ಸಣ್ಣಕಥೆ

ಪ್ರೀತಿ

ಆನಂದ್ ಕೊರಟಿ

ಆಫೀಸಿಗೆÉ ತಡವಾಗುತ್ತಿದೆ, ಬೇಗ ಹೋಗಬೇಕು…’ ಅವನು ತನ್ನ ಕೋಟನ್ನು ಭುಜದ ಮೇಲೆ ಹಾಕಿಕೊಳ್ಳುತ್ತಾ ಜೋರಾಗಿ ಹೇಳಿದ. ಮೆಟ್ಟಿಲುಗಳನ್ನು ಇಳಿದು ಮನೆಯಿಂದ ಹೊರಗೆ ಓಡುತ್ತಾ ಹೊರಟ. ಅವನು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಂತೆ, ಅವಳು ಓಡುತ್ತಾ ಮೆಟ್ಟಿಲಿಳಿದು ಬಂದಳು. ‘ತಡಿ, ತಡಿ….’ ಎಂದು ಕೂಗಿದಳು, ಆದರೆ ಅಷ್ಟರಲ್ಲಿ ಅವನು ಹೊರಟು ಹೋಗಿದ್ದ.
ಅವಳ ಮುಖ ಮುದುರಿದ ಕಾಗದದಂತೆ ಆಯಿತು. ‘ಅವನು ಹೋಗುವಾಗ ನನಗೆ ಮುತ್ತಿಕ್ಕುವುದನ್ನು ಮರೆತ’ ತನಗೆ ಆದ ನೋವಿನಿಂದ ನಡುಗುವ ಧ್ವನಿಯಲ್ಲಿ ಪಿಸುಗುಟ್ಟಿದಳು. ಅವಳು ಅವನಿಗೆ ಕರೆ ಮಾಡಿ, ‘ನೀನು ನನಗೆ ಮುತ್ತಿಡದೇ ಹೋದೆ’ ಆರೋಪ ಮಾಡುವವಳಂತೆ ಹೇಳಿದಳು.
‘ನನ್ನನ್ನು ಕ್ಷಮಿಸು, ನನ್ನ ಮುದ್ದಿನ ಮಗಳೆ’ ಅವನು ಪರಿತಪಿಸುವ ಧ್ವನಿಯಲ್ಲಿ ಹೇಳಿದ.
ಅವಳು ದೊಡ್ಡ ಹೆಂಗಸಿನಂತೆ ‘ಸರಿ ಬಿಡು’ ಎಂದು ಕರೆಯನ್ನು ಕಡಿತಗೊಳಿಸುತ್ತಾ ಹೇಳಿದಳು.
ನಂತರ ಸಿಡುಕಿನಿಂದ ತಿಂಡಿ ನುಂಗಿದಳು, ತನ್ನ ಶೂಗಳನ್ನು ಧರಿಸಿದಳು, ತನ್ನ ಶಾಲೆಯ ಬ್ಯಾಗ್ ತೆಗೆದುಕೊಂಡು ಬಾಗಿಲಿನಿಂದ ಹೊರಗೆ ನಡೆದಳು. ಮನಸ್ಸಿನ ಭಾರಕ್ಕೆ ಅವಳ ಭುಜಗಳು ಕುಸಿದವು. ಅವಳು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಕಾರು ಮನೆಯ ಹೊರಗಿನ ಪೆÇರ್ಟಿಕೋಗೆ ಬಂತು. ಅವನು ಕಾರ್‌ನಿಂದ ಹೊರಗೆ ಬಂದ. ಅವಳು ಅವನೆಡೆಗೆ ಓಡಿದಳು. ಅವಳ ಮುಖವು ಕ್ರಿಸಮಸ್ ಟ್ರೀಯಂತೆ ಬೆಳಗಿತು.
‘ನನ್ನನ್ನು ಕ್ಷಮಿಸು ಕಂದಾ, ನಾನು ಮರೆತೆ’ ಅವನು ಅವಳನ್ನು ಮೇಲಕ್ಕೆತ್ತುತ್ತಾ ಹೇಳಿದ. ಪ್ರೀತಿಯ ಮುತ್ತಿನ ಮಳೆಗೈದ. ಅವಳು ಏನೂ ಹೇಳಲಿಲ್ಲ. ಮಂದಹಾಸದ ಮುಗುಳ್ನಗೆ ಬೀರಿದಳು.
ಹದಿನೈದು ವರ್ಷಗಳ ನಂತರ-
ಆ ದಿನ ಆತ ಆಫೀಸಿಗೆ ತಡವಾಗಿ ಬಂದಿದ್ದ ಎಂದು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಆದರೆ ಆ ಚಿಕ್ಕ ಬಾಲಕಿ ತನ್ನ ತಂದೆ ಕೇವಲ ತನಗೆ ಪ್ರೀತಿಯ ಮುತ್ತಿಡುವುದಕ್ಕಾಗಿಯೇ ಬಹಳ ದೂರದ ಆಫೀಸಿನಿಂದ ಮರಳಿ ಕಾರನ್ನು ಚಲಾಯಿಸಿಕೊಂಡು ಹಿಂತಿರುಗಿ ಬಂದಿದ್ದನೆಂದು ಇನ್ನೂ ಮರೆತಿಲ್ಲ.

====================================================

ಪರಿಚಯ:

ವೃತ್ತಿಯಲ್ಲಿ ಪುಸ್ತಕ ಪ್ರಕಾಶಕ, ಷೇರು ಮಾರುಕಟ್ಟೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ. ಆಗಾಗ್ಗೆ ತೋಚಿದ್ದು ಗೀಚುತ್ತೆÃನೆ. ಉಳಿದಂತೆ ಎಲ್ಲರೊಳಗೊಂದಾದ ಮಂಕುತಿಮ್ಮ.

Leave a Reply

Back To Top