ಮಾತು – ಮಳೆ ಹಾಡು

ಕವಿತೆ

grayscale photo of raindrops

ಬಾಲಕೃಷ್ಣ ದೇವನಮನೆ

ಚಿತ್ರ ಕಟ್ಟಿದ ಚೌಕಟ್ಟು

     ಮಾತು ಮಳೆಯಂತೆ

     ಧೋ… ಎಂದು ಸುರಿಯುತ್ತಿರುತ್ತದೆ ನಿಲ್ಲುವುದಿಲ್ಲ

     ಒಮ್ಮೊಮ್ಮೆ ಮಳೆ ನಿಂತರೂ

     ಮಾತು ನಿಲ್ಲುವುದಿಲ್ಲ…

     ಮೌನವೂ ಮಾತಾದಂತೆ

     ಮಳೆ ನಿಂತ ಮೇಲಿನ ಮರದ ಹನಿಯಂತೆ…

     ಚೌಕಟ್ಟಿನೊಳಗೆ ಮಾತು ಮಳೆ ಹಾಡು.

ದೃಶ್ಯ ಒಂದು

     ಆಕಸ್ಮಿಕದ ಭೇಟಿ

     ಎಷ್ಟೋ ಕಾಲದ ಮೇಲೆ

     ಮರು ಮಿಳಿತವಾದ ಗೆಳೆತನ

     ಮುಗಿಯುತ್ತಿಲ್ಲ ಕ್ಷೇಮ ಕುಶಲೋಪರಿ

     ಕೂಡಿ ಆಡಿದ ಹಳೆ ನೆನಪು

     ಹೊಸ ಕೆಲಸ, ನೆಲೆ ನಿಂತ ಬದುಕು

     ಒಳಗೊಳಗೆ ತಳಮಳದ ಕನಸು

     ಎಲ್ಲವೂ… ಮೊಗೆದರೂ ಮುಗಿಯದ ಮಾತು

     ಸೇರಿಸಿ ಕೊಟ್ಟಿದೆ ಈ ಮಳೆ

     ಒಂದೇ ಕೊಡೆಯ ಕೆಳಗೆ

ದೃಶ್ಯ ಎರಡು

     ಎಷ್ಟು ಬೆಚ್ಚಗೆ ಬೆಸೆದಿದೆ

     ಹಲ ದಿನದ ಸಲ್ಲಾಪಕೆ ಅನಿರೀಕ್ಷಿತವಾಗಿ

     ಎದೆಯ ದನಿಯಾಗಿ

     ಪಿಸು ನುಡಿಗಳು ಬಿಸಿ ಮಿಡಿತಗಳು

     ಜಗವೇ ನಾಚಿ ಕಣ್ಮುಚ್ಚುವಂತೆ

     ಯಾರ ಹಂಗೂ ಇರದ ತಮ್ಮದೇ ಪ್ರಪಂಚದಲ್ಲಿ

     ಮೈಮರೆವಂತೆ ಸೇರಿಸಿ

     ಸುರಿಯುತ್ತಲೇ ಇದೆ ಮಳೆ

     ಒಂದೇ ಕೊಡೆಯ ಮರೆಗೆ

ದೃಶ್ಯ ಮೂರು

     ಸುರಿ ಮಳೆ ನೀ ಸುರಿಯುತ್ತಿರು

     ನಾ ನೆನೆವೆ ನಿನ್ನೊಳಗೆ

     ನನ್ನ ಸುತ್ತಲ ಜಗವು ಅಣಕಿಸಿ ನಗುತಿರಲು

     ನನ್ನೊಳಗಿನ ನೋವು ಹರಿಯಲಿ

     ಕಂಬನಿಯಾಗಿ ನಿನ್ನ ಜೊತೆಗೆ

     ಬೆನ್ನಲಿ ಕಟ್ಟಿಕೊಂಡ ಉರಿ-

     -ಯುವ ಹತಾಶೆಯ ಮೂಟೆ

     ತಂಪಾಗಲಿ, ಮೊಳೆಯಲಿ ಒಳಗೊಂದು

     ಚೈತನ್ಯದ ಓಟೆ

     ಚಿಗುರಿ ಹಸುರಾಗಿ

     ಮೋಡ ಮುಸುಕಿದ ಬಾಳ ಕ್ಷಿತಿಜದಲ್ಲಿ

     ಕತ್ತಲು ಕರಗಿ ಭರವಸೆಯ ಬೆಳಕಾಗಿ

     ಸುರಿ ಮಳೆಯೇ ಮೌನಕ್ಕೆ ಮಾತಾಗುವಂತೆ

     ಕೊಡೆಯಿಲ್ಲದೇ ನೆನೆವೆ ನಾ ನಿನ್ನೊಳಗೆ

     ಮಳೆಯೇ ಹಾಡಾಗುವಂತೆ…!!

*************************

7 thoughts on “ಮಾತು – ಮಳೆ ಹಾಡು

    1. ಧನ್ಯವಾದಗಳು.ಮಳೆ ಹಾಡು ಅನಿಭವಿಸಿದ್ದಕ್ಕೆ… ಸದಾ ತಂಪಾಗಿರಲಿ

    2. ಧನ್ಯವಾದಗಳು.ಮಳೆ ಹಾಡು ಅನಿಭವಿಸಿದ್ದಕ್ಕೆ… ಸದಾ ತಂಪಾಗಿರಲಿ

  1. ಮಳೆ/ನೆನೆ/ಕಣ್ಣೀರು/ಉರಿ••ಯುವ ಹತಾಶೆ/ಓಟೆ/ಚಿಗುರು.drsiddaiah

Leave a Reply

Back To Top