ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸದಾ ಕಾಲೇಜು, ಸ್ನೇಹಿತರು, ಪ್ರೀತಿಸಿದ ಹುಡುಗಿ ಎಂದು ಬಿಂದಾಸ್ ಆಗಿ ಓಡಾಡುತ್ತಿದ್ದ ಮೊಮ್ಮಗನನ್ನು ಕಂಡು ಆತನ ಅಜ್ಜಿ ತಾತನಿಗೆ ತುಸು ಹೆಚ್ಚೇ ಬೇಸರವಾಗಿತ್ತು. ಅವರ ಏಕೈಕ ಪುತ್ರ ಮತ್ತು ಸೊಸೆ ಅಪಘಾತದಲ್ಲಿ ತೀರಿಹೋದ ಮೇಲೆ ಇರುವ ಒಬ್ಬ ಮೊಮ್ಮಗನನ್ನು ಅತ್ಯಂತ ಪ್ರೀತಿಯಿಂದ ಜೋಪಾನ ಮಾಡುತ್ತಿದ್ದ ಅವರು ತಮ್ಮ ವೃದ್ಧಾಪ್ಯವನ್ನು ಸಂಪೂರ್ಣವಾಗಿ ಆತನನ್ನು ಬೆಳೆಸುವುದರಲ್ಲಿ ಕಳೆದಿದ್ದರು. ಒಳ್ಳೆಯ ಅಂಕಗಳನ್ನು ಗಳಿಸುವಲ್ಲಿ ಅವನೇನು ಹಿಂದೆ ಬಿದ್ದಿರಲಿಲ್ಲ, ನಿಜ ಆದರೆ ಕಾಲೇಜು ಕಟ್ಟೆ ಹತ್ತಿದ ಮೇಲೆ ಸದಾ ಸ್ನೇಹಿತರ ಹಿಂಡಿನೊಂದಿಗೆ ಅಲೆಯುತ್ತಿದ್ದ ಆತ ಮನೆಗೆ ಬರುವುದು ರಾತ್ರಿ ಮಲಗಲು ಮಾತ್ರ ಎಂಬಂತೆ ಆಗಿದ್ದು ಸದಾ ಆತನ ನಿರೀಕ್ಷೆಯಲ್ಲಿ ಇರುತ್ತಿದ್ದ ಅಜ್ಜಿ ತಾತನಿಗೆ ಇದರಿಂದ ಬೇಸರವಾಗಿತ್ತು. ತಮ್ಮ ಜೀವಿತದ ಬಹುಕಾಲವನ್ನು ಮೊಮ್ಮಗನ ಹಿಂದೆ ಮುಂದೆ ಓಡಾಡಿ ಆತನಿಗೆ ತಾಯಿ, ತಂದೆ ಇಲ್ಲದ ನೋವು ಬಾರದಂತೆ ಸಾಕಿ ಸಲಹಿದ ಅವರಿಗೆ ಇದೀಗ ಮೊಮ್ಮಗ ತಮ್ಮನ್ನು ಕಡೆಗಣಿಸುತ್ತಿದ್ದಾನೆ ಎಂಬ ಭಾವ.

ಅದು ಎರಡನೇ ಪಿಯುಸಿಯ ಕಾಲ. ಕಳೆದ ವರ್ಷ ಅತ್ಯಂತ ಕಡಿಮೆ ಅಂಕಗಳನ್ನು ತೆಗೆದುಕೊಂಡು ಜಸ್ಟ್ ಪಾಸ್ ಆಗಿದ್ದ ಆತನಿಗೆ ಆ ದಿನ ಅಜ್ಜಿ ಮನೆಯಲ್ಲಿಯೇ ಇರಲು ಹೇಳಿದ್ದರು. ಐದು ನಿಮಿಷದಲ್ಲಿ ಬರುತ್ತೇನೆ ಎಂದು ಹೋದವನು ಸ್ನೇಹಿತರ ಜೊತೆಯಲ್ಲಿ ಸಿನಿಮಾ ನೋಡಿ ಹೋಟೆಲಿನಲ್ಲಿ ತಿಂದು ಮನೆಗೆ ಬಂದಾಗ ಸಂಜೆಯ ಆರು ಗಂಟೆ ಆಗಿತ್ತು.

ಮನೆಯ ಕರೆ ಗಂಟೆಯನ್ನು ಆತ ಒತ್ತಿದ ಕೂಡಲೇ ಅಜ್ಜ ಬಾಗಿಲು ತೆರೆದರು. ಇನ್ನೇನು ಆತ ಒಳಗೆ ಬರಬೇಕು ಎನ್ನುವಷ್ಟರಲ್ಲಿ ಅಜ್ಜಿ ಬಾಗಿಲಿಗೆ ಅಡ್ಡಲಾಗಿ ನಿಂತು “ಈ ಮನೆಯಲ್ಲಿ ಇನ್ನು ನಿನಗೆ ಜಾಗವಿಲ್ಲ, ಹೊರಟು ಹೋಗು” ಎಂದು ಹೇಳಿದರು.

ಅಜ್ಜಿಯ ಮಾತುಗಳು ಅರ್ಥವಾದರೂ ಏನೂ ತೋಚದೆ ಆತ ಕಕ್ಕಾಬಿಕ್ಕಿಯಾಗಿ ನಿಂತಿರುವುದನ್ನು ನೋಡಿದ ಅಜ್ಜ ಅಜ್ಜಿಯ ಹೆಗಲ ಮೇಲೆ ಕೈ ಇಟ್ಟು ಆಕೆಗೆ ಸಮಾಧಾನ ಮಾಡಲು ನೋಡಿದರು. ಕೂಡಲೇ ಪತಿಯ ಕೈಯನ್ನು ಕೊಸರಿದ ಆಕೆ ಹಿಂದೆ ಸರಿದು ಆತನಿಗೆ ಈ ಮನೆಯಲ್ಲಿ ಜಾಗ ಇಲ್ಲ…..ಇದೇ ಕೊನೆಯ ಮಾತು ಎಂದು ಹೇಳಿ ಆತನ ಮುಖಕ್ಕೆ ರಾಚುವಂತೆ ಬಾಗಿಲನ್ನು ಹಾಕಿಕೊಂಡು ಒಳಗೆ ಹೊರಟು ಹೋದರು.

ಒಮ್ಮಿಂದೊಮ್ಮೆಲೆ ಎಲ್ಲವನ್ನು ಕಳೆದುಕೊಂಡ ಹತಾಶ ಭಾವ ಮೊಮ್ಮಗನನ್ನು ಆವರಿಸಿತು. ಮುಂದೇನು ಎಂದು ತೋಚದೆ ಇದ್ದರೂ ನಿಧಾನವಾಗಿ ಮನೆಯ ಮೆಟ್ಟಿಲಿಳಿದು ರಸ್ತೆಗೆ ಬಿದ್ದನು. ಹಾಗೆ ನಡೆಯುತ್ತಾ ಮುಂದೆ ಹೋಗುವಾಗ ತಾನು ಕಾಯಂ ಆಗಿ ಸ್ನೇಹಿತರ ಜೊತೆ ಕೂಡುತ್ತಿದ್ದ ದೂರದ ರಸ್ತೆಯಂಚಿನ ಆಲದ ಮರದ ಬಳಿ ಸಾರಿದನು. ನಿಧಾನವಾಗಿ ಕಾಲೆಳೆದುಕೊಂಡು ಹೋಗಿ ಅಲ್ಲಿ ಆತ ಕುಳಿತಾಗ ಆತನ ಒಂದಿಬ್ಬರು ಸ್ನೇಹಿತರು ಮಾತನಾಡುತ್ತಾ ಅಲ್ಲಿಗೆ ಬಂದರು. ಈತನ ಜೋತು ಬಿದ್ದ ಮುಖವನ್ನು ನೋಡಿ ಏನಾಯ್ತು ಬ್ರೋ? ಯಾಕೆ ಹೀಗೆ ಕುಳಿತಿದ್ದೀಯಾ? ಮನೆಯಲ್ಲಿ ಏನಾದರೂ ಪ್ರಾಬ್ಲಮ್ಮಾ? ಎಂದು ಕೇಳಿದರು.

ಕೂಡಲೇ ಯುವಕ “ಅಜ್ಜಿ ನನ್ನನ್ನು ಮನೆಯಿಂದ ಹೊರಗೆ ಹಾಕಿದರು.. ಎಲ್ಲಿ ಹೋಗಬೇಕೆಂದು ನನಗೆ ತೋಚುತ್ತಿಲ್ಲ. ನನಗೆ ಒಂದೆರಡು ದಿನಗಳ ಕಾಲ ನಿಮ್ಮ ಯಾರದಾದರೂ ಮನೆಯಲ್ಲಿ ಇರೋಕೆ ಅವಕಾಶ ಕೊಡ್ತೀರಾ? ಎಂದು ಅವರಿಬ್ಬರನ್ನು ಕೇಳಿದ. ಪರಸ್ಪರ ಮುಖ ನೋಡಿಕೊಂಡ ಅವರಲ್ಲಿ ಒಬ್ಬ ಸ್ನೇಹಿತ ಇಲ್ಲ ಕಣೋ ನಮ್ಮ ಮನೆಯಲ್ಲಿ ಜಾಗ ಸಾಲೋದಿಲ್ಲ… ಅದು ಅಲ್ದೆ ನನ್ನ ಅಪ್ಪ ಅಮ್ಮ ಒಪ್ಪಲ್ಲ ಎಂದು ಹೇಳಿದ. ಮತ್ತೊಬ್ಬ ಆತನ ಮಾತಿಗೆ ಗೋಣು ಹಾಕುತ್ತಾ
“ಸಾರಿ ಕಣೋ ನಮ್ಮನೇಲೂ ಬಹುಶಃ ಇದೇ ಕಥೆ. ಬೆಟರ್ ನೀನು ನಿಮ್ಮ ಅಜ್ಜಿ ಹತ್ರ ಹೋಗಿ ಸಾರಿ ಕೇಳು… ಅವರು ನಿನ್ನನ್ನು ಕ್ಷಮಿಸುತ್ತಾರೆ” ಎಂದು ಈತನ ಮನೆಯ ಹಿನ್ನೆಲೆ ಗೊತ್ತಿದ್ದ ಅವರು ಆತನಿಗೆ ಹೇಳಿದರು.

ಆಯ್ತು ಎಂದು ನಿಟ್ಟುಸಿರಿಟ್ಟ ಆತ ತಾನು ಸದಾ ತನ್ನ ಗರ್ಲ್ ಫ್ರೆಂಡ್ ಜೊತೆ ಕೂಡುತ್ತಿದ್ದ ಕೆಫೆಯತ್ತ ಹೆಜ್ಜೆ ಹಾಕಿದ. ಆತನ ಕರೆಯ ಮೇರೆಗೆ ಅಲ್ಲಿಗೆ ಬಂದಿದ್ದ ಗರ್ಲ್ ಫ್ರೆಂಡ್ ಈತನ ಪೇಲವ ಮುಖವನ್ನು ನೋಡಿ ಏನಾಯಿತು ಎಂದು ಕೇಳಿದಳು.

ಮನೆಯಲ್ಲಿ ನಡೆದ ವಿಷಯವನ್ನು ಆಕೆಗೆ ಹೇಳಿದ ಆತಕೆಲ ದಿನಗಳ ಕಾಲ ನಿನ್ನ ಮನೆಯಲ್ಲಿ ನನ್ನನ್ನು ಇರಿಸಿಕೊಳ್ಳುತ್ತೀಯಾ? ಎಂದು ಕೇಳಿದಾಗ ತುಸು ಗಾಬರಿ ಬಿದ್ದ ಆಕೆ ನನ್ನ ಪಾಲಕರನ್ನು ಕೇಳಿ ಹೇಳುತ್ತೇನೆ ಎಂದು ಹೇಳಿದಳು.

ನಂತರ ಅವರಿಬ್ಬರೂ ಆಕೆಯ ಮನೆಯೆಡೆ ನಡೆದರು. ಆತನನ್ನು ಮನೆಯ ಹೊರಗೆ ಗೇಟ್ ನ ಬಳಿ ನಿಲ್ಲಿಸಿದ ಆಕೆ ಮನೆಯ ಒಳಗೆ ಹೋಗಿ ತನ್ನ ಅಪ್ಪ ಅಮ್ಮನಿಗೆ ವಿಷಯವನ್ನು ತಿಳಿಸಿ ಆತನಿಗೆ ಕೆಲ ದಿನಗಳ ಕಾಲ ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ಕೇಳಿದಳು. ಪಾಲಕರು ಒಪ್ಪಲಿಲ್ಲ. ಆಕೆ ಮನೆಯ ಹೊರಗೆ ಬಂದು ಗೇಟಿನ ಬಳಿ ನಿಂತಿದ್ದ ಯುವಕನಿಗೆ “ಸಾರಿ ಕಣೋ… ನನ್ನ ಅಪ್ಪ ಅಮ್ಮ ಒಪ್ತಾ ಇಲ್ಲ ನಾನು ನಿನಗೆ ಯಾವ ರೀತಿನೂ ಸಹಾಯ ಮಾಡೋಕೆ ಆಗುತ್ತಿಲ್ಲ. ಐ ಯಾಮ್ ರಿಯಲಿ ಸಾರಿ ಏನೂ ತಿಳ್ಕೋಬೇಡ” ಎಂದು ಹೇಳಿದಳು.
ನಿಟ್ಟುಸಿರಿಟ್ಟ ಆತ ನನ್ನ ಪರಿಸ್ಥಿತಿಯೇ ಹಾಗೆ ಇರುವಾಗ ನೀನಾದರೂ ಏನು ಮಾಡ್ತೀಯಾ? ಇರಲಿ ಬಿಡು ಹೊರಡುತ್ತೇನೆ ಎಂದು ಹೇಳಿ ತನ್ನ ಮನೆಯ ಕಡೆ ನಡೆದನು. ಮನೆಗೆ ಹೋಗಲು ಆತನಿಗೆ ಮನಸ್ಸು ಇರಲಿಲ್ಲ ಆದರೆ ಅನಾಯಾಸವಾಗಿ ಆತನ ಕಾಲುಗಳು ಮನೆಯ ಹತ್ತಿರ ಇರುವ ಪಾರ್ಕಿನ ಬಳಿ ಆತನನ್ನು ಕರೆದೊಯ್ದವು. ಪಾರ್ಕಿನ ಕಲ್ಲು ಬೆಂಚೊಂದರ ಮೇಲೆ ಕುಳಿತ ಆತನಿಗೆ ತಾನು ಚಿಕ್ಕಂದಿನಲ್ಲಿ ಅಜ್ಜ ಅಜ್ಜಿಯರ ಜೊತೆ ಈ ಪಾರ್ಕಿಗೆ ಬಂದು ಆಟವಾಡುತ್ತಿದ್ದುದು ಅವರ ಕೈ ಹಿಡಿದು ವಾಕಿಂಗ್ ಮಾಡುತ್ತಿದ್ದುದು, ಕಣ್ಣಾಮುಚ್ಚಾಲೆ ಆಡುತ್ತಿದ್ದುದು ಎಲ್ಲವೂ ಒಂದರ ಹಿಂದೆ ಒಂದರಂತೆ ಮೆರವಣಿಗೆ ಹೊರಟವು. ಮಗ ಮತ್ತು ಸೊಸೆಯನ್ನು ಕಳೆದುಕೊಂಡ ಅಪಾರ ದುಃಖದ ನಡುವೆಯೂ ಅಜ್ಜಿ ತಾತ ತನಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದು ನೆನಪಾಗಿ ದುಃಖ ಒತ್ತರಿಸಿ ಬಂತು. ಜೋರಾಗಿ ಬಿಕ್ಕಿ ಬಿಕ್ಕಿ ಆತ ಅಳುತ್ತಿರುವಾಗ ಹೆಗಲ ಮೇಲೆ ಕೈಯೊಂದು ಬಿತ್ತು. ತಲೆಯೆತ್ತಿ ನೋಡಿದಾಗ ಅಲ್ಲಿ ಅಜ್ಜ ನಿಂತಿದ್ದರು. ಮೊಮ್ಮಗನನ್ನು ಗಟ್ಟಿಯಾಗಿ ತಬ್ಬಿದ ಅಜ್ಜ ಬೇಸರವಾಯಿತೆ ? ಎಂದು ಕೇಳಿದರು. ಇಲ್ಲ ಅಜ್ಜ, ನೀವು ನನಗಾಗಿ ಅದೆಷ್ಟು ಕಷ್ಟಪಟ್ಟಿರಿ… ಆದರೆ ಅದರ ಅರಿವಿಲ್ಲದ ನಾನು ನಿಮ್ಮಿಬ್ಬರ ಮನಸ್ಸನ್ನು ನೋಯಿಸಿದೆ, ಅದನ್ನು ನೆನೆದು ದುಃಖವಾಯಿತು ಎಂದು ಹೇಳಿದಾಗ ಆತನ ಹೆಗಲ ಮೇಲೆ ಮೆಲುವಾಗಿ ತಟ್ಟಿದ ಅಜ್ಜ ನಡೆ ಮನೆಗೆ ಹೋಗೋಣ ಎಂದು ಹೇಳಿದರು.

ಅಯೋಮಯನಾಗಿ ಯುವಕ “ಅಜ್ಜಿ ಬೈತಾರೆ…ನಾನು ಬರಲ್ಲ” ಎಂದು ಹೇಳಿದಾಗ “ಬಾ ಬಾ ನಿನ್ನ ಅಜ್ಜಿ ನಿನಗಿಂತಲೂ ನೋಯುತ್ತಿದ್ದಾಳೆ” ಎಂದು ಹೇಳಿ ಅಜ್ಜ ಆತನ ಕೈ ಹಿಡಿದು ಮನೆಯೆಡೆ ನಡೆದರು. ಅಜ್ಜಿಗೆ ಏಕೆ ನೋವಾಗಿದೆ ಎಂದು ಕುತೂಹಲದಿಂದ ಅಜ್ಜನನ್ನು ಹಿಂಬಾಲಿಸಿದ ಯುವಕ.

ಮನೆಯ ಬಾಗಿಲನ್ನು ತೆಗೆಸಲು ಕರೆಗಂಟೆ ಒತ್ತಲೇ ಬೇಕಾಗಿರಲಿಲ್ಲ. ತೆರೆದ ಬಾಗಿಲ ಮುಂದೆ ಗಲ್ಲಕ್ಕೆ ಕೈಕೊಟ್ಟು ಕುಳಿತ ಅಜ್ಜಿಯ ಮ್ಯಾನವದನ ಮೊಮ್ಮಗನ ಮುಖ ನೋಡುತ್ತಲೇ ನೂರು ಕ್ಯಾಂಡಲ್ ಬಲ್ಬು ಬೆಳಗಿದಂತೆ ಆಯಿತು. ಓಡಿಬಂದು ಮೊಮ್ಮಗನನ್ನು ತಬ್ಬಿದ ಆಕೆ ಎಲ್ಲಿ ಹೋಗಿದ್ದೆ ನೀನು? ಎಂದು ಆಕ್ಷೇಪಿಸಿದಳು.

ತಪ್ಪಾಯ್ತು ಅಜ್ಜಿ! ನನಗೆ ಈಗ ನಿಜವಾಗಿಯೂ ನನ್ನ ತಪ್ಪಿನ ಅರಿವಾಗಿದೆ…. ಹರೆಯದ ಹುಮ್ಮಸ್ಸಿನಲ್ಲಿ ಯಾರು ನನ್ನವರು, ನನಗಾಗಿ ಮಿಡಿಯುವವರು ತಮ್ಮ ಬದುಕಿನ ಸುಖ ಸಂತೋಷಗಳನ್ನು ನನ್ನಲ್ಲಿ ಕಾಣುವರು ಎಂಬುದರ ಅರಿವಿಲ್ಲದೆ ಸ್ನೇಹಿತರು, ಮೋಜು ಮಸ್ತಿಗಳಲ್ಲಿ ಮುಳುಗಿ ನಿಮ್ಮನ್ನು ಕಡೆಗಣಿಸಿಬಿಟ್ಟಿದ್ದೆ.
ಇಂದು ನೀನು ನನ್ನನ್ನು ಮನೆಯಿಂದ ಹೊರಗೆ ಹಾಕದೆ ಹೋಗಿದ್ದರೆ ನನಗೆ ನನ್ನ ತಪ್ಪಿನ ಅರಿವಾಗುತ್ತಿರಲಿಲ್ಲ. ಯಾರು ನನ್ನವರು ಎಂಬುದರ ಅರಿವು ನನಗೀಗ ಆಗಿದೆ. ಇನ್ನು ಮುಂದೆ ಯಾವತ್ತೂ ಇಂತಹ ತಪ್ಪು ಮಾಡುವುದಿಲ್ಲ. ನನ್ನನ್ನು ನೀವಿಬ್ಬರೂ ಕ್ಷಮಿಸಿಬಿಡಿ ಎಂದು ಅವರಿಬ್ಬರ ಕಾಲಿನ ಮೇಲೆ ಬಿದ್ದನು.

ನಿಧಾನವಾಗಿ ಆತನನ್ನು ಮೇಲಕ್ಕೆತ್ತಿದ ಅಜ್ಜಿ “ಕಂದ ಬದುಕಿನಲ್ಲಿ ನಮಗೆ ಸ್ವಾತಂತ್ರ್ಯ ಇರುವಷ್ಟೇ ಜವಾಬ್ದಾರಿಗಳು ಇರುತ್ತವೆ. ಬಹಳಷ್ಟು ಬಾರಿ ಸ್ವಾತಂತ್ರ್ಯವನ್ನು ಅನುಭವಿಸುವುದಕ್ಕಿಂತ ಹೆಚ್ಚು ಜವಾಬ್ದಾರಿಯನ್ನು ನಾವು ಹೊರಬೇಕಾಗುತ್ತದೆ. ಸ್ನೇಹಿತರ ಒಡನಾಟ ತಪ್ಪಲ್ಲ ಆದರೆ ಎಲ್ಲವೂ ಇತಿಮಿತಿಯಲ್ಲಿ ಇರಬೇಕು. ಈ ಪಾಠವನ್ನು ನಿನಗೆ ಕಲಿಸಲೆಂದೇ ನಾನು ನಿನ್ನನ್ನು ಮನೆಯಿಂದ ಹೊರಗೆ ಹಾಕಿದ್ದು. ಆದರೆ ಇದರಿಂದ ನಿನಗೆ ಎಷ್ಟು ದುಃಖವಾಯಿತೋ ಅದರ ಹತ್ತು ಪಟ್ಟು ಹೆಚ್ಚು ದುಃಖ ನನಗಾಗಿದೆ ಎಂದರೆ ನೀನು ನಂಬಲೇಬೇಕು. ನೀನಿಲ್ಲದೆ ನಮಗೆ ಬದುಕೇ ಇಲ್ಲ, ನಿನ್ನ ಸಂತಸದಲ್ಲಿ ನಮ್ಮ ಬದುಕಿನ ಸಾರ್ಥಕತೆ ಅಡಗಿದೆ” ಎಂದು ಅಜ್ಜಿ ಹೇಳಿದಾಗ ಹೌದೆಂಬಂತೆ ಅಜ್ಜ ತಲೆ ಆಡಿಸಿದರು.

ಅಜ್ಜಿಯ ತೊಡೆಯ ಮೇಲೆ ತಲೆ ಆನಿಸಿದ ಮೊಮ್ಮಗ
“ನಾನು ಕೂಡ ಇನ್ನು ಮುಂದೆ ಸರಿಯಾದ ಹಾದಿಯಲ್ಲಿ ಸಾಗುತ್ತೇನೆ ಏನಾದರೂ ತಪ್ಪು ಮಾಡಿದರೆ ಕಿವಿ ಹಿಂಡಿ ಬುದ್ದಿ ಕಲಿಸಲು ನೀವಿಬ್ಬರು ಹಿಂಜರಿಯಬೇಡಿ” ಎಂದು ಹೇಳಿದಾಗ ಎಲ್ಲರೂ ಜೋರಾಗಿ ನಕ್ಕು ಆ ನಗುವಿನ ಮಂಜುಳ ದನಿ ಮನೆಯೆಲ್ಲ ತುಂಬಿತು.

ಎಷ್ಟು ಸುಂದರವಾದ ಕಥೆಯಲ್ಲವೇ ಸ್ನೇಹಿತರೆ! ಎಷ್ಟೋ ಬಾರಿ ಬದುಕಿನ ನಾಗಾಲೋಟದಲ್ಲಿ ಹರೆಯದ ಹುಮ್ಮಸ್ಸಿನಲ್ಲಿ ನಾವು ನಮ್ಮವರನ್ನು ಕಡೆಗಣಿಸಿ ಮುಂದೆ ಸಾಗುತ್ತೇವೆ. ನಮ್ಮ ಬದುಕಿನಲ್ಲಿ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವುದು ನಮ್ಮ ಹೆತ್ತವರು, ಒಡಹುಟ್ಟಿದವರು, ಸಂಗಾತಿ ಮತ್ತು ಮಕ್ಕಳು ಮಾತ್ರ. ಉಳಿದೆಲ್ಲರಿಗೂ ಗೌರವವನ್ನು ನೀಡುವ ನಾವು ಕುಟುಂಬದ ಸದಸ್ಯರನ್ನು ಮಾತ್ರ ಅಸಡ್ಡೆಯಿಂದ ಕಾಣುತ್ತೇವೆ. ಮುಂಜಾನೆ ಮನೆಯನ್ನು ಬಿಟ್ಟು ಅದೆಷ್ಟೆ ಊರು ಸುತ್ತಿ ನಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಅಂತಿಮವಾಗಿ ಮತ್ತೆ ನಾವು ಬರುವುದು ನಮ್ಮ ಮನೆಗೆಯೇ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ನಮ್ಮ ಕುಟುಂಬದ ಸದಸ್ಯರೊಂದಿಗೆ ಮಾತ್ರ. ತಡವಾಗಿಯಾದರೂ ಸರಿ ನಮ್ಮವರು ನಮಗೆ ಬೇಕೇ ಬೇಕು ಎಂಬುದನ್ನು ಅರಿತು ನಾವು ಅವರಿಗೆ ಬೇಕಾಗುವಂತೆ ವರ್ತಿಸುವ, ಅವರೊಂದಿಗೆ ಸೌಹಾರ್ದಯುತವಾಗಿ ಬಾಳುವ ಎಂದು ಆಶಿಸುವ


About The Author

1 thought on ““ಬದುಕಿನ ಬಣ್ಣಗಳ ಅರಿವು” ವೀಣಾ ಹೇಮಂತ್‌ ಗೌಡ ಪಾಟೀಲ್”

  1. Fantastic novel, thank you so much madam, it’s should be published in school books pl continue writing. Good luck

Leave a Reply

You cannot copy content of this page

Scroll to Top