ಹನ್ನೆರಡು ರಾಶಿಯೊಳಗೊಂದು ರಾಶಿ
ಚಂದ್ರಾವತಿ ಬಡ್ಡಡ್ಕ
ಧನ ಲಾಭ, ಮಿತ್ರರಿಂದ ಸಂತಸ, ಮೇಲಧಿಕಾರಿಯಿಂದ ಪ್ರಶಂಸೆ – ಹೀಗೆ ಪತ್ರಿಕೆಗಳಲ್ಲಿ ಬರೆದಿರುವ ನನ್ನ ದಿನ ಭವಿಷ್ಯ ಓದಿ ನಾನೇದರೂ ನನ್ನ ದಿನವನ್ನು, ಆಹಾ! ಬಹಳ ಒಳ್ಳೆಯ ದಿನವೆಂದು ತುಂಬ ಸಂತೋಷ ಮತ್ತು ಸಮಾಧಾನದಿಂದ ಆರಂಭಿಸಿದೆನೆಂದಾದರೆ ಕೆಟ್ಟೆ.
ಯಾಕೆಂದರೆ ಒಂದೇ ಒಂದು ದಿನವೂ ನನ್ನ ಭವಿಷ್ಯ ಸರಿ ಇರುವುದಿಲ್ಲ. ಧನಲಾಭ ಅಂತ ಬರೆದಿದ್ದ ದಿನ, ಇರೋ ದುಡ್ಡೆಲ್ಲ ಖರ್ಚಾಗುತ್ತದೆ. (ಬಹುಶಃ ನಿನ್ನಿಂದಾಗಿ ಇತರರಿಗೆ ಧನಲಾಭ ಎಂದಾಗಬೇಕೋ…) ಮಿತ್ರರಿಂದ ಸಂತರ ಎಂದಿದ್ದರೆ ಗೆಳೆಯ – ಗೆಳತಿಯರೊಂದಿಗೆ ಶರಂಪರ ಜಗಳ. ಇಲ್ಲವಾದರೆ ಕನಿಷ್ಠಪಕ್ಷ ಮಾತಿನಲ್ಲಿ ಭಿನ್ನಾಭಿಪ್ರಾಯ ಹತ್ತಿ ಮೂಡು ಕೆಡುವಷ್ಟಾದರೂ ಆಗೇ ಆಗುತ್ತೆ. ಮೇಲಧಿಕಾರಿಗಳಾಗಿದ್ದವರಂತೂ ಚಂದಗೆ ಭವಿಷ್ಯ ಬರೆದಿದ್ದ ದಿನವನ್ನೇ ಆಯ್ದುಕೊಂಡವರಂತೆ ನಾನು ತಪ್ಪು ಮಾಡಿದ್ದರೂ, ಮಾಡದಿದ್ದರೂ ನಾಲ್ಕು ಜನರ ಮುಂದೆಯೇ ಮಂಗಳಾರತಿ ಮಾಡಿ ನನ್ನ ಉತ್ಸಾಹ, ಸ್ವಾಭಿಮಾನವನ್ನು ಚರಂಡಿಗೆಸೆಯುತ್ತಿದ್ದರು. ಹಾಗಾಗಿ ನಾನು ನನ್ನ ಅನುಭವದಿಂದ ಕಲಿತಿದ್ದೇನೆಂದರೆ ಯಾವದಿನ ಭವಿಷ್ಯ ಚೆನ್ನಾಗಿ ಬರೆಯಲ್ಪಟ್ಟಿದೆಯೇ ಆ ದಿನವಿಡೀ ಜಾಗರೂಕಳಾಗಿರಬೇಕು!
ನಾವು ಎಮ್ಮೆ ಓದುವಾಗ, ನಮ್ಮ ಔದಾಸೀನ್ಯವನ್ನು ಮಾತ್ರ ಗಮನಿಸಿದ ನಮ್ಮ ಅಧ್ಯಾಪಕರುಗಳೆಲ್ಲ ನಾವು ಗುಡ್ ಫಾರ್ ನಥಿಂಗ್‌ಗಳೆಂದೂ, ನಮಗೆ ಭವಿಷ್ಯವೇ ಇಲ್ಲ ಎಂದು ಒಕ್ಕೊರಲಿನಿಂದ ನುಡಿದಿದ್ದರು. ಅಲ್ಲಿಂದ ನನಗೆ ಭವಿಷ್ಯ (ದಿನ, ವಾರ, ವರ್ಷ) ನೋಡುವ ಅಭ್ಯಾಸ. ಬಳಿಕ ಕ್ರಮೇಣ ಇದೊಂದು ಚಟವಾಯಿತು. ಅಂದ ಹಾಗೆ ನಿನ್ನ ರಾಶಿ ಯಾವುದು ಅಂತ ಕೇಳ್ತೀರಾ? ಸತ್ಯವನ್ನೇ ಹೇಳಬೇಕೆಂದರೆ ನನಗೇ ಗೊತ್ತಿಲ್ಲ. ಮತ್ತೆ ಏನಿದು ನಿನ್ನ ಗೋಳು, ಇಷ್ಟೆಲ್ಲ ಹೇಳಿದ್ದು ಸುಳ್ಳೇ ಎಂದು ತೀರ್ಮಾನಿಸಿ ಇವಳು ಬರೀ ಸುಳ್ಳು ಬುರ್ಕಿಯೆಂಬ ತೀರ್ಮಾನಕ್ಕೆ ಬರಬೇಡಿ.
ಒಟ್ಟಾರೆ ಹನ್ನೆರಡು ರಾಶಿಯಲ್ಲಿ (ಹದಿಮೂರನೆಯ ರಾಶಿಯೊಂದು ಗೋಚರವಾಗಿದೆ ಎಂಬುದಾಗಿ ಆರೇಳು ವರ್ಷದ ಹಿಂದೆ ಸುದ್ದಿಯಾಗಿತ್ತು. ಒಂದು ವೇಳೆ ಅದೂ ಇದ್ದರೆ ಅದೂ ಸೇರಿದಂತೆ) ಒಂದು ನನ್ನದು ಆಗಿರಲೇ ಬೇಕಲ್ಲಾ? ಹಾಗಾಗಿ ನಾನು ಎಲ್ಲಾ ರಾಶಿಯನ್ನೂ ಓದುತ್ತೇನೆ. ಚೆನ್ನಾಗಿ ಭವಿಷ್ಯ ಬರೆದ ರಾಶಿ ನನ್ನದೆಂದು ಅಂದುಕೊಳ್ಳುತ್ತೇನೆ. ನಿಜವೆಂದರೆ, ನನ್ನ ಹುಟ್ಟಿದ ದಿನಾಂಕವೇ ನನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಹೆತ್ತವರು ಬರೆದಿಡಲಿಲ್ಲ ಎಂದು ನಾನವರನ್ನು ದೂಷಿಸುವಂತಿಲ್ಲ. ನಿರಕ್ಷರಿಗಳಾಗಿದ್ದ ಮತ್ತು ಅವರಿದ್ದ ಪರಿಸ್ಥಿತಿಯಲ್ಲಿ ಅದನ್ನು ನಿರೀಕ್ಷಿಸುವುದೂ ತಪ್ಪೇ. ನನ್ನ ದೊಡ್ಡಅಕ್ಕ ಎಲ್ಲೋ ಬರೆದಿಟ್ಟ ದಿನಾಂಕವನ್ನೇ ಗಟ್ಟಿಮಾಡಿಕೊಳ್ಳೋಣವೆಂದರೆ, ನನ್ನ ಅಮ್ಮನ ಹೇಳಿಕೆ ಅದಕ್ಕೆ ಅಡ್ಡ ಬರುತ್ತದೆ. ನಾನು ಹುಟ್ಟಿದ ದಿನ ಭಯಂಕರ ಕತ್ತಲಿತ್ತು, ಧಾರಾಕಾರ ಮಳೆ ಸುರಿಯುತ್ತಿತ್ತು ಎನ್ನುತ್ತಾ ನೆನಪಿಸಿಕೊಳ್ಳುತ್ತಿದ್ದರು. ಅವರು ಹೇಳುವ ತುಳು ತಿಂಗಳ ಲೆಕ್ಕಾಚಾರಕ್ಕೂ ಅಕ್ಕ ಬರೆದಿಟ್ಟಿರುವ ಇಂಗ್ಲೀಷು ತಿಂಗಳ ಲೆಕ್ಕಾಚಾರಕ್ಕೂ ತಾಳೆ ಆಗುವುದಿಲ್ಲ. ಕೂಡಿ, ಗುಣಿಸಿ, ಕಳೆದು, ಭಾಗಿಸಿ ಎಲ್ಲಾ ಮಾಡಿ ನನ್ನಕ್ಕ ಬರೆದಿಟ್ಟ ದಿನಾಂಕ ಯಾವ ವಾರ ಬರುತ್ತದೆ ಎಂದು ನೋಡಿದರೆ ಅದಕ್ಕೂ ಅಮ್ಮ ಹೇಳಿದ ವಾರಕ್ಕೂ ವ್ಯತ್ಯಾಸ.
ಈ ಮಧ್ಯೆ, ನಿನ್ನ ಜನ್ಮ ನಕ್ಷತ್ರಕ್ಕನುಗುಣವಾಗೇ ನೆರೆಮನೆಯ ಕಲ್ಲೂರಾಯರು ಹೆಸರು ಸೂಚಿಸಿದ್ದು ಎಂಬ ಇನ್ನೊಂದು ಅಂಶವನ್ನು ನನ್ನ ಮುಂದಿಟ್ಟು ಮತ್ತೂ ಗೊಂದಲವಾಗುವಂತೆ ಮಾಡಲಾಗಿದೆ. ಹೆಸರು ಜನ್ಮ ನಕ್ಷತ್ರದ್ದೇ ಆಗಿದ್ದರೆ, ಆ ನಕ್ಷತ್ರಕ್ಕೂ, ಅಕ್ಕ ಬರೆದಿಟ್ಟ ಇಂಗ್ಲೀಷ್ ತಿಂಗಳ ದಿನಕ್ಕೂ, ಅಮ್ಮನ ತುಳು ತಿಂಗಳ ದಿನಕ್ಕೂ ತಾಳೆ ಇಲ್ಲ. (ಹಾಗಾದ್ರೆ ಶಾಲಾ ದಾಖಲಾತಿಯಲ್ಲಿ ಏನಿದೆ ಎಂಬುದು ನಿಮ್ಮ ಪ್ರಶ್ನೆಯೇ? ಅದನ್ನು ನೋಡಿದರೆ ಇನ್ನೂ ಗಮ್ಮತ್ತಿದೆ. ನಮ್ಮ ಐದೂ (ನಾನು ಮತ್ತು ನನ್ನ ಒಡ ಹುಟ್ಟಿದವರು) ಮಂದಿಯ ಜನ್ಮ ದಿನಾಂಕವೂ ಜೂನ್ ತಿಂಗಳೆಂದೇ ದಾಖಲಾಗಿದೆ. ಯಾಕೆಂದರೆ ಶಾಲೆಗೆ ಸೇರಿಸಲು ಕನಿಷ್ಠ ಎಷ್ಟು ವರ್ಷವಾಗಬೇಕೋ, ಅದಕ್ಕೆ ತಕ್ಕಂದೆ ದಾಖಲೆಗಳಲ್ಲಿ ಬರೆಯಲಾಗಿದೆ.)
ಹಾಗಾಗಿ ಈ ಮೇಲಿನ ಆಧಾರದನ್ವಯ ಯಾವ್ಯಾವ ದಿನಕ್ಕೆ ಯಾವ್ಯಾವ ರಾಶಿ ಬರುತ್ತೋ ಅವು ನನ್ನವೇ ಅಂದು ಕೊಂಡಿದ್ದೇನೆ. ಇದರ ಮಧ್ಯೆ ವೆಸ್ಟರ್ನೂ, ಈಸ್ಟರ್ನೂ ಅಂತ ಇನ್ನೂ ಒಂದೆರಡು ರಾಶಿಗಳೂ ಸಹ ನಂದಾಗಿರಬಹುದೋ ಎಂಬ ಸಂಶಯ. ಈ ಐದಾರು ರಾಶಿಗಳಲ್ಲಿ ಯಾವುದಕ್ಕೆ ಚೆನ್ನಾಗಿ ಬರೆದಿದೆಯೋ ಅದೇ ನನ್ನ ರಾಶಿ ಎಂಬುದು ಅಂತಿಮ ನಿರ್ಧಾರ.
ಟಪ್ಪಂತ ಮುಖಕ್ಕೆ ರಾಚಿದಂತೆ ಮಾತಾಡುವ ನನ್ನ ಗುಣ ಕಂಡವರು ನನ್ನದು ಧನು ರಾಶಿ ಇರಬಹುದೆಂದೂ, ಮಾತಿನಲ್ಲಿ ಕೆಲವೊಮ್ಮೆ ಕಟಕುವುದನ್ನು ಕಂಡ ಕೆಲವರು ಕಟಕ ರಾಶಿಯೆಂದು ಇನ್ನು ಕೆಲವರು ವೃಶ್ಚಿಕ ರಾಶಿಯೆಂದೂ, ಸಿಟ್ಟು ಬಂದಾಗ ಸುನಾಮಿ ಬಡಿದಂತೆ ಘರ್ಜಿಸುವ ಪರಿ ಮತ್ತು ಅಗತ್ಯ ಮೀರಿದ ಔದಾರ್ಯವನ್ನು ಕಂಡ ಕೆಲವರು ಸಿಂಹ ರಾಶಿ ಇರಬಹುದು ಎಂಬುದಾಗಿ ಆರೋಪಿಸಿದ್ದಾರೆ. ಮದುವೆಯಾಗುವ ಹೊತ್ತಿನಲ್ಲಿ ನನಗೆ ಜಾತಕ – ಗೀತಕ ಎಲ್ಲಾ ಇಲ್ಲ ಎಂದು ಮಾತುಕತೆಗೆ ಮೊದಲೇ ಸ್ಪಷ್ಟವಾಗಿ ಹೇಳಿದ್ದೆ. ನನ್ನ ಗಂಡ ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಪೈಕಿಯಲ್ಲ. ಜಾತಿ, ವಿದ್ಯೆ, ಸಂಬಳ, ಮನೋಭಾವ ಎಲ್ಲವನ್ನೂ ಜಾತಕ ಮೀರಿಸಿದ್ದ ಕಾರಣ ಈ ಹಿಂದೆ ಹಲವು ಸಂಧಾನಗಳು ಅಂತಿಮ ಹಂತದ ತನಕ ಬಂದು ಬಳಿಕ ರದ್ದಾಗಿದ್ದವು.
ನನ್ನ ಅತ್ತೆಮ್ಮನಿಗೆ ಜಾತಕದ ಗೀಳು. (ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿರುವ ಅವರಿಗೆ ಬಳಿಕ ಜಾತಕ ಅಧ್ಯಯನದ ಆಸಕ್ತಿ ಹುಟ್ಟಿತಂತೆ. (ಅರೆಬರೆ ತಿಳಿದುಕೊಂಡಿರುವ ಅವರು, ಸಪ್ತಮಾಧಿಪತಿ ಚಂದ್ರ…. ಅಂತ ಶುರುವಿಕ್ಕಿದರೆ, ನಾನಲ್ಲಿಂದ ಪರಾರಿ!) ಮದುವೆ ಆದ ಶುರವಿನಲ್ಲಿ ಅತ್ತೆಮ್ಮ “ಸರಿ ನಿನ್ನ ಅಂದಾಜಿನ ಹುಟ್ಟಿದ ದಿನವನ್ನೇ ಹೇಳು” ಅಂದಿದ್ದರು. ನಿನ್ನ ಅಕ್ಕನವರು ಸಾಯಂಕಾಲ ಶಾಲೆಯಿಂದ ಬರುವ ವೇಳೆಗೆ ನೀನು ಹುಟ್ಟಿದ್ದೆ ಅಂತ ಅಮ್ಮ ಹೇಳಿದ್ದನ್ನೇ ಅವರಿಗೆ ಹೇಳಿದ್ದೆ. ಅವರು ಹಳೆಯ ಪಂಚಾಂಗವನ್ನೆಲ್ಲ ತೆಗೆದು – ಬಗೆದು; ಯಾವುದಕ್ಕೋ ಯಾವುದನ್ನೋ ಥಳುಕು ಹಾಕಿ, ನಾನು ವರಮಹಾಲಕ್ಮ್ಮಿ ವೃತ ದಿವಸ ಹುಟ್ಟಿದೆಂದು ಶೋಧಿಸಿ ಪ್ರಚಾರ ಮಾಡುತ್ತಿದ್ದಾರೆ. ಅದಲ್ಲದೆ, ಅವರ ಮಗನ ಜಾತಕಕ್ಕೆ ಅತ್ಯಂತ ಪ್ರಶಸ್ತವಾಗಿ ಹೊಂದುವ ಜಾತಕ ನನ್ನದಂತೆ!
ಸ್ನೇಹಿತೆಯೊಬ್ಬಳ ಮೂಲಕ ಫೋನಲ್ಲೇ ಪರಿಚಿತರಾಗಿ ಮಾತಾಡಿಕೊಂಡಿದ್ದ ನಾವು ಪರಸ್ಪರ ಮುಖತ ಭೇಟಿಯಾಗುವ ಮುನ್ನ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೆವು. “ನನ್ನಮ್ಮ ಆರು ವರ್ಷದವರಾಗಿದ್ದಾಗ ಅವರ ಅಮ್ಮ ತೀರಿಕೊಂಡರು, ಮೂವತ್ತಾರು ವರ್ಷಕ್ಕೆ ಗಂಡ ತೀರಿದರು. ಅವರು ಬದುಕಿನಲ್ಲಿ ತುಂಬ ನೊಂದ ಜೀವ, ಅವರಿಗೆ ನೋವಾಗದಂತೆ ಇರಬೇಕೆಂಬುದು ಮಾತ್ರ ನನ್ನ ನಿರೀಕ್ಷೆ, ಮಿಕ್ಕಂತೆ ನೀನು ಹೇಗಿದ್ದರೂ ಪರ್ವಾಗಿಲ್ಲ” – ಇದೊಂದೇ ಅವರು ಕೇಳಿಕೊಂಡಿದ್ದು. (ನನ್ನ ಹೆತ್ತಮ್ಮ ತೀರಿಕೊಂಡಿದ್ದರಿಂದ ನನಗೂ ಒಂದು ಅಮ್ಮನ ಅವಶ್ಯಕತೆ ಇತ್ತು.) ಮಿಕ್ಕಂತೆ ಜಾತಿ, ವಯಸ್ಸು, ವಿದ್ಯೆ, ಚಿನ್ನ, ಜಾತಕ, ಅಂತಸ್ತು, ಸಂಬಳ, ಉಳಿತಾಯ ಯಾವುದನ್ನೂ ಕೇಳಿರಲೇ ಇಲ್ಲ. ನಮ್ಮದು ಹುಟ್ಟಿನಿಂದ ವಿಭಿನ್ನ ಜಾತಿ. ಸಹಜವಾಗೇ ಕೆಲವು ಸಂಪ್ರದಾಯ, ನಂಬಿಕೆ, ಸಂಸ್ಕೃತಿಗಳಲ್ಲಿ ಭಿನ್ನತೆ ಇದೆ. ನನ್ನ ಅತ್ತೆಮ್ಮನ ತಾಳಕ್ಕೆ ತಕ್ಕಂತೆ ನನ್ನ ಮೇಳ ಇರುವ ಕಾರಣ ನಂಗೆ ಯಾವುದೇ ಸಮಸ್ಯೆ ಇಲ್ಲ. ಅಯ್ಯೋ ಅವಳ ಜಾತಕ – ಸ್ವಭಾವ ನನ್ನಂತೆಯೇ ಎಂಬುದಾಗಿ ಅತ್ತೆಮ್ಮ ಹೇಳುವಾಗ ಮಾತ್ರ ಮನದಲ್ಲಿ ಮುಸಿ ನಗು!
ಜನ್ಮ ದಿನಾಂಕ ಸರಿಯಾಗಿ ತಿಳಿಯದಿರುವುದು ನನಗೆ ಎಷ್ಟೋ ಅನುಕೂಲವಾಗಿದೆ. ಜಾತಕ ನೋಡಿಸಿ ಜಾತಕದಲ್ಲಿ ಕೆಟ್ಟದಿದೆ ಎಂಬುದಾಗಿ ಅಳುವವರನ್ನು, ಶಾಂತಿ ಮಾಡಿಸುವವರನ್ನು, ಪೂಜೆ-ಪುನಸ್ಕಾರ ಮಾಡಿಸುವ ಪುರೋಹಿತರ ಉದ್ಧಾರಕರನ್ನೂ ಕಂಡಿದ್ದೇನೆ. ಇಷ್ಟನೇ ವರ್ಷಕ್ಕೆ ಇಂತಾದ್ದು ಆಗುತ್ತದೆ ಎಂಬ ಲೈಫ್ ಲೀಸ್ಟ್ ಇಲ್ಲದ ಕಾರಣ ನಾನು ಎಷ್ಟೋ ಆರಾಮ ಮತ್ತು ನಿರಾತಂಕಳಾಗಿ ಇದ್ದೇನೆ. ಆ ಮಟ್ಟಿಗೆ ನಾನು ತುಂಬಾ ಅದೃಷ್ಟವಂತಳೇ.