ಕವಿತೆ
ಶಾಂತಲಾ ಮಧು
ಸಂಜೆಯಾಗುತಿದೆ
ಆರಾಗಲಿಲ್ಲ ಸಂಜೆಯಾಗುತಿದೆ
ಬೆಳದಿಂಗಳಾಸೆ ಚಂದ್ರನಿಗೆ
ಕಸ್ತೂರಿ ತಿಲಕವನಿಡುವೆನೆನುತ
ಹಾಡಿ ಓಡಿದರೆ,
ಸಂಜೆಯಾಗುತಿದೆ
ಬೆಟ್ಟಗಳ ತುದಿ ಏರಿ
ಮೋಡದಲಿ ಈಜಾಡಿ..
ಹಕ್ಕಿ ಜೊತೆ ಚಿಲಿಪಿಲಿ
ಮಾತಾಡ ಹವಣಿಸಲು
ಹಾರಿ ಹೋಯಿತು ಹಕ್ಕಿ
ಸಂಜೆಯಾಗುತಿದೆ
ಮೊಟ್ಟೆ ಮರಿಗಳ ಸಲಹಿ
ರೆಕ್ಕೆ ಪುಕ್ಕಗಳು ಬಲಿತು
ಹಾರ ಬಯಸಲು ಮುನ್ನ
ಸಂಜೆಯಾಗುತಿದೆ
ಹುಲ್ಲು ಗರಿಕೆಯ ತಂದು
ಎಣಿಸಿ ಪೋಣಿಸಿ ಗೂಡು ಕಟ್ಟಿ
ಮೆರೆಯುವ ತವಕ
ಸಂಜೆಯಾಗುತಿದೆ
ಚಲಿಸುತಿದೆ ಚಿತ್ರವದು
ಮನಃ ಪಟಲ ಕೆದಕುತಿದೆ
ಕೆಂಪನೆಯ ಆಗಸದಿ
ಮರೆಯಾಗುತಿಹನವನು
ಸಂಜೆಯಾಗುತಿದೆ
*****