ಬಾಯಿಬಡುಕ ಸಾಮಾಜಿಕ ಮಾಧ್ಯಮಗಳು

ಲೇಖನ

ನೂತನ ದೋಶೆಟ್ಟಿ

           ಭಾರತದಲ್ಲಿ ಅಸಹನೆ ಹೆಚ್ಚುತ್ತಿದೆ ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕೇಳಿಬರುತ್ತಿರುವುದಷ್ಟೇ ಅಲ್ಲ ;ಅದನ್ನು ಪುಷ್ಟೀಕರಿಸುವ ಅನೇಕ ಸಂಗತಿಗಳು ಮೇಲಿಂದ ಮೇಲೆ ನಡೆಯುತ್ತಿವೆ. ಮೊದ ಮೊದಲು ಇಂತಹ ಘಟನೆಗಳು ನಡೆದಾಗ  ಆಘಾತವಾಗುತ್ತಿತ್ತು , ವೇದನೆಯಾಗುತ್ತಿತ್ತು . ಕೆಲ ಸಮಯದ ನಂತರ ಅದರಲ್ಲಿ ಕ್ರೂರತೆಯ ಛಾಯೆ ಇಣುಕಿದಾಗ ಕಳವಳವಾಗುತ್ತಿತ್ತು ;ಆಶ್ಚರ್ಯವೂ ಆಗುತ್ತಿತ್ತು. ಈಗ ಗೊಂದಲವಾಗುತ್ತಿದೆ ;ಯಾವುದು, ಯಾರಿಗೆ, ಯಾಕಾಗಿ ಅಸಹನೆಯಾಗುತ್ತದೆ ಎನ್ನುವುದನ್ನು ತಿಳಿಯಲಾಗದೆ !

ಅಭಿಪ್ರಾಯ ಬೇಧಗಳ ಹಿನ್ನೆಲೆಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ನಡೆದ ಕೆಲವು ‘ಹತ್ಯೆಗಳು’ ಯಾಕಾಗಿ ನಡೆದವು ಹಾಗೂ ಅವುಗಳನ್ನು ಮಾಡಿದ ಅಥವಾ ಮಾಡಿಸಿದವರಿಗೆ ಅದರಿಂದ ಆದ ಲಾಭವೇನು ?ಎನ್ನುವುದು ಇನ್ನೂ ಪ್ರಶ್ನಾರ್ಥಕವಾಗಿದೆ. ಈ ಹತ್ಯೆಗಳು ಸಮಾಜದಲ್ಲಿ ಒಂದು ರೀತಿಯ ಸಂಚಲನವನ್ನು ಉಂಟುಮಾಡಿ ದೌರ್ಜನ್ಯವನ್ನು ಪ್ರಶ್ನಿಸುವ ದಿಟ್ಟ ಯುವ ಸಮುದಾಯವೊಂದನ್ನು ಸಂಘಟಿಸಿದ್ದು ಆ ಸಂದರ್ಭದಲ್ಲಿ ಆದ ಗುಣಾತ್ಮಕ ಬೆಳವಣಿಗೆ ಅಷ್ಟೇ ಅಲ್ಲ. ಪಾರಂಪರಿಕ ಮಾಧ್ಯಮಗಳಲ್ಲಿ ಕಣ್ಮರೆಯಾಗುತ್ತಿರುವ ಸಾಮಾಜಿಕ ಕಳಕಳಿಯನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಅದನ್ನು ತಮ್ಮ ಕೈಗೆ ಸಾಮಾಜಿಕ ಮಾಧ್ಯಮಗಳು ತೆಗೆದುಕೊಂಡಿದ್ದು ಇನ್ನೊಂದು ಗುಣಾತ್ಮಕ ಬೆಳವಣಿಗೆ. ಆದರೆ ದುರದೃಷ್ಟವಶಾತ್‌ ಅದು ಹಾಗೆ ಉಳಿಯಲಾರದೇ ಕೆಚ್ಚು, ರೋಷಾವೇಶ ಹಾಗೂ ಹುಂಬತನಕ್ಕೆ ಇಳಿಯಿತು.ಇದಕ್ಕೆ ಸಾಹಿತ್ಯ ಸಮಾವೇಶಗಳಂಥ ಬೌದ್ಧಿಕ ಪ್ರಜ್ಞೆಯ ತಾಣಗಳೂ ಸಾಕ್ಷಿಯಾದವು.ಈ ಸಂದರ್ಭಗಳಲ್ಲೂ ಸಾಮಾಜಿಕ ಮಾಧ್ಯಮಗಳ ಪಾರುಪತ್ಯವೇ ಎಗ್ಗಿಲ್ಲದೇ ನಡೆಯಿತು. ಮಾತೆತ್ತಿದರೆ ಸಮಾನತೆ, ಸ್ವಾತಂತ್ರ್ಯ, ಮಹಿಳಾಪರತೆ ಎಂದು ಹುಯಿಲೆಬ್ಬಿಸುವ ಈ ಸಾಮಾಜಿಕ ಮಾಧ್ಯಮಗಳು ಈಗ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುವ ಧಾರ್ಷ್ಟ್ಯ  ತೋರಿಸುತ್ತಿವೆ. ಸಿದ್ಧಗಂಗಾ ಶ್ರೀಗಳ ಕುರಿತು ನಡೆದ ಸಂವಾದ ಇದಕ್ಕೆ ಒಂದು ಉದಾಹರಣೆ.ಒಂದು ಶತಮಾನದ ಕಾಲ ಜಾತಿ, ಮತ, ಲಿಂಗ ಬೇಧಗಳಿಲ್ಲದ ಸೇವೆಯನ್ನು ಇವು ಪ್ರಶ್ನಿಸಿದ್ದವು ಆ ಪ್ರಶ್ನೆಗಳಾದರೂ ಎಂತಹವು ?ಅವರೇನುಜಾತಿ ಪದ್ಧತಿಯ ಕುರಿತು ಒಂದಾದರೂ ಹೇಳಿಕೆ ನೀಡಿದ್ದರೆ? ಸ್ತ್ರೀ  ಸಮಾನತೆಯನ್ನು ಎತ್ತಿ ಹಿಡಿದಿದ್ದರೆ ?ಎಂಬ ತಮ್ಮ ಮೂಗಿನ ನೇರದ ಪ್ರಶ್ನೆಗಳು.ಇಂತಹ ಪ್ರಶ್ನೆಗಳನ್ನು ಅಥವಾ ಈ ಮಾಧ್ಯಮಗಳು ಬಯಸುವ ಪ್ರಶ್ನೆಗಳನ್ನು ಕೇಳಿದವರು ಮಾತ್ರ ಮಹೋನ್ನತರೆ ? ಪ್ರತಿರೋಧವೆಂದರೆ ಗಂಟಲು ಬಿರಿಯುವಂತೆ ಕೂಗುವ ಮೂಲಕ, ವೇದಿಕೆಗಳಲ್ಲಿ ಆರ್ಭಟಿಸುವ ಮೂಲಕ, ಆಯಕಟ್ಟಿನ ಸ್ಥಳಗಳಲ್ಲಿ ಧರಣಿ ಮಾಡುವ ಮೂಲಕ, ಮೊದಲಾದ ಜನಪ್ರಿಯ ಮಾದರಿಗಳು ಮಾತ್ರವೇ? ಇಂಥ ಪ್ರತಿರೋಧಗಳ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ರೈತ ಚಳುವಳಿಗಳು, ಮಹಿಳಾಪರ ಚಳುವಳಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ ಉದ್ಯೋಗಿಗಳು ಕಾಲಕಾಲಕ್ಕೆ ಈ ನಾಡಿಗೆ ತೋರಿಸಿಕೊಟ್ಟಿದ್ದಾರೆ. ಆದರೆ ಎಲ್ಲ ಹೋರಾಟಗಳೂ ಇದೇ ರೀತಿ ಇರಲು ಸಾಧ್ಯವೆ ಎಂಬ ಪ್ರಶ್ನೆಯನ್ನು ಈ ಮಾಧ್ಯಮಗಳು ಹಾಕಿಕೊಳ್ಳುವುದಿಲ್ಲ. ಇದೇ ಮಾತನ್ನು ಅವು ಸಾಹಿತಿಗಳ ಬಗ್ಗೆಯೂ ಆಡುತ್ತವೆ. ಇಂಥ ಪಶ್ನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿಯಬಿಡುವವರು ತಮ್ಮ ಸಾಧನೆಯನ್ನೂ ಗಮನಿಸುವುದು ಒಳಿತು.ಬಸವ, ಬುದ್ಧ, ಅಂಬೇಡ್ಕರ್‌ ಅವರೂ ಕೂಡ ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು ಸಂಕುಚಿತತೆಯನ್ನು ಪ್ರಶ್ನಿಸಿದರು. ಹಾಗೆ ಪ್ರಶ್ನಿಸುವಾಗ ಅವರು ಅಸಹನೆಯನ್ನು ತೋರಿಸಿರಲಿಲ್ಲ ಹಾಗೂ ಅವರು ಸಮಷ್ಟಿಗಾಗಿ ಪ್ರತಿಪಾದಿಸುತ್ತಿದ್ದರು. ಒಬ್ಬರನ್ನು ಹೀಗಳೆವ, ಕುಬ್ಜರನ್ನಾಗಿಸುವ ಮೂಲಕ ಹಿರಿಮೆಯನ್ನು , ಮೇಲ್ಮೆಯನ್ನು ಸಾಧಿಸ ಹೊರಟಿರುವ ಈ ಸಾಮಾಜಿಕ ಮಾಧ್ಯಮಗಳು ಇಂದು ಅಸಹ್ಯ ಹುಟ್ಟಿಸುವರೀತಿಯಲ್ಲಿ ಬೆಳೆಯುತ್ತಿವೆ. ಹಾಗೆ ನೋಡಿದರೆ ರೆಸಾರ್ಟುಗಳಲ್ಲಿ ಕಚ್ಚಾಡುವ, ಬಡಿದಾಡುವ, ರಾಜಕೀಯ ಮೇಲ್ಮೆ ಸಾಧಿಸಲು ಕೆಸರೆರಚಾಡುವ ರಾಜಕಾರಣಿಗಳಾಗಲಿ, ಇವರಿಗಾಗಲಿ ಯಾವ ವ್ಯತ್ಯಾಸವಿದೆ ?

ಈಗಂತೂ ಎಲ್ಲದಕ್ಕೂ ಪರ-ವಿರೋಧಿ ಚರ್ಚೆಗಳು ಕ್ಷಣಾರ್ಧದಲ್ಲಿ ಭೂಮಿಯನ್ನೇ ಸುತ್ತಬಲ್ಲಷ್ಟು ಸಶಕ್ತವಾಗಿವೆ. ಈ ಚರ್ಚೆಗಳಲ್ಲಿ ಅಸಹನೆ ಒಡೆದು ಕಾಣುತ್ತಿರುವುದು ಅಪಾಯಕಾರಿ ಬೆಳವಣಿಗೆ.ಕಾಫಿಯೋ ಚಹಾವೋ ಯಾವತ್ತಾದರೂ ಚರ್ಚೆಗೊಳಗಾಗಿತ್ತೇ?ಇದು ಚರ್ಚಿಸುವ ವಿಷಯವೇ? ಆದರೂ ಚರ್ಚೆಯನ್ನು ಹರಿಯಬಿಡುವುದು. ಎಲ್ಲವೂ ಸ್ವಾರಸ್ಯವಾಗಿಯೇ ಸಾಗಿದರೆ ಅಡ್ಡಿಯಿಲ್ಲ. ಆದರೆ ಒಂದು ಸಣ್ಣ ಮಾತು ಹೇಗೆ ಕಿಚ್ಚು ಹತ್ತಿ ಉರಿಸಬಲ್ಲದು ಎಂಬುದಕ್ಕೆ ನಮ್ಮೆದುರು ಅನೇಕ ನಿದರ್ಶನಗಳಿವೆ. ಇಂದಿನ ಆಧುನಿಕ ಮಾಧ್ಯಮಗಳು ಈ ಕಾಲಕ್ಕೆ ವರದಾನವಾಗಿ ದೊರೆತಂಥವು.ಇವುಗಳನ್ನು ಬಳಸುವ ಜಾಣ್ಮೆಯನ್ನು ರೂಢಿಸಿಕೊಳ್ಳುವುದೊಳಿತು. ಅಭಿಪ್ರಾಯ ಬೇಧಗಳು ಪ್ರಜಾಸತ್ತಾತ್ಮಕ ರಾಷ್ಟ್ರದ ಹೆಗ್ಗುರುತು.ನಮ್ಮ ಸಂವಿಧಾನವು ಮೂಲಭೂತ ಹಕ್ಕಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ.ಆದರೆ ಇಂದು ಸಮಾಜದ ನಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲಿ ಬಹಳವೇ ಸೂಕ್ಷ್ಮವಾಗುತ್ತಿದೆ. .ದೃಷ್ಟಿ ಬಹಳ ಸಂಕುಚಿತವಾಗುತ್ತಿದೆ.ಬೇಧಗಳು ವ್ಯಕ್ತಿಗತವಾಗಿ, ಗುಂಪುಗಳಿಗೆ ಅನುಗುಣವಾಗಿ, ಸಮುದಾಯಗಳಿಗೆ ಸಂಬಂಧಿಸಿದಂತೆ ತೀರ ಸಂಕುಚಿತವಾಗುತ್ತಿವೆ. ಇದು ನಮ್ಮ ಸಂವಿಧಾನ ನೀಡಿರುವ  ಮಾದರಿಯ ಸ್ವಾತಂತ್ರ್ಯ  ಅಲ್ಲ. ಬಾಯಿಬಡುಕತನಕ್ಕೂಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ವ್ಯತ್ಯಾಸವಿದೆ ಎಂದು ಈ ಸಾಮಾಜಿಕ ಮಾಧ್ಯಮಗಳು ಅರಿಯಬೇಕಾಗಿದೆ.

                            *************************

2 thoughts on “ಬಾಯಿಬಡುಕ ಸಾಮಾಜಿಕ ಮಾಧ್ಯಮಗಳು

  1. ಸುದ್ದಿ ಮಾಧ್ಯಮಗಳನ್ನು ಸಾಮಾಜಿಕ ಜಾಲತಾಣ ಗಳನ್ನು
    ಮೂಲೆಗೆ ತಳ್ಳುವ ಮನೋಭಾವನೆ ನಮಗೆ ಬರಬೇಕಿದೆ
    ಲೇಖನ ಸಕಾಲಿಕವಾಗಿದೆ ಅವರುಕ್ರಿಯೇಟ್ ಮಾಡಿ ತೋರಿಸುವ ಅಶ್ಲೀಲ ಚಿತ್ರಗಳು ಕ್ರೈಂ ಸುದ್ದಿ ಗಳು ಮನಸ್ಸಿನ ಮೇಲೆ ಎಂಥ ಬೀರುತ್ತವೆ ಯೋಚಿಸಿ ಮಾಧ್ಯಮ ಗಳ ಬಗ್ಗೆ ಮಾತನಾಡಲೇ ಹೇಸಿಕೆಯಾಗುತ್ತದೆ ತುಂಬಾ ಉತ್ತಮ ವಿಚಾರ ಗಳನ್ನು ಹೇಳಿದ್ದೀರಿ ಅಭಿನಂದನೆಗಳು

  2. ಸಕಾಲಿಕ ಬರಹ. ಮನುಷ್ಯರು ಮಾನವೀಯತೆ ಮರೆಯುತ್ತುದ್ದಾರೆ. ಸ್ವಾರ್ಥ ಪ್ರಧಾನವಾಗುತ್ತಾ ಎಲ್ಲಾ ಒಳಿತುಗಳೂ ನೇಪಥ್ಯ ಸೇರುತ್ತಿವೆ. ಮಾಧ್ಯಮಗಳ ಪಾತ್ರವೂ ಇದರಲ್ಲಿ ಸಾಕಷ್ಟಿದೆ. ಹಾಗೆಯೇ ವೈಯಕ್ತಿಕ ಅಭಿಲಾಷೆ, ನಿಯಂತ್ರಣಗಳಿಗೂ ಇದರಲ್ಲಿ ಪಾಲಿದೆ.

Leave a Reply

Back To Top