ಲಹರಿ
ರಾಧಿಕಾ ಕಾಮತ್
ಜೀವನ ಒಂದು ಚಲನಚಿತ್ರ…
ನಮ್ಮದು ಅದರಲ್ಲಿ ಒಂದೊಂದು ಪಾತ್ರ…
ಮೇಲಿರುವ ನಿರ್ದೇಶಕ ಹಿಡಿದಿರುವ ಸೂತ್ರ…
ಕೊನೆಗೆ ಎಲ್ಲರೂ ಮರಳಬೇಕು ಅವನ ಹತ್ರ…
ಈ ಜೀವನ ಎಂಬ ನಾಟಕ/ ಚಲನಚಿತ್ರದಲ್ಲಿ ನಾವು ಹುಟ್ಟಿನಿಂದ ಹಲವಾರು ಪಾತ್ರಗಳನ್ನು ನಿಭಾಯಿಸುತ್ತಲೇ ಇರುತ್ತೇವೆ. ಅದು ನಮ್ಮ ಇಷ್ಟದ್ದಾಗಲಿ ಇಷ್ಟವಿಲ್ಲದ್ದಾಗಲಿ ನಾವು ನಿರ್ವಹಿಸಲೇ ಬೇಕು.
ನಾನು ಹುಟ್ಟಿದಾಗ ಒಂದೇ ಬಾರಿಗೆ ಮಗಳು ,ಮೊಮ್ಮಗಳು ತಂಗಿ ಎಂಬ ಮೂರು ಪಾತ್ರಗಳನ್ನು ಒಟ್ಟಿಗೆ ನಿಭಾಯಿಸಿದ್ದೆ.
ಮುಂದೆ ನಾಲ್ಕೈದು ವರ್ಷ ಕಳೆದಾಗ ಅಮ್ಮನ ಮಮತೆ ಕಂಡು ನನಗೂ ಅಮ್ಮನ ಪಾತ್ರ ನಿರ್ವಹಿಸುವ ಆಸೆ. ಆಗ ನನಗೆ ಮಗುವಾಗಿದ್ದು ನನ್ನ ಬಳಿ ಇದ್ದ ಒಂದು ಬೊಂಬೆ.ಅದನ್ನೇ ಮಗುವೆಂದು ತಿಳಿದು ಅಮ್ಮನಾಗಿಬಿಟ್ಟಿದ್ದೆ.
ಮುಂದೆ ಮುಂಬೈನಲ್ಲಿದ್ದ ನನ್ನ ಅಕ್ಕ ಊರಿಗೆ ಬಂದಾಗ ಅವಳು ಕೇಳಿದ ,ಓದಿದ ಸಿಂಡ್ರೆಲ್ಲಾ, ಸ್ನೋವೈಟ್ ಕತೆ ಕೇಳಿದಾಗ ಅದರಲ್ಲಿದ್ದ ರಾಜಕುಮಾರಿಯೂ ನಾನೇ ಆಗಿಬಿಟ್ಟಿದ್ದೆ…
ಮುಂದೆ ಶಾಲೆಗೆ ಹೋದಾಗ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡ ಶಿಕ್ಷಕಿಯನ್ನು ಕಂಡಾಗ ನನಗೂ ಶಿಕ್ಷಕಿಯಾಗಬೇಕು ಎಂಬ ಆಸೆ. ಅದನ್ನು ನೆರವೇರಿಸಿಬಿಟ್ಟಿದ್ದ ಆ ಸೂತ್ರಧಾರ.
ಮುಂದೆ ಬಂಧು ಬಳಗದ ಹೊರತಾಗಿ ಸ್ನೇಹಿತೆ ಎಂಬ ಪಾತ್ರ ನನಗಿಷ್ಟವಾಗಿತ್ತು.ಅದನ್ನು ಎಲ್ಲ ಕಡೆಗಳಲ್ಲೂ ನಿರ್ವಹಿಸಿದೆ
ಮುಂದಿನದು ಪತ್ನಿ,ಸೊಸೆ,ಅಮ್ಮನ ಪಾತ್ರ ಗಳು ನನ್ನ ಹೆಗಲೇರಿಬಿಟ್ಟವು..ಇದು ತುಸು ತ್ರಾಸಾದಯಕ ಪಾತ್ರಗಳು.
ಯಾವುದೇ ರಿಹರ್ಸಲ್(ಪೂರ್ವತಯಾರಿ) ಗಳಿಲ್ಲದೆ ಮಾಡಬೇಕಾದ ಪಾತ್ರಗಳು..
ಕಷ್ಟವೋ ಸುಖವೊ ಸಧ್ಯಕ್ಕೆ ಅವನ್ನು ಕೂಡ ನಿರ್ವಹಿಸಿರುವೆ..
ಇನ್ನು ಸಧ್ಯ ಎರಡು ಪಾತ್ರಗಳು ಬಾಕಿ ಇವೆ..ಅತ್ತೆ ಹಾಗೂ ಅಜ್ಜಿಯ ಪಾತ್ರ
ಆ ಸೂತ್ರದಾರನ ದಾರ ಎಷ್ಟು ಉದ್ದ ಇದೆಯೋ ಗೊತ್ತಿಲ್ಲ. ಅದನ್ನು ನನ್ನಿಂದ ಆಡಿಸುವ ಇಚ್ಛೆ ಅವನಿಗಿದೆಯೋ..
ನನ್ನಿಂದ ಅದು ನಿರ್ವಹಿಸಲು ಸಾಧ್ಯವಿದೆಯೋ ನನಗೆ ತಿಳಿದಿಲ್ಲ…
ಒಟ್ಟಾರೆ ನಾನು ನಾನಾಗಿಯೇ…ನಾನೇ ಪಾತ್ರವಾಗಿ ಇದುವರೆಗೆ ನಟಿಸಿರುವೆ…
ಕೆಲವೊಂದು ಕಡೆ ಪೋಷಕ ನಟಿ,ಕೆಲವೊಂದು ಕಡೆ ನಾಯಕ ನಟಿ,ಇನ್ನೂ ಕೆಲವು ಕಡೆ ಖಳನಾಯಕಿಯಾಗಿಯೂ ನಟಿಸುವ ಸಂದರ್ಭ ಬಂದಿರುತ್ತದೆ.
ಈ ಜೀವನ ಎಂಬ ನಾಟಕದಲ್ಲಿ ನಾವು ನಿರ್ದೇಶಕರಾಗಲು ಖಂಡಿತಾ ಸಾಧ್ಯವಿಲ್ಲ
ಕೊನೆಯದಾಗಿ ನಾವು ನೋಡುವ ಚಲನಚಿತ್ರಗಳ ನಟರಿಗೆ ಇಷ್ಟು ಪಾತ್ರಗಳಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು ಅಂತ ಕೇಳ್ತಾರಲ್ಲ ಹಾಗೆಯೇ ನನಗೇನಾದರೂ ಕೇಳಿದರೆ ನನ್ನ ಉತ್ತರ ಸ್ನೇಹಿತೆಯ ಪಾತ್ರ
*****
ಬದುಕನ್ನು ಚಲನಚಿತ್ರಕ್ಕೆ ಹೋಲಿಸಿ ಅಲ್ಲಿ ಬರುವ ಎಲ್ಲ ಪಾತ್ರಗಳನ್ನು ಹಿಡಿದಿಟ್ಟಿದ್ದೀರಿ
ಧನ್ಯವಾದಗಳು ಸರ್…ಓದಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ
ಚೆನ್ನಾಗಿದೆ