ಕಾವ್ಯ ಸಂಗಾತಿ
ರತ್ನರಾಯಮಲ್ಲ
ಗಜಲ್

ಸರಳವೆಂತಾರೆ ಬದುಕು ಸರಳವಲ್ಲ ನೋಡಬೇಕು ಸರಳವಾಗಿ
ಯೋಚನೆಗಳಿಗೆ ಕೊನೆಯಿಲ್ಲ ವಿರಾಮ ನೀಡಬೇಕು ಸರಳವಾಗಿ
ಸುಗಮವಾಗದು ಬುದ್ಧಿವಂತಿಕೆ ಹೃದಯವಂತಿಕೆಗಳ ಸಂಗಮ
ವಾಸ್ತವದಲಿ ಕನಸುಗಳಿಗೆ ರಾಗ ಕಟ್ಟಿ ಹಾಡಬೇಕು ಸರಳವಾಗಿ
ಅವರವರ ವಿಷಯದಲಿ ಸಾಕಷ್ಟಿದೆ ನೋಡಲು ನಮ್ಮ ವಿಷಯದಲಿ
ಇತರರಿಗಿಂತ ಮೊದಲು ನಮ್ಮನ್ನು ನಾವು ಕಾಡಬೇಕು ಸರಳವಾಗಿ
ಜೀವನ ಸಾಕೆನಿಸುವುದಕಿಂತ ಮುಂಚೆ ಬೇಕಾದಂತೆ ಬಾಳಬೇಕು
ಆಸೆಗಳು ಸಾಯಿಸುವ ಮುಂಚೆ ಗೋರಿ ತೋಡಬೇಕು ಸರಳವಾಗಿ
ಗೊಂದಲಗಳಿರುವುದು ದುನಿಯಾದಲಿ ಅಲ್ಲ ನಮ್ಮ ಚಿಂತನೆಗಳಲಿ
ಮಲ್ಲಿಗೆಯ ಸುಮದಂತೆ ವಿಚಾರಗಳನು ಹೂಡಬೇಕು ಸರಳವಾಗಿ
ರತ್ನರಾಯಮಲ್ಲ



