ಕವಿತೆ
ಅಬ್ಳಿ,ಹೆಗಡೆ
ನಾನು ಮತ್ತು ದೇವರು
ಇಬ್ಬರೇ ಕುಳಿತಿದ್ದೇವೆ
ನಡುಮನೆಯ ಕತ್ತಲಲ್ಲಿ.
ನನಗಿಷ್ಟ ಇಲ್ಲಿಯ ಕತ್ತಲು.
ಕಾರಣವಿಷ್ಟೇ…..
ಇಲ್ಲಿ ಬೆತ್ತಲಾದರೂ
ಗೊತ್ತಾಗುವದಿಲ್ಲ ಹೊರಗೆ.
ದಟ್ಟ ಕತ್ತಲು-
ಯಾವಾಗಲೂ ರಾತ್ರಿಯೆ.
ಇಲ್ಲಿ ಹಗಲಿನೆಚ್ಚರದಲ್ಲೂ
ಕನಸು ಕಾಣಬಹುದು.
ವಿಹರಿಸಬಹುದು-
ನೀಲಾಕಾಶದಲ್ಲಿ
ಚುಕ್ಕಿ,ಚಂದ್ರಮರೊಟ್ಟಿಗೆ.
ಇಲ್ಲಿ ಯಾವಾಗಲೋ
ಅಪರೂಪಕ್ಕೊಮ್ಮೆ
ತೆರೆದುಕೊಳ್ಳುವದೂ-
ಉಂಟು,ವರ್ಣಮಯ
ಹೊರ ಜಗತ್ತು.
ಇಲ್ಲಿ ಕಿಟಕಿ,ಬಾಗಿಲುಗಳ
ಇರುವಿಕೆಯೂ ಕೂಡ
ಗೊತ್ತಾಗುತ್ತಿಲ್ಲ.
ಮುಚ್ಚಿರಬಹುದು…
ಹೆಗ್ಗಣ,ಕ್ರಿಮಿ ಕೀಟಗಳ
ಹೆದರಿಕೆಗೆ ಯಾರೋ….!
ಯಾವಾಗಲೋ ಒಮ್ಮೆ
ಮುಚ್ಚಿದ ಕದ
ತೆರೆದಾಗಷ್ಟೇ ಒಳಬರುವ
ಮಬ್ಬು ಬೆಳಕಲ್ಲಿ,
ಒಳಗಿನ ಸೋಜಿಗಗಳೆಲ್ಲ
ಅಸ್ಪಷ್ಟ ಕಣ್ಣೆದುರು.-
ನೇತಾಡುವ ‘ಗಳು’ವಿಗೆ
ನೇತಾಡುವ ಬಣ್ಣ,ಬಣ್ಣದ
ಹಳೆ,ಹೊಸ ಬಟ್ಟೆಗಳು,
‘ಗಿಳಿಗುಟ್ಟ’ಕ್ಕೆ ನೇತಾಡಿಸಿದ
ಖಾಲಿ ಚೀಲಗಳು,
ಮುರಿದ,ಮುರಿಯದ
ಹಳೆ,ಹೊಸಕೊಡೆಗಳು,
ನೆಲಕ್ಕೆ ಗೋಡೆಗೆತಾಗಿ,
ಬೆಂಚಿನ ಮೇಲೆ,ತುಂಬಿದ
ಖಾಲಿ ಡಬ್ಬಗಳು…
ಇನ್ನೂ ಏನೇನೋ……!
ಇನ್ನು ಇಲ್ಲಿ..
ಕಠೋರ ವಾಸ್ತವದ
ಬಿಸಿಲ ಝಳವಿಲ್ಲ,
ಜಂಜಡವಿಲ್ಲ,ಹೊರಗಿನ-
ಗೌಜಿ,ಗಲಾಟೆಗಳಿಲ್ಲ.
ಎಲ್ಲ,,ಸ್ತಬ್ಧ,ಧ್ಯಾನಸ್ಥ-
ಮೌನ,ತಾನೇ ತಾನಾಗಿದೆ.
ಇನ್ನು…ನಾ ಹುಟ್ಟಿದ್ದು,
ಮೊದಲು ಅತ್ತಿದ್ದು ಕೂಡ
ಇಲ್ಲೇ ಆಗಿರಬಹುದು.
ನನ್ನಂತೆ ಎಷ್ಟೊ ಹುಟ್ಟುಗಳು
ನನಗಿಂತ ಮೊದಲು
ಹುಟ್ಟಿ,ಅತ್ತು,ಗುಟ್ಟಾಗಿ-
ಸತ್ತಿರಲೂ ಬಹುದು.
ಎಷ್ಟೋ ಸಂತಸ,ಉನ್ಮಾದದ
ಮೊದಲ ರಾತ್ರಿಗಳು,
ಕೊನೆಯಾಗಿರಲೂ ಬಹುದು
ನೋವಿನಲ್ಲಿ…..!
ಈ ನಡುಮನೆಯಲ್ಲಿ..
ದೇವರೆದುರು ಹಚ್ಚಿಟ್ಟ
ನಂದಾದೀಪವೂ..
ಎಂದೋ…ಎಣ್ಣೆಮುಗಿದು,
ಬತ್ತಿಸುಟ್ಟು,ಕರಕಲಾಗಿ,
ಆರಿಹೋಗಿದೆ-
ಯಾವಾಗಲೋ….!?
ದೇವರು ಕೂಡ
ಕತ್ತಲಲ್ಲಿ,ನನ್ನೊಟ್ಟಿಗೆ.
ಆತನಿಗೂ ಬೆಳಕಿನ
ಅನಿವಾರ್ಯತೆ ಇದ್ದಂತೆ
ಕಾಣುತ್ತಿಲ್ಲ ನನ್ನಂತೆ…!
ಸುತ್ತಲೂ ನಮ್ಮಿಷ್ಟದ
ಕತ್ತಲ ನಡುಮನೆ–
ನಮಗೆಂದಿಗೂ……..!!!
************************************
ನಾನು ಮತ್ತು ದೇವರು.ಕತ್ತಲಿನ ಗರ್ಭಗುಡಿಯಲ್ಲಿ. ಇಬ್ಬರಿಗೂ ಕತ್ತಲ ಪ್ರೀತಿ. ಗ್ರಾಮೀಣ ಒಂಟಿ ಜೀವನದ ಏಕತಾನತೆಯ ಪ್ರತೀಕವಾಗಿದೆ ಈ ಕವನ. ಆಳ ಮತ್ತು ಅರ್ಥಗರ್ಭಿತ.
ನಡು ಮನೆ ಕತ್ತಲಿನಲ್ಲಿ ಅರಳುವ ಮತ್ತು ಮುದುಡುವ
ಎಲ್ಲ ಸಂಗತಿಗಳನ್ನು ಸಾಂಕೇತಿಕವಾಗಿ ಧ್ವನಿಯಾಗಿಸಿದ
ಕವನ.ಅರ್ಥಪೂರ್ಣವಾಗಿದೆ
ನಡುಮನೆ ಒಳ್ಳೇ ರೂಪಕವಾಗಿ. ಧ್ಯಾನಿಸುತ್ತಿದೆ.
ಎಲ್ಲರ ಎದೆಯ ನಡುಮನೆಯಲ್ಲೂ ನಡೆಯುವ ವಿದ್ಯಮಾನದ ಚಿತ್ರಣ,ಭಾವಪೂರ್ಣ,ಚಿಂತನೀಯ ಕವಿತೆ.
ಅರ್ಥಪೂರ್ಣ ಕವಿತೆ
ಅನೇಕ ಸಂಗತಿಗಳನ್ನು ಗರ್ಭೀಕರಿಸಿಕೊಂಡು ಧ್ವನ್ಯಾತ್ಮಕವಾಗಿ ಹೇಳವು ಈ ಕವನ ಅರ್ಥಗರ್ಭಿತ ಮತ್ತು ಅತ್ಯುತ್ತಮ
ನಡುಮನೆ, ದೇವರು, ನಂದಾದೀಪ ಮತ್ತು ನೀವು.. ಹೂಗೆ ಇಡೀ ಕವನ ಕಟ್ಟಿಕೊಡುವ ಬೇರೊಂದು ಅರ್ಥವಿದೆ. ಕವನ ಚೆನ್ನಾಗಿದೆ.
ನಡುಮನೆಯ ಕತ್ತಲಲ್ಲಿ ಮೂಡಿಬಂದ ಅನುಭವದ ಅನುಭಾವದ ಅಭಿವ್ಯಕ್ತಿ ಒಳಪ್ರಪಂಚದ ಕಲ್ಪನೆಯ ಅಧ್ಯಾತ್ಮ ವನ್ನು ಹೊರಹೊಮ್ಮುವ ಕವಿತೆ ಹಲವಾರು ಮೂರ್ತ ಪ್ರತಿಮೆಗಳು ಸುಂದರವಾದ ಹಂದರದಲ್ಲಿ ಪಡಿಮೂಡಿದೆ ಅಬ್ಳಿ ಹೆಗಡೆಯವರಿಗೆ ಅಭಿನಂದನೆಗಳು