ಲೇಖನ
ನೂತನ ದೋಶೆಟ್ಟಿ
೧೯೮೫ ಮಿಖೈಲ್ ಗೋರ್ಬಚೇವ್ ಸೋವಿಯತ್ ರಷ್ಯಾ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿ ಗ್ಲಾಸ್‌ನೊಸ್ಟ್ (ಮುಕ್ತತೆ) ಹಾಗೂ ಪೆರೆಸ್ಟ್ರೋಯಿಕ ಅಂದರೆ ಅದುವರೆಗೂ ಇದ್ದ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಎರಡು ನೀತಿಗಳನ್ನು ಹುಟ್ಟು ಹಾಕಿದರು. ಇದರ ಫಲವಾಗಿ ೧೯೨೨ರ ಡಿಸೆಂಬರಿ ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದ ಸೋವಿಯತ್ ರಷ್ಯಾ ಒಕ್ಕೂಟ ಶಿಥಿಲವಾಗಿ ಛಿದ್ರ ಛಿದ್ರವಾಯಿತು.೬೩ ವರ್ಷಗಳವರೆಗೆ ಅಮೇರಿಕಾಕ್ಕೆ ಸೆಡ್ಡು ಹೊಡೆದು ನಿಂತಿದ್ದ ‘ಸೂಪರ್ ಪವರ್’ ರಾಷ್ಟ್ರ ಹೇಳ ಹೆಸರಿಲ್ಲದಂತಾಯಿತು. ರಷ್ಯಾ ಕ್ರಾಂತಿಯ ಹರಿಕಾರನಾಗಿದ್ದ ಲೆನಿನ್ನನ ಪ್ರತಿಮೆಯ ನ್ನು ಉತ್ಸಾಹದಿಂದ ಅಡ್ಡ ಮಲಗಿಸಿದ ಅಲ್ಲಿಯ ಜನ ಸಂಭ್ರಮಿಸಿದ್ದನ್ನು ಕಂಡು ವೈರಿ ರಾಷ್ಟ್ರವೆಂದೇ ಬಿಂಬಿತ ವಾಗಿದ್ದ ಅಮೇರಿಕ ತನ್ನ ಯೋಜನೆ ಫಲಿತವಾಗಿದ್ದಕ್ಕೆ ಹಾಗೂ ವಿಶ್ವದಲ್ಲಿ ತನ್ನ ಏಕಮೇವಾಧಿಪತ್ಯದ ಪ್ರತಿಷ್ಠಾಪ ನೆಗೆ ಇನ್ನಿಲ್ಲದಂತೆ ಬೀಗಿತು. ಆದರೆ ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರ ಗಳು ಮರುಗಿದವು. ಇದಕ್ಕೆ ಕಾರಣ ಪ್ರಜಾಪ್ರಭುತ್ವ ವಿರೋಧಿ ರಾಷ್ಟ್ರದ ಅಧಃಪತನ, ಒಟ್ಟಾರೆ ಸ್ವಾತಂತ್ರ್ಯದ ಸೋಲು ಎಂಬ ಸತ್ಯದ ಅರಿವು. ಈ ಘಟನೆ ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಹಿಗ್ಗಿಸಿದಷ್ಟೇ ಅಲ್ಲ ಅದರ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು.
ಈ ಹಿನ್ನೆಲೆಯಲ್ಲಿ ಮೂರು ದಶಕಗಳ ನಂತರ ಇಂದು ಸ್ವಾತಂತ್ರ್ಯದ ಮರು ವ್ಯಾಖ್ಯಾನ ಹಾಗೂ ಅದರ ಮಹತ್ವದ ಮರು ಚಿಂತನೆ ಅಗತ್ಯವೆನ್ನಿಸುತ್ತದೆ. ರಾಜ್ಯಶಾಸ್ತ್ರದಲ್ಲಿ ಸ್ವಾತಂತ್ರ್ಯದ ಬಗ್ಗೆ ಬಹಳ ಆಸಕ್ತಿಕರ ವ್ಯಾಖ್ಯೆಯೊಂದಿದೆ. ಅದೆಂದರೆ, ‘ ಯೂ ಹ್ಯಾವ್ ದ ಲಿಬರ್ಟಿ ಟು ಸ್ಟ್ರೆ ಚ್ ಯುವರ್ ಹ್ಯಾಂಡ್ ಅಂಟಿಲ್ ಯೂ ರೀಚ್ ಅನದರ್ ಮ್ಯಾನ್ಸ್ ನೋಸ್ ‘ ಎಂದು. ಎದುರಿನವನ/ಳ ಮೂಗಿನವರೆಗೆ ನೀನು ನಿನ್ನ ಕೈಯನ್ನು ಬೀಸುವಷ್ಟು ಸ್ವಾತಂತ್ರ್ಯ ನಿನಗಿದೆ. ಒಂದೊಮ್ಮೆ ನಿನ್ನ ಕೈ ಮೂಗಿಗೆ ಸೋಕಿತೋ ಆಗ ಅದು ಎದುರಿನವನ/ಳ ಸ್ವಾತಂತ್ರ್ಯ ಹರಣ ಹಾಗೂ ನಿನ್ನ ಸ್ವೇಚ್ಛಾಚಾರ ಎಂದು ಬಹಳ ಮಾರ್ಮಿಕವಾಗಿ ಈ ಮಾತು ಹೇಳುತ್ತದೆ.
ಇಂದಿನ ಡಿಜಿಟಲ್ ಮಾಧ್ಯಮಗಳ, ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಇಂತಹ ಮಾರ್ಮಿಕ ಅರ್ಥ ಸ್ವಾತಂತ್ರ್ಯಕ್ಕೆ ಇದೆಯೇ ಎಂಬುದು ಗೊಂದಲವಾಗಿಯೂ, ಪ್ರಶ್ನೆಯಾಗಿಯೂ, ಅಪ್ರಸ್ತುತವಾಗಿಯೂ ನಿಲ್ಲುತ್ತದೆ. ಇದು ಇನ್ನೊಬ್ಬರ ಮೂಗಿಗೆ ಗುದ್ದಿ ಅವರ ಸ್ವಾತಂತ್ರ್ಯವನ್ನು, ಸ್ವಾಭಿಮಾನವನ್ನು ಕೆಣಕುವ, ಅಣಕಿಸುವ ಕಾಲ.ಇದಕ್ಕೆ ಹುಟ್ಟು-ಸಾವು, ನೋವು-ನಲಿವು, ಜಾತಿ-ಮತ, ಆರ್ಥಿಕ ಮೇಲು-ಕೀಳಾಟವಾಗಲೀ,ಲಿಂಗಭೇದಗಳೇ ಆಗಲೀ ಇಲ್ಲ ! ಸಾವು-ನೋವನ್ನು ಸಂಭ್ರಮಿಸುವ ಮನೋಭಾವ ವಂತೂ ಅಮಾನವೀಯವಷ್ಟೇ ಅಲ್ಲ. ಅತ್ಯಂತ ಹೀನ ಮನಸ್ಥಿತಿ.
೨೧ನೇ ಶತಮಾನದ ಆದಿಯಲ್ಲಿ ವಿಶ್ವವೇ ಹೊಸತನಕ್ಕೆ ಅಣಿಯಾಯಿತು. ಆಧುನಿಕತೆಯ ನಿಚ್ಚಳತೆಗೆ ಸಾಮಾಜಿಕ ಮಾಧ್ಯಮಗಳು ಹಾಗೂ ತಾಂತ್ರಿಕತೆ ಬಹಳ ಇಂಬು ಕೊಟ್ಟು ಪೋಷಿಸಿದ ಕಾಲಘಟ್ಟವಿದು. ಆದರೆ ಕೆಲವೇ ವರ್ಷಗಳಲ್ಲಿ ಈ ಆಧುನಿಕ ಮಾಧ್ಯಮಗಳು ಅಶಾಂತಿ, ದ್ವೇಷ, ಅಸೂಯೆ, ಗುಂಪುಗಾರಿಕೆ, ಸ್ವಜನ ಪಕ್ಷಪಾತದಂತಹ ದೂರ್ತತೆಗಳನ್ನು ಪೊರೆವ ತಾಣಗಳೂ, ವಾಹಕಗಳೂ ಆಗಿ ಬದಲಾದದ್ದು ಈ ಶತಮಾನದ ದುರಂತ. ಭಯೋತ್ಪಾದಕರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರ ಗಳು ಎಷ್ಟು ಮಾರಕವಾಗಿ ಈ ಕಾಲಘಟ್ಟದಲ್ಲಿ ಪರಿಣ ಮಿಸಿದವೋ ಅದಕ್ಕಿಂತ ಘೋರ ಪರಿಣಾಮವನ್ನು ಈ ಮಾಧ್ಯಮಗಳು ಉಂಟು ಮಾಡಿವೆ.
ಲೆನಿನ್ ಪ್ರತಿಮೆಯನ್ನು ಅಡ್ಡ ಮಲಗಿಸಿ ಸಂಭ್ರಮಿಸಿದಂಥ ವರ ಸಂಖ್ಯೆ ಇಂದು ಹೆಚ್ಚಿದೆ. ಸಾವಂಥ ಸಾವನ್ನು ಬಾಯಿ ಚಪ್ಪರಿಸಿ ಸವಿಯಬಲ್ಲ ಹೀನರು ಅಗಣಿತರಾಗಿದ್ದಾರೆ. ಲಂಕೇಶರ ಸಾವಿಗೆ ಕರ್ನಾಟಕದಾದ್ಯಂತ ಶೋಕ ವ್ಯಕ್ತವಾ ದಂತೆಯೇ ಅವರ ನಿರ್ಗಮನಕ್ಕೆ ಆಂತರಿಕವಾಗಿ ಸಂತಸ ಪಟ್ಟ ಮನಸ್ಸುಗಳು ಇದ್ದವು. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ, ಸಂಭ್ರಮಿಸುವ ದೂರ್ತತೆ ಆಗ ಇರಲಿಲ್ಲ. ಆದರೆ ಯೂ ಆರ್ ಅನಂತಮೂರ್ತಿಯವರ ಸಾವಿನ ಹೊತ್ತಿಗೆ ಅದಕ್ಕೆ ರೂಪ ಬಂದಿತ್ತು. ಆ ನಂತರದಲ್ಲಿ ದೇಶ ದಾದ್ಯಂತ ನಡೆದ ಅನೇಕ ಹತ್ಯೆಗಳಿಗೆ ಬಹಿರಂಗವಾಗಿ, ಘಂಟಾಘೋಷವಾಗಿ ಸಂತಸ ವ್ಯಕ್ತಪಡಿಸಿದ, ಚಪ್ಪಾಳೆ ತಟ್ಟಿ ನಕ್ಕ ಜನತೆ ಲಕ್ಷಾಂತರ. ಇದು ಮೂಲತಃ ಆದದ್ದು ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್,ಟ್ಚಿಟರ್, ವಾಟ್ಸಾಪ್‌ಗಳ ಮೂಲಕ. ಈಗಂತೂ ಸಾವು ಮನಸ್ಸನ್ನು ಕದಡುವ, ಕಂಗೆಡಿಸುವ ವಸ್ತುವೇ ಅಲ್ಲ. ಬದಲಾಗಿ ಸಂಭ್ರಮವನ್ನು ಒಳಗೊಳ್ಳುವ ವಿಕೃತಿ.ಇದಕ್ಕೆ ಆಧುನಿಕತೆಗೆ ತೆರೆದುಕೊಂಡ, ಆಧುನಿಕ ಶಿಕ್ಷಣ ಪಡೆದ, ಆಧುನಿಕ ಚಿಂತ ನೆಯ ಪ್ರತಿಪಾದಕರೆಂದು ಬಿಂಬಿಸಿಕೊಳ್ಳುವವರೂ ಒಲಿಯುತ್ತಿರುವುದನ್ನು ಏನೆಂದು ಅರ್ಥೈಸಬೇಕು ?
ಒಂದು ದಶಕದ ಹಿಂದೆ ಸಾಮಾಜಿಕ ಜೀವನದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಕಳವಳ, ಆತಂಕವಿದ್ದರೆ ಈಗ ಸಂವೇದನಾರಹಿತ ಸಮಾಜದತ್ತ ಧಾಪುಗಾಲಿಕ್ಕುತ್ತಿ ರುವ ಕಾಲಕ್ಕೆ ಎಲ್ಲರೂ ಸಾಕ್ಷಿಯಾಗಬೇಕಾಗಿದೆ. ಇತರರ ನೋವಿಗೆ ನಲಿಯುವ, ನಲಿವಿಗೆ ಬೇಯುವ ಈ ಆಧುನಿಕ ಸಂಸ್ಕೃತಿಯ ಹುಟ್ಟು ಹಾಗೂ ಬೆಳವಣಿಗೆಗಳನ್ನು ೨೧ನೇ ಶತಮಾನದ ಆರಂಭದಲ್ಲಿ ಆದ ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ನೋಡ ಬೇಕಾಗುತ್ತದೆ. ಹಣದ ಹಪಹಪಿ ಹಾಗೂ ವರ್ಗ-ವರ್ಣ ತಿಕ್ಕಾಟಗಳು ಸಮಾಜವನ್ನು ವಿಕೃತಿಯತ್ತ ನೂಕುತ್ತಿವೆ. ಇದನ್ನು ವಿರೋಧಿಸಿ ಏಕರೂಪಿ ಸ್ವಾಸ್ಥ್ಯ ಸಮಾಜದ ಕಲ್ಪನೆಯನ್ನು ಬಿತ್ತಿದ ಶಂಕರಾಚಾರ್ಯ, ಏಸು,ಪೈಗಂಬರ್ ಬುದ್ಧ,ಬಸವರಾದಿಯಾಗಿ ಗಾಂಧಿ, ಅಂಬೇಡ್ಕರ್ ಅವರ ವರೆಗೂ ಹರಿದು ಬಂದ ಈ ಪರಂಪರೆಯ ಇಂದಿನ ತಿರುವು ಅನಿರೀಕ್ಷಿತ ಹಾಗೂ ಆಘಾತಕರ. ಏಕರೂಪತೆಯನ್ನು ಸಾರುತ್ತ, ಬಹುರೂಪತೆಯನ್ನು ಅಪ್ಪಿಕೊಂಡು,ಒಪ್ಪಿಕೊಂ ಡು ಇಂದು ಮತ್ತೆ ಛಿದ್ರ ವಿಚ್ಛಿದ್ರ ಹಾದಿಯತ್ತ ಸಾಗಿರುವ ನಮ್ಮ ಈ ಪರಂಪರೆಯ ಬಗ್ಗೆ ಅತ್ಯಂತ ಜಾಗರೂಕರಾಗ ಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ.
ವರ್ಗ-ವರ್ಣಗಳನ್ನು ರಾಜಕೀಯವಾಗಿ ದುಡಿಸಿಕೊಳ್ಳುವ, ಊರು-ಕೇರಿ, ಕಛೇರಿಗಳಲ್ಲಿ, ಕೆಲಸದ ಜಾಗಗಳಲ್ಲಿ ಬಳಸಿಕೊಳ್ಳುವ ಜಾಯಮಾನ ಇಂದು ಸಾಮಾನ್ಯವಾಗಿದೆ. ಇದರಿಂದ ಗುಂಪುಗಾರಿಕೆ ಅತಿಯಾಗುತ್ತಿದೆ. ಈ ಪಿಡುಗು ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರಗಳನ್ನೂ ಬಿಟ್ಟಿಲ್ಲ.ಆದ್ದರಿಂದಲೇ ತಮ್ಮ ತಮ್ಮ ಗುಂಪುಗಳನ್ನು ಪೊರೆಯಲು, ಪ್ರಶಸ್ತಿ ಪುರ ಸ್ಕಾರಗಳನ್ನು ನೀಡಲು ಹತ್ತಾರು ಸಂಘ ಸಂಸ್ಥೆಗಳು ಹುಟ್ಟುತ್ತಿವೆ. ಇಂಥ ಪ್ರವೃತ್ತಿಯನ್ನು ಪ್ರತಿಭಟಿಸಿದವರ ಪ್ರಾಣಾರ್ಪಣೆಯೂ ನಿರಂತರವಾಗಿದೆ.ಬಸವಣ್ಣನನ್ನು ನಿಂದಸಿದರೆ ವಚನ ಚಳುವಳಿಯ ಹಿರಿಮೆಯೇನು ಕಡಿಮೆಯಾಗುವುದೇ? ಗಾಂಧೀಜಿಗೆ ಗುಂಡಿಕ್ಕಿದರೆ ಅವರ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಜಗತ್ತು ಮರೆಯುವುದೇ? ಲೇಖಕರ ಸಾವನ್ನು ಸಂಭ್ರಮಿಸಿದರೆ ಅವರ ಕೃತಿಗಳ ಮಹತ್ವವೇನು ಕಡಿಮೆಯಾಗುವುದೆ? ಈ ಪ್ರಶ್ನೆಗಳು ಹಾಗೂ ಇವಕ್ಕೆ ಉತ್ತರಗಳು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೂ ಇವು ಇನ್ನು ಮುಂದೆ ಮತ್ತೆ ಮತ್ತೆ ಮುಖಾಮುಖಿಯಾಗುವ ಸಂದರ್ಭಗಳೇ ಹೆಚ್ಚು ಎಂಬುದನ್ನು ಪ್ರತಿ ಸಾವೂ ನಿಚ್ಚಳವಾಗಿಸುತ್ತಿದೆ.
ಆರಂಭದಲ್ಲಿ ಹೇಳಿದ ಗ್ಲಾಸ್‌ನಾಸ್ಟ್ ಹಾಗೂ ಪೆರೆಸ್ತೊಯಿಕಾ ವನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಕಟ್ಟುವ ಮುಕ್ತತೆ ಬೇಕೇ ಹೊರತು ಕೆಡವುವ ಮುಕ್ತತೆ ಅಲ್ಲ. ಕೆಡವುವ ಮುಕ್ತತೆಗೆ ಇಂಬು ಕೊಟ್ಟರೆ ದೇಶವೇ ನಾಶವಾಗುವ ಉದಾಹರಣೆಗಳು ನಮ್ಮ ಮುಂದಿವೆ. ಅವುಗಳನ್ನು ಗಮನಿಸಿ ನಮ್ಮ ಮುಂದಿನ ನಡೆಯನ್ನು ನಾವೇ ನಿರ್ಧರಿಸಿಕೊಳ್ಳೋಣ.
*******************************
ಉತ್ತಮ ಲೇಖನ ನೂತನ ಅವರೇ. ಭಾಷೆ , ನಡತೆ ಮತ್ತು ಬರಹಗಳಿಗೆ ಘನತೆ ಬೇಕು.
ಧನ್ಯವಾದಗಳು ಡಾ. ಪ್ರೇಮಲತಾ ಅವರೆ.
ಲೇಖನದಲ್ಲಿ ಪೆರೆಸ್ತ್ರೋಯಿಕಾ ಆಗ್ಬೇಕು. ರ ವತ್ತು ಬಿಟ್ಟು ಹೋಗಿದೆ. ಸರಿಪಡಿಸಿ
ದಶಕದಲ್ಲಿ ಭಾರತ ಮತ್ತು ಕರ್ನಾಟಕದ ಹಾದಿಯನ್ನು ಉದ್ವೇಗ ವಿಲ್ಲದ ಪ್ರಾಮಾಣಿಕತೆಯಿಂದ ಬಿಡಿಸಿದ್ದೀರಿ. ನಮ್ಮಲ್ಲಿ ಅನೇಕ ಲೇಖಕರಿಗೆ ಇರುವ ಭ್ರಮೆ ಬಿಡಿಸಿದ್ದೀರಿ. ಹಲವು ಸಂಘ ಸಂಸ್ಥೆಗಳ ಸ್ವಜನ ಪಕ್ಷಪಾತಾ ಸಾಮಾಜಿಕ ಜಾಲತಾಣಗಳಲ್ಲಿ ಅಸತ್ಯ, ಸಾವನ್ನು ಸಂಭ್ರಮಿಸುವವರ ತಿವಿದಿದ್ದೀರಿ. ಬರಹ ಕಣ್ಣು ತೆರೆಸುವಂತಿದೆ.. ಬರಹ ನಿಷ್ಠುರವಾಗಿದೆ. ಬರಹ ಪ್ರಕಡಿಸಿದ ಸಂಗಾತಿಯನ್ನು ನೆನೆಯುತ್ತಾ…