ಕವಿತೆಯೆಂಬ ಪುಳಕದ ಧ್ಯಾನ

ಮೊದಲ ಕವಿತೆಯ ರೋಮಾಂಚನ

ಸ್ಮಿತಾ ಅಮೃತರಾಜ್

ನಿಜ  ಹೇಳಬೇಕೆಂದರೆ  ನಾನೊಬ್ಬಳು ಕವಯತ್ರಿ ಆಗುತ್ತೇನೆ ಅಂತ ಕನಸು ಮನಸಿನಲ್ಲೂ ಅಂದು ಕೊಂಡವಳಲ್ಲ. ಈಗಲೂ ಹಾಗನ್ನಿಸುತ್ತಿಲ್ಲ.  ಆದರೆ ಕೆಲವೊಮ್ಮೆ ಹುಕಿ ಹುಟ್ಟಿ ಗೀಚಿದ ಎರಡು ಸಾಲು ಅಲ್ಲಿಲ್ಲಿ ಕಾಣಿಸಿಕೊಂಡು, ಕೇಳಿಸಿಕೊಂಡು, ಅದನ್ನೇ ಕವಿತೆ ಅಂತ ಭ್ರಮಿಸಿ ನನಗೆ ಕವಯತ್ರಿ ಅನ್ನುವ ಬಿರುದಾಂಕಿತವನ್ನ ಅವರಿವರು ಯಾವುದೇ ಕವಡೆ ಕಾಸಿಲ್ಲದೆ ಪುಕ್ಕಟೆ ಕೊಟ್ಟು ಗೌರವಾದರದಿಂದ ನೋಡುವಾಗ, ನಾನು ಅದನ್ನು ಸುಖಾ ಸುಮ್ಮಗೆ ಅಲ್ಲಗಳೆದರೆ ಅದು ಸಾಹಿತ್ಯ ಲೋಕಕ್ಕೇ ಮಾಡುವ ಅಪಚಾರವಲ್ಲವೇ? ಅಂತ ನನ್ನೊಳಗೆ ನಾನೇ ತರ್ಕಿಸಿಕೊಂಡು ಒಪ್ಪಿಕೊಳ್ಳುತ್ತೇನೆ. ಅಷ್ಟಕ್ಕೂ ಎಷ್ಟು ಬೇಡವೆಂದರೂ ಒಳಗೊಳಗೆ ಒಂದು ತುಡಿತ, ಗುರುತಿಸಿಕೊಳ್ಳಬೇಕೆಂಬ ಚಪಲ ನರ ಮನುಷ್ಯರಿಗೆ ಇದ್ದದ್ದೇ ತಾನೇ?. ಅದಕ್ಕೆ ನಾನೂ ಅಪವಾದವಲ್ಲ. ಹಾಗಾಗಿ ಕವಿತೆಯಂತ ನಿರಾಪಯಕಾರಿ ಅಥವಾ ನಿರುಪ್ರದವಿಯ ಪಟ್ಟ ಗಿಟ್ಟಿಸಿಕೊಂಡರೆ ಅದರಲ್ಲಿ ತಪ್ಪಿಲ್ಲ ಅನ್ನುವುದು ನನ್ನ ಧೋರಣೆ. ಅದರಲ್ಲೂ ಕವಿತೆಯ ಸಖ್ಯವನ್ನು ಬೆಳೆಸಿಕೊಂಡರೆ ಸುತ್ತಮುತ್ತಲಿನ ಜಗತ್ತೆಲ್ಲಾ ಸುಖಮಯ ಮತ್ತು ಸುಂದರ ಅಂತ ಬಲ್ಲವರೇ ಹೇಳಿದ ಮೇಲೆ ನನಗೂ ಕವಿತೆಯ ಒಡನಾಟ ಒಳ್ಳೆಯದೇ ಅನ್ನಿಸಿತು. ಅದಿರಲಿ, ನಾನೀಗ ಹೇಳ ಹೊರಟಿರುವ ವಿಷಯ ಅದಲ್ಲ. ಅದರ ಮೊದಲನೆಯ ಪೀಠಿಕಾ ಭಾಗ. ನನಗೂ ಕವಿತೆಗೂ ಅಂಟಿದ ನಂಟಿನ ಕುರಿತು. ಅದಕ್ಕೆ ಕಾರಣವಾದ ನನ್ನ ಚೊಚ್ಚಲ ಕವಿತೆಯ ಪ್ರಸವದ ಕುರಿತು, ಅದು ಕಟ್ಟಿಕೊಟ್ಟ ಪುಳಕ ಮತ್ತು ರೋಮಾಂಚನದ ಜಗತ್ತಿನ ಕುರಿತು.

  ಸರಿ ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ಪದವಿ ತರಗತಿಗೆ ಕಾಲಿಟ್ಟ ಹೊತ್ತದು. ಎಲ್ಲಾ ಮಕ್ಕಳು ರಂಗು ರಂಗಿನ ಉತ್ಸಾಹದ ಬುಗ್ಗೆಗಳೇ. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸ, ಆಸಕ್ತಿ ಇತ್ತು. ಕಾಲೇಜಿನ ಕಾರ್ಯಕ್ರಮ ಬಂತೆಂದರೆ ಎಲ್ಲರೂ ಪಾದರಸಗಳೇ. ಅಪವಾದಕ್ಕೆಂಬಂತೆ ನಾನೊಬ್ಬಳು ಯಾವುದಕ್ಕೂ ಸೇರದೇ ಮೂಲೆಯಲ್ಲಿ ಮುದುಡಿಕೊಳ್ಳುತ್ತಿದ್ದೆ. ನನಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದೆಂದರೆ ಬಲು ಪ್ರಿಯವೇ. ಆದರೆ ಈ ಹಾಳೂ ಹಿಂಜರಿಕೆ ಎಲ್ಲಿಂದ ಬಂದು ತಗುಲಿಹಾಕಿಕೊಂಡಿತೋ?, ಹರವಿ ಬಿಡಿಸ ಹೊರಟರೆ ಅದೋ ಇದೋ..?ಗೊಂದಲವಾಗುವಷ್ಟು.  ಮತ್ತೆಂತ  ಮಾಡಲು ಸಾಧ್ಯ?. ಆದರೂ ಒಳಗೊಂದು ಅಭೀಪ್ಸೆ. ನಾನು ಸೈ ಎನ್ನಿಸಿಕೊಳ್ಳಬೇಕು ಅನ್ನುವುದು. ಹೀಗಿರುವಾಗ ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಕವನ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕವಿತೆಯ ಎಬಿಸಿಡಿ ಗೊತ್ತಿರದ ನಾನು, ಅಲ್ಲೊಂದು ಇಲ್ಲೊಂದು ಬಾಲಮಂಗಳದ ಕವಿತೆಯನ್ನು ಓದಿದ್ದು ಬಿಟ್ಟರೆ, ಶಾಲೆಯ ಪಠ್ಯ ಪುಸ್ತಕದ ಕವಿತೆಗಳನ್ನು ಪರೀಕ್ಷೆಯ ದೃಷ್ಟಿಯಿಂದ ಕಣ್ಣಾಡಿಸಿದ್ದು  ಬಿಟ್ಟರೆ,  ಕವಿತೆ ಅಂದರೆ ಬುದ್ದಿವಂತರ ಬಂಡವಾಳ ಅನ್ನುವುದಷ್ಟೇ ಗೊತ್ತಿದ್ದರೂ ಸಣ್ಣ ತರಗತಿಯಲ್ಲಿ ದಡ್ಡಿ ಹುಡುಗಿಯೊಬ್ಬಳು ನೋಟ್ ಪುಸ್ತಕದ ಹಾಳೆಯ ನಡುವೆ ಕವಿತೆ ಗೀಚುತ್ತಿದ್ದದ್ದು ನಿಜಕ್ಕೂ ನನಗೆ ವಿಸ್ಮಯದಂತೆ ತೋರಿತ್ತು. ಅಲ್ಲಿಂದನೇ ಕವಿತೆಯ ಕುರಿತು ಒಂದು ರೀತಿಯ ಹೇಳಲಾಗದ ಅನೂಹ್ಯ ಆಕರ್ಷಣೆ ಇತ್ತೆಂಬುದು ಈಗ ಅನ್ನಿಸುತ್ತಿದೆ. ಆದರೆ ರಮ್ಯ ಕತೆಗಳನ್ನು, ಸಾಮಾಜಿಕ ಕಾದಂಬರಿಗಳನ್ನು ಸಿಕ್ಕಾಪಟ್ಟೆ ಓದುವ ಅಭ್ಯಾಸ ಇತ್ತು. ನಮ್ಮ ಕಾಲೇಜಿನಲ್ಲಿ ನಮಗೆ ಸಾಹಿತ್ಯ ಓದಲು ಬರೆಯಲು ಪ್ರೇರೇಪಿಸುವ ಅರ್ಥಶಾಸ್ತ್ರದ ಉಪನ್ಯಾಸಕರಿದ್ದರು. ಅವರು  ಆ ದಿನ ಪಾಠ ಮುಗಿಸಿ ಹೋಗುವ ಮುನ್ನ ಈ ಸಲ ನೀವು  ಈ ಸ್ಪರ್ಧೆಯಲ್ಲಿ ಭಾಗವಹಿಸಿ , ಈ ಕಾಲೇಜಿನಿಂದ  ಹೊರ ಹೋಗುವ ಮುನ್ನ  ಕವಿ ಪಟ್ಟ ಕಟ್ಟಿಕೊಂಡು ಹೋಗಿ ನೋಡುವಾ ಅಂತ ಸವಾಲೆಸೆಯುವಂತೆ, ತಮಾಷೆಗೋ, ಗಂಭೀರಕ್ಕೋ ಒಂದೂ ಗೊತ್ತಾಗದಂತೆ ಹೇಳಿ ಹೋದರೂ ನನ್ನ ತಲೆಯೊಳಗೆ ಹೌದಲ್ವಾ! ನಾನೂ ಯಾಕೆ ಪ್ರಯತ್ನಿಸಬಾರದು ?, ನಾನೂ ಯಾವುದಕ್ಕೂ ಬಾರದವಳು ಅಂತ ಅನ್ನಿಸಿಕೊಳ್ಳಬಾರದು ಅನ್ನುವ ಬಹುಕಾಲದ ಹಪಾಹಪಿಗೆ ತೀವ್ರವಾಗಿ ಕವಿತೆ ಬರೆಯಬೇಕು ಅಂತ ಅನ್ನಿಸತೊಡಗಿತು. ನನ್ನ ಹಾಸ್ಟೆಲ್ ಮೇಟ್  ಗೆಳತಿಯನ್ನು ಪುಸಲಾಯಿಸಿ, ಅವಳು ನನ್ನ ಜೊತೆ ಧೈರ್ಯಕ್ಕಿದ್ದಾಳೆಂಬುದನ್ನು ಖಾತ್ರಿ ಪಡಿಸಿಕೊಂಡ ಮೇಲೆ ನಾನೂ ಕವಿತೆ ಬರೆಯುವ ಸಾಹಸಕ್ಕೆ ಮುಂದಾಗಿದ್ದೆ. ನಾಳೆ ಕವಿತೆ ಸ್ಪರ್ಧೆ, ಎಂತ ಬರಿಯೋದು ಅಂತ ಮಂಡೆಗೆ ಹೊಳಿತಾನೇ ಇಲ್ಲ. ಕವಿತೆ ಎದೆಯೊಳಗಿನಿಂದ ಮೊಳೆಯಬೇಕೆಂಬುದು ಗೊತ್ತೇ ಇರಲಿಲ್ಲ. ಆದರೆ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರು ಮಾಡಿತ್ತು.  ಸ್ಥಳದಲ್ಲಿ ಕುಳಿತೇ ಬರೆಯಬೇಕು ಅಂತ ಮೊದಲೇ ಹೇಳಿದ್ದರು. ಯಾಕೆ ಬೇಕಿತ್ತು ಈ ಬೇಡದ ಉಸಾಬರಿ ಅಂತ ಸಾವಿರದ ಒಂದು ಬಾರಿ ನನಗೆ ನಾನೇ ಹೇಳಿಕೊಂಡಿರ ಬಹುದು. ಹಾಗೇ ಹೀಗೇ ಹೇಗೋ ಪಾಠ ಓದಿಕೊಂಡು, ನಡು ನಡುವೆ, ಸಾಯಿಸುತೆ,ತ್ರಿವೇಣಿ ಓದಿಕೊಂಡು ತೆಪ್ಪಗಿರಬಹುದ್ದಿತ್ತಲ್ಲ?. ಇನ್ನು ನಾನು ಕವಿತೆ ಬರೆದು ,ಅದನ್ನು ಓದಿ ಲೆಕ್ಚರ್ ನಗುವುದು.. ಇದೆಲ್ಲಾ ಬೇಕಾ?.ಇವನ್ನೆಲ್ಲಾ ತಲೆಯೊಳಗೆ ಹುಳದಂತೆ ಬಿಟ್ಟುಕೊಂಡು ಲೈಬ್ರರಿಗೆ ಹೋಗಿ ಅಲ್ಲಿ ಪುಸ್ತಕದೊಳಗಿದ್ದ ಕವಿತೆಯನ್ನೆಲ್ಲಾ ಜಾಲಾಡಿದ್ದೇ ಜಾಲಾಡಿದ್ದು. .ಇದನ್ನೆಲ್ಲಾ ನೆನಪಿಸಿಕೊಳ್ಳುವ ಈ ಹೊತ್ತಿನಲ್ಲಿ ನಗು ತಡೆಯಲಾರದಷ್ಟು ಬರುತ್ತಿದೆ. ಕವಿತೆ ಯಾಕೆ ಬರಿಯಬೇಕು? ಕವಿತೆ ಅಂದರೆ ಏನು ಅಂತನೂ ತಲೆ ಬುಡ ಗೊತ್ತಿಲ್ಲದ ಸಂಧಿಗ್ಧತೆಯಲ್ಲಿ ಕವಿತೆ ಬರೆಯಲು ಹೊರಟಿದ್ದೆ. ಆದರೆ ನನ್ನ ಜೊತೆಗ ಹೆಸರು ನೋಂದಾಯಿಸಿದ ಗೆಳತಿ ಈ ಕವಿತೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಓಡಾಡಿಕೊಂಡಿರುವುದನ್ನು ನೋಡಿದಾಗ ನಿಜಕ್ಕೂ ಗಾಬರಿಯೂ ನಗುವೂ ಒಟ್ಟೊಟ್ಟಿಗೆ ಬರುತ್ತಿತ್ತು. ನನಗೊಬ್ಬಳಿಗೆ ಯಾಕೆ ಹೀಗೆ ಆಗುತ್ತಿದೆಯೆಂದು ತಲೆ ಕೆರೆದುಕೊಂಡರೂ ಉತ್ತರ ಸಿಗುತ್ತಿರಲಿಲ್ಲ. ಇನ್ನು ಅಲ್ಲಿ ಕೂತು ಎಂತ ಕವಿತೆ ಬರೆಯೋದಪ್ಪಾ ಅಂತ ಒಂದು ವಾರದಿಂದ ಕೂತು ಯೋಚಿಸಿದರೂ  ಜಪ್ಪಯ್ಯ ಅಂದರೂ ಒಂದು ಸಾಲೂ ಹೊಳೆದಿರಲಿಲ್ಲ. ನನ್ನ ಸಂಕಟವನ್ನು ಕಡಿಮೆ ಮಾಡಲೋ ಎಂಬಂತೆ ಆ ದಿನ ಎಲ್ಲರಿಗೂ   ’ ಕಾಲ ಕಾಯುವುದಿಲ್ಲ ’ ಅನ್ನೋ  ಒಂದೇ ಶೀರ್ಷಿಕೆಯನ್ನು ಕೊಟ್ಟು ಈ ಕುರಿತು ಕವಿತೆ ಮನೆಯಲ್ಲಿ ಯೋಚಿಸಿ ಬರೆದುಕೊಂಡು ಬನ್ನಿ . ಮತ್ತೆ ಅದು ನಿಮ್ಮ ಸ್ವಂತದ್ದೇ ಆಗಿರಲಿ ಅಂತ ಎಚ್ವರಿಕೆ ಬೇರೆ ಕೊಟ್ಟಿದ್ದರು. ಬಹುಷ; ಅವರಿಗೆ ನಮ್ಮ ಮೇಲೆ ಸಣ್ಣ ಗುಮಾನಿ ಇದ್ದಂತೆ ತೋರುತ್ತದೆ.

    ನಮ್ಮ ಕಾಲೇಜಿನಲ್ಲಿ ಅದಾಗಲೇ ಕವಿಗಳು ಅಂತ ಪೇಟ ಧಾರಣೆ ಮಾಡಿಕೊಂಡವರ ಒಂದು ಬಳಗ ಇತ್ತು. ಅವರನ್ನೆಲ್ಲ ನೋಡುವಾಗ ಇವರ ಮಂಡೆಲಿ ಭಯಂಕರ ಬೊಂಡು ಇದೆ ಅಂತ ನಮಗೆ ನಾವೇ ಗ್ರಹಿಸಿಕೊಂಡಿದ್ದೆವು. ಅವರನ್ನು ಕಾಲೇಜಿನಲ್ಲಿ ನೋಡುವಾಗ ಇವರೇ  ಕುವೆಂಪು, ಬೇಂದ್ರೆಯವರ ನಂತರದ ವಾರಸುದಾರರು ಅಂತ  ಭಾಸವಾಗಿ ಭಯ ಭಕ್ತಿ ಹುಟ್ಟುತ್ತಿತ್ತು. ಇವರೆಲ್ಲರ ನಡುವೆ ನಾನು ಕವಿತೆ ಬರೆಯೋದುಂಟೇ?.ಇರಲಿ ಬಿಡು ಆದದ್ದು ಆಗಲಿ, ಒಂದು ಕವಿತೆ ಬರೆದು ಲಕೋಟೆಯೊಳಗೆ ಹಾಕಿ ಗೋಂದು ಅಂಟಿಸಿ ಕೊಟ್ಟರೆ ಯಾರಪ್ಪನ ಗಂಟು ಹೋಗುವುದಿಲ್ಲ ಅಂತ ನನ್ನನ್ನು ನಾನು ಸಮಾಧಾನಿಸಿಕೊಂಡು ’ಕಾಲ ಕಾಯುವುದಿಲ್ಲ’ ಕವಿತೆಯ ಕುರಿತ ಯೋಚನೆಯಲ್ಲೇ ರಾತ್ರೆಯಿಡೀ ಕಾಲ ಕಳೆಯುತ್ತಾ  ಯೋಚಿಸಿ ಯೋಚಿಸಿ ಇನ್ನೇನು ತಲೆ ಹನ್ನೆರಡಾಣೆ ಆಗುತ್ತೆ ಅನ್ನುವಾಗ ಪಕ್ಕನೆ ಹೊಳೆದೇ ಬಿಟ್ಟಿತು ನೋಡಿ ಎರಡು ಸಾಲು. ಆರ್ಕಿಮಿಡಿಸಿಗೆ ಆದ ಸಂತೋಷ ಏನು ಎಂಬುದನ್ನು ಈಗ ನಾನು ಅನುಭವಿಸಲು ಶಕ್ಯಳಾಗಿದ್ದೆ. ದಡಕ್ಕನೆ ಎದ್ದು ಎಲ್ಲಿ ಆ ಸಾಲು ಕೈ ತಪ್ಪಿ ಹೋಗುತ್ತೋ ಅಂತ ದಿಗಿಲಿನಿಂದ ಪೆನ್ನು ಪೇಪರು ಹಿಡಿದು ಕುಳಿತೇ ಬಿಟ್ಟೆ.

   ’ ಕಾಲ ಕಾಯುವುದಿಲ್ಲ ಗೆಳತೀ..

ಆಗಲೇ ಬೇಕಾದುದಕೆ  ಮರುಕವನೇಕೆ ಪಡುತೀ..’

ಪ್ರೇಮ ಪ್ರಣಯದ ನವಿರು ಸಾಲುಗಳು ಹುಟ್ಟ ಬೇಕಾದ  ಆ ಪ್ರಾಯದಲ್ಲಿ ವೇದಾಂತಿಯಂತೆ ಯಾಕೆ  ಈ ಸಾಲು ಹುಟ್ಟಿಕೊಂಡಿತೋ ಅಂತ ಹಲವು ಭಾರಿ ಯೋಚಿಸಿದ್ದಿದೆ. ಈ ವರೆಗೂ ಉತ್ತರ ದಕ್ಕಲಿಲ್ಲ. ಕವಿತೆಯೆಂದರೆ ಅದೇ ತಾನೇ ಉತ್ತರಕ್ಕೆ ನಿಲುಕದ್ದು. ಸಿಕ್ಕ ಎರಡೇ ಎರಡು ಸಾಲು ಹಿಡಿದುಕೊಂಡು , ಪ್ರಾಸ ಜೋಡಿಸಲು ತ್ರಾಸ ಪಡುತ್ತಾ ಒಂದೊಂದೇ ಸಾಲು ಜೋಡಿಸುತ್ತಾ ಅದೆಂಗೆ ಇಪ್ಪತ್ತು ಸಾಲು ಕವಿತೆ ಬರೆದೆನೋ ಆ  ಪರಮಾತ್ಮನಿಗೇ ಗೊತ್ತು.  ಮೊದಲ ಪದ್ಯ ಅದು. ಬರೆದಾದ ಮೇಲೆ ಅದೆಂಥಾ ನಿರಾಳ ಅಂತೀರಾ?. ನಿಜಕ್ಕೂ ಅಂತಹ ಒಂದು ಭಾವ ನನಗೆ ಈವರೆಗೂ ದಕ್ಕಲಿಲ್ಲ.  ಬರೆದ ಒಂದು ಪುಟವನ್ನು ಅದೆಷ್ಟು ಬಾರಿ ಶ್ಲೋಕ ಪಠಿಸುವಂತೆ ಪಠಿಸಿದೆನೋ..?. ಭಗವಂತನ ನಾಮ ಸ್ಮರಣೆ ಮಾಡಿದ್ದರೆ ಬಹುಷ; ದೇವರು ಪ್ರತ್ಯಕ್ಷ ಆಗಿ ಬಿಡುತ್ತಿದ್ದನೆನೋ. ಬಹುಮಾನ ಸಿಗುತ್ತದೆ ಅಂತ ನನಗೆ ಖಾತ್ರಿಯಿರಲಿಲ್ಲ. ಆದರೆ ತುಂಡರಿಸಿದ ಗದ್ಯದ ಸಾಲುಗಳನ್ನೇ ಕವಿತೆ ಅಂತ  ಭ್ರಮಿಸಿ ಖುಷಿ ಪಟ್ಟದ್ದಕ್ಕೆ ಎಣೆಯಿಲ್ಲ. ಮಾರನೇ ದಿನ ಏನೋ ಲವ ಲವಿಕೆ. ಕವಿತೆಗೆ ಇಷ್ಟೊಂದು ದೈವಿಕವಾದ ಶಕ್ತಿ ಇದೆಯಾ?. ಅದಕ್ಕೆ ಎಲ್ಲರಿಗೂ ಕವಿತೆ ಅಂದರೆ ಅದೇನೋ ಆಕರ್ಷಣೆ , ಅದಕ್ಕೆ ಅದರ ಹಿಂದೆ ದುಂಬಾಲು ಬಿದ್ದುಕೊಂಡು ಹೋಗುವುದು ಅಂತ ಹೊಸ ಸತ್ಯವೊಂದು ಗೋಚರವಾಯಿತು.  ನಾನು ಕಾಲೇಜಿಗೆ ಹೋಗಿ ಡೆಸ್ಕಿನ ಮೇಲೆ ಬಿಳಿ ಹಾಳೆ ಇಟ್ಟು, ರಾತ್ರೆ ಬರೆದು ಉರು ಹೊಡೆದ ಪದ್ಯವನ್ನು ಮತ್ತೊಮ್ಮೆ ಬರೆದೆ. ಪಕ್ಕದಲ್ಲಿದ್ದ  ಗೆಳತಿಗೆ ದಿಗ್ಭ್ರಮೆ ಆಗಿರಬೇಕು. ನೀನು ಅದು ಹೇಗೆ ತಟ್ಟನೆ ಕೂತಲ್ಲೇ ಕವಿತೆ ಬರಿತೀಯಾ? ಅಂತ ಪ್ರಶ್ನೆ ಹಾಕಿಬಿಟ್ಟಳು. ನಾನು ರಾತ್ರೆಯಿಡೀ ಪಾರಾಯಣ ಮಾಡಿ, ಪಠಿಸಿ, ಕಂಠ ಪಾಠ ಮಾಡಿದ್ದು ಅವಳಿಗೆ ಹೇಗೆ ತಾನೇ ಗೊತ್ತಾಗಬೇಕು?.  ನಾನೋ ನಿರ್ಲಿಪ್ತತೆಯಿಂದ ಹ್ಮೂಂ, ಹೌದು! ಏನೋ ಮನಸಿಗೆ ಬರುತ್ತಿರುವುದನ್ನು ಗೀಚುತ್ತಿದ್ದೇನೆ ಅಂತ ಅವಳಲ್ಲಿ ಕುತೂಹಲ ಮೂಡಿಸಿ ಒಳಗೊಳಗೆ ನಗುತ್ತಾ ಕವಿತೆ ಬರೆದು ಮುಗಿಸಿ,ಲಕೋಟೆಯೊಳಗಿಟ್ಟು ತಲುಪಿಸ ಬೇಕಾದವರಿಗೆ ಹರ್ರಿಬಿರ್ರಿಯಲ್ಲಿ ತಲುಪಿಸಿ ಬಂದಿದ್ದೆ. ಎರಡು ದಿನ ಬಿಟ್ಟು ಕವಿತೆ ಸ್ಪರ್ಧೆಯ ಫಲಿತಾಂಶ, ಕನ್ನಡ ಉಪನ್ಯಾಸಕರೇ ತೀರ್ಪುಗಾರರು. ನಾನು ಹಿಂದಿ ತರಗತಿಯ ವಿದ್ಯಾರ್ಥಿಯಾದರೂ ಕಾರಿಡಾರಿನಲ್ಲಿ ಕನ್ನಡ ಮೇಷ್ಟ್ರ ಕಣ್ಣು ತಪ್ಪಿಸಿ ಓಡುವುದೇ ಆಯಿತು. ಅದೆನೋ ಅಳುಕು. ಒಂದು ಕವಿತೆ ಬರೆದು ಕಣ್ಣು ತಪ್ಪಿಸಿ ಓಡಾಡುವಂತಾಯಿತಲ್ಲ!,  ದೇವರೇ, ನನ್ನೊಳಗಿನ ತಳಮಳ ಹೇಗೆ ಪದಗಳಲ್ಲಿ ಹಿಡಿದಿಡುವುದು?. ಆದರೆ ಪರಮಾಶ್ಚರ್ಯವೆಂಬಂತೆ ನಮ್ಮ ಕಾಲೇಜಿನ ಕವಿವರ್ಯರನ್ನೆಲ್ಲಾ ಮೀರಿಸಿ ನನ್ನ ಗೆಳತಿ ಮೊದಲ ಬಹುಮಾನ ಪಡೆದುಕೊಂಡರೆ, ನನಗೆ ದ್ವಿತೀಯ ಬಹುಮಾನ.  ಅಬ್ಭಾ! ಆ ದಿನ ನನ್ನ ಕಾಲು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಬಹುಷ: ನಾನು ಗಾಳಿಯಲ್ಲಿ ತೇಲಿದಂತೆ ನಡೆಯುತ್ತಿದ್ದೆನೇನೋ. ಎಲ್ಲರಿಗೂ ಹೇಳಿದ್ದೇ ಹೇಳಿದ್ದು. ನನ್ನ ಬಾಯಿ ನೋಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಅವರ ಕಿವಿ ನೋವಾಗಿರ ಬಹುದು.  ನನಗೆ ನಾನೇ ದೊಡ್ಡ ಜನ ಆದಂತೆ ಭ್ರಮಿಸಿಕೊಂಡೆ. ಕವಿತೆ ಬರೆಯುವುದು ಎಷ್ಟು ಸುಲಭ ಅಲ್ಲವಾ ಅಂತ ಅನ್ನಿಸಲಿಕ್ಕೆ ಶುರುವಾಗ ತೊಡಗಿತು. ಅಭ್ಭಾ ಕವಿತೆಯೇ.. ! ಮತ್ತೆ ಪ್ರಾಸ ಪ್ರಾಸ ಸೇರಿಸಿ ಕವಿತೆ ಕಟ್ಟುವುದೇ ಆಯಿತು. ಅದೇ ಹೊತ್ತಿನಲ್ಲಿ ಪ್ರತಿಷ್ಟಿತ ಪತ್ರಿಕೆಯೊಂದು ಯುವ ಬರಹಗಾರರಿಗೆ ಪ್ರೋತ್ಸಾಹ ಕೊಡುತ್ತಾ ಅವರಿಗೆ ಸ್ಪರ್ಧೆಗಳನ್ನು ಏರ್ಪಡಿಸುತ್ತಾ , ಬಹುಮಾನ ಕೊಡುತ್ತಿದ್ದರು. ವಿಜೇತರ ಫೊಟೋ ವನ್ನು ಪತ್ರಿಕೆಯಲ್ಲಿ ಹಾಕುತ್ತಿದ್ದರು. ಅಲ್ಲೂ ಅವರು ’ಗಾಂಧೀಜಿ” ಬಗ್ಗೆ ಕವಿತೆ ಬರೆಯಿರಿ ಅಂತ ಪ್ರಕಟಣೆ ಕೊಟ್ಟಿದ್ದರು. ಮೊದಲ ಬಹುಮಾನದ ಉತ್ಸಾಹ ಇನ್ನೂ ಕಡಿಮೆ ಆಗಿರಲಿಲ್ಲ. ನಾನೂ ಬರೆದು ಹಾಕಿದೆ. ಕೆಲವೇ ದಿನಗಳಲ್ಲಿ ಅಲ್ಲಿಂದ ಪ್ರತಿಕ್ರಿಯೇ. ನಿಮ್ಮ ಕವಿತೆ ಆಯ್ಕೆ ಆಗಿದೆ ಅಂತ. ನನ್ನ ಖುಷಿ ಯಾರಿಗೆ ಹೇಳಲಿ?. ಈ ಸಾರಿ ನಾನೂ ದೊಡ್ದ ಕವಿಯಾದೆನೇನೋ ಅಂತ ಬೀಗಿ ಬಿಟ್ಟೆ. ಮರುವಾರ ಆಯ್ಕೆಯಾದ ಕವಿಗಳ ಪೊಟೋ ಹಾಕಿದ್ದರು. ರಾಶಿ ರಾಶಿ ಪೊಟೊಗಳ ಮದ್ಯೆ ನನ್ನದು ಕೊನೇಗೂ ಸಿಕ್ಕಿ ಬಿಡ್ತು. ಬಹುಷ; ಬರೆದ ಎಲ್ಲಾ ಕವಿಗಳ ಪೊಟೋ ಹಾಕಿದ್ದಿರಬಹುದೆಂದು ಆಗ ಹೊಳೆದೇ ಇರಲಿಲ್ಲ.

ಅಂತೂ ಇಂತೂ ಆ ಸಾರಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿ ವಿಭಾಗದ ಕವಿಗೋಷ್ಟಿಗೆ ನಾನು ಆಯ್ಕೆ ಆಗಿ ಬಿಟ್ಟಿದ್ದೆ, ಇದು ಮೊದಲ ಕವಿತೆ ತಂದಿತ್ತ  ಅವಕಾಶ. ಸ್ವಲ್ಪ ತಿದ್ದುಪಡಿ ಮಾಡಿ ಅದನ್ನೇ ಓದಿದ್ದೆ. ಸಣ್ನಗೆ ಬೆವರಿಕೊಂಡು ವೇದಿಕೆಯಿಂದ ಇಳಿಯುವಾಗ  ಸಮ್ಮೇಳನಕ್ಕೆ ಬಂದಿದ್ದ  ಪ್ರಸಿದ್ಧ ಸಾಹಿತಿಗಳಾದ ಡಾ. ಪುರುಶೋತ್ತಮ ಬಿಳಿಮಲೆಯವರು ನಿನ್ನ ಕವಿತೆ ಚೆಂದಿದೆ ಅಂದಾಗ  ಸಿಕ್ಕಾಪಟ್ಟೆ ಖುಷಿ. ಆಗಸಕ್ಕೆ ಮೂರೇ ಗೇಣು. ಜೊತೆಗೆ ನಾನು ಬರೆದ ಮೊದಲ ಕವನ ಉದಯವಾಣಿ ಪತ್ರಿಕೆಯಲ್ಲಿ  ಪ್ರಕಟಗೊಂಡು ಸುತ್ತಮುತ್ತಾ ನಾನೊಬ್ಬಳು ಕವಿ ಅಂತ ಗುರುತಿಸಿಕೊಳ್ಳುವಂತಾದೆ. ಹಾಗೇ ಅದೇ ಖುಷಿಯಲ್ಲಿ ಹುಟ್ಟಿದ ಒಂದಷ್ಟು ಸಾಲು ಕವಿತೆ ಬರೆದು ಎಣಿಕೆಯ ಆಧಾರದ ಮೇಲೆ ಒಂದು ಪುಸ್ತಕ ಮಾಡಿ ಅದಕ್ಕೂ ಮೊದಲ ಕವಿತೆ ಹೆಸರು “ ಕಾಲ ಕಾಯುವುದಿಲ್ಲ ’ ಅಂತಿಟ್ಟು ,ಸಾಹಿತ್ಯ ಲೋಕಕ್ಕೆ ನನ್ನದೊಂದು ಸಂಕಲನವನ್ನ ಅರ್ಪಿಸಿ ಕವಿಗಳ ಸಾಲಿನಲ್ಲಿ ನುಗ್ಗಿಕೊಂಡೆ.

   ತದನಂತರ ಓದು, ಕವಿಗೋಷ್ಟಿ, ಕಮ್ಮಟ ಅಂತ ಓಡಾಡುವಾಗಲೆಲ್ಲಾ ನಿಜಕ್ಕೂ ಕವಿತೆ ಅಂದರೆ ಏನು? ಕವಿತೆ ಯಾಕೆ ಬರಿಯಬೇಕು? ಅನ್ನುವ ಪ್ರಶ್ನೆಗಳು ನನ್ನೊಳಗೆ ಹುಟ್ಟಿಕೊಳ್ಳಲು ಶುರು ಮಾಡಿತು. ಈ ಹಿಂದೆ ಬರೆದದ್ದೆಲ್ಲಾ ಕವಿತೆ ಅಂತ ಯಾವ ಭ್ರಮೆಯಲ್ಲಿ ತೇಲಾಡಿದ್ದೆನಲ್ಲಾ? ಈಗ ಸಿಕ್ಕಾಪಟ್ಟೆ ಮುಜುಗರ ಆಗುತ್ತಿದ್ದೆ. ಬಹುಷ; ’ಕಾಲ ಕಾಯುವುದಿಲ್ಲ ’ ಅನ್ನುವ ನನ್ನ ಚೊಚ್ಚಲ ಕವಿತೆ ಕೊಟ್ಟ ಅಚಾನಕ್ ತಿರುವು ನನ್ನನ್ನು ಈ ರೀತಿ ಯೋಚಿಸಲು ಪ್ರೇರೇಪಿಸಿತು ಏನೋ?. ಆ ಕವಿತೆ ಕಟ್ಟಿ ಕೊಟ್ಟ ಪುಳಕ, ದಕ್ಕಿಸಿಕೊಟ್ಟ ಆತ್ಮವಿಶ್ವಾಸ ಇನ್ನೂ ಎದೆಯೊಳಗೆ ಹಸಿ ಹಸಿ. ಬಹುಷ’; ಆ ಕವಿತೆ ನಾನು ಬರೆಯದೇ ಇರುತ್ತಿದ್ದರೆ, ಬಹುಮಾನ ಬರದೇ ಇರುತ್ತಿದ್ದರೆ, ಪತ್ರಿಕೆಯಲ್ಲಿ ಪ್ರಕಟಗೊಳ್ಳದೇ ಇರುತ್ತಿದ್ದರೆ  ಬರೆಯುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ನಾನು ಜೀವಮಾನವಿಡೀ ಕವಿತೆಯ ಸಂಗದಿಂದ ದೂರವಿರುತ್ತಿದ್ದೆನೋ ಏನೋ?.  ಈಗ ಜಗತ್ತಿನ ಸುಖ, ದು;ಖ,ನೋವು, ಸಂಕಟ, ಎಲ್ಲವೂ ಯಾವುದೋ ಒಂದು ಗಳಿಗೆಯಲ್ಲಿ ನನ್ನದು ಅನ್ನಿಸುವ ಹೊತ್ತಿನಲ್ಲಿ ಎದೆಭಾರವಾಗುತ್ತದೆ. ಏನೂ ಮಾಡಲಾಗದ ಅಸಾಹಯಕತೆಗೆ ಕವಿತೆ ಬರೆಯುವ ಅನ್ನಿಸುತ್ತದೆ. ಆದರೆ ಹೇಳಲಾಗದ ಸಾಲುಗಳೇ ಕವಿತೆಯೊಳಗೆ ತುಂಬಿಕೊಂಡು ಒಳಗೊಂದು ಒದ್ದಾಟ ನಡೆದೇ ಇರುತ್ತದೆ.ಇನ್ನೇನು ಕವಿತೆ ಹಿಡಿದೇ ಬಿಟ್ಟೆನೆಂದರೂ ಹಿಡಿತಕ್ಕೆ ದಕ್ಕುವುದಿಲ್ಲ. ಯಾವ ಕವಿತೆ ಬರೆದರೂ ಪೂರ್ಣತೆ ದಕ್ಕುವುದಿಲ್ಲ. ಕವಿತೆಯೊಳಗೆ ಹಿಡಿದಿಡಲಾಗದ ಒಂದು ಅತೃಪ್ತಿ ನಿರಂತರ ಸಣ್ಣಗೆ ಕಾಡುತ್ತಲೇ ಇದೆ. ಒಂದೊಳ್ಳೆ ಗಟ್ಟಿ ಪದ್ಯ ಬರಿಯಬೇಕೆನ್ನುವ ಹಪಹಪಿಗೆ ಕೊನೆಯಿಲ್ಲ. ಒಂದು ಅತೃಪ್ತಿಯನ್ನು ಹುಟ್ಟು ಹಾಕಿ ಒಂದು ಧ್ಯಾನಕ್ಕೆ ಸದಾ ಬೀಳುವಂತೆ ಮಾಡಿದ ಮೊದಲ ಕವಿತೆ ’ ಕಾಲ ಕಾಯುವುದಿಲ್ಲ’ ಕವಿತೆಗೆ ನಾನು ಋಣಿ.

**************************

                .

13 thoughts on “ಕವಿತೆಯೆಂಬ ಪುಳಕದ ಧ್ಯಾನ

  1. Well written and executed. Congratulations and may God give more enthusiasm to come up with more and more innovative thoughts and poems.

  2. Well written and executed. Congratulations and may God give more enthusiasm to come up with more and more innovative thoughts and poems.

    Regards
    Karthik palangaya sadashiva

  3. ಅದ್ಭುತ ಬರಹ ಸ್ಮಿತಾ..ಮತ್ತೆ ಮತ್ತೆ ಓದಬೇಕೆನ್ನುವಷ್ಟು…

  4. ಸ್ಮಿತಾ… ಈ ಇಡೀ ಬರಹವೇ ಒಂದು ಭಾವಲಹರಿಯಾಗಿದೆ. ನಿಮ್ಮ ನಿಶ್ಕಲ್ಮಷ ಮನಸ್ಸು, ನಿಮ್ಮ ಭಾವ ತೀವ್ರತೆ, ನಿಮ್ಮಿಡೀ ವ್ಯಕ್ತಿತ್ವವನ್ನೇ ಈ ಬರಹದಲ್ಲಿ ನಾನು ಕಂಡೆ. ನೀವು ಅತ್ಯುತ್ತಮ ಬರಹಗಾರ್ತಿ. ನಿಮ್ಮ ಮೊದಲ ಕವನವೇ ಅದಕ್ಕೆ ಸಾಕ್ಷಿ. ಕಾವ್ಯ ಅಥವಾ ಬರಹದ ಸಾಂಗತ್ಯ ಇಲ್ಲದಿದ್ದರೆ ನಾವು ಪರಸ್ಪರ ಸಿಗುತ್ತಿದ್ದೆವೇ..? ನಿಮ್ಮ ಬರಹಗಳ ಅಭಿಮಾನದ ಓದುಗಳು ನಾನು… ನಿಮ್ಮ ಗೆಳತಿ ಎಂಬ ಖುಷಿಯ ಜೊತೆಗೆ..

  5. ಮೂರು ಸಲ ಓದಿದೆ. ನಿಮ್ಮ ಕವನ ಬರವಣಿಗೆ ಯ ವೇದನೆ ನನ್ನೊಳಗೆಯೂ ಹಾದುಹೋಯಿತು… ಅದೊಂತರ ಪ್ರಸವ ವೇದನೆ ಯ ಹಾಗೇ…. ಹೊರ ಹಾಕದೆ ನಿರ್ವಾಹವಿಲ್ಲ… ಚೆನ್ನಾಗಿ ಮೂಡಿ ಬಂದಿದೆ.

  6. ಹೇಳಲಾಗದ ಭಾವನೆಗಳನ್ನು ಅಕ್ಷರರೂಪದಲ್ಲಿ ಪ್ರಕಟ ಪಡಿಸಲು ಬರಹ ಒಳ್ಳೆಯ ವೇದಿಕೆ. ಇದನ್ನು ಸದುಪಯೊಗಿಸಿದ ಪರಿಣಾಮ ನಿಮ್ಮಲ್ಲಿ ಒಳ್ಳೊಳ್ಳೆಯ ಕವಿತೆ ಚಿಗುರಲು ಕಾರಣ ವಾಯಿತು. ಒಳ್ಳೆಯ ಲೇಖನ. ಪ್ರೇರಣದಾಯಕ ವಾಗಿತ್ತು.

  7. ಕವಿತೆಗಾಗಿ ಕಾದವಳಲ್ಲಿ ನಾನೂ ಒಬ್ಬಳು..
    ಕವಿತೆ ಬರೆಯಲೇಬೇಕೆಂಬ ಉತ್ಕಟತೆಯಲ್ಲಿ
    ಕಸರತ್ತು ಮಾಡಿದ್ದಿದೆ
    ಬರೆದರೆ ಮಾರುದ್ದದ ಲೇಖನವಾದೀತು..
    ಆದರೆ ನೀವು ಚಂದಗೆ ಹಿಡಿದಿಟ್ಟಿದ್ದೀರಿ

  8. ಓದುವಾಗ ರೋಮಾಂಚನ ಆಗುವಂತ ಅನುಭವಗಳ ಕಟ್ಟಿದ್ದೀರಿ ಸ್ಮಿತಕ್ಕ. ನೀವು ಕವಿತೆ ಬರೆಯುವುದೆ ಬದುಕಿನ ಸಾರ್ಥಕತೆ. ಸ್ವಲ್ಪ ತಡವಾಗಿ ಬರೆದ ಕಾರಣ ಮೊದಲ ಕವಿತೆ ಅಷ್ಟು ಪ್ರಬುದ್ಧತೆಯಿಂದ ಕೂಡಿದೆ ಮತ್ತು ಇಷ್ಟು ಬೇಗ ನೀವು ಬೆಳೆಯಲು ಕಾರಣ ಅಂತ ನನ್ನನಿಸಿಕೆ. ಗುಡ್ ಲಕ್

  9. ಬರಹ ಚೆನ್ನಾಗಿದೆ ಸ್ಮಿತಾಕ್ಕ.ಉದಯವಾಣಿ ಯಲ್ಲಿ ನಿಮ್ಮ ಮೊದಲ ಕವಿತೆ ಓದಿದ ನೆನಪು ಹಸಿರಾಗಿದೆ.ಖುಷಿಗೂ ನೋವಿಗೂ ಅಮ್ಮನಂಥ ಮಡಿಲು ಕವಿತೆಯದು.ಕವಿತೆಯ ಮುಂದೆ ಸಂಕೋಚವಿಲ್ಲದೆ ಬೆತ್ತಲಾಗಿಬಿಡಬಹುದು.ನಿಮ್ಮ ಇನ್ನಷ್ಟು ಕವಿತೆಗಳನ್ನು ಓದುವ ಆಸೆಯಿದೆ

  10. ತುಂಬ ಆಸಕ್ತಿಕರವಾದ ಹಾಗೂ ಸುಂದರವಾದ ಲೇಖನ,‌ಅಭಿನಂದನೆಗಳು

Leave a Reply

Back To Top