ಕಾವ್ಯ ಸಂಗಾತಿ
ಡಾ.ತಾರಾ ಬಿ.ಎನ್.ಧಾರವಾಡ
“ನಾನು ನಾನಾಗದಿದ್ದರೆ…?”


ನಾನು ನಾನಾಗದಿದ್ದರೆ
ಬೆಳಗಿನ ಕಿರಣಗಳು
ನನ್ನ ಬಳಿ ಬಂದು
ಹೆಸರೇ ಇಲ್ಲದ ಆತ್ಮವನ್ನು ಹುಡುಕುತ್ತಿರಬಹುದೇ?
ಕನ್ನಡಿಯ ಮುಂದೆ ನಿಂತಾಗ
ನನ್ನ ಕಣ್ಣುಗಳಲ್ಲಿ ನನ್ನನ್ನೇ
ಕಾಣಲಾಗದ ದಿನ,
ಆ ನೋಟವೇ ನನಗೆ
ನಾನೇ ಅಪರಿಚಿತನಾಗಿ ಬಿಡುವೆ
ನಾನು ನಾನಾಗದಿದ್ದರೆ,
ನನ್ನ ನಗುವೂ ಸಾಲುಗಟ್ಟಿದ ಸಾಲಾಗಿಬಿಡುತ್ತದಾ?
ಮನಸ್ಸು ನಿಜವಾಗಿ
ಹರ್ಷವಾಗದಿದ್ದರೂ
ವದನ ಮಾತ್ರ
ಜಗತ್ತಿಗೆ ಉತ್ತರಿಸಬೇಕೆಂದು
ನಗು ಮುಖವಾಡ
ಧರಿಸಬೇಕಾಗುತ್ತಾ?
ನಾನು ನಾನಾಗದಿದ್ದರೆ,
ನನ್ನ ಮೌನಕ್ಕೂ ಅರ್ಥವಿಲ್ಲದೆ
ಹೃದಯದ ಆಂತರ್ಯದಲಿ
ಉಕ್ಕುವ ಪ್ರಶ್ನೆಗಳು
ಶಬ್ದವಾಗದೇ,
ಕೇವಲ ಭಾರವಾಗಿಯೇ
ಉಳಿಯುತ್ತವೆ
ನಾನು ನಾನಾಗದಿದ್ದರೆ,
ನನ್ನ ನೋವಿಗೂ
ಅನುಮತಿ ಬೇಕಾಗುತ್ತ
ನನ್ನ ಕಣ್ಣೀರು ಕೂಡ
ನಾಚಿಕೆಯಿಂದ
ಹಿಂದಿರುಗಿಬಿಡುವುದು
ನಾನು ನನಾಗದಿದ್ದರೆ,
ನನ್ನ ಕನಸುಗಳು
ಯಾರದೋ ಅಧೀನದಲಿ
ಸಿಕ್ಕಿಹಾಕಿಕೊಂಡು
“ಸಾಧ್ಯ” ಮತ್ತು “ಅಸಾಧ್ಯ” ಎಂಬ
ಗೋಡೆಗಳ ನಡುವೆ
ಉಸಿರುಗಟ್ಟುತ್ತವೆ.
ನಾನು ನಾನಾಗದಿದ್ದರೆ,
ನನ್ನೊಳಗಿನ ನಗುವನ್ನು
ಯಾರಿಗೂ ತೋರಿಸದಂತೆ
ಕೇಳುವ ಸರಳ ಪ್ರಶ್ನೆಗಳಿಗೆ
ನನ್ನಲ್ಲೇ ಉತ್ತರ ಇರದೇ
ಹೋಗುತ್ತದಯೇ ?
ಆದರೆ
ನಾನು ನಾನಾಗಿರುವುದೇ
ಒಂದು ಕ್ರಾಂತಿ.
ನನ್ನ ಶಕ್ತಿ ದೌರ್ಬಲ್ಯಗಳೊಂದಿಗೆ,
ನನ್ನ ಭಯಗಳೊಂದಿಗೆ,
ನನ್ನ ಸಂಪೂರ್ಣತೆಯೊಂದಿಗೆ
ನಾನು ನಿಂತಿರುವುದೇ
ನನ್ನ ಅಸ್ತಿತ್ವದ ಆಧಾರ
ನನ್ನ ಆತ್ಮಬಲದ ಘೋಷಣೆ.
ನಾನು ನಾನಾಗಿದ್ದರೆ,
ನನ್ನ ಕಣ್ಣೀರಿಗೆ ಕಾರಣ ಬೇಕಾಗಿಲ್ಲ,
ನಗುವಿಗೆ ಅನುಮತಿ ಬೇಕಾಗಿಲ್ಲ.
ನಾನು ಬಿದ್ದರೂ,
ಮತ್ತೆ ಏಳುವ ಹಕ್ಕು ನನಗಿದೆ.
ನಾನು ನಾನಾಗಿರುವ ತನಕ,
ನನ್ನ ಜೀವನ ಬಯಕೆ, ಆದರ್ಶ
ಉತ್ತರ ಹುಡುಕುವ ದಾರಿಯೂ
ನನ್ನದೇ ಆಗಿರುತ್ತದೆ.
ಹಾಗಾಗಿ,
ನಾನು ನಾನಾಗದಿರುವ ಲೋಕಕ್ಕಿಂತ
ನಾನು ನಾನಾಗಿರುವ ಭಾವ
ನಿಜವಾದ ಜೀವನವೇ ಸ್ವಾದ
ಡಾ ತಾರಾ ಬಿ ಎನ್ ಧಾರವಾಡ




