ಕವಿತೆ
ಶೀಲಾಭಂಡಾರ್ಕರ್
ಹುಡುಕುತ್ತೇನೆ ನಿನ್ನನ್ನು ಲೆಕ್ಕವಿಲ್ಲದ
ನಕ್ಷತ್ರಗಳ ಮಿಣುಕು ಮಿಣುಕು
ನಾಟ್ಯದೊಳಗೆ.
ಆತುರಗಾರ ಚಂದ್ರನೂ
ನಿನ್ನ ನೆನಪಿಸುತ್ತಾನೆ..
ಅವಸರದಿ ಅವಿತುಕೊಳ್ಳುವಾಗ
ಮೋಡದ ಸೆರಗಿನೊಳಗೆ
ಬೀಸಿ ಬರುವ ತಂಗಾಳಿಯೊಂದು
ಸದ್ದಿಲ್ಲದೆ ತುಟಿಗಳಿಗೆ
ಮುತ್ತಾಗಿ ಬಿಸಿಯಾಗುವ
ತುಂಟ ಸಮಯದಿ
ನೀನೇ ಇರುವೆ ಆ ಇರುವಿನೊಳಗೆ.
ಹಿತ್ತಲ ಮೂಲೆಯ ಗಿಡದಲ್ಲೀಗ
ಅಬ್ಬಲಿಗೆಯ ಶ್ರಾಯ.
ಹೂ ಅರಳುವ ಮೃದು ಮಧುರ
ಪರಿಮಳವಾಗಿ ನೀನಿರುವೆ.
ಗಂಧ ಸುಗಂಧದೊಳಗೆ.
ಸಂಜೆಗಳಲಿ ಕೆಂಪಾಗಿ
ಸೂರ್ಯ ಮುಳುಗುವಾಗ
ಕಾಡುವ ನೆನಪಾಗುವೆ..
ಅಂಗಳದಲ್ಲಿ ಆಟವಾಡುವ
ಬುಲ್‍ಬುಲ್ ಜೋಡಿ ಹಕ್ಕಿಗಳ
ಲಲ್ಲೆ ಸಲ್ಲಾಪಗಳ ಸದ್ದು ಗದ್ದಲದೊಳಗೆ.
ನಿಶ್ಶಬ್ದವಾಗಿ ಪಿಸುನುಡಿಯೊಂದು
ಒಳಗಿನಿಂದ ಉಸುರಿದಾಗ
ಯುಗಗಳಿಂದ ಹುಡುಕುತಿದ್ದ
ನನ್ನನ್ನೇ ಎಲ್ಲೆಡೆ.. ಕಂಡುಕೊಂಡೆ.,
ನಿನ್ನ ಕಂಡಾಗ ನನ್ನೊಳಗೆ.
**************************
ಸೊಗಸು.