ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದು ಕಪ್ ಕೊಫಿ ಹೊಯ್ಕೊಂಡು ಬಿಡೋಣ ಅನ್ನುವ ಮನಸಿನ ಗಿಂಜಾಟಕ್ಕೆ  ಕಭಿಕಭಿ ರಾಜಿಯಾಗುವದು. ಕಿಚನ್ನಿನ ಪುಟ್ಟ ಗ್ಲಾಸ್ ಶೋಕೇಸಿನ ಬಾಗಿಲು ತೆರೆದರೆ ಮಣ್ಣಿನ ಬಣ್ಣದ ದೊಡ್ಡ  ಕಾಫಿ ಮಗ್ ಕೈಗೆ ತಗಲಿತು.‌ ಹಾಗೇ ಎತ್ತಿಕೊಂಡು ಮೈ ಸವರಿದೆ. ಕ್ಷಣ ಎಲ್ಲೋ ಜಾರಿತು ಮನ.. ಈಗ ಹೇಗಿರಬಹುದು…? ಯಾವುದೋ ನೆನಪಿಗೆ ಮನ ಬಿರಿಯಿತು.. ಆ ಕೊಫಿಮಗ್ ಬರೀ ಆಗಾಗ ಸವರಿ ಒಳಗಿಡೋಕೆ ಮಾತ್ರ… ಅದ್ರಲ್ಲಿ ನಾನ್ಯಾವತ್ತೂ ಕುಡಿದಿಲ್ಲ, ಕುಡ್ಯೋದಿಲ್ಲ. ಅಂಥದ್ದೊಂದು ಎದೆ ಕರಗುವ ನೆನಪು ಥಳಕುಗೊಂಡಿದೆ ಅದರಲ್ಲಿ.. ಕೈಲಿದ್ದ ಕೊಫಿಮಗ್ ಒಳಕ್ಕೆ ನೂಕಿ, ಬೇರೊಂದನ್ನು ಎತ್ತಿಕೊಂಡು, ಕುದಿದಹಾಲು ಕಾಫಿಪುಡಿ ಸಕ್ಕರೆ ಸುರಿದುಕೊಂಡು  ಕಲಕುತ್ತ ಮತ್ತೆ ಅಂಗಳಕ್ಕೆ  ಬಂದೆ. ಎಲ್ಲಿದ್ದವೋ ಪುಟ್ಟಪುಟ್ಟ ಎರಡು ಬಿಳಿ ಚಿಟ್ಟೆ ಮರಿಗಳು ಆಗಷ್ಟೇ ಅರಳುವ ಕಾಯಕದಲ್ಲಿರುವ ಗೂಡುಮೊಗ್ಗುಗಳ ಬಳಿಯಲ್ಲಿ ಸುಳಿದಾಡುತ್ತಿದ್ದವು. ಈಗ ಮನಸ ಹಿಡಿದಿಡೋಕೆ ಸಾಧ್ಯವಾಗಲಿಲ್ಲ.. ಎರಡೂವರೆ ದಶಕಗಳ ಹಿಂದಕ್ಕೆ ಜಿಗಿದು ಗಡಕ್ಕನೆ ಬ್ರೇಕ್ ಒತ್ತಿಕೊಂಡು ನಿಂತಿತು ಮನಸೆಂಬ ಮಂಗ್ಯ..
        ಇದೇ ಚಳಿಗಾಲ ಡಿಸೆಂಬರ್ ತಿಂಗಳ ಕೊನೆಯ ದಿನಗಳಿರಬಹುದು, ಕರಾವಳಿ ಉತ್ಸವ ಮುಗಿದಿತ್ತು. ಎಲ್ಲೆಲ್ಲಿಂದಲೋ  ಬಂದ ಬಯಲ ವ್ಯಾಪಾರೀ ಅಲೆಮಾರಿಗಳು ಕಡಲದಂಡೆಯ ಮೇಲೆಯೇ ಬೀಡು ಬಿಟ್ಟಿದ್ದರು. ಬೆಳಗಿನ ಹೊತ್ತು ಇಂದಿನಂತೆಯೇ ಹೊರಗಿನ ಮೆಟ್ಟಿಲಮೇಲೆ ಕೂತು ಎಳೆ ಬಿಸಿಲಿಗೆ ಮೈಯೊಡ್ಡಿದ್ದೆ.. ಕಪ್ಪು ಬಸೀರಿ.. ಕಪ್ಪುಬಸಿ.. ಕೂಗುತ್ತ ಬಂದ ಹೆಣ್ಣೊಂದು ಗೇಟಲ್ಲಿ ನಿಂತಿತ್ತು. ಪಕ್ಕದಲ್ಲೊಂದು  ಪುಟ್ಟಮ್ಮ..‌ ಬೇಡ ಹೋಗವ್ವ… ಅಂದೆ “ಯವ್ವಾ ಸೆನ್ನಾಗೈತೆ ಒಂದ್ಕಿತಾ ನೋಡ್ರವ್ವ” ಪಿರಿಪಿರಿಗುಟ್ಟಿದಳು… ಸರಿ ಬಾ.. ಅವಳ ಕಪ್ಪುಬಸಿಗಿಂತ ಪಕ್ಕದಲ್ಲಿ ನಿಂತ ಪಾದರಸದಂತೆ ನಿಂತಲ್ಲಿ ನಿಲ್ಲದ ಕಪ್ಪು ಹುಡುಗಿ ನನ್ನ ಸೆಳೆದಿದ್ದಳು.‌ ಬುಟ್ಟಿ ಇಳಿಸಿದಳು. ಪೂರಾ ಗುಂಜಾಡಿದೆ.. “ಬ್ಯಾಡವ್ವೋ, ಒಂಚೂರು ಚೆನ್ನಾಗಿಲ್ಲ ಬಿಡು, ಸುಮ್ನೆ ನಿನ್ನ ಟೇಮು ಹಾಳು, ನಂಗೂ ಹೊತ್ತಾತು, ತಿಂಡಿಯಾಗಿಲ್ಲ ಇನ್ನೂ..” ಅಂದೆ.. “ಅವ್ವಾ, ಒಂದಾರ ತಗಳವ್ವ, ಇನ್ನ ಬೋಣಿ ಆಗಿಲ್ಲ, ಮೊದಲ್ಕ ನಿನ್ಮನಿ ಹೊಕ್ಕೀನೀ” ಅಂದ್ಲು.. “ಇಲ್ಲವ್ವ, ಪಸಂದಾಗಿಲ್ಲ, ವಸಿ ನಿಲ್ಲು” ಎಂದು ಒಳಹೋದೆ. ಇಡ್ಲಿ ಪಾತ್ರೆ ಘಮ್ಮನೆ ಸುಂಯ್ಗುಡುತ್ತಿತ್ತು. ಎರಡು ಬಿಸಿಬಿಸಿ ಹಬೆಯಾಡುವ ಇಡ್ಲಿ ತಟ್ಟೆಗೆ ಹಾಕಿಕೊಂಡು ಮೇಲೊಂದಷ್ಟು ಚಟ್ನಿ ಹಾಕ್ಕೊಂಡು, ಒಂದ್ಹಿಡಿ ಒಣದ್ರಾಕ್ಷಿ ಇಟ್ಕೊಂಡು ಬಂದು ಬೊಗಸೆಗೆ ಹಾಕಿ, “ದ್ರಾಕ್ಷಿ ಮಗೀಗೆ ತಿನ್ಸು, ಇಡ್ಲಿ ನೀನು ತಿನ್ನು ಅಂದೆ..‌ ಎಳೆಕೂಸನ್ನ ನೋಡ್ತಾ ಅಲ್ಲೇ ತುಸು ದೂರ ಕೂತೆ. ಗೋಲಮುಖದಲ್ಲಿ ಕಡುನೀಲಿ ಮಿಂಚುಗಣ್ಣು, ಚೂಪು ಮೂಗು, ಕಪ್ಪುಕಂಚಿನ ಬಣ್ಣ, ಸರ್ರನೆ ಜಾರುವ ನುಣ್ಪುಗೂದಲು.. ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಬೊಗಸೆಗೆ ಬಿದ್ದ ಒಣ ದ್ರಾಕ್ಷಿಯನ್ನು ಕೊಳಕು ಫ್ರಾಕಿನ ಬದಿಯ ಕಿಸೆಗೆ ತುಂಬುವ ಪ್ರಯತ್ನ ಮಾಡುತ್ತಿದ್ದಳು.. ದ್ರಾಕ್ಷಿ ಬದ್ದೀತೆಂಬ ಕಾಳಜಿಗೆ ಬೊಗಸೆ ಮುಚ್ಚಿಟ್ಟುಕೊಂಡೇ ಕಿಸೆಯೆಡೆಗೆ ಬಾಗುವ ಸರ್ಕಸ್ ನೋಡಿ ಕಳ್ಳು ಚುಳ್ಳೆಂತು. ಆಗಷ್ಟೇ ಸ್ನಾನಮಾಡಿ ಬಂದಿದ್ದೆ. ಪೂಜೆ ಮುಗಿದಿರಲಿಲ್ಲ. ಅವಳನ್ನು ಮುಟ್ಟಿದ್ರೆ ಮತ್ತೆ ಸ್ನಾನ ಮಾಡ್ಬೇಕು… ಅಷ್ಟು ಕೊಳಕಾಗಿದ್ದಳು.  ಮಾರುದೂರ ನಿಂತವಳು ಬುಗ್ಗನೆ ವಾಸನೆ ಬಡಿಯುತ್ತಿದ್ದಳು.. ಅವಳೊಳಗೆ ತುಂಟ ಕೃಷ್ಣ ಕಾಣುತ್ತಿದ್ದ ನನಗೆ.  ಕೈತೊಳ್ಕೊಂಡ್ರಾಯ್ತು, ಬಾಗಿ ಅವಳ ಅಂಗಿ ಹಿಡಿದು ಬಳಿಗೆಳೆದುಕೊಂಡು ಒಣದ್ರಾಕ್ಷಿ ಕಾಳುಗಳನ್ನು ಕಿಸೆಗೆ ತುಂಬಿಸಿದೆ.  ಇಷ್ಟಗಲ ಕಣ್ಣುಗಳು ಇನ್ನಷ್ಟು ಅರಳಿದವು. ನನ್ನ ಹಿಡಿತದಿಂದ ನುಣುಚಿಕೊಂಡು ಅಷ್ಟುದೂರ ನಿಂತು ಉಬ್ಬಿದ ಕಿಸೆಯಮೇಲೆ‌ ಕೈಯಾಡಿಸಿಕೊಂಡವಳು ಕಿಸಕ್ಕನೆ  ನಕ್ಕಳು. ಎರಡೂ ಕೆನ್ನೆಯ ನಡುವೆ ಸುಳಿಗುಳಿ ಅರಳಿಕೊಂಡಿತು. ನಾನದರಲ್ಲಿ  ಕರಗುವ ಮೊದಲೇ ಹೂಗಳ ಮೇಲೆ ಹರಿದಾಡುವ ಬಿಳಿಚಿಟ್ಟೆಯ ಮರಿಗಳ ಹಿಂದಿಂದೆ ಓಡಿ ಹಿಡಿಯಲು ಕೈಚಾಚಿದಳು. ಹಾರುವ  ಚಿಟ್ಟೆ ಮರಿಗಳ ಜೊತೆಗೆ ತಾನೂ ಪಾದರಸದಂತೆ ಹರಿದಾಡತೊಡಗಿದಳು. ಅವಳ ತೊಡೆಮುಚ್ಚದ ಪುಟ್ಟ ಸ್ಕರ್ಟ್ ಅವಳೊಂದಿಗೆ ಚಿಮ್ಮುತ್ತಿತ್ತು.. ಮತ್ತೆಮತ್ತೆ ಮುಖಕ್ಕೆ ಮುತ್ತುವ ತುಂಡುಗೂದಲುಗಳನ್ನು ಗತ್ತಿನಿಂದ ಹಿಂದಕ್ಕೆ ನೂಕುತ್ತಿದ್ದಳು. ಯಾಕೋ ಅಕ್ಕರೆಯುಕ್ಕಿತು..  ಮಣ್ಣು ಮೆತ್ತಿಕೊಂಡ ಹಿಮ್ಮಡಿ ತುಂಬು ಪಾದ  ಗಮನ ಸೆಳೆದವು. “ಎಷ್ಟು ದಣಿದವೋ ಪಾದಗಳು. ಒಂದಷ್ಟು ಎಣ್ಣೆಯುಜ್ಜಿ ಬಿಸಿಬಸಿ ನೀರಲ್ಲಿ ಮೈತೊಳೆದರೆ ಪರಿಯಂತೆ ಹೊಳೆದಾಳು ಪುಟ್ಟವ್ವ..” ನನ್ನ ಯೋಚನೆಗೆ ನಗು ಬಂತು. ‘ಯಾರದೋ ಕೂಸು ಆಸೆನೋಡು?’ ತಲೆಮೇಲೊಂದು ಮೊಟಕಿಕೊಂಡೆ..  ಇಡ್ಲಿ ತಿಂದು ಮುಗಿಸಿದ ಹೆಣ್ಣು “ಅವ್ವಾ ನೀರ್ಕೊಡ್ರಿ ವಸಿ ಗಂಗಾಳ ತೊಕ್ಕೊಡ್ತೀನಿ”  ತಟ್ಟೆ ತೊಳ್ಸೋಕೆ ಅವ್ಸರ ಮಾಡಿದ್ಲು. “ಏನೂಬೇಡ, ಕೊಡವ್ವ  ನನ್ಕೈಯ್ಯಲ್ಲಿ, ನಾನೇ ತೊಳ್ಕೊಂತೇನೆ ಅಂದೆ. “ಅಯ್ಯೋ ಬ್ಯಾಡವ್ವ, ನಮ್ಮೆಂಜ್ಲು ನೀ ತೊಳಿತೀಯಾ? ನಮ್ಗೆ ಪಾಪ ಬತ್ತೈತೆ.” ಕೊಸರಿದಳು. “ಸರಿ ನಾನ್ಯಾವಾಗಾದ್ರೂ ಕಾಲ್ತಪ್ಪಿ ನಿನ್ ಜೋಪ್ಡೀತಾವ ಬಂದ್ರೆ, ನೀನೇನಾರ ಒಂದ್ಗುಟ್ಗಿ ನೀರು ಕೊಟ್ಟೀ ಅಂದ್ಕೊ, ತಟ್ಟೆ ತೊಳಿಸ್ತೀಯಾ ನನ್ಕಡೆ!” ಕೇಳಿದೆ. ‘ಯವ್ವಾ ನೀಯಾಕ್ಬಂದಿ ನಮ್ಮ ಗುಡ್ಸಲ್ಕೆ’ ಎಂದು ಕೆನ್ನೆಗೆ ಹೊಡ್ಕೊಳ್ಳುತ್ತಲೇ ಎಂಜಲು ತಟ್ಟೆ ನನ್ಕೈಲಿಟ್ಟು ನಿನ್ನ ಹೊಟ್ಟೆ ತಣ್ಣಗಿರ್ಲಿ ಅವ್ವ.” ಹರಸಿದಳು. “ಏಟ್ ವರ್ಷಾತು ಮಗೀಗೆ? ಚಂದದಾಳ. ಕಾಲಿಗೊಂದು ಚಪ್ಲೀನೂ ಹಾಕಿಲ್ವಲ್ಲ, ಈ ಎಳೆಕೂಸನ್ನ ಯಾಕೆ ಹಿಡ್ಕೊಂಡು ಬರೋಕೋದೆ?” ಅಲ್ಲೇ ಕೂತು ಮಾತಿಗಿಳಿದೆ. “ಮತ್ತೆಲ್ಬಿಡ್ಬೇಕ್ರಿ ಮಗೀನ.?” “ನಿನ್ಗಂಡ ಏನ್ಮಾಡ್ತಾನ.. ಜೋಪ್ಡಿ ಒಳ್ಗ ಕುಡ್ದ ಬಿದ್ದಾನಾ..? ತಲಿಮ್ಯಾಲ ಒಂದ್ಗಡ್ಗಿ ತಣ್ಣೀರ್ ಸುರ್ದು ಎಬ್ಸಿ ಮಗೀನ ಅವನ್ತಾವ ಬಿಟ್ಟ ಬರ್ಬೇಕು ತಾನೇ..” ಕೋಪ ಕಾರಿದೆ…
 “ನನ್ನ ಕೂಸಲ್ರಿ ಅವ್ವಾ, ಮೊಮ್ಮಗ್ಳೂರೀ.” ನಾನು ಮಿಕಿಮಿಕಿ ಅವ್ಳನ್ನೇ ನೋಡಿದೆ. ಇನ್ನೂ ಮೂವತ್ತೈದರೊಳಗಿನ ಕೆಂಚು ದೇಹದ ಹೆಣ್ಣು, ಆಗ್ಲೇ ಮೊಮ್ಮಗ್ಳಾ..?ಹುಬ್ಬೇರಿಸಿದೆ.. “ಹೂಂನ್ರವ್ವಾ.. ಇದ್ರವ್ವ ಹೆರ್ಗಿ ಕಾಲಕ್ಕೆ ಸತ್ತೋತ್ರಿ..” ಕಣ್ಣೊರಸಿಕೊಂಡಳು. “ಇವ್ಳ ಅಪ್ಪ ಏನ್ಮಾಡ್ತಾನೆ? ಮತ್ತೆ ನಿನ್ಗಂಡ?” “ಯವ್ವ ಅದ್ನೆಲ್ಲ ನೀವು ಕೇಳ್ಬಾರ್ದು, ನಾವು ಹೇಳ್ಬಾರ್ದೂರಿ.. ನಾನೂ ಅಪ್ನ ಮುಖ ಕಂಡಿರ್ಲಿಲ್ರಿ  ನನ್ಮಗ್ಳೂ ಅಪ್ಪ್ನ ಮುಖ ಕಂಡಿಲ್ರೀ… ಇದ್ಕೂ ಅಪ್ಪನ್ನಾಕ ಯಾರಿಲ್ರೀ..” ನಿಸ್ಸಂಕೋಚದ ನುಡಿ. ಒಮ್ಮೆ ನನ್ನ ಮೈ ನಡುಗಿತು. ಅವಳ ಮುಖದಲ್ಲಿನ ಭಾವನೆಗಳನ್ನು ಓದೋಕಾಗ್ಲಿಲ್ಲ ನನಗೆ..ನಿರ್ಭಾವವಾಗಿದ್ದಳು…  ಹೊಕ್ಕುಳಲ್ಲಿ ಹುಟ್ಡಿದ ಚಳಿ ಇಡೀ ಎದೆಯ ಆವರಿಸಿ ಕ್ಚಣ ನಡುಗಿದೆ.. “ನಮ್ಮವ್ವ ಅದಾಳ್ರೀ…‌ ಆಕೀನೂ ಕಪ್ಪ ಬಸೀ ಮಾರಾಕಂತ ಹೊಂಟೋಯ್ತಾಳೆ..‌ ಹಾಂಗಾಗಿ ಕೂಸ್ನ ನನ್ಜೊತೀನ ಕಟ್ಗೊಂಡ್ ಬತ್ತೀನ್ರಿ.” ಅಂದ್ಲು.  ಯಾಕೋ ಅಂಗಾಂಗಗಳೆಲ್ಲ ಮರಗಟ್ಟಿದಂತೆ ಮಿಸುಕಾಡಿದೆ..  “ಯವ್ವಾ ಬತ್ತೀವ್ರಿ, ಬುಟ್ಟಿಗ್ ಒಸಿ ಕೈಹಚ್ರಿ, ಭಾರೈತ್ರಿ” ಅಂದ್ಲು.. ಈಗ ಸಾವರಿಸಿಕೊಂಡೆ..        
         “ಅವ್ವಾ, ನಿಮ್ಗೊಂದು ಕೇಳ್ತೇನೆ ಬೈಯ್ಬ್ಯಾಡ” ಅಂದೆ..  ತಡೆದು ನಿಂತಳು.  ಮಗೀನ ನನಗ್ ಕೊಟ್ಬಿಡವ್ವಾ.. ಚಂದಾಗಿ ಸಾಕೊಂತೀನಿ, ನಿನಗ್ ನೆನ್ಪಾದಾಗ ಯಾವಾಗ್ಬೇಕೋ ಅವಾಗ್ಬಂದು ನೋಡ್ಕೊಂಡೋಯ್ತಾ ಇರು,  ಇಕೀಗ ಸಾಲಿ ಕಲ್ಸಿ ದೋಡ್ಡ ನೌಕ್ರೀ ಮಾಡಿಸ್ತೀನಿ, ನನ್ನ ಮಗನ್ಮೇಲೆ ಆಣಿ ಮಾಡ್ತೀನಿ. ನನ್ಮಗಾ ಬ್ಯಾರೆ ಈ ಮಗೀ ಬ್ಯಾರೆ  ಯಾವತ್ತೂ ಮಾಡಂಗಿಲ್ಲವ್ವ, ಕೊಟ್ಬಿಡು” ಅಂದೆ. ಒಂದು ಕ್ಷಣ ಅವಳ ದೃಷ್ಟಿ ಕ್ರೂರವಾಯಿತು, “ಕೂಸ್ಬೇಕಿದ್ರ ಒಂದ್ಹೆತ್ಕೊಳ್ಳಾಕ ಏನ್ಬಂದಿತ್ತ ಬ್ಯಾನಿ, ಬ್ಯಾರೆದವ್ರ ಕೂಸಿಗೆ ಬಾಯ್ಬಿಡ್ತಿ.. ಯವ್ವಾ ಹೆಂತಾಕಿ ನೀನು? ” ದುರುಗುಟ್ಟಿದವಳು ಮತ್ತೆ ಮೆದುವಾದಳು.. ಯವ್ವಾ, ಅದೊಂದ ಕೇಳ್ಬ್ಯಾಡವ್ವ.. ಕೂಸಿನ್ಮ್ಯಾಲ  ನನ್ ಜೀವಾನೇ ಮಡಿಕಂಡೀನಿ, ಮುನ್ಸಕಬ್ಯಾಡವ್ವ” ದೈನ್ಯವಾಗಿ ಹೇಳಿದವಳು, ದೊಗ್ಗಾಲುಕೊಟ್ಟು ಹೆಣಗಿ ಭಾರದ ಬುಟ್ಟಿ ತಲೆಮೇಲೆ ಹೊತ್ತು, “ಲೇ  ಕಾವೇರಿ ಬಾರಿತ್ತಾಗ.. ಹೋಗಾನ” ಗೇಟಿನತ್ತ ನಡೆದಳು.. ಕಾವೇರಿ ಮರಿಜಿಂಕೆಯಂತೆ ಜಿಗಿದು ಅಜ್ಜಿಯ ಬೆನ್ನಟ್ಟಿದಳು.. ಅವಳು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಳು.. ನಾನು ಸರಿಯೆಂದು ದೃಢಪಡಿಸಲು ನನ್ನಲ್ಲಿ ಮಾತುಗಳಿರಲಿಲ್ಲ..  ಹಿಂದ್ಹಿಂದೇ ನಡೆದು ಬಂದಿದ್ದೆ.. ಗೇಟು ದಾಟುವ ಮುನ್ನ ಏನನ್ನಿಸಿತೋ..ಹಿಂತಿರುಗಿದಳು.. ಕಂಪೌಂಡ್ ವಾಲಿನ ಮೇಲೆ ಬುಟ್ಟಿಯೂರಿ ಹೆಗಲ ಚೀಲಕ್ಕೆ ಕೈಹಾಕಿ ಚಂದದ ಮಣ್ಣುಬಣ್ಣದ ದೊಡ್ಡ ದೊಡ್ಡ ಕಾಫಿ ಮಗ್ ಗಳ ಆರರ ಸೆಟ್ ಹೊರತೆಗೆದಳು, “ತಗಳ್ರವ್ವ  ಇದ್ನ.. ಇದ್ ಪಸಂದಾಗೈತಾ ಯೋಳಿ” ಅಂದ್ಲು…. ಯಾಕೋ ನಿರಾಕರಿಸಲು ಮನಸು ಬಾರದೇ ‘ಎಷ್ಟಾಗ್ತೈತೆ?’ ಅಂದೆ. “ಕೊಡವ್ವ, ನಿಂಗ್ ಯೋನ್ ಕೊಡ್ಬಕನ್ಸತೈತಿ ಅದ್ನ ಕೊಡು” ಅಂದ್ಲು… ಐದ್ನೂರು ತಂದು ಕೈಲಿಟ್ಟೆ… ಮುನ್ನೂರು ಸಾಕು ಅಂದ್ಲು.. ಇಟ್ಕಳವ್ವ ಕಾವೇರಿಗೆ ಚಪ್ಲಿ ಕೊಡ್ಸು ಅಂದೆ. “ಬತ್ತೀನವ್ವಾ, ನಿನ್ಮನ್ಸು ನಾ ಬಲ್ಲೆ, ತೆಪ್ಪಾತು ಕಣವ್ವಾ, ಮತ್ಯಾವಾಗ್ಲೋ ಕಾಲ್ತೆಪ್ಪಿ ಈ ಊರಿಗ್ಬಂದ್ರ ಮತ್ತ ಮಗೀನ ತೋರಿಸ್ಕೊಂಡು ಹೋಕ್ಕೀನಿ.. ಆದ್ರ ಇದೇ ಕೊನಿ, ಮಗೀನ ಬೇಡ್ಬ್ಯಾಡ” ಕಪ್ಪುಬಸೀರಿ ಒದರುತ್ತ ಸಾಗಿದಳು.. ತಿರುಗಿ ತಿರುಗಿ ನನ್ನೇ ನೋಡುತ್ತ ಅಜ್ಜಿಯ ಕೈಹಿಡಿದು ಕುಣಿಕುಣಿದು ಸಾಗಿದ ಕಾವೇರಿಯನ್ನು ದೇವಸ್ಥಾನದ ಮುರ್ಕಿ ತಿರುಗುವತನಕ ನೋಡುತ್ತ ನಿಂತೆ… ಈ ಪುಟ್ಟ ಕಾವೇರಿಗೊಂದು ಅಪ್ಪನಿಲ್ಲದ ಕೃಷ್ಣೆ ಹುಟ್ಟದ ಹಾಗೇ ಇವಳನ್ನು ನಿನ್ನ ಕಣ್ಣಲ್ಲಿಟ್ಕೊಂಡು ತಲೆ ಕಾಯುವದು ತಂದೆ… ಎದೆ ರೋಧಿಸುತ್ತಿತ್ತು…. ಮತ್ತೆ ಅವಳು ಈ ಬೀದಿಗೆ ಬಂದಿಲ್ಲ. ನಾನವಳ ಮರೆತಿಲ್ಲ…. ಒಂದು ನೋವಿನ ನಗೆಯಾಗಿ ಸದಾ ನನ್ನೊಳಗೆ ಇದ್ದಾಳೆ ಕಾವೇರಿ…. ನಿಮ್ಮ ಪ್ರೇಮಾ…


About The Author

Leave a Reply

You cannot copy content of this page

Scroll to Top