ಆಯ್ಕೆ

ಕವಿತೆ

ಮಾಲತಿಹೆಗಡೆ

ಹೆತ್ತವರ ಹುಟ್ಟೂರ
ವ್ಯಾಮೋಹ ಬಿಟ್ಟವರು..
ಕತ್ತರಿಸಿ ನೆಟ್ಟ ಗಿಡದಂಥವರು
ನಗರವಾಸಿಗಳಿಗೊಲಿದವರು
ಹೋದೆಡೆಯೆಲ್ಲ ಚಿಗುರುವ
ಹಟದಲ್ಲಿ ಬೇರು ಬೆಳೆಸಿಕೊಂಡವರಲ್ಲವೇ ನಾವು ?

ಅಂಗೈ ಗೆರೆ ಮಾಸುವಷ್ಟು
ಪಾತ್ರೆ ಬಟ್ಟೆ ಉಜ್ಜಿ ಉಜ್ಜಿ
ಮುಂಬಾಗಿಲು ತೊಳೆದು
ರಂಗೋಲಿಯಿಕ್ಕಿ
ಕಟ್ಟಡವನ್ನು
ಮನೆಯಾಗಿಸಿಯೂ
ತವರು ಮನೆ ಯಾವೂರು?
ಗಂಡನ ಮನಿ ಯಾವೂರು?
ಪ್ರಶ್ನೆ ಎದುರಿಸುತ್ತ
ಅಡುಗೆಮನೆ ಸಾಮ್ರಾಜ್ಯದಲಿ
ಹೊಗೆಯಾಡುವ ಮನಕ್ಕೆ
ತಣ್ಣೀರೆರೆಚಿ ಹೂನಗೆ ಬೀರುವವರಲ್ಲವೇ
ನಾವು?

ತೊಟ್ಟಿಲು ತೂಗಿ,
ಹೆಮ್ಮೆಯಲಿ ಬೀಗಿ
ವಿರಮಿಸಲೂ ಬಿಡುವಿರದೇ
ಸಂಸಾರ ಸಾವರಿಸಿ
ಹೀಗೆಯೇ ಸಾಗುವುದು
ಹಣೆಬರಹ ಎನ್ನುತ್ತ
ಬದುಕುವ‌ ನಗರವಾಸಿ ನಾರಿಯರಲ್ಲವೇ ನಾವು?

*************

6 thoughts on “ಆಯ್ಕೆ

Leave a Reply

Back To Top