ಉತ್ತರ ಏನು?

ಕವಿತೆ

ನಂದಿನಿ ಹೆದ್ದುರ್ಗ

ಅವನೆನ್ನ ಅಗತ್ಯವಲ್ಲ.
ಅನಿವಾರ್ಯವಲ್ಲ
ಅಭೇದ್ಯವೂ ಅಲ್ಲ.
ನಡುದಾರಿಯಲಿ ಸಿಕ್ಕ ದಾರಿಹೋಕ.
ನನ್ನ ನೋಡಿ ಸಣ್ಣಗೆ ನಕ್ಕ.

ಒಡ್ಡಿಕೊಂಡೆವು ಎಂದು
ಎರಡು
ಅಲುಗಿನ ನಡೆಗೆ ನಾವಿಬ್ಬರೂ.?

ಅವನೀಗ ನನ್ನೆದೆಯ ರಾಗ.
ಬೆವರ ಬೆಳಕು.
ಹೆರಳ ಸಿಕ್ಕು.
ಕಣ್ಣ ಚುಕ್ಕಿ.
ಒಳಗಿನೊಳಗಿನ ಭಕ್ತಿ.

ಅವನೆನ್ನ ಬಯಕೆ ಎನ್ನ ಬಳಲಿಕೆ
ಮಳೆಗರೆವ ಮುಗಿಲು
ಆಳದ ದಿಗಿಲು
ಅವನೆನ್ನ ಬೇಕು
ಪದ್ಯದ ಪರಾಕು.
ಅವನು…
ಸಿಹಿಯಾದ ಕತ್ತಲು
ಹೂ ಹಿಡಿದ ಹಿತ್ತಿಲು.
ಅವನೆನ್ನ ಸುಖ ನನ್ನ ಮೋಹದ ಸಖ

ಜಗದ ಆ ಬದಿಯಲಿ ಅವನು
ಸಮೃದ್ಧ ಏಕಾಂತದಲಿ ನಾನು
ಹರಿದು ಅಲೆಗಳ ಬಣ್ಣ
ಸುತ್ತೆಲ್ಲಾ ತಿಳಿಗೆಂಪು ಉದ್ಯಾನ.
ಹೊರಳಿದರೆ ಹಗಲು
ಅವನೆದೆಯ ಮಗ್ಗುಲು

ನನ್ನ
ಇಂದು ನಾಳೆ ನಿನ್ನೆಗಳೆಲ್ಲಾ
ಕಣ್ಣು ಕೂಡಿದ
ಕ್ಷಣದ ಧ್ಯಾನದಲ್ಲಿ

ಅದೇ ಹಾದಿಯಲಿ ಮರಳುವಾಗ
ಮಂಡಿಯೂರಿದ ಸ್ಥಳವ ಮರೆಯದೇ
ನೋಡೆನ್ನುವ
ಅವನ
ಕಣ್ಣು ಹೊಮ್ಮಿಸುವ
ಸಣ್ಣ ಹಾಡಿನ ನಾದ ನಾನು

ಸುಮ್ಮನೆ ಇಣುಕಿಣುಕಿ
ನೋಡುವ ನನ್ನ ಕಂಡು
ಹುಟ್ಟುವ
ಅವರಿವರ ಪ್ರಶ್ನೆಗಳಿಗೆ ಉತ್ತರ ಏನು.?

*******

Leave a Reply

Back To Top