ಪ್ರೀತಿ ಮತ್ತು ಪ್ರೀತಿ ಮಾತ್ರ

ಪ್ರೀತಿ ಮತ್ತು ಪ್ರೀತಿ ಮಾತ್ರ
ಲೇಖಕರು – ಜ್ಯೋತಿ ಗುರು ಪ್ರಸಾದ್

ಆರಂಭದ ಲೇಖನದಲ್ಲಿ ಪರಿಸರ ಹೋರಾಟಗಾತಿಯಾದ ದಿವಂಗತ ಕುಸುಮಾ ಸೊರಬ ಅವರ ಬಗ್ಗೆ ತಿಳಿಸುತ್ತಾ ಲೇಖಕಿಯು ಅವರ ಈ ಮಾತುಗಳನ್ನುಉಲ್ಲೇಖಿಸುತ್ತಾರೆ ಗಮನಿಸಿ – ” ಗಿಡ ಬೆಳೆಸಿದೆವನಿಗೆ ನರಕವಿಲ್ಲ” ಎಂಬ ಅಂಶ ಗರುಡ ಪುರಾಣದಿಂದಲೇ ಆರಂಭವಾಗಿ ಅಂದಿನ ಜನಜೀವನದ ದಿನನಿತ್ಯ ಕಾರ್ಯಕ್ರಮವಾಗಿತ್ತು. ಪರಿಸರ ರಕ್ಷಣೆ ಹಾಗೆಂದು ತಿಳಿದುಕೊಳ್ಳದೆಯೇ ಜೀವನದ ಆಂಗ ಆಗಿತ್ತು. ಈಗ ಮಾತ್ರ ಇದು ಫ್ಯಾಶನ್. ಮಳೆ – ಇಳೆ ಎಂಬ ಪೃಥ್ವಿಯನ್ನು ರಕ್ಷಣೆ ಮಾಡುವುದೇ ಎಂದರೆ ತನ್ನನ್ನು ತಾನೆ ರಕ್ಷಣೆ ಮಾಡಿಕೊಳ್ಳುವುದೇ ಮಹಿಳೆಯ ರಕ್ಷಣೆ. ಮದುವೆ ಮುಂಜಿಗಳಿಗೆ ಹೋಗಲು ಅನುಮತಿ ಬೇಕಾಗಿಲ್ಲ. ಆದರೆ ಯಾವುದೆ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಹಿಳೆಗೆ ‘ ಅನುಮತಿ’ ಬೇಕಾಗಿದೆ. ಎಷ್ಟೊಂದು ಸತ್ಯವಿದೆ ! ಇಂತಹ ಮಾತುಗಳನ್ನು ಪ್ರಾಮುಖ್ಯ ಮಾಡುತ್ತ ಹೋಗುವಲ್ಲಿ ಲೇಖನ ಹೆಚ್ಚುಪರಿಣಾಮಕಾರಿಯಾಗಿದೆ.
ದಾಂಪತ್ಯದ ಬಗ್ಗೆ ಸೊಗಸಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ “ಕಾಮ ಪ್ರೇಮವಾಗಿ ವಾತ್ಸಲ್ಯವಾಗಿ ಹರಿಯುವುದೇ ದಾಂಪತ್ಯ ನಿಷ್ಠೆ”.
ಗೊಮ್ಮಟನ ಎತ್ತರವನ್ನು ಕಣ್ಮುಂದೆ ನಿಲ್ಲಿಸಲು ಬರೆದ ಈ ಸಾಲುಗಳು ಲೇಖನದ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಫಲ
“ಭೂಮಿಯ ತಾಳ್ಮೆಯನ್ನು ಆಕಾಶಕ್ಕೆ ಮುಟ್ಟಿಸಲು ಹೊರಟಿರುವಂಥ ಸಂತ. ಮನುಷ್ಯ ಕುಲದಲ್ಲಿ ಎತ್ತರದ ಮೌಲ್ಯಗಳಿಗೆ ಎಲ್ಲಿಯವರೆಗೆ ಪ್ರಾಶಸ್ತ್ಯಇರುವುದೋ ಅಲ್ಲಿಯವರೆಗೆ ನಮ್ಮ ಬಾಹುಬಲಿ ಬೆಳಯುತ್ತಿರುತ್ತಾನೆ
ಶುದ್ಧ ಮನಸುಗಳ ಭಾಗವಾಗುತ್ತಾನೆ ಬಾಹುಬಲಿಯ ನಗ್ನತೆಯು ನಮ್ಮ ತೆರೆದ ಮನಸ್ಸಿನ ದಿಟ್ಟತನವಾಗಿ ನಮ್ಮ ಹೃದಯದ ಸೌಂದರ್ಯವನ್ನು ಕಾಯ್ದುಕೊಳ್ಳಲಿ” ಎಂಬ
ಮಾತುಗಳು ಗೊಮ್ಮಟನ ಎತ್ತರವನ್ನು ಸಹೃದಯಿಗಳ ಕಣ್ಮುಂದೆ ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.
ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್ ರವರು ‘ ಪುಣ್ಯಕೋಟಿ ‘ ಪದ್ಯದ ಬಗ್ಗೆ ಎತ್ತಿದ ಪ್ರಶ್ನೆಯನ್ನು ಪ್ರಸ್ತಾಪಿಸುತ್ತ ಓದುಗರನ್ನು ಯೋಚನೆಗೆ ಹಚ್ಚುತ್ತಾರೆ.
ಪೂ.ಚಂ.ತೇಜಸ್ವಿಯವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ
ತೆರೆದಿಡಲು ಲೇಖಕಿಯು ಹೇಳುವ ಮಾತುಗಳು ಅವರ ಆ
ಆಶಯವನ್ನು ನೆರವೇರಿಸುತ್ತ ಲೇಖಕಿಯ ಪ್ರೌಢ ಭಾಷಾ ಶೈಲಿಗೆ ಸಾಕ್ಷಿಯಾಗುತ್ತವೆ. ಕೆಳಗಿನ ಸಾಲುಗಳನ್ನು ಓದಿರಿ-
೧. ತೇಜಸ್ವಿಯವರ ಬಗ್ಗೆ ಬರೆಯುವುದೆಂದರೆ ಜೀವನದ
ಸರಳ ಸತ್ವಗಳನ್ನು ನಮಗೆನಾವೇ ಸಂಶೋಧಿಸಿಕೊಂಡಂತೆ
ತೋರಿಕೆಯ ಯಾವುದೇ ಭಾರವಿಲ್ಲದೆ ಅವರ ಆತ್ಮಸಾಕ್ಷಿಗೆ
ಅನುಗುಣವಾಗಿ ಅನಾವರಣವಾಗುವ ತೇಜಸ್ವಿ ಕುವೆಂಪು
ಅವರು ಆಶಯಗಳಿಗೆಲ್ಲಾ ರೂಪಕದಂತಿದ್ದಾರೆ.
೨. ಕೀರ್ತಿ ಶನಿ ತೊಲಗಾಚೆ ದೂರ’ ಎನ್ನುವ ತಂದೆಯ ಕವಿ
ವಾಣಿಗೆ ತಾವೇ ದನಿಯಾಗಿ,ತಮ್ಮ ಸ್ವತಂತ್ರ ವ್ಯಕ್ತಿತ್ವದಿಂದ
ತಮ್ಮ ಕೃಷಿ ಆಸಕ್ತಿಯಲ್ಲಿ ತೊಡಗಿಸಿಕೊಂಡು ನಶ್ವರದ ಈ
ಪುಟ್ಟ ಜೀವನದಲ್ಲಿ ಯಾವ ಸೋಗೂ ಇಲ್ಲದೆ ಒಬ್ಬ ‘ಸರಳ ಮನುಷ್ಯ’ ನಾಗಿ ಹೇಗೆ ಸಲ್ಲ ಬಹುದು ಎಂಬುದಕ್ಕೆ ತೇಜಸ್ವಿ
ಖಂಡಿತ ಮಾದರಿಯಾಗಿದ್ದಾರೆ.
೩. ಯಾವ ವಶೀಲಿ ಬಾಜಿಗಳಿಗೂ ಒಳಗಾಗಿದೆ ಪರಿಸರದ
ಮುಖ್ಯ ಜೀವವಾಗಿ ಹಕ್ಕಿಯಂತೆ, ಮರದಂತೆ ಜೀವಿಸುತ್ತಾ ಇರುವ ಅವರ ಜೀವನ ತೆರೆದ ಪುಸ್ತಕದಂತಿದೆ.
ವೀಚಿ (ಚಿಕ್ಕ ವೀರಣ್ಣನವರು )ಯವರ ಏನೂ ತಿಳಿಯದ
ಓದುಗನಿಗೂ ಸಹ ಅವರ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಲು “ಇರುವ ಬದುಕನೆತ್ತರಿಸಲು, ಉತ್ತರಿಸಲು ಧ್ಯಾನಿಸು”,
“ಪ್ರೀತಿಗೊಂದೇ ಮುಖವು ದ್ವೇಷಕ್ಕೆ ಹಲವಾರು”,
“ಮುದವೆಂದರೇನನ್ನೋ ಕಲಿಯುವುದಿಲ್ಲ ತಾನೇ ಅದಾಗುವುದು” ಎಂಬ ಸಾಲುಗಳನ್ನು ಗುರುತಿಸಿದ್ದಾರೆ.
ಹಾಗೆ ” ಕನ್ನಡಿಯೋ ಅಥವಾ ದೀಪವೋ ಆಗದ ಸಾಹಿತ್ಯ ಚಿಂತನೆ ವ್ಯರ್ಥ” ಎಂಬ ಡಿ. ಆರ್. ನಾಗರಾಜರವರ ಉಕ್ತಿ
ಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಿದ ಲೇಖಕರಾದ ಮುರಾರಿ ಬಲ್ಲಾಳರ ಬರಹದ ಬಗ್ಗೆ ಓದುಗರ ಕುತೂಹಲ ಮೂಡಿಸುವಲ್ಲಿ ಲೇಖಕಿಯು ಸಫಲರಾಗಿದ್ದಾರೆ.
ಪ್ರೇಮವನ್ನು ಕುರಿತು ಲೇಖಕಿ ನೀಡಿರುವ ವ್ಯಾಖ್ಯಾನವು
ಎಷ್ಟು ಅರ್ಥಪೂರ್ಣ.”ಪ್ರೇಮ ನಮ್ಮ ಪ್ರಬುದ್ಧ ಆಯ್ಕೆಯ ಒಂದು ಸ್ಥಾಯಿಯಾದ ಶೋಧ. ಅದನ್ನು ಎಳೆದು ತಂದು
ಗಂಟು ಹಾಕಲಾಗುವುದಿಲ್ಲ”
ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಬಗ್ಗೆ ಲೇಖಕಿಯು ಹೇಳಿದ ಮಾತು ಹದಿನಾರು ವರ್ಷಗಳು ಕಳೆದರೂ ಪ್ರಸ್ತುತವಾಗಿದೆ
ಸ್ತ್ರೀವಾದದ ಬಗ್ಗೆ ಜ್ಯೋತಿಯವರ ಪ್ರತಿಪಾದನೆ ಹೀಗಿದೆ _ “ಸ್ತ್ರೀವಾದವೆಂದರೆ ಹೆಣ್ಣಿನ ನೈಸರ್ಗಿಕ ಅಸ್ತಿತ್ವವನ್ನು ಉಳಿಸಿ ಕೊಂಡು ಆ ಸವಿಯ ಸ್ವಾತಂತ್ರದಲ್ಲೇ ಕಂಡು ಕೊಳ್ಳುವ ವ್ಯಕ್ತಿತ್ವದ ಪೂರ್ಣದೃಷ್ಟಿಯೆ ಹೊರತು ಬರಿಯ ವಾದಕ್ಕಾಗ ವಾದ ಮಾಡುವ ಒಣವಾದವಲ್ಲ” ಎಂಬ ಲೇಖಕಿಯವರ ಅಭಿಪ್ರಾಯ ಪರಿಪಕ್ವವಾಗಿದೆ. ಭಾರತದ ಸಾಂಸ್ಕೃ,ತಿಕ ಅನನ್ಯತೆಯನ್ನು ಪ್ರಸ್ತಾಪಿಸಿ “ತಲೆಬಾಗುವ ವಿನಯವೇ,ಕೈ ಜೋಡಿಸುವ, ಆಕಾಶಕ್ಕೆ ಕೈಯೊಡ್ಡಿ
ಪ್ರಾರ್ಥಿಸುವ, ಎದೆ ಮುಟ್ಟಿ ದೇವರನ್ನು ಸ್ಪರ್ಶಿಸುವ ಅಂತರಂಗದ ಆಲಾಪವೇ ನನಗೆ ನಮ್ಮ ದೇಶದ ಮಹತ್ವ ಸಾಂಸ್ಕೃತಿಕ ಅನನ್ಯತೆ” ಈ ಮಾತು ನೈಜ ದೇಶಪ್ರೇಮದ ಪ್ರತೀಕ.
ಬದುಕು ಬರಹದ ನಡುವೆ ಅಂತರಉಳಿಸಿಕೊಂಡ ಲೇಖಕ ಲಂಕೇಶ್ ರವರನ್ನು ಕಂಡಾಗ ಆದ ಭ್ರಮನಿರಸನ ಕುರಿತು ತಿಳಿಸಿದ್ದಾರೆ
ಕೆಲವೊಂದು ಚಲನೆ ಚಿತ್ರಗೀತೆಗಳ ವಿಮರ್ಶೆ, ಮೆಚ್ಚಿನ
ನಟರ ಬಗ್ಗೆ ಬರೆಯುವಂತೆ ಬಿ. ಆರ್. ಲಕ್ಷ್ಮಣ್ ರಾವ್ ರವರ ಪ್ರೇಮದ ಕುರಿತು ಪಂದ್ಯವನ್ನು ಟೀಕಿಸುತ್ತಾ.”ಆಕ್ಟ್
ಆಫ್ ಲಿವಿಂಗ್” ಬಗ್ಗೆ ಹೇಳವಲ್ಲಿ ವಿಶೇಷ ಹೊಳಹುಗಳಿವೆ
ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯನ್ನು ನೆನೆಯುವ
ಕೃತಜ್ಞತೆಯ ಮಹಾಪೂರದಲ್ಲಿ “ಸೂರ್ಯ ನಮಸ್ಕಾರ’ದ,
‘ ಸಂಧ್ಯಾವಂದನೆ’ ಯು ‘ಗಾಯತ್ರಿ ಮಂತ್ರ’ದ ಎಲ್ಲಾ ಫಲ
ಸಿದ್ಧಿಸುತ್ತವೆ. ಮುಖ್ಯ ಬೇಕಾಗಿರುವುದು ಒಳನೋಟ – ನಿಜದ ಸಂತಸವೆನ್ನವ ಲೇಖಕರ ಈ ಮಾತುಗಳು ಮನದ
ಆಳಕ್ಕೆ ಇಳಿಯುತ್ತವೆ ಎಂಬುದು ಅಷ್ಟೇ ನಿಜ.
ಮತಾಂಧರ ಕಣ್ಣಿಗೆ ಅಂಜನ ಹಾಕುವ ಅಂಜನೆ ಬೇಕಾಗಿದೆ ಎಂಬ ಸತ್ಯದ ಬೆಳಕಿನಲ್ಲಿ ಆಂಜನೇಯನ ಕಲ್ಪನೆಯಿದೆ.
ಒಟ್ಟಾರೆ ಈ ಕೃತಿಯು ಲೇಖಕರ ಪ್ರಬುದ್ಧ ಚಿಂತನೆ ಹಾಗೂ ಪ್ರತಿಭೆಯ ಭಾರಕ್ಕೆ ಬಾಗಿದ ಕೃತಿಯೆನ್ನಬಹುದು. ಪ್ರೀತಿಗೆ ಪಾತ್ರರಾದವರ, ಪ್ರೀತಿಯ ಹಾಡುಗಳು ಹಾಗೂ ಪ್ರೀತಿಯ ವಸ್ತುಗಳೊಂದಿಗೆ ಪ್ರೀತಿಯ ಸೋಜಿಗವನ್ನು ನೋಡುತ್ತಾ ಬದುಕಿನ ಪ್ರೀತಿಗೆ ಬೇಕಾದ ಒಳನೋಟವನ್ನು ಒದಗಿಸುವ ಈ ಕೃತಿಯ ಶೀರ್ಷಿಕೆಯು ಸಮಂಜಸವಾಗಿದೆ

**********

ಎಂ. ಆರ್. ಅನಸೂಯ

2 thoughts on “ಪ್ರೀತಿ ಮತ್ತು ಪ್ರೀತಿ ಮಾತ್ರ

Leave a Reply

Back To Top