ಅಂಕಣ ಸಂಗಾತಿ
ಧಾರಾವಾಹಿ ಕಂತು-100
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಅಪಾಯದಲ್ಲಿ ಹೆಣ್ಣುಮಕ್ಕಳು


ಬಡತನ ಇದ್ದರೂ ಮಕ್ಕಳು ಮೊಮ್ಮಕ್ಕಳ ಜೊತೆ ಸುಮತಿ ಸಂತೋಷದಿಂದ ಕಳೆದಳು. ದಿನಗಳು ಉರುಳಿದವು. ಎಂದಿನಂತೆ ಸಕ್ಕರೆ ಕಾಯಿಲೆಗೆ ಇನ್ಸುಲಿನ್ ತೆಗೆದುಕೊಳ್ಳುತ್ತಾ ತನಗೆ ಆಯಾಸವಿದ್ದರೂ ಮಕ್ಕಳಿಗೆ ತೋರಗೊಡದೆ ತಾನು ಲವಲವಿಕೆಯಿಂದ ಇರುವಂತೆ ನಡೆದುಕೊಳ್ಳುತ್ತಿದ್ದಳು. ಎರಡನೇ ಮಗಳು ಪಿಯುಸಿ ಗೆ ಸೇರಿದಾಗಿಂದ ಅಕ್ಕ ತಂಗಿ ಇಬ್ಬರೂ ಸಂಜೆ ಬಸ್ಸಿನಲ್ಲಿ ಮನೆಗೆ ಒಟ್ಟಿಗೆ ಬರುವರು. ಸಂಜೆ 5:30 ಕ್ಕೆ ಸಕಲೇಶಪುರದಿಂದ ಹೊರಡುತ್ತಿದ್ದ ಬಸ್ಸು ಆನೆಮಹಲಿನಿಂದ ಹೆಬ್ಬಸಾಲೆ ಮಾರ್ಗವಾಗಿ ಮೂಡಿಗೆರೆಗೆ ಹೋಗುವ ಕಡಿದಾದ ರಸ್ತೆಯಿಂದ ಕೂಡಿಗೆಯ ಬಳಿ ಮಣ್ಣಿನ ರಸ್ತೆಯಲ್ಲಿ ಸಾಗಿ, ಅವರ ಊರನ್ನು ತಲುಪುವ ವೇಳೆಗೆ ಕತ್ತಲಾಗಿರುತ್ತಿತ್ತು. ಆದರೂ ಇಬ್ಬರೂ ಇದ್ದಾರಲ್ಲ ಎನ್ನುವ ಧೈರ್ಯದಿಂದ ಸುಮತಿ ಮಕ್ಕಳನ್ನು ಕರೆದುಕೊಂಡು ಬರಲು ಹೋಗುತ್ತಿರಲಿಲ್ಲ. ಅದೂ ಅಲ್ಲದೆ ಸುಮತಿಗೆ ಈಗೀಗ ಏಕೋ ನಡೆಯುವಾಗ ಆಯಾಸವಾದಂತೆ ಅನಿಸುತ್ತಿತ್ತು. ಹಾಗಾಗಿ ಮಕ್ಕಳು… “ಅಮ್ಮಾ ನೀನು ಬರಬೇಡ….ನಾವೇ ಬರುತ್ತೇವೆ…. ನಮಗೆ ಪರಿಚಿತ ರಸ್ತೆಯಲ್ಲವೇ ಇದು?…ಅದೂ ಅಲ್ಲದೆ ರಸ್ತೆಯಲ್ಲಿ ಹಾದು ಹೋಗುವವರೆಲ್ಲ ನಮಗೆ ಚಿರಪರಿಚಿತರೇ ಅಲ್ಲವೇ?…. ನೀನು ಸಂಜೆಯವರೆಗೆ ಮಕ್ಕಳಿಗೆ ಪಾಠ ಮಾಡಿ ದಣಿದಿರುತ್ತೀಯ…. ಜೊತೆಗೆ ಅಡುಗೆ ಕೆಲಸವೂ ಇರುತ್ತದೆ… ಇದೆಲ್ಲವೂ ಮುಗಿಯುವ ವೇಳೆಗೆ ನಿನಗೆ ಸಾಕಾಗಿರುತ್ತದೆ₹…. ಎಂದ ಮಕ್ಕಳ ಮಾತಿಗೆ ಸಮ್ಮತಿ ಸೂಚಿಸಿ ಸುಮತಿ ಮನೆಯಲ್ಲೇ ಇರುತ್ತಿದ್ದಳು.
ಹೀಗೆಯೇ ಒಂದು ದಿನ ಅಕ್ಕ ತಂಗಿಯರಿಬ್ಬರೂ ಸಂಜೆಯ ಬಸ್ಸಿಗೆ ಸಕಲೇಶಪುರದ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದರು. ಅಂದೇಕೋ ಬಸ್ಸು ಬರುವುದು ಸ್ವಲ್ಪ ತಡವಾಗಿತ್ತು. ಆ ಬಸ್ಸು ಇವರ ಊರನ್ನಷ್ಟೇ ತಲುಪದೇ ಅಲ್ಲಿಂದ ಮುಂದೆಯೂ ಮೂರ್ನಾಲ್ಕು ಹಳ್ಳಿಗಳಿಗೆ ಹೋಗುತ್ತಿತ್ತು. ಆ ಹಳ್ಳಿಯ ಅನೇಕ ಜನರು ಬಸ್ಸಿನಲ್ಲಿ ಇರುತ್ತಿದ್ದರು. ಅಲ್ಲಿನ ಕೆಲವು ಯುವಕರು ಇವರಿಬ್ಬರನ್ನು ಆಗಾಗ ಚೇಡಿಸುತ್ತಿದ್ದರು. ಅವರಿವರ ಬಳಿ ಅಕ್ಕತಂಗಿಯರಿಬ್ಬರ ಪೂರ್ವಾಪರಗಳನ್ನು ಕೇಳಿ ತಿಳಿದು ಸಂಗ್ರಹಿಸಿಕೊಂಡಿದ್ದರು. ಇವರಿಬ್ಬರೂ ಅದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ದುರುಗುಟ್ಟಿ ನೋಡಿ ಸುಮ್ಮನಾಗುತ್ತಿದ್ದರು. ಎಂದಿನಂತೆಯೇ ಸಂಜೆಯ ಬಸ್ಸು ಜನರಿಂದ ತುಂಬಿತ್ತು. ಬಸ್ಸು ತಡವಾಗಿದ್ದ ಕಾರಣ ರಾತ್ರಿಯ ಬಸ್ಸಿಗೆ ಬರುತ್ತಿದ್ದ ಅನೇಕರು ಆ ಬಸ್ಸನ್ನು ಹತ್ತಿದರು. ಅವರಲ್ಲಿ ಈ ಅಕ್ಕ ತಂಗಿಯರನ್ನು ಸದಾ ಚೇಡಿಸುತ್ತಿದ್ದ ಆ ಇಬ್ಬರು ಯುವಕರೂ ಇದ್ದರು. ಆ ಯುವಕರು ಹೆಚ್ಚಾಗಿ ರಾತ್ರಿ 9 ರ ಬಸ್ಸಿಗೆ ಬರುತ್ತಿದ್ದರು. ಸಂಜೆಯ ಬಸ್ಸು ತಡವಾಗಿ ಎಂಟಕ್ಕೆ ಹೊರಟ ಕಾರಣ ರಾತ್ರಿಯ ಬಸ್ಸು ಇರಲಾರದು ಎಂದು ತಿಳಿದು ಅವರಿಬ್ಬರೂ ಈ ಬಸ್ಸನ್ನು ಹತ್ತಿದರು. ಬಸ್ಸು ಬಂದ ಕೂಡಲೇ ಹತ್ತಿಕೊಂಡಿದ್ದರಿಂದ ಅಕ್ಕತಂಗಿಯರಿಬ್ಬರಿಗೂ ಕಷ್ಟಪಟ್ಟು ಸೀಟು ಹಿಡಿದು ಕುಳಿತಿದ್ದರು. ಆ ಇಬ್ಬರೂ ಯುವಕರೂ ಅಕ್ಕತಂಗಿಯರನ್ನೇ ನೋಡುತ್ತಾ ಏನೋ ಮಾತನಾಡಿಕೊಳ್ಳುತ್ತಿದ್ದರು. ಎಂದಿನಂತೆಯೇ ಇಂದೂ ಎಂದು ಅವರ ಕಡೆಗೆ ಹೆಚ್ಚು ಗಮನವನ್ನು ಕೊಡದೇ ಇಬ್ಬರೂ ತಮ್ಮ ಪಾಡಿಗೆ ಅಂದು ನಡೆದ ವಿಚಾರಗಳ ಬಗ್ಗೆ ಮಾತನಾಡುತ್ತಾ ಕುಳಿತರು.
ಮಾತನಾಡುತ್ತಾ ಕುಳಿತ ಅವರಿಗೆ ಊರು ತಲುಪಿದ್ದೇ ತಿಳಿಯಲಿಲ್ಲ. ಕಂಡಕ್ಟರ್ ಬಸ್ ಸ್ಟಾಪ್ ನ ಹೆಸರು ಕೂಗಿ “ಯಾರೆಲ್ಲಾ ಇಳಿಯುತ್ತೀರಿ ಬೇಗ ಇಳ್ಕೋಳ್ರಪ್ಪೋ…. ಆಗಲೇ ತಡವಾಗಿದೆ…. ಎಂದು ಅವಸರಪಡಿಸಿದಾಗ ಇಬ್ಬರೂ ದಡಪಡಿಸಿ ಎದ್ದರು. ಅವರ ಜೊತೆ ಇಳಿಯಲು ಪ್ರಯಾಣಿಕರು ಇದ್ದ ಕಾರಣ ನಿಧಾನವಾಗಿ ಇಳಿದು ಹಿಂದೆ ತಿರುಗಿ ನೋಡದೆ ಕತ್ತಲಾದರೂ ತಮಗೆ ಚಿರಪರಿಚಿತವಾದ ರಸ್ತೆಯಲ್ಲಿ ಇಬ್ಬರೂ ಕೈ ಕೈ ಹಿಡಿದು ನಡೆದರು. ಅಂದು ಬುಧವಾರವಾದ ಕಾರಣ ಅಂದಿನ ಕೂಲಿ ಪಡೆದು ಮನೆಗೆ ತೆರಳುವ ಕಾರ್ಮಿಕರು ಇದ್ದರು. ಹಾಗಾಗಿ ಯಾವುದೇ ಭಯವಿಲ್ಲದೆ ತೋಟದ ನಡುವಿನ ದಾರಿಯಲ್ಲಿ ಮಾತನಾಡುತ್ತಾ ಮುಂದೆ ಸಾಗಿದರು. ಸಾಮಾನ್ಯವಾಗಿ ದೇವಸ್ಥಾನದ ತಿರುವಿನವರೆಗೂ ದಾರಿಹೋಕರು ಹೆಚ್ಚಾಗಿ ಇರುತ್ತಿದ್ದರು. ತಿರುವು ದಾಟಿ ಅಕ್ಕ-ತಂಗಿರಿಬ್ಬರೂ ಮುಂದೆ ಸಾಗುತ್ತಿರುವಾಗ ಹಿಂದಿನಿಂದ ಯಾರೋ ಟಾರ್ಚ್ ಲೈಟ್ ಅನ್ನು ಬೆಳಗಿಸಿಕೊಂಡು ಬರುತ್ತಿರುವುದು ತಿಳಿಯಿತು. ಆದರೆ ಇವರಿಬ್ಬರೂ ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ತೋಟದ ಕಾರ್ಮಿಕರು ಬುಧವಾರದ ಕೂಲಿ ಪಡೆದು ನಂತರ ಸಾರಾಯಿ ಕುಡಿದು ತೂರಾಡುತ್ತ ಒಬ್ಬೊಬ್ಬರೇ ಬಡಬಡಿಸಿಕೊಂಡು ಬರುವ ದೃಶ್ಯ ಸಾಮಾನ್ಯವಾಗಿತ್ತು. ಟಾರ್ಚ್ ಲೈಟ್ ತಮ್ಮ ಹಿಂದೆಯೇ ತಮ್ಮ ನೇರವಾಗಿ ಬೆಳಗುತ್ತಿರುವುದು ತಿಳಿದರೂ ಹಿಂತಿರುಗಿ ನೋಡಲಿಲ್ಲ. ಓಹ್ ಬಹುಶಃ ನಮಗೂ ರಸ್ತೆ ಕಾಣಲಿ ಎಂದು ಇರಬಹುದು ಎಂದುಕೊಂಡು ಮಾತನಾಡುತ್ತಲೇ ತಿರುವಿನಿಂದ ಮುಂದೆ ಸಾಗಿ ಇಳಿಜಾರು ರಸ್ತೆಯಲ್ಲಿ ನಿಧಾನವಾಗಿ ನಡೆಯುತ್ತಾ ಅಂದಿನ ತರಗತಿಯಲ್ಲಿ ಹೇಳಿಕೊಟ್ಟ ವಿಷಯಗಳ ಬಗ್ಗೆ ತಂಗಿಯು ಅಕ್ಕನಲ್ಲಿ ಹೇಳಿಕೊಳ್ಳುತ್ತಿದ್ದಳು.
ಇಳಿಜಾರಿನ ರಸ್ತೆಯಲ್ಲಿ ಇಳಿದು ತಾವಿರುವ ತೋಟದ ಕಡೆಗೆ ಹೋಗುವ ದಾರಿಗೆ ದನ ಕರುಗಳು ಹಾವಳಿ ತಪ್ಪಿಸಲು ಹಾಗೂ ರಸ್ತೆಯಲ್ಲಿ ಮಳೆಗಾಲದಲ್ಲಿ ಹರಿಯುವ ನೀರನ್ನು ತೋಟಕ್ಕೆ ಹರಿಸಲೆಂದು ಹಳ್ಳವನ್ನು ಮಾಡಿ ಕಬ್ಬಿಣದ ದುಂಡನೆಯ ಪೈಪುಗಳನ್ನು ಸ್ವಲ್ಪ ಅಂತರಗಳಲ್ಲಿ ಅದರ ಮೇಲೆ ಹಾಕಿ, ಪಾದಚಾರಿಗಳಿಗೆ ನಡೆಯಲು ಯೋಗ್ಯವಾಗುವಂತೆ ಪಕ್ಕದಲ್ಲಿಯೇ ಒಂದು ಪುಟ್ಟದಾದ ಗೇಟನ್ನು ಇರಿಸಿದ್ದರು. ಅಕ್ಕ-ತಂಗಿಯರು ಆ ಗೇಟಿನ ಕಡೆಯಿಂದ ಹೋಗುತ್ತಿರಲಿಲ್ಲ. ಅವರಿಗೆ ಗ್ರಿಲ್ ಗಳ ಮೇಲೆ ನಡೆಯುವುದು ಒಂದು ಮೋಜು. ಕತ್ತಲಾದರೂ ದಿನವೂ ನಡೆದು ಅಭ್ಯಾಸವಿರುವುದರಿಂದ ಅನಾಯಾಸವಾಗಿ ಆ ಗ್ರಿಲ್ ಗಳ ಮೇಲೆ ಬ್ಯಾಲೆನ್ಸ್ ಮಾಡಿ ನಡೆಯುತ್ತಿದ್ದರು. ಇನ್ನೇನು ಆ ಗ್ರಿಲ್ ಗಳ ಮೇಲೆ ಕಾಲಿಡಬೇಕು ಎನ್ನುವಾಗ ತಮ್ಮನ್ನೇ ಹಿಂಬಾಲಿಸಿಕೊಂಡು ಬರುತ್ತಿದ್ದ ಟಾರ್ಚ್ ಲೈಟ್ ಆಫ್ ಆಯ್ತು. ಅಕ್ಕತಂಗಿಯರು ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಿಲ್ಲ. ಅವರಿಬ್ಬರ ಹಿಂದೆ ಟಾರ್ಚ್ ಲೈಟ್ ಹಿಡಿದು ಇವರನ್ನು ಹಿಂಬಾಲಿಸುತ್ತಿದ್ದ ಆ ಇಬ್ಬರು ಯುವಕರ ಕಡೆಗೆ ಇವರ ಗಮನವೇ ಹೋಗಿರಲಿಲ್ಲ. ಲೈಟ್ ಆಫ್ ಆಗುವ ಮೊದಲು ಆ ಯುವಕರು ಹಿಂಬದಿಯಿಂದ ಇವರಿಬ್ಬರ ಮೇಲೆ ಲೈಟನ್ನು ಬೆಳಗಿಸುತ್ತಲೇ ಇದ್ದರು. ಇದ್ಯಾವುದೂ ಈ ಹೆಣ್ಣು ಮಕ್ಕಳು ಗಮನಿಸಿರಲಿಲ್ಲ. ಏಕೆಂದರೆ ತಾವು ವಾಸಿಸುವ ತೋಟದ ಸರಹದ್ದಿನಲ್ಲಿ ಅಹಿತಕರ ಘಟನೆಗಳು ನಡೆಯದು ಎನ್ನುವ ಭರವಸೆ ಅವರಿಬ್ಬರಿಗೂ ಇತ್ತು. ಟಾರ್ಚ್ ಲೈಟ್ ಆಫ್ ಆದ ಕೂಡಲೇ ಒಬ್ಬ ಇವರ ಬಳಿ ಸಾಗಿ ಅಕ್ಕನನ್ನು ಹಿಂಬದಿಯಿಂದ ಬಲವಾಗಿ ಹಿಡಿದುಕೊಂಡ. ಜೊತೆಗಿದ್ದವನು….”ಹೇ ಬಿಡಬೇಡ ಕಣೋ ಅವಳನ್ನು ಗಟ್ಟಿಯಾಗಿ ಹಿಡಿದುಕೋ….. ಈ ತೋಟದ ಒಳಗೆ ಅವಳನ್ನು ಎಳೆದುಕೊಂಡು ಹೋಗೋಣ”…. ಎಂದನು.




