ಕವಿತೆ
ನೀ.ಶ್ರೀಶೈಲ ಹುಲ್ಲೂರು
ಉದಯಿಸುವ ರವಿಯ ದಿನದೋಟಕೆ
ಅಡ್ಡಿಯಾಗಿದೆ ಕುರಿಮೋಡ ಕರಿಸಾಲು
ಕುರಿಗಾರ ಪವನನೆದ್ದು ಬರುವನಕ
ಹಿಂಡು ಕುರಿಗಳ ನಡುವೆ ರವಿ ಕಂಗಾಲು
ಮಳೆಗಾಲದೀಗಿನೀ ಹಗಲ ಹೊತ್ತು
ಮೋಡಗಳದು ನಿಲದ ನಿತ್ಯ ರಂಪಾಟ
ಕೆಂಪಾದವನಿಗದೇನೋ ಮಮಕಾರ
ಮೋಡಗಳೊಂದಿಗವನದೂ ತುಂಟಾಟ
ಶುಕಪಿಕಗಳ ಇನಿದನಿಯ ಗಾಢಮೌನ
ಮಂಕಾದ ಮನಗಳಲಿ ಗೌಣ ಸೊಗಸು
ಅವನೆದ್ದರೆ ಬೆಳಗು ಏಳುವರು ಎಲ್ಲ
ಹೊದಿಕೆಯಡಿಯಲೆ ಕಾಣುವರು ಕನಸು
ಸುರಿವ ವರುಣನ ನಡುವೆ ನೆಲದ ಗಾನ
ಝರಿ ತೊರೆ ನದಿಗಳಲಿ ರಭಸದೋಟ
ತಡೆವರಾರಿಲ್ಲ ತಿಮಿರದಾಲಿಂಗನವ
ಮೋಡಗಳಡಿಯೆ ರವಿಯ ಮಿಲನ ಕೂಟ
ಕಡಲಿನೊಡಲಿಗದೇನೋ ಸಡಗರ
ರವಿಯ ಚುಂಬನವು ಮರೆತ ಗೀತ
ಅಮ್ಮನೊಡಲಲಿ ನದಿಗೆ ಧನ್ಯ ಭಾವ
ಕಡಲ ಕುಡಿಗಳಲದೋ ನವ ಸಂಗೀತ
**********
ಚೆನ್ನಾಗಿದೆ.