ಕವಿತೆ
ಪೂರ್ಣಿಮಾ ಸುರೇಶ್
ನಸುಕಿನ ಮೌನ
ಹಳೆಯ ಹಾದಿಗೆ
ಹೆಜ್ಜೆ ಜೋಡಿಸಿದೆ
ಅದೇ
ಆಚೆ ಬದಿ ಅಶ್ವತ್ಥ ಈ ಬದಿ ಆಲ
ಆಲದ ಜಟಿಲ ಬಿಳಲುಗಳು
ನೇತಾಡಿದ್ದು
ಮಣ್ಣ ಪಾದಗಳು ತೇಲಿ ಅಗಸವ
ಸ್ಪರ್ಶಿಸಿ
ಮುದಗೊಂಡಿದ್ದು
ಎಲೆ ಮರೆಯ ಗೂಡಿನ ಹಕ್ಕಿಗಳ
ಗಂದರ್ವವಾಣಿಗೆ ಪ್ರತಿಧ್ವನಿಸಿದ್ದೂ
ಗುಲಾಬಿ ಅಂಗೈ ದೊರಗು ಸೆಳೆತಕೆ
ಕೆಂಪಾಗಿದ್ದು
ಪುಟ್ಟ ಉರಿ ಸುಡುತ್ತಿದ್ದರೂ
ಆಕರ್ಷಣೆ !
ಮತ್ತೆ
ಮತ್ತೆ
ತೂಗಿ ಬಿದ್ದದ್ದು
ತರಚಿದ್ದು..
ಈ ಅಶ್ವತ್ಥ!
ಪುಟ್ಟ ಮನಸಿಗೆ ನಿಲುಕದ
ದೊರಗು ದೇಹ
ಆಗಸದ ಅಖಂಡ ಮೌನಕೆ
ತನ್ನ ಧ್ಯಾನ ತುಣುಕುಗಳ ಸಿಲುಕಿಸಿ
ಅನುಸಂಧಾನಗೈವ
ಎಲೆಗಳು
ಸುತ್ತು ಸುತ್ತಿದ್ದು
ಹತ್ತಿರದ ಪುಟ್ಟಗಿಡದ ಹಸಿರ
ಪರಪರ ಎಳೆದು
ಹರಿದು
ಮನೆಯಾಟಕೆ ಅಡುಗೆ
ತಯಾರಾಗಿದ್ದು..
ಕೈಗೆ ಹಸಿರು ರಸ
ಕಾಲಲ್ಲಿ ಮಣ್ಣು ತೇವ
ಆಲ-ಅಶ್ವತ್ಥ
ಆಳಕ್ಕಿಳಿಸುತ್ತವೆ
ಬೇರು
ಒಳಕೂಗು
ಅಕ್ಷರವಾಗಲು ತುಡಿಯುತ್ತವೆ.
ಬೆಳಕಾಗಿ ಪೊರೆಯುತ್ತದೆ
ಜೀವಂತಿಕೆಯ ಜಗದಗಲ ತೆರೆಯುತ್ತದೆ.
************************************
ಚೆನ್ನಾಗಿದೆ
ಕವಿತೆ ಚೆಂದಿದೆ ಪೂರ್ಣಿಮಾ…