ಗಝಲ್
ಎ.ಹೇಮಗಂಗಾ
ಕಡುಗಪ್ಪು ಕುರುಳ ನಡುವೆ ಮೊಗ ಚಂದಿರನಂತೆ ಹೊಳೆದಿದೆ ಗೆಳತಿ
ಬಿರಿದ ಅಧರಗಳ ನಡುವೆ ಮಿಂಚು ನಗು ಹೊರಹೊಮ್ಮಿದೆ ಗೆಳತಿ
ಅಪೂರ್ವ ಸೌಂದರ್ಯ ಬಣ್ಣಿಸಲು ಕವಿಯಾಗುವನು ನಿನ್ನ ನಲ್ಲ
ಸೆಳೆವ ಕಾಡಿಗೆ ಕಂಗಳ ಮೇಲಿನ ಹುಬ್ಬು ಕಬ್ಬಿನಂತೆ ಬಾಗಿದೆ ಗೆಳತಿ
ಆಗಸದತ್ತ ದಿಟ್ಟಿ ನೆಟ್ಟ ನೋಟದಿ ಅದಾವ ಭಾವ ತುಂಬಿದೆಯೋ
ವಿಚಲಿತಳಾಗದೇ ನೀ ಕುಳಿತ ಭಂಗಿ ಮೋಹಕವಾಗಿ ಕಂಡಿದೆ ಗೆಳತಿ
ನಿನ್ನವನ ಚರಣಕೆ ಸಮರ್ಪಿಸಲು ಹೂಗಳ ಗುಚ್ಛ ಹಿಡಿದಿಹೆ ಏನು?
ಇಹದ ಅರಿವಿಲ್ಲದೇ ನಗುತಿಹ ಅಭಿಸಾರಿಕೆ ನೀನಾದಂತಿದೆ ಗೆಳತಿ
ತುಸು ಹೊತ್ತು ತಾಳಿದರೆ ಸಾಕು ಬಂದೇ ಬರುವನು ಪ್ರಿಯತಮ
ಪ್ರತಿಕ್ಷಣವೂ ಮೆಲುಕು ಹಾಕುವ ಒಡನಾಟದ ಸವಿ ಕಾದಿದೆ ಗೆಳತಿ
*************************