ಕವಿತೆ
ಹರೀಶ ಕೋಳಗುಂದ
ಹೌದು…
ನನಗೆ ಗೊತ್ತು
ನೀ ನನ್ನ ಪಕ್ಕದಲ್ಲೇ ಕುಳಿತಿರುವೆ
ಸುಳ್ಳು ಹೇಳುವುದಿಲ್ಲ ನಾನು
ಈ ಕಡುಗತ್ತಲಲ್ಲೂ ನಿನ್ನ ಮುಖ
ತಿಳಿನೀರ ಬಾವಿಯಲ್ಲಿ ಬಿದ್ದ
ಚಂದಿರನ ಬಿಂಬವೆಂದು
ಎಡತಾಕುತ್ತಿದೆ ನನ್ನೆದೆಗೆ
ನಿನ್ನುಸಿರ ಬಿಸಿ
ನಿನ್ನೆದೆಬಡಿತದ ಸದ್ದು
ನೀ ತೊಟ್ಟ ಕೈ ಬಳೆಯ ಘಲುಗು
ಮುಡಿದ ಮಲ್ಲಿಗೆಯ ಘಮಲು
ಹೊತ್ತು ಉರುಳುತ್ತಿದೆ
ಅರಿವೇ ಇಲ್ಲ
ಏನೋ ಹೇಳುವ ಬಯಕೆ
ತುಟಿ ಎರಡಾಗಿಸುವ ಧೈರ್ಯ ಸಾಲದು
ಕೈ ನಡುಗುತ್ತಿವೆ
ಮೈ ಬೆವರುತ್ತಿದೆ
ಎದೆಯೊಳಗೆ ಅಸ್ಪಷ್ಟ ಆತಂಕ
ನೆನಪಿರಬಹುದು ನಿನಗೆ
ನಾ ನಿನ್ನ ಮೊದಮೊದಲು ಕಂಡಾಗ
ನೀ ನನ್ನ ಕಂಡೂ ಕಾಣದಂತೆ
ನೋಡಿಯೂ ನೋಡದಂತೆ
ಕಣ್ಣು ಹಾಯಸಿದಷ್ಟೂ
ದೂರ ಕಾಣುವ ಮರೀಚಿಕೆಯಂತೆ
ಕಣ್ಣಿಗೆ ಬಿದ್ದು
ಕೈಗೆ ಸಿಗದ ಮಾಯಾಜಿಂಕೆಯಂತೆ
ಮರೆಯಾದದ್ದು
ಮತ್ತೆಲ್ಲೋ ನಿನ್ನ ಹುಡುಕಿದಾಗ
ಪಿಸುಗುಡುವ ರಾತ್ರಿಗಳಲಿ
ತೆರೆದ ಕಿಟಕಿಯಾಚೆ ಮೊರೆವ ಕನಸುಗಳಂತೆ
ಕರಿಮಲೆಯ ಬೆನ್ನಲ್ಲಿನ ನಿಚ್ಛಳ ನೀಲಾಕಾಶದಂತೆ
ನಿನ್ನೊಲುಮೆಯ ಕುರುಹು ಸಿಕ್ಕಿದ್ದು
ಈಗೀಗ ನನ್ನ ಪಾಲಿಗೆ
ನಿನ್ನೊಲವಿನ ಜಲಪಾತದಲ್ಲಿ
ಎಳೆ ಮೀನಾಗಿ ಈಜುವ ತವಕ
ನಿನ್ನ ಸಾನಿಧ್ಯದಲಿ
ನಾ ನನ್ನ ಸಂಪೂರ್ಣ ಕಳೆದುಕೊಂಡು
ಮತ್ತೊಮ್ಮೆ ಪಡೆದುಕೊಂಡು
ನಿನ್ನರ್ಧವೇ ಆಗಿ ಪರಿಪೂರ್ಣನಾಗುವ ತಹತಹಿಕೆ
ಜ್ವರದುರಿಯಲ್ಲಿ ಕುದಿವ ಮಗು
ತಾಯ್ಮೊಲೆಗೆ ಕನವರಿಸುವಂತೆ
ನಿನ್ನ ಹೆಸರ ಕರೆವಾಸೆ
ಹೊಸಮಳೆಗೆ ಹದಗೊಂಡ ಮಣ್ಣಿನೆದೆಯ ಮೇಲೆ
ಬಿದ್ದು ಬೇರೂರಿದ ಈ ಉಳಿಜಾಲಿ
ಜಡಗೊಂಡು ಮುದಿ ಕೊರಡಾಗುವವರಗೆ
ನಿನ್ನ ಸಾಂಗತ್ಯದಲಿ
ನಿನ್ನ ನಿಷ್ಕಲ್ಮಶ ಪ್ರೇಮದುರಿಯಲಿ
ದಹಿಸುವ ಬಯಕೆ
ನಿನ್ನ ಮಡಿಲ ತೆಕ್ಕೆಯಲಿ ಬೆಚ್ಚಗೆ ಒರಗಿ
ಕಣ್ಮುಚ್ಚುವ ಹಂಬಲ
******
ಪ್ರೇಮ ನಿವೇದನೆ ಅರ್ಥಪೂರ್ಣವಾಗಿದೆ
ಕವಿತೆಯ ವಸ್ತು ಹೊಸದಲ್ಲವಾದರೂ ನಿರೂಪಿಸಿದ ಬಗೆ ತಾಜಾ ಎನಿಸಿದೆ. ಒಟ್ಟಾರೆ ಕವಿತೆ ಚೆನ್ನಾಗಿದೆ
Superb.. ತುಂಬಾ ಸೊಗಸಾಗಿದೆ ನೈಜವಾಗಿದೆ..