ಕಾವ್ಯಯಾನ

ಪ್ರಮಿಳಾ ಎಸ್.ಪಿ.

ಹಬ್ಬ

ದೀಪಾವಳಿಯ ಸಡಗರಕ್ಕೆ ಮಗಳು ಮನೆಗೆ ಬಂದಂತೆ
ಮೇಕೆಯೂ ಸಂತೆಗೆ ಬಂದಿತು.

ಯಾರದ್ದೋ ಮನೆ ಸೇರಿ
ರಾತ್ರಿ ಇಡೀ ಮಾವಿನ
ಎಲೆ ತಿಂದು ನಗುತ್ತಿತ್ತು.

ತುಂಬಿದ ಮೊಲೆಗಳು
ಜೋತು ಬಿದ್ದಿದ್ದ ಕಂಡು
ಆಡಿನ ಹಾಲು ಶ್ರೇಷ್ಟ ವಂತೆ
ಎಂದೇ ನನ್ನೆದೆಯೊಳಗೆ.

ಮಾವಿನ ಎಲೆ ಮೆಲುಕಿ
ಮಲಗಿದ್ದ ಮೇಕೆ
ಬೆಳಗಿನ ಜಾವಕ್ಕೆ
ಹಾಲು ಕಕ್ಕಿತ್ತು.

ಒಂದಾಡು ಮೂರು ಪಾಲಾಗಿ
ನೇತಾಡುತ್ತಿದ್ದ ನೋಡಿ
ಮನ ಹೋಳಾಗಿತ್ತು.

ಮಹಾವೀರ ನ ನಾಡಲ್ಲಿ
ಅಣ್ಣ ನ ವಚನ ನೆನೆದು..
ಮಗಳ ಊಟ ಮುಗಿಯಿತು.

ಆಕಳಿಕೆ ಬಂತೆಂದು
ನೆಪದಲ್ಲಿ ಕಣ್ಣ ನೀರು
ಹೊರ ಹರಿಯಿತು..

==========

ಪರಿಚಯ:

ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ವೃತ್ತಿಯಲ್ಲಿ ಶಿಕ್ಷಕಿ,ನೋವುಗಳ ನಡುವೆಯೂ ಖುಶಿಯಾಗಿರುವ ಬಯಸುವ ವ್ಯಕ್ತಿತ್ವ

Leave a Reply

Back To Top