಕೆ ಸೀಮೆ ಎಣ್ಣಿ
ಸುರುವಿ ಬೆಂಕಿ ಹಚ್ಚಿ
ಬೇಯಿಸಿದ ಸಾಹಿತಿ
ಮುಂತಾದ ಚುಟುಕು ಕಾವ್ಯ ಬರೆಯಲು ತೊಡಗಿದೆ. ನನ್ನ ಬಾಲ್ಯದ ಗೆಳೆಯ ರಾಘವೇಂದ್ರ ಕೊಡಗಾನೂರ ಅವರು ಗಜೇಂದ್ರ ಪ್ರಭಾ ವಾರ ಪತ್ರಿಕೆ ಆರಂಭಿಸಿದರು
ದ್ರೋಣಪುರ ವಾರ್ತೆ. ನೂತನ ರಾಜಕೀಯ ಚಕ್ರವರ್ತಿ. ಸ್ಫೂರ್ತಿ. ನವೋದಯ ಮುಂತಾದ ಪತ್ರಿಕೆ ಗಳಲ್ಲಿ ಕವಿತೆ ಗಳು ಪ್ರಕಟಣೆ ಯಾಗ ತೊಡಗಿದವು. 1987ರಲ್ಲಿ ಬೆಂಗಳೂರು ಈ ಸಿ ಸಿ ಸೆಂಟರ್ ನಲ್ಲಿ ಹಿರಿಯ ಸಾಹಿತಿ ಗಳಾದ ದುಂಡಿರಾಜ್ ಅವರ ನೇತೃತ್ವದಲ್ಲಿ ಕಾವ್ಯ ಕಮ್ಮಟ ದಲ್ಲಿ ಪಾಲ್ಗೊಂಡಿದ್ದೆ. ಜೊತೆಗೆ ನಿರಂತರ ವೇದಿಕೆ ಸಂಘಟನೆ ಗಳ ಕವಿಗೋಷ್ಠಿ ನನಗೆ ಸಾಹಿತ್ಯ ದಲ್ಲಿ
ಕ್ರಿಯಾಶೀಲವಾಗಿ ತೊಡಗಿ ಕೊಳ್ಳಲು ಹೆಗಲೇಣಿ ಯಾದವು
ಕಳೆದ 33 ವರುಷಗಳಿಂದಲೂ ಸಾಹಿತ್ಯದ ಚೈತ್ರ ಯಾತ್ರೆ ನಿರಂತರ ವಾಗಿ ನಡೆದು ಕೊಂಡು ಬಂದಿದೆ. 90ರ ದಶಕ ದಲ್ಲಿ ಕಿರಣ ವೈನ್ ಶಾಪ್ ಮಾಲೀಕರಿಗೆ ಅಂಗಡಿ ಹಾನಿ ಯಾಗಿ ಸೀಜ್ ಮಾಡಿದಾಗ ಹುಬ್ಬಳ್ಳಿ ಇಂದಿರಾ ಗಾಜಿನ ಅರಮನೆಗೆ ಆತ್ಮ ಹತ್ಯೆ ಮಾಡಿ ಕೊಳ್ಳಲು ಟಿಕ್ 20 ಬಾಟಲ್ ಒಯ್ದಿದ್ದೆ.. ಆಗ ನನ್ನ ನಡುವಳಿಕೆ ಆತಂಕ ಗುರುತಿಸಿದ ಪತ್ರಕರ್ತ ಪುಂಡಲೀಕ್ ಶೇಟ್ ತರಾಟೆಗೆ ತೆಗೆದುಕೊಂಡು ಬುದ್ಧಿ ವಾದ ಹೇಳಿ ಟೀ ಕುಡಿಸಿ ಸಿನೆಮಾ ತೋರಿಸಿ ಊರಿಗೆ ಬಸ್ ಹತ್ತಿಸಿ ಕಳಿಸಿದ್ದು ಇನ್ನೂ ನನ್ನ ಸ್ಮತಿ ಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ನಮ್ಮಿಬ್ಬರ ಗೆಳೆತನ ಇನ್ನಷ್ಟು ಗಾಢ ವಾಗಲು ಕಾರಣವಾಯ್ತು ಜೊತೆಗೆ ನನ್ನ ಸಾಹಿತ್ಯ ಬರವಣಿಗೆ ಗೆ ಮಾರ್ಗದರ್ಶನ ಕೂಡ ಅವರಿಂದ ದೊರೆಯಿತು
ನನ್ನ ಅಂತರಂಗದ ಸಖಿ ಕಾವ್ಯ
ನನ್ನ ಪ್ಯಾರಿ ಕಾವ್ಯ. ನನ್ನ ಸಾಂಸ್ ಕೂಡ ಕಾವ್ಯವಾಗಿದೆ. ನನ್ನ ಮನದ ನೋವಿಗೆ ಮುಲಾಮು ಕೂಡ ಕಾವ್ಯವೇ
ಎಂಬುದರಲ್ಲಿ ಎರಡು ಮಾತಿಲ್ಲ ,