ಅನುವಾದ ಸಂಗಾತಿ
ಬದುಕು ಮೂಟೆ
ತೆಲುಗು ಮೂಲ: ಗಜ್ಜೆಲ ರಾಮಕೃಷ್ಣ
ಕನ್ನಡಕ್ಕೆ: ಕೋಡಿಹಳ್ಳಿ ಮುರಳಿಮೋಹನ್



ಯಾವುದೋ ಜಾತ್ರೆ ಶುರುವಾದಂತೆ,
ದೇವ್ರ ಆಭರಣ ಹೊತ್ತು ತಂದಂತೆ,
ಬೀದಿಲಿ ಸುತ್ತೋ ಮೆರವಣಿಗೆ.
ನೋಡೋಕೆ ಚಿಕ್ಕದೇ, ಆದ್ರೆ
ಮೂಟೆ ಬಿಚ್ಚಿದ್ರೆ,
ಮ್ಯಾಜಿಕ್ ಶೋ ನೋಡಿದಂಗೆ,
ರಾಜ-ರಾಣಿ ಡ್ರೆಸ್ಗಳನ್ನೇನೋ ಪ್ರದರ್ಶನಕ್ಕಿಟ್ಟಂಗೆ.
ಬಾಗಿಲ ತುಂಬಾ ಹರಡಿಕೊಳ್ಳೋ ಬಟ್ಟೆ ಅಂಗಡಿ.
” ಚಿನರಾಯುಡು ಪೆದರಾಯುಡು ಲುಂಗಿ” ಅಂದ್ಬಿಟ್ಟು,
“ರಂಭಾ, ರಮ್ಯಾಕೃಷ್ಣ ಸೀರೆ” ಅಂತಾ ಹೇಳ್ತಾನಲ್ಲ,
ಅವನೆಷ್ಟು ಕನಸುಗಳನ್ನ ಗಂಟಿಗ್ ತುಂಬ್ಕೊಂಡು ಬಂದಿರ್ತಾನೋ!
ಒಂದು ರೇಟ್ ಹೇಳ್ತಾನೆ.
ನಾವು ‘ಬೇಡ’ ಅಂತೀವಿ.
ಅವನೊಂದು ಮಾತು ಹೇಳ್ತಾನೆ.
ನಾವು ಇನ್ನೊಂದು ಮಾತು ಹೇಳ್ತೀವಿ.
ಅವನೊಂದು ಸ್ಟೆಪ್ ಕೆಳಗಿಳಿದು,
ಕೂಲಿ ಸಿಕ್ತು, ವ್ಯಾಪಾರ ಸೆಟ್ ಆಯ್ತು ಅಂದ್ಕೊಂಡು,
ಕಣ್ಣಲ್ಲಿ ನಗ್ತಾನೆ.
ಉದ್ರಿ (ಕಂತು)ಗೂ ಒಪ್ಕೋತಾನೆ.
ಎಷ್ಟು ಹೊತ್ತು ಚೌಕಾಸಿ ಮಾಡಿದ್ರೂ,
ನೆತ್ತಿ ಮೇಲೆ ಬೇಜಾರಿನ ಗೆರೆ ಮೂಡದಂತೆ ನೋಡ್ಕೋತಾನೆ.
ಸೂರ್ಯಕಾಂತಿ ಹೂವಿನ ಹಾಗೆ,
ಈ ಕೇರಿ ಆ ಕೇರಿ ತಿರುಗಿ ಸಾಯಂಕಾಲಕ್ಕೆ,
ಮೂಟೆ ಕೊಡವಿ, ಜೇಬು ತುಂಬಿದ ಖುಷಿನ
ಜೊತೆಗಿಟ್ಕೊಂಡು ಮನೆಗೆ ಹೋಗ್ತಾನೆ.
ಕಾಲ ಸುಮ್ನೆ ಇರೋದಿಲ್ಲ ತಾನೇ?
ಬಲಗೈಲಿ ತಳ್ಳಿದ್ದ ಗಾಳಿನ
ಎಡಗೈಲಿ ವಾಪಸ್ ಕಳ್ಸ್ತಿದೆ.
ಇವನ ಐಡಿಯಾನ ಕಾಪಿ ಮಾಡಿ,
ಬೀದಿ ಮಧ್ಯೆ ತಲೆ ಎತ್ತಿದ ಶಾಪಿಂಗ್ ಮಾಲ್,
ಅವನ ಹೊಟ್ಟೆಗೆ ಹೊಡೀತಾ,
ಬದುಕಿನ ಮೇಲೆ ಪ್ರಳಯ ಡಾನ್ಸ್ ಮಾಡ್ತಿದೆ.
ಆಲಿಕಲ್ಲಿಗೆ ಉದುರಿ ಹೋದ ಭತ್ತದ ಕಾಳಿನ ಹಾಗೆ,
ಎಲ್ಲೋ…
ಕುತ್ತಿಗೆ ಕಟ್ ಆಗ್ತಿದೆ



