ಜ್ವಾಲೆಗಳ ನಡುವೆ…ಹುಟ್ಟಿದ ಕಾವ್ಯ

ಮೊದಲ ಕವಿತೆಯ ರೋಮಾಂಚನ

ನಾಗರಾಜ ಹರಪನಹಳ್ಳಿ

Red and Orange Fire

ನಾನು ಸಾಹಿತ್ಯದ ವಿದ್ಯಾರ್ಥಿ. ಉಪನ್ಯಾಸಕ ಆಗಬೇಕೆಂದು ಕೊಂಡಿದ್ದೆ. ಆಗಿದ್ದು ಪತ್ರಕರ್ತ. ಬಿಡುವಿನ ಮಧ್ಯೆ ಸಾಹಿತ್ಯದ ಓದು, ಬರಹ ಇದ್ದೇ ಇದೆ. ನನ್ನ ಮೊದಲ ಕವಿತೆ ಪ್ರಕಟವಾದದ್ದು ದಾವಣಗೆರೆಯ ಹೊಯ್ಸಳ ಪತ್ರಿಕೆಯಲ್ಲಿ. ೧೯೯೨ ರ ಸಮಯ. ಕವಿತೆಯ ಶೀರ್ಷಿಕೆ “ಕಲೆಗಳು” ಅಂತ ನೆನಪು.‌ ಸಾಹಿತ್ಯ ಸಂಗಾತಿ ಆ ಕವಿತೆಯ ನೆನಪಿಸಿತು.‌ಹೊಯ್ಸಳದ ಪ್ರತಿ ಸಿಕ್ಕೀತೆಂದು ಹುಡುಕಾಡಿದೆ.‌ ಸಿಗಲಿಲ್ಲ.‌ ಕವಿತೆ ಬಂಧ ಗಟ್ಟಿಯಾಗಿರಲಿಲ್ಲ.‌ ಬಂಡಾಯ  ಶೈಲಿಯ ಕವಿತೆಯಾಗಿತ್ತು. ೧೯೯೧-೯೨ ಸಮಯದಲ್ಲಿ ಫ್ರೆಂಚ್ ಲೇಖಕರಾದ ಅಲ್ಬರ್ಟ  ಕಾಮ್ಯು  ಹಾಗೂ ಕಾಫ್ಕ ನನ್ನ ಕಾಡಿದ್ದರು.ಪ್ರಭಾವಿಸಿದ್ದರು. ಅವರ ಕೃತಿಗಳನ್ನು ಕನ್ನಡದಲ್ಲಿ ಡಿ.ಎ.ಶಂಕರ್ ಅವರ ಅನುವಾದದ ಮೂಲಕ ಓದಿಕೊಂಡಿದ್ದೆ. ಎಂ.ಎ.ಮುಗಿಸಿ ನೌಕರಿ ಸಿಗದ ದಿನಗಳವು. ಹಾಗಾಗಿ ಬದುಕು ಸಂಕೀರ್ಣ ಸ್ಥಿತಿಯಲ್ಲಿತ್ತು, ನನ್ನದು ಸದಾ ಪ್ರೇಮಿಯ ಮನಸು, ಜೊತೆಗೆ ಆದರ್ಶಗಳು, ವ್ಯವಸ್ಥೆಯ ಬಗ್ಗೆ ಬೆಂಕಿಯಂತಹ ಕೋಪ. ಅದು ಈಗಲೂ ಇದೆ . ಹೀಗೆ ಇರುತ್ತಾ ಕಲೆಗಳು ಅಂತ ಕವಿತೆ ಬರೆದು ಕಲಾವಿದರೂ,  ಹೊಯ್ಸಳ ಪತ್ರಿಕೆಯ ಸಂಪಾದಕರು ಆದ ಶಂಕರ್ ಪಾಟೀಲರಿಗೆ ತೋರಿಸಿದೆ.  (ಅವರು ಕಾಣಲು ನಟ  ಅಮೂಲ್ ಪಾಲೇಕರ್ ತರಹ ಇದ್ದರು).‌

 ಕವಿತೆ ಗಮನಿಸಿದ ಶಂಕರ ಪಾಟೀಲ ಸರ್, ” ಇನ್ನು ಪಕ್ವತೆ ಬೇಕು ಅಂದರು” .  ಅದಕ್ಕ ನಾನು “ಸರ್ ಇದೇ ಕವಿತೆಯನ್ನು ನಿಮಗೆ ಚಂಪಾ ಕಳಿಸಿದ್ದರೆ ನೀವು ಹಿಂದ ಮುಂದ ನೋಡ್ದ ಹಾಕೋತ್ತಿದ್ದಿರಿ”  ಅಂದು ಬಿಟ್ಟೆ. ತಕ್ಷಣ ಕವಿತೆ ತಗೊಂಡು , ಮತ್ತೊಮ್ಮೆ ಕಣ್ಣಾಡಿಸಿ , ಮುದ್ರಣಕ್ಕ ಒ.ಕೆ.ಮಾಡಿದ್ರು.‌ಮರುದಿನ ಹೊಯ್ಸಳ ಪತ್ರಿಕೆಯೊಳಗ ಕಲೆಗಳು ಕವಿತೆ ಪ್ರಕಟವಾಯಿತು. ಸಂತೋಷಕ್ಕ ಪಾರವೇ ಇರಲಿಲ್ಲ.

ಆ ಕವಿತೆಯ ಪ್ರಾರಂಭ ಹೀಗಿತ್ತು….

ನನ್ನ ಅಂಗೈ,ಕಾಲು

ಮುಂತಾದ ಕಡೆಗಳಲ್ಲಿ

ತಟ್ಟನೆ ಕಣ್ಣಿಗೆ ತಬ್ಬುವ ಕಲೆಗಳು

ಎಷ್ಟೊಂದು ಕತೆಗಳಿವೆ

ರೂಪ ನೀಡುತ್ತವೆ ಕಲೆಗಳು

ಕಲೆಗಳ ಹಿಂದಿನ ನೋವುಗಳು

ನೋವುಗಳ ಹಿಂದಿನ ಕ್ಷಣಗಳು

ನೋವುಗಳು ಮಾಸಿವೆ

ಕಾಲ ಪ್ರವಾಹದ ತೊರೆ

ಬತ್ತಿಹೋಗಿದೆ; ಈಗ ಬರೀ ನೆನಪು ಮಾತ್ರ

ಈಗ ಒಮ್ಮೊಮ್ಮೆ ಆಕ್ರೋಶ ಹುಟ್ಟಿಸುತ್ತವೆ

ಹುಟ್ಟಿದಷ್ಟೆ ವೇಗವಾಗಿ ಸತ್ತು ಹೋಗುತ್ತವೆ

ಎಲ್ಲಾ ಕ್ರೂರ ಭ್ರಷ್ಟತೆಗಳ ವಿರುದ್ಧ ,ನೀಚತನದ ವಿರುದ್ಧ ಸಮರ ಸಾರುತ್ತವೆ…

ಕಲೆಗಳು(9.10.1992)

….ಹೀಗೆ ಬರೆಯುತ್ತಿದ್ದ ನಾನು  ಅರೆಬೆಂದ ಕವಿತೆಗಳನ್ನು ಮುಂದೆ  ಪ್ರಕಟಿಸಲಿಲ್ಲ. ಓದಲು ಪ್ರಾರಂಭಿಸಿದೆ.  ಅಲ್ಲಿಂದ ಉದ್ಯೋಗಕ್ಕಾಗಿ ಕಾರವಾರ ಬಳಿಯ ಸದಾಶಿವಗಡಕ್ಕೆ ಬಂದೆ.  ಕವಿತೆ ಬರೆಯುವ ಹಂಬಲವಿತ್ತೇ ವಿನಃ ಬರೆದಿರಲಿಲ್ಲ.‌ ಆದಾಗಲೇ ಸಂಕ್ರಮಣ, ಲಂಕೇಶ್ ಪತ್ರಿಕೆ ನನ್ನ ವಿಚಾರಧಾರೆಯ ರೂಪಿಸಿದ್ದವು. ೧೯೯೭ರ ಹೊತ್ತಿಗೆ ಉಪನ್ಯಾಸಕ ಹುದ್ದೆಯಿಂದ ಪತ್ರಕರ್ತ ವೃತ್ತಿಗೆ ಬಂದಿದ್ದೆ.   “ಜಾಲ್ವೆಗಳ ನಡುವೆ” ಎಂಬ ಕವಿತೆಯನ್ನು ಸಂಕ್ರಮಣ ಪತ್ರಿಕೆಗೆ  ಕಳುಹಿಸಿದ್ದೆ. ಅದು ಜನೇವರಿ 1997ರ ಸಂಚಿಕೆಯಲ್ಲಿ ಪ್ರಕಟವಾಯಿತು. ಆಗ ನನಗೆ ಕವಿತೆ ಬರೆಯುವ ಹುಮ್ಮನಸು ಇಮ್ಮಡಿಸಿತು. ಅದೇ ವರ್ಷ ಆಗಸ್ಟಿನಲ್ಲಿ ಸ್ವಾತಂತ್ರೋತ್ಸವ ಕವಿತೆ ಪ್ರಕಟವಾಯಿತು. 

 1997   ಅಥವಾ 1998ರಲ್ಲಿ ಕಾರವಾರದ ದೇವಭಾಗದಲ್ಲಿ ಸಾಹಿತ್ಯ ಕಮ್ಮಟ ನಡೆದಿತ್ತು. ಆಗ ಶಾಂತರಸರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು. ಕಮ್ಮಟದ ಬಿಡುವಿನ ಮಧ್ಯೆ ನನ್ನ ಜೊತೆ  ಮಾತಾಡುತ್ತಾ   ಏನ್ ಬರಿದಿರಿ ಅಂತ ವಿಚಾರಿಸಿದ್ರು. ನಾನು ಸಂಕ್ರಮಣದ ಕವಿತೆ ಬಗ್ಗೆ ಪ್ರಸ್ತಾಪಿಸಿದೆ. ”  ಹೌದಾ,  ಸಂಕ್ರಮಣದಲ್ಲಿ ಕವಿತೆ ಪ್ರಕಟ ಅಗ್ಯಾವ. ಹಾಗಾದರೆ ನೀವು ಕವಿ ಅಂದರು” . ಅವರ  ಆ ಮಾತು ” ನನ್ನ ಸಾಹಿತ್ಯ ಬದುಕಿಗೆ ಉಸಿರು ತುಂಬಿದ ಮಾತು” .  ಅಲ್ಲೇ ಇದ್ದ  ಕವಿ, ನಾಟಕಕಾರ, ಸಂಕ್ರಮಣದ ಸಂಪಾದಕರೂ  ಆದ  ಚಂದ್ರಶೇಖರ  ಪಾಟೀಲರು ಬೆನ್ನು ತಟ್ಟಿದರು. ಕತೆಗಾರ ರಾಮಚಂದ್ರ ಶರ್ಮ ಕಣ್ಣು ಮಿಟುಕಿಸಿದರು. ಈ ಸಂದರ್ಭ ನನ್ನಲ್ಲಿ ಸಾಹಿತ್ಯದ ಜೀವಸೆಲೆ ಹೆಚ್ಚಿಸಿತು. ವಚನ ಸಾಹಿತ್ಯದ ಓದು ನನ್ನ ಮೇಲೆ ಗಾಢ ಪ್ರಭಾವ ಬೀರಿತು.

 ಹೈಸ್ಕೂಲ್ ಕಲಿಯುವ ವೇಳೆಗೆ ಸಮುದಾಯ ತಂಡ ನಮ್ಮ ಚಿಗಟೇರಿ ಹೈಸ್ಕೂಲ್ ಗೆ ಬಂದು ಪಿ.ಲಂಕೇಶರ  ಸಂಕ್ರಾಂತಿ ನಾಟಕ ಪ್ರದರ್ಶನ ಮಾಡಿತ್ತು. ಬಸವಣ್ಣ, ಬಿಜ್ಜಳ, ಹರಳಯ್ಯ, ಮಾದರಸ, ಅವರ ಮಕ್ಕಳು ನನ್ನ ಎದೆಯೊಳಗ ಉಳಿದು ಬಿಟ್ಟಿದ್ದರು. ಅಲ್ಲಮ ,ಅಕ್ಕಮಹಾದೇವಿ ದಿನವೂ ದಂಡೆಯೊಳಗ ನೆನಪಾಗುತ್ತಿದ್ದರು, ಬಯಲು, ಆಕಾಶ, ಮುಗಿಲು ,ಕಡಲು ನನ್ನ ಮನದೊಳಗ ತುಂಬಿ ತುಳುಕತೊಡಗಿದವು. ಹೀಂಗ ನನ್ನ ಕವಿತಾ ಪಯಣ ಆರಂಭವಾಯಿತು. ಆಕಾಶಕ್ಕ ನಕ್ಷತ್ರ ತೋರಿದೆ. ಅಕ್ಷರ ಎದಿಗ ಹಾಕಿಕೊಂಡು ದಾರಿಯಲ್ಲಿ ನಡೆದೆ…ಕವಿತೆ ನನ್ನ ಕೈಹಿಡಿದವು…

ಇಷ್ಟೆಲ್ಲಾ ನೆನಪಿನ ಸವಾರಿ ಮಾಡ್ಲಿಕ್ಕ ಸಾಹಿತ್ಯ ಸಂಗಾತಿಯ ಗೆಳೆಯರು, ಸಂಪಾದಕರು ಆದ ಕು.ಸ. ಮಧುಸೂಧನ್  ಕಾರಣರಾದರು…

ಕೊನೆಯ ಮಾತು: ಸಂಕ್ರಮಣದಾಗ ಪ್ರಕಟವಾದ ಕವಿತೆ ಹೀಗಿತ್ತು…

ಜ್ವಾಲೆಗಳ ನಡುವೆ

…..

ನಿಜದ ನೆಲದಲ್ಲಿ

ಕಾಯದ ಕತ್ತಲ ಸೀಳಿ

ಪಥಕನಾಗ ಹೊರಟಾಗ

ನೂರು ಜ್ವಾಲೆಗಳೆರಗಿದವು

ಸಾವಿರ ನುಡಿ ನಂಜಾಗಲು

ಸಹಿಸಿದೆ ನಿನ್ನೆದೆಯ

ಪುನ್ನಾಗ ಪ್ರಥಿತವಾಗಿಸಿ

ನಿಜವೆರುವಾಗ; ನುಡಿಗಲಿಸುವಾಗ

ಹಂಗಿಲ್ಲದ ಬದುಕ ರೂಢಿಸುವಾಗ

ಕಣ್ಣು ತೆರೆಸುವ ಸಮಯ

ಪೊಂಬಿಲ್ ಮೂಡುವಾಗ

ಕಾಲಕಲ್ಲಾಗಿ ಹೊನ್ನಶೂಲವಾಗಿ

ಕಾಯದ ಬಲಿಯಾಗಿತ್ತು

ಶೂಲದ ಹಸಿವು ಹಿಂಗಿತ್ತು…

******************************

2 thoughts on “ಜ್ವಾಲೆಗಳ ನಡುವೆ…ಹುಟ್ಟಿದ ಕಾವ್ಯ

  1. ನಾಗರಾಜ ಎಂಥ ಪ್ರಶ್ನೆ ಕೇಳಿದ್ದೀರಿ.
    ನಿಮ್ಮ ಕವನಗಳ ಮೃದುತ್ವ ವೇ ಅವುಗಳ ಸೊಗಸು

  2. ನಿಮ್ಮ ಮೊದಲ ಕವಿತೆಯ ವಸ್ತುವೇ ಗಮನ ಸೆಳೆಯಿತು. ಜ್ವಾಲೆಗಳು ಅದಕ್ಕೆ ಪುಷ್ಟಿ ನೀಡುತ್ತದೆ. ಮತ್ತು, ನೀವು ನಡೆದು ಬಂದ ದಾರಿ ಖಂಡಿತಾ ಏಳು ಬೀಳುಗಳದ್ದೇ ಆಗಿದೆ.ಅದರ ವಿವರಣೆ ಓದಿಸಿಕೊಂಡು ಹೋಗುತ್ತದೆ…
    ಚಂದ ಬರಹ..

Leave a Reply

Back To Top