ಕಾವ್ಯ ಸಂಗಾತಿ
ಡಾ ತಾರಾ ಬಿ ಎನ್ ಧಾರವಾಡ
“ಅರ್ಥವಾಗದವಳು”


ನಿಶ್ಶಬ್ದದೊಳಗೆ ಮಾತಾಡುವವಳು,
ನಗುವಿನ ಹಿಂದೆ ಸಾವಿರ
ಪ್ರಶ್ನೆಗಳನ್ನು ಮರೆಸುವವಳು.
ಕಣ್ಣಲ್ಲಿ ಕನಸುಗಳ ನದಿ ಹರಿದರೂ
ಕಾಣದವರ ಮಧ್ಯೆ ಬದುಕುವವಳು.
ತನ್ನತನವನ್ನು ತಾನೇ ಹೊತ್ತುಕೊಂಡು
ಪ್ರಪಂಚದ ತೂಕವನ್ನೂ
ಸಹ ನಗುತ್ತಲೇ ಸಾಗಿಸುವವಳು,
“ಬಲಿಷ್ಠ” ಎಂದರೆ ಕಲ್ಲಿನಂತೆ
ಇರಬೇಕು ಎಂದುಕೊಂಡವರಿಗೆ
ಹೂವಿನಂತೆ ಮೃದುವಾಗಿ
ಬಲವಾಗಿರುವವಳು.
ಮೌನವನ್ನು ಅಹಂಕಾರವೆಂದವರು
ಅಳುವನ್ನು ದುರ್ಬಲತೆ ಎಂದರು,
ಪ್ರಶ್ನೆಗಳನ್ನು ಬಂಡಾಯವೆಂದರು,
ಆದರೆ ಅವಳೊಳಗಿನ ಸತ್ಯವನ್ನು
ಯಾರೂ ಕೇಳಲಿಲ್ಲ.
ತನ್ನವರ ನಡುವೆ ಇದ್ದೂ
ಒಂಟಿಯಾಗಿದ್ದಳು,
ತನ್ನ ಭಾಷೆಯನ್ನೇ ಮಾತಾಡುತ್ತಿದ್ದರೂ
ಅಂತರಂತೆ,ಅನ್ಯಭಾಷೆಯಂತೆ
ಅವಳ ಮನಸ್ಸಿನ ಅಕ್ಷರಗಳು
ಅವರ ಕಣ್ಣಿಗೆ ಒಂದಾಗಲೇ ಇಲ್ಲ, ಅಸ್ಮಿತೆ ಕಾಣಲೇ ಇಲ್ಲ.
ತನ್ನ ನೋವಿಗೆ ತಾನೇ
ಸಮಾಧಾನ ಹೇಳಿಕೊಂಡಳು,
ತನ್ನ ಕಣ್ಣೀರಿಗೆ ತಾನೇ ಉತ್ತರವಾದಳು.
ಬಿದ್ದಾಗ ಕೈ ಹಿಡಿಯುವವರು
ಇರಲಿಲ್ಲ,
ಆದರೂ
ಮತ್ತೆ ನಿಂತು ನಡೆಯುವ ಧೈರ್ಯ
ಅವಳು ಕಳೆದುಕೊಳ್ಳಲಿಲ್ಲ,
ಅವಳು ವಿಭಿನ್ನ. ವಿಶಿಷ್ಟ,
ಅವಳು ದುರ್ಬಲ ಅಲ್ಲ,
ಅವಳು ಆಳವಾದಳು.
ಒಂದು ದಿನ…
ಅವಳನ್ನು ಅರ್ಥಮಾಡಿಕೊಳ್ಳದ ಲೋಕವೇ
ಬೆಳಕಿಗೆ ದಾರಿ ಕೇಳುತ್ತದೆ.
ಆಗಲೂ ಕಹಿಯಾಗುವುದಿಲ್ಲ,
ನಗುಮುಖದಿಂದಲೇ ದಾರಿದೀಪವಾಗುತ್ತಾಳೆ.
ಏಕೆಂದರೆ
ನನ್ನವರಿಗೇ ಅರ್ಥವಾಗದವಳು
ಒಂದು ದಿನ
ತನ್ನನ್ನೇ ಸಂಪೂರ್ಣವಾಗಿ ಅರ್ಥಮಾಡಿಕೊಂಡವಳು.
ಡಾ ತಾರಾ ಬಿ ಎನ್ ಧಾರವಾಡ




