ಲಹರಿ
ಡಾ. ಅಜಿತ್ ಹರೀಶಿ
ವಾತಾವರಣ ಥಂಡಿಯಿಂದ ಕೂಡಿದೆ. ಮನಸ್ಸು ದುಪ್ಪಡಿ ಹೊದ್ದು ಮಲಗಿದೆ. ನಿನ್ನೆ ಒಂದೇ ದಿನಕ್ಕೆ ವಾಟ್ಸಾಪ್ ಗುಂಪೊಂದರಿಂದ ನಾಲ್ಕು ಜನ ಲೆಫ್ಟ್ ಆದರು. ಹೋದ ವರ್ಷ ಜುಲೈ ತಿಂಗಳಲ್ಲೇ ನಾನು ಎಲ್ಲ ಗ್ರೂಪ್ ಗಳಿಂದ ಹೊರಹೋಗಿದ್ದೆ. ಮತ್ತೆ ಕೆಲವು ಗ್ರೂಪ್ ಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮರಳಿದ್ದೆ. ಅವರೂ ಮರಳಬಹುದು. ವಾತಾವರಣ, ವಾಟ್ಸಾಪು ಮತ್ತು ಮಾನಸಿಕತೆಯ ಜೊತೆಗೆ ಈ ಬಾರಿ ಕೊರೋನ ಯಾಡೆಡ್ ಫ್ಲೇವರ್ರು. ಫೇಸ್ಬುಕ್ ನಮ್ಮನೆ ದೇವರು!
ಬೆಳಿಗ್ಗೆ ಫೇಸ್ಬುಕ್ ಮುಂದೆ ಕುಳಿತು ಭಜನೆ ಮಾಡುವಾಗ ಕಹಳೆಯ ವಿನಯ ಸಜ್ಜನರ ( 29 ) ಸಾವಿಗೆ ಸ್ಯಾಡ್ ಇಮೋಜಿ ಕೊಡುತ್ತೇನೆ. ಫೇಸ್ಬುಕ್ ತೋರಿಸುವ ಹುಟ್ಟುಹಬ್ಬದ ನೋಟಿಫಿಕೇಶನ್ ಗೆಳೆಯರಿಗೆ ಶುಭಾಶಯಗಳನ್ನು ಕೋರುತ್ತೇನೆ. ಹಾಗೆ ಕೋರುವಾಗ ಅವರು ಅಲ್ಲಿ ಆಕ್ಟೀವ್ ಇದ್ದಾರೋ ಇಲ್ಲವೋ ನೋಡಿ, ಇಲ್ಲದಿದ್ದರೆ ಅನ್ ಫ್ರೆಂಡ್ ಮಾಡಿ ಮತ್ಯಾರದೋ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುತ್ತೇನೆ. ಅಲ್ಲೊಂದು ಆಯಾ ದಿನದ ಮೆಮೊರಿ ತೋರಿಸುವ ವಿಭಾಗವೊಂದಿರುವುದು ನಿಮಗೆ ಗೊತ್ತಿಲ್ಲದ್ದೇನಲ್ಲ. ಅಲ್ಲಿ ನಾನು 2009 ರಿಂದ, ಇದೇ ದಿನ ಹಾಕಿದ ಪೋಸ್ಟ್ ಗಳನ್ನು ತೋರಿಸುತ್ತದೆ. ನೋಡಯ್ಯ ನಿನ್ನ ಅವತ್ತಿನ ಟೇಸ್ಟು, ಪಾಪ, ಪುಣ್ಯ ಎಂದು ಚಿತ್ರಗುಪ್ತನ ಪೋಸ್ ನೀಡುತ್ತದೆ. ನಾಲ್ಕೈದು ಪೋಸ್ಟ್ ಗಳಲ್ಲಿ ಮೂರನ್ನು ಅಳಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ಆಗ ಕಡಿಮೆ ಜನ ಓದುತ್ತಿದ್ದರೆಂಬ ಸಮಾಧಾನ ಒಳಗೊಳಗೇ!
ಮತ್ತೆ ಹೋಂ ಗೆ ಬರುವಷ್ಟರಲ್ಲಿ ಒಂದಿಷ್ಟು ಪೋಸ್ಟ್ ಗಳಿರುತ್ತವೆ. ಅಭಿನಂದನೆಗಳನ್ನು ಕೋರುವುದು. ಆಹ್, ಓಹ್, ಚೆನ್ನಾಗಿದೆ, ಸೂಪರ್ ಇತ್ಯಾದಿ ಕಾಮೆಂಟಿಸಿ – ನಾನು ಒಂದು ಜಬರ್ದಸ್ತ್ ಸ್ಟೇಟಸ್ ಹಾಕುತ್ತೇನೆ. ಆಮೇಲೆ ಬಿಡುವಾದಾಗಲೆಲ್ಲ ಲೈಕ್, ಕಾಮೆಂಟ್ ನೋಡಿ ಒಳಗೊಳಗೇ ಖುಷಿ ಪಡುತ್ತೇನೆ. ಮುಂದಿನ ವರ್ಷ ಇದೇ ದಿನ ಅದೊಂದು ಲಟಾರಿ ಪೋಸ್ಟ್ ಅನಿಸಿ ಅಳಿಸಬಹುದು. ಒಂದಿಷ್ಟು ಪರ ನಿಂದೆ, ಆತ್ಮಸ್ತುತಿ ಮತ್ತು ಪರ ಸ್ತುತಿ, ಆತ್ಮನಿಂದನೆಯ ಪೋಸ್ಟ್ ಗಳನ್ನು ಸ್ರ್ಕೋಲ್ ಮಾಡುತ್ತ ಮುಂದುವರೆಯುತ್ತೇನೆ.
ಓಹ್! ಕಳೆದೆರಡು ದಿನಗಳಿಂದ ಇನ್ಸ್ಟಾಗ್ರಾಂ, ಟ್ವಿಟ್ಟರ್ ಮತ್ತು ಟೆಲಿಗ್ರಾಂ ಓಪನ್ ಮಾಡಿಲ್ಲ. ಸಮಯವಾಯಿತು, ವೆರಿ ಹೆಕ್ಟಿಕ್ ಡೇ ಡಿಯರ್ ಫ್ರೆಂಡ್ಸ್. ನಾಳೆ ಮತ್ತೆ ಸಿಗೋಣ ಬೈ ನೌ.
*****************************
ಡಾಕ್ಟರ್ರೇ… ಸಾಹಿತ್ಯ/ ಸ್ನೇಹದ ಸಾಂಗತ್ಯವನ್ನು ಹಗುರವಾಗಿ ಕಾಣುವವರಲ್ಲ ನೀವು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೂ ಈ ಲಹರಿ ಏಕೆ ಹೀಗಿದೆ..?! ತಮಾಷೆ ಎಂದುಕೊಳ್ಳುವೆ ಬಿಡಿ.
ಉತ್ತಮ ಪುರುಷ ನಿರೂಪಣೆ, ವೈಯಕ್ತಿಕ ಅಲ್ಲ. ಧನ್ಯವಾದಗಳು ಪ್ರತಿಕ್ರಿಯೆಗೆ.
ಡಾಕ್ಟ್ರೇ
ಧನ್ಯವಾದಗಳು ಸ್ಮಿತಾಜೀ.
ಚಂದ