ಮಗಳು ಹುಟ್ಟಿದ್ದಾಳೆ

ಕವಿತೆ

ನಿನ್ನೆ ಯಾವನೋ ಪಾಪಿ ತ್ರಿಪುರದಲ್ಲಿ ಹೆಣ್ಣು ಹುಟ್ಟಿದೆ ಅಂತ ತಾನು ಆತ್ಮಹತ್ಯೆ ಮಾಡಿಕೊಂಡನಂತೆ ಮತ್ತು ಅವನ ಮಡದಿ ಹೃದಯಾಘಾತವಾಗಿ ಸತ್ತಳು.ಅದಕ್ಕೆ ಇದನ್ನು ನಿಮಗೆ ಒಪ್ಪಿಸಬೇಕು ಅನಿಸಿತು.

ಪ್ಯಾರಿಸುತ

ಮಗಳು ಹುಟ್ಟಿದ್ದಾಳೆ…
ಪದಗಳಿಗೆ ಸಿಗದ ದನಿಯೊಂದು
ಕಿವಿಗೆ ಬಿದ್ದು ನನ್ನ ಮನವು ಹಿಗ್ಗಿದೆ
ಮುದ್ದು ಮುದ್ದು ಮುಖವ ಹೊತ್ತು
ಬೆಳಗು ಮುಂಜಾನೆ ಬೆಳಕು ಚಿಮ್ಮಿಸಿ
ಬೆಚ್ಚನೆ ಹಾಸಿಗೆಯಲ್ಲಿ ಗೊಂಬೆಯಂತೆ ಮಲಗಿದ್ದಾಳೆ
ಅವಳ ಮುಷ್ಟಿಯಲ್ಲಿ ಅನ್ನದ,
ಆಯುಷ್ಯದ,
ವಿದ್ಯಾರೇಖೆಗಳು
ಅಡ್ಡವಾಗಿ ನದಿಯು ಹರಿಯುವ ದಾರಿಯಂತೆ
ಗುರುತು ಮಾಡಿಕೊಂಡಿವೆ
ಬೆಳ್ಳಿ ಮುಖದಲ್ಲಿ ಹೊಮ್ಮುವ ಪ್ರಕಾಶತೆಗೆ
ಸುತ್ತಲೂ ಎಲ್ಲರಿಗೂ ನಗುವು ಹಂಚಿ ಹೋಗಿದೆ
ಅವಳು ಗೊಂಬೆ,ಹೆಮ್ಮರದ ಕೊಂಬೆ

ಮಗಳು ಹುಟ್ಟಿದ್ದಾಳೆ….
ನನಗೂ ನನ್ನವಳಿಗೂ ಅವಳೇ ಅಧಿನಾಯಕಿಯಿನ್ನು
ತಡವಾಗಿ ಬರಲಾರೆ,
ಸುಳ್ಳೆಂದು ಹೇಳಲಾರೆ
ಅವಳಿರುವ ಭಯಕ್ಕೀಗ ಬಲುಬೇಗ ನಾ ಬರುವೆ
ಅಂಬೆಗಾಲು ಬಯಸಿದ ನಮ್ಮನೆ ಅಂಗಳವೀಗ
ಸಂತೋಷ ತುಂಬಿಕೊಂಡಿದೆ
ಮಿತಿಯು ನಿನಗಿಲ್ಲ ಮಗಳೇ,
ಭೀತಿಯ ತರಿಸಲ್ಲ
ಚುಕ್ಕಿ,ಬೆಳದಿಂಗಳು,
ಚಂದ್ರರೆಲ್ಲರೂ ರಾತ್ರಿಯಲ್ಲಿ ನಿನ್ನ ಸ್ನೇಹಿತೆಯರು
ಕೈ ಮಾಡಿ ನೀ ಕರೆದರೆ ತಡಬಡಿಸಿ ಬರುವರು
ನಾ ನಿನ್ನ ಆನೆಯು
ನೀ ನನ್ನ ಅಂಬಾರಿ
ನಿನ್ನ ಹೊತ್ತು ಮೆರೆಸುವೆನು
ನೀನಾಗು ಜಗವಾಳು ದೊರೆಸಾನಿ

************

4 thoughts on “ಮಗಳು ಹುಟ್ಟಿದ್ದಾಳೆ

  1. ಹೆಣ್ಣು ಹೆಣ್ಣೆಂದು ಹೀಗಳೆಯುವವರು ಈಗಲೂ ಇದ್ದಾರೆ ಎಂಬುದೇ ಖೇದನೀಯ. ಚಂದದ ಕವಿತೆ. ಸಮಾಜದ ಕಣ್ಣು ಎಂದು ತೆರೆಯುವುದೋ!!? ಪ್ರತಿ ಮನೆಯಲ್ಲೂ ಮಗಳು ದೊರೆಸಾನಿಯಾಗುವ ಕಾಲ ಬರಲಿ..

Leave a Reply

Back To Top