ಕವಿತೆ
ಎಂ.ಜಿ .ತಿಲೋತ್ತಮೆ
ನಾನು ಹರವಿನ ಜಲವ ಈಜಿ,ದಾಟಿ
ಆ ದಡವ ಸೇರುವ ಬಯಕೆ
ಕೋಟೆಯೊಳಗೊಂದು ಕೋಟೆ
ಕಟ್ಟಿಕೊಂಡು ಕರೆದರೂ ನೀನು ಕೇಳುತ್ತಿಲ್ಲ
ಸೇರಲಾಗುತ್ತಿಲ್ಲ…
ದಿನಕ್ಕೆ ದೃಷ್ಟಿ ತಗುಲುವ
ಅನಂತ ಕಣ್ಣು ,ಹುಚ್ಚು ಮನಸ್ಸುಗಳಲ್ಲಿ
ನನ್ನದು ಒಂದು
ಅವಳ ಮೈಸಿರಿ,ಸೊಬುಗು ವರ್ಣನೆಗೆ
ಸುತ್ತ ಹರಿಯುವ ಉದಕಕ್ಕೂ ಎಟಕದು
ಈ ದಡಕ್ಕೂ ಆ ದಡಕ್ಕೂ ಅಂತರ
ಅಳತೆಯಮಾಪನದಲ್ಲಿ ಅಗಮ್ಯ
ಈ ಮನಕ್ಕೂ ಆ ಮನಕ್ಕೂ ಅಂತರವಿಲ್ಲ
ಹಾಲಿನೊಳಗೆ ಸೇರಿಕೊಂಡ ಜೇನಂತೆ
ಅಷ್ಟೇ ಹತ್ತಿರ ಇರಬಹುದು
ಯಾವ ದಾರಿ ಹಿಡಿದು ಬರಲಿ
ದಿನ ನಿತ್ಯ ಅರಳುವ ಪ್ರೀತಿಗೆ
ಕಟ್ಟೆ ಕಟ್ಟಿದ್ದರೆ ಜೀವ ಹೇಗೆ ಉಳಿಯುವುದು
ನೀನು ನಾನಾಗಿ ನಾನು ನೀನೇ ಎಂದು
ಹೀಗೆ ಬರೆದಿಟ್ಟ ಪ್ರೀತಿ ಭಾಷೆಯ ನುಡಿಗಳ
ಹಾಳೆಗಳು ತೂರಿ ಬಿಟ್ಟರೆ ಓಡೋಡಿ ಬರುವೆಯಾ?
ವಿನಾಕಾರಣ ಕಾಯಿಸಿ,ಬೇಯಿಸಿ,ನಿಂದಿಸಿ
ಕೊನೆಗೆ ಸೋಲಬೇಕೆನ್ನುವ ಹಟಬೇಕೆ
ಮೊದಲ ಬೇಟೆಗೆ ಒಪ್ಪಬಹುದಲ್ಲವೇ
ಮತ್ತೆ ಅದನ್ನೇ ಹೇಳುವೆ
ಎಷ್ಟು ದೂರ ನಿನ್ನ ನನ್ನ ನಡುವೆ
ಮಧ್ಯ ಮುಳುಗಿಸುವ
ವಿರೋಧ ಭಾವ ವಿಲ್ಲವಾದರೆ
ಅಂತದೇನು ಭಿನ್ನತೆ ಇಲ್ಲ
***************