ಕಾವ್ಯ ಸಂಗಾತಿ
ಸುಮತಿ ನಿರಂಜನ
“ಅಜೀಬ್ ದಾಸ್ತಾಂ ಹೈ ಏ


ಸಂಪಾದಕರ ಸುಗ್ರೀವಾಜ್ಞೆ !
“ಏನೇ ಇರಲಿ ಹೊಸತು ಬರಲಿ
ಏನಾದ್ರೂ ವಿಭಿನ್ನ ಬರೀರ್ರೀ
ಪ್ರಾಸ ಗೀಸದ ಬೆನ್ನಟ್ಟದಿರಿ!”
“ಆದ್ರೆ ಸರ್, ಕಲ್ಪನಾ ವಿಲಾಸ
ಪ್ರಾಸದ್ದೇ ಬೆನ್ನೇರಿ ಬಂದ್ರೆ ?”
“ಏನಾದ್ರೂ ಮಾಡ್ರೀ ಹೋಗ್ರೀ !
ಆದ್ರೆ ಹಳೇ ದಾಸ್ತಾನಿಂದ
ಮಾತ್ರ ತೆಗೀಬೇಡ್ರೀ !”
ಪೆನ್ನು ಪೇಪರು ಹಿಡಿದು ಹೊರಟೆ
ಚಿನ್ನದ ಗಣಿಯೆಲ್ಲಾದರೂ
ಇದೆಯೇನು ಪಕ್ಕ್ದಲ್ಲೇ ?
ಅಗ್ದು ಅಗ್ದು
“ಪುಟ”ಕ್ಕಿಟ್ಟು ಕೊಡ್ಲಿಕ್ಕೆ ?
ಹೋಗ್ಲಿ, ಅಮ್ಮನ
ಅವಳಮ್ಮನ ಒಡವೆ ಮುರಿದು
ಹೊಸ ಡಿಸೈನು ಮಾಡಿಸ್ಲೆ ?
ಯಾಕೋ ಮನಸ್ಸಾಗ್ಲಿಲ್ಲ
ಬರೇ ಆಂಟಿಕ್ ವಾಲ್ಯೂ
ಎಂದಾರು ಸಂ.ಸಾಹೇಬ್ರು !
ಅಥವಾ,
ಪಳ ಪಳ ಹೊಳೆಯುವ
ಹೊಸ ಹೊಸ ಪದಗಳ
ಟಂಕಿಸಿ ಅಂಟಿಸಿ ಪೇಜಿನ ಮೇಲೆ
ಅಂಚೆಗೆ ಹಾಕ್ಲೆ ಈಗ್ಲೆ ?
ಹೊಸ ನಾಣ್ಯ ನಡೆಯೋದಲ್ಲ
ಓಡ್ತಾವೆ ನೋಡಿ, ಮಿಂಟ್ ಫ್ರೆಶ್ !
ಎಂದನಲ್ಲವೇ ಸಂ ಮಹಾಶಯ !
ಆದರೆ…
ಹತ್ರ ಎಲ್ಲೂ ಟಂಕಸಾಲೆನೇ
ಕಾಣಿಸ್ತಿಲ್ವಲ್ರೀ !
ಈಗ ಅದೇನೋ ಬಂದಿದ್ಯಂತಲ್ಲಾ
ಕೃತ್ರಿಮ ಬುದ್ಧಿ ಮತ್ತೆ ಅಂತ ?
ಅದಕ್ಕೇ ಮೊರೆ ಹೋಗ್ಲೇನು ?
“ಅದ್ ಬಂದ್ ಮೇಲೆ
ನಿಮ್ಗ್ ಯಾರ್ರೀ ಹಾಕ್ತಾರ್ರ್ ಸೊಪ್ಪು ?”
ಎಂದಾನು ಮಹಾನುಭಾವ !
ಸರಿ, ನಡಿ ಮತ್ತೆ
ಹಳೆ ಉಗ್ರಾಣಕ್ಕೆ…
ಏನೇನೋ ದಾಸ್ತಾಂ…
ಅಳಿದಿದ್ದು ಉಳಿದಿದ್ದು
ಮುರಿದಿದ್ದು ಮಬ್ಬಾದದ್ದು
ಎದ್ದಿದ್ದು ಅರ್ಧನಿದ್ರೆಲಿದ್ದಿದ್ದು
ಏನೇ ಆಗ್ಲಿ ನಂದೇ ಎಲ್ಲಾ
ಬೇರೆಯವ್ರ್ ದಾಸ್ತಾನಂತೂ ಅಲ್ಲ
ಯಾವ್ದೋ ಒಂದನ್ನೆಬ್ಸಿ
ಉಜ್ಜಿ ತೊಳ್ದು ಒಪ್ಪ ಮಾಡಿ
ಹೊಸ ಇಸ್ತ್ರಿ ಅಂಗಿ ಹಾಕಿ
ಕಳಸ್ತೀನಿ ಮಾರಾಯಂಗೆ
ನಡೀಯತ್ತೋ ಓಡತ್ತೋ
ಎಡವಿ ಬೀಳತ್ತೋ
ನೋಡೇ ಬಿಡಾಣ !
ಸುಮತಿ ನಿರಂಜನ




ಎಡವಿ ಬೀಳ್ಳಿಲ್ಲ ಅಂತಾಯ್ತಲ್ಲ! ಎಷ್ಟಾದರೂ ಒರಿಜಿನಲ್ ಒರಿಜಿನಲ್ಲೇ!!
ಹೊಸತನ್ನೇನಾದ್ರೂ ಬರೆಯಬೇಕೆನ್ನುವಾಗ ಅನೇಕರಲ್ಲಿ ಧುಮ್ಮುಕ್ಕಿ ಬರುವ ವಿಚಾರಗಳನ್ನು ಹಾಸ್ಯ, ವ್ಯಂಗ್ಯ ರೂಪ ಕೊಟ್ಟು ಬರೆದದ್ದು ನಿಮ್ಮದೇ ಆದ ವಿಶೇಷತೆಯನ್ನು ಹೊಂದಿ ಕವನ ರಂಜಿಸಿತು.
ಮೀರಾ ಜೋಶಿ