ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
“ಹೂಬೆ ಹೂಬೆ”

ಸೂರು ಕಾಣುವ ಬೆಳಗು
ಎದ್ದು ಕುಳಿತು
ಮುಗಿಲು ಮುಟ್ಟುವ ಹಾಡು
ಮನಸು ಮುಟ್ಟಿ
ಹಂಚಿನ ಮನೆ ಮೇಲೆ
ಚೆಂದ ಬಿಳಿ ಹೊಗೆಯ
ಚಿತ್ತಾರ ಬಿಡಿಸುತ್ತಿತ್ತು
ಊರ ತುದಿ ದಂಡೆಯಲ್ಲಿ
ದೋಣಿ ಸಾಗಿ
ಮಡಿಕೆಯಲ್ಲಿದ್ದ ಸಾರಿನ
ವಾಸನೆ ಊರು ಸುತ್ತುತ್ತಿತ್ತು
ಹಳ್ಳಿಯಲ್ಲಿ ಎಲ್ಲವೂ
ಹೂಬೆ ಹೂಬೆಯಾಗಿ ಕಂಡಂತೆ
ಅರಳಿದ ಹೂ ಮಲ್ಲಿಗೆ
ನೆಟ್ಟ ಕೈಗಳಿಗೆ ನಗು ಚೆಲ್ಲಿ
ನಿಂತಿರಲು ಗಾಳಿ
ತಂಗಾಳಿಯಾಗಿ ತಿರುಗಿ
ಮಿಡಿ ಬಿಟ್ಟ ಮಾವು
ಹೂ ಸೊಬಗು ಚೆಲ್ಲಿ
ಮರದ ಹಕ್ಕಿಗೆ ಹಾಡು
ಸುಮ್ಮನೇ ಹೇಳಿಸಿತ್ತು
ಹೊರೆ ಹೊತ್ತ ಬೆವರು
ಮೊಗ ತುಂಬಿದ ಕನಸು
ಹಸಿ ಭತ್ತದ ಸಸಿ
ತೆನೆ ಹೊತ್ತ ಮೌನ ಸಾಲು
ಎಲ್ಲವೂ ಹೂಬೆ ಹೂಬೆ
ಕಂಡಂತೆ ಈಗಲೂ ಹಳ್ಳಿ
ದಣಪೆಯ ಆಚೆಗಿದ್ದ
ದಾಸಾಳ ಗಿಡಕ್ಕೆ
ಹತ್ತಾರು ಹೂಗಳು
ಬಂದ ಹಕ್ಕಿಗೆ
ಹೂ ನೆರಳ ಕೊಡುವುದಂತೆ
ಅಟ್ಟಲದ ಮರ ಹೂ
ಬಿಟ್ಟಿದೆಯಂತೆ
ಜೇನಿಗೆ ತುಂಬಾ
ಕೆಲಸವಿದೆಯಂತೆ
ಹೂಬೆ ಹೂಬೆ
ಕಾಣುವುದು ಬಳ್ಳಿಯಂತೆ
ಒಂದೆರಡಲ್ಲ
ಹಳ್ಳಿಯ ಬಳ್ಳಿ
ಎಲ್ಲೆಡೆ ಹಬ್ಬಿದಂತೆ
ಊರಿಗೆ ಊರೇ
ಗೆಳೆಯರಾದಂತೆ…….
ನಾಗರಾಜ ಬಿ.ನಾಯ್ಕ.





Nice ….