ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಎಳ್ಳಮ್ಮಾಸೆ “ ಜನಪದರ ದೇಸಿ ಮಾತಿನಲ್ಲಿ ಕರೆಯಲ್ಪಡುವ ಎಳ್ಳು ಅಮವಾಸೆ ಉತ್ತರ ಕರ್ನಾಟಕದ ರೈತರ ಹಬ್ಬ. “ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು” ಎಂಬ ನುಡಿ ಕೃಷಿಯ ಮಹತ್ವವನ್ನು ಕುರಿತು ಹೇಳುತ್ತದೆ. ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯ ರೈತರ ಹಬ್ಬಗಳನ್ನು ಆಚರಿಸಲಾಗುತ್ತದೆ. ವೈವಿಧ್ಯಮಯವಾಗಿ ವಿಭಿನ್ನ ರೀತಿಯಲ್ಲಿ ರೈತರು ಭೂತಾಯಿಯ ಹಬ್ಬವನ್ನು ಮಾಡುತ್ತಾರೆ. ಇದು ಜನಪದರ ಹಬ್ಬ. ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಈ ಹಬ್ಬ ನಮ್ಮ ಪರಂಪರೆ,ಸಂಸ್ಕೃತಿ, ನೆಲ,ಜಲ ಈ ಎಲ್ಲವುಗಳ ಪ್ರಾತಿನಿಧಿಕ ಆಚರಣೆಯಾಗಿದೆ. ಮಾರ್ಗಶಿರ ಮಾಸದ ಅಂದರೆ ಚಳಿಗಾಲದಲ್ಲಿ ಬರುವ ಅಮಾವಾಸ್ಯೆ ಹೊತ್ತಿಗೆ ರೈತರು ಎಳ್ಳಿನ ಸುಗ್ಗಿ ಮಾಡಿರುತ್ತಾರೆ. ಒಕ್ಕಲು ಮಾಡಿದ ಹೊಸ ಎಳ್ಳಿನ ಪದಾರ್ಥವನ್ನು ಮೊದಲು ಭೂತಾಯಿಗೆ ನೈವೇದ್ಯ ಅರ್ಪಿಸುವುದು ವಾಡಿಕೆ.  ರೈತ ಕುಟುಂಬಗಳ ಒಂದು ದೈವ ನಂಬಿಕೆಯು ಆಗಿದೆ. ಆ ಕಾರಣದಿಂದಲೋ ಎನೊ ಈ ಅಮಾವಾಸ್ಯೆಗೆ ಎಳ್ಳುಅಮಾವಾಸ್ಯೆಯೆಂದು ಹೆಸರು ಬಂದಿರಬಹುದು. ನಾವು ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಹೆಣ್ಣು ಫಲವಂತಿಕೆಯ ಒಡಲು ಹೊತ್ತವಳು. ಹಾಗೆ ಪ್ರಕೃತಿ ಕೂಡ ತನ್ನ ಒಡಲಿನಲ್ಲಿ ಸೃಷ್ಟಿಯನ್ನೇ ಹೊತ್ತವಳು. ಭೂಮಿ ಮತ್ತು ಹೆಣ್ಣು ಸೃಷ್ಟಿಕ್ರಿಯೆಯಲ್ಲಿ ಸಮಾನರು. ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಹೆತ್ತು  ಪಾಲನೆ ಪೋಷಣೆ ಮಾಡಿ ಸಲಹುತ್ತಾಳೆ. ಹಾಗೆ ಭೂಮಿ ಕೂಡ ಈ ಪ್ರಕ್ರಿಯೆಗೆ ಹೊರತಲ್ಲ. ತನ್ನ ಒಡಲಿನಲ್ಲಿ ಅಗಾಧವಾದ  ಬೆಳೆಗಳನ್ನು ತುಂಬಿಕೊಂಡು ಜಗಕೆ ಅನ್ನ ನೀಡುತ್ತಾಳೆ. ಭೂತಾಯಿಯನ್ನು ಹೆಣ್ಣೆಂದು ಭಾವಿಸಿಕೊಂಡು ಗರ್ಭ ಧರಿಸಿದ ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯವನ್ನು ನೆರವೇರಿಸುವ ಹಾಗೆ ಭೂತಾಯಿಗೆ ಕೂಡ ಮಡಿಲು ತುಂಬುವ ಕಾರ್ಯ ಮಾಡುತ್ತಾರೆ. ಮುಂಗಾರಿನಲ್ಲಿ ಸೀಗೆ ಹುಣ್ಣಿಮೆ ಹಿಂಗಾರಿನಲ್ಲಿ ಎಳ್ಳು ಅಮಾವಾಸ್ಯೆಯನ್ನು ಸಾಂಪ್ರದಾಯಿಕವಾಗಿ ಭೂತಾಯಿಯ  (ಸೀಮಂತ ಕಾರ್ಯ)ಶುಭ ಕಾರ್ಯವನ್ನು ಚರಗದ ಹೆಸರಿನಲ್ಲಿ ಮಾಡುತ್ತಾರೆ.
.
ಹಿಂಗಾರು ಬೆಳೆ ಕಾಳು ಕಟ್ಟುವ ಸಮಯದಲ್ಲಿ ( ಜೋಳ ಕಡಲೆ ಇತರೆ ಬೆಳೆಗಳು) ಬರುವ ಎಳ್ಳು ಅಮಾವಾಸ್ಯೆ ರೈತರ ಪಾಲಿಗೆ ವೈಭವದ ಆಚರಣೆ. ಪ್ರಾದೇಶಿಕ ಸೊಗಡಿನಿಂದ ಕೂಡಿದ ವಿಶಿಷ್ಟ ಪೂರ್ಣವಾದ ಒಂದು ಪರ್ವ. ಹಲವು ನಂಬಿಕೆ ಆಶಯಗಳೊಂದಿಗೆ ರೈತರು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ. ಪ್ರಕೃತಿ ಮತ್ತದರ ಸಂಗತಿಗಳನ್ನು ಅತ್ಯಂತ ಭಾವನಾತ್ಮಕ ಮನಸ್ಸಿನಿಂದ ನೋಡುತ್ತಾರೆ. ಒಕ್ಕಲು ಮಕ್ಕಳು ಪರಂಪರಾಗತವಾಗಿ ರೂಢಿಸಿಕೊಂಡು ಬಂದ ವೃತ್ತಿ ಜೀವನದ ಒಂದು ಕ್ರಮವೂ ಹೌದು. ಅನ್ನ ನೀಡುವ ಭೂತಾಯಿಗೆ ಅಪಾರ ಗೌರವ ಪ್ರೀತಿಯನ್ನು ತೋರಿಸುತ್ತಾರೆ. ಭೂತಾಯಿಯ ಸಾಂಗತ್ಯದಲ್ಲಿ ಹತ್ತು ಹಲವು ಬಗೆಯ ಪೂಜಾ ವಿಧಿಗಳನ್ನು ಮಾಡುತ್ತಾರೆ. ಬಿತ್ತುವ ಮುನ್ನ ಕೂರಿಗೆ ಪೂಜೆ ಸಲ್ಲಿಸುವುದಾಗಲಿ , ಬೆಳೆ ಬೆಳೆದು ನಿಂತಾಗ ಚರಗದ ವಿಧಿ, ಮೇಟಿ ಕಂಬಕ್ಕೆ ಹಂತಿ ಹೂಡುವುದಾಗಲಿ, ಕಣದ ಪೂಜೆ ಸಲ್ಲಿಸುವುದಾಗಲಿ, ರಾಶಿಯನ್ನು ಚೀಲಕ್ಕೆ ತುಂಬುವಾಗಿನ ಪೂಜೆಯಾಗಲಿ ಇವೆಲ್ಲವೂ  ಒಕ್ಕಲು ಸಮೃದ್ಧಿಗೆ ಭೂತಾಯಿಯನ್ನು ಬೇಡಿಕೊಳ್ಳುವ ಪರಿಗಳೇ ಆಗಿವೆ. ಇವೆಲ್ಲದರ ಮಧ್ಯೆ ಹಚ್ಚ ಹಸುರಿನ ಬೆಳಗಳ  ಚರಗದ ಸಂಭ್ರಮವಂತು ಮಹಾಪರ್ವದಂತೆ ಕಾಣಿಸುತ್ತದೆ.

ಬೆಳೆ ಬೆಳೆದು ನಿಂತ ಹೊಲದಲ್ಲಿ ಭೂತಾಯಿ ಬಯಕೆ ತೀರಿಸಲು ವಿವಿಧ ರೀತಿಯ ಭಕ್ಷ ಭೋಜನಗಳನ್ನು ತಯಾರಿಸುತ್ತಾರೆ. ಅಮಾವಾಸ್ಯೆಯ ಹಿಂದಿನ ದಿನ ಹೆಣ್ಣು ಮಕ್ಕಳು ರಾತ್ರಿ ಇಡೀ ಅಡುಗೆ ತಯಾರಿಸುವಲ್ಲಿ ನಿರತರಾಗುತ್ತಾರೆ. ಅಕ್ಕಪಕ್ಕದ ಮನೆಯ ಗೆಳತಿಯರು ಕೈಗೂಡಿಸುತ್ತಾರೆ. ಎಳ್ಳು ಶೇಂಗಾ ಬೆಲ್ಲ ಸೇರಿಸಿ ಮಾಡುವ ಹೋಳಿಗೆಗೆ ಅಗ್ರಸ್ಥಾನ. ಎಳ್ಳು ಅಮಾವಾಸ್ಯೆಗೆ ಎಳ್ಳು ಹೋಳಿಗೆ ಅನ್ವರ್ಥಕವಾಗಿರುತ್ತಿತ್ತು. ಹೂರಣದ ಹೋಳಿಗೆ ಕರಿಗಡಬು, ನೀರುಗಿಯಲ್ಲಿ ಬೇಯಿಸಿದ ಜೋಳ ಇಲ್ಲವೆ ಸಜ್ಜೆ ಕಡಬು.ಮೊಸರುಬಾನ,ಅನ್ನ,ಬೇಳೆ ಕಟ್ಟಿನ ಸಾರು (ಹೋಳಿಗೆ ಸಾರು) ನವಣಕ್ಕಿ ಅನ್ನ , ಮ್ಯಾಣದಂತೆ ಮಗುಚಿದ   ಹುಳಿ ಪುಂಡಿ ಪಲ್ಯ ಕುಚ್ಚಿದ ಹಸಿಮೆಣಸಿನಕಾಯಿ ಪಲ್ಯ,  ಚವಳಿ ಕಾಯಿ ಪಲ್ಯ ಐದು ಬಗೆಯ ದ್ವಿದಳ ಧಾನ್ಯಗಳನ್ನು ಕೂಡಿಸಿ ಮಾಡಿದ ಉದುರು ಕಾಳು ಪಲ್ಯ, ತುಂಬು ಬದನೆಕಾಯಿ, ಕೆನೆ ಮೊಸರು, ಕಾರೆಳ್ಳು, ಅಗಸಿಯ ಕಮ್ಮನೆಯ ಹಿಂಡಿ, ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಜೇನಿನಂತ ಕಂಚಿಕಾಯಿ ಉಪ್ಪಿನಕಾಯಿ…. ಲೆಕ್ಕವಿಲ್ಲದಷ್ಟು, ಭೋಜನ ಸಂಗೀತವೆಲ್ಲ, ಚುಮು ಚುಮು ಬೆಳಗಾಗುವುದರೊಳಗೆ ಸಿದ್ಧವಾಗುತ್ತಿತ್ತು.

ಅತ್ತ ಗಂಡಸರು ನಸುಕಿನಲ್ಲೇ ಎದ್ದು ಎತ್ತುಗಳ ಮೈ ತೊಳೆದು ಅವುಗಳ ಮೈಗೆ ಒಂದಿಷ್ಟು ಬಣ್ಣ ಬಳಿದು ಕೋಡುಗಳಿಗೆ ಝೂಲಾವನ್ನು ಮತ್ತು ಬಣ್ಣದ ರಿಬ್ಬನ್ನು ಕಟ್ಟಿ ಅಲಂಕಾರ ಮಾಡುತ್ತಾರೆ. ಬಂಡಿಯನ್ನು ಸ್ವಚ್ಛಗೊಳಿಸಿ ಎತ್ತು ಮತ್ತು ಬಂಡಿಗೆ ಪೂಜೆ ನೆರವೇರಿಸುತ್ತಾರೆ.
ಇತ್ತ ಹೆಣ್ಣು ಮಕ್ಕಳು ಅಡುಗೆ ಕೆಲಸ ಮುಗಿಸಿ ವಿಶೇಷವಾಗಿ ದೇಸಿ ಉಡುಗೆ ತೊಟ್ಟು (ಇಲಕಲ್ ಸೀರೆ ಉಟ್ಟುಕೊಂಡು) ಸಿಂಗಾರವಾಗುತ್ತಾರೆ. ಮಾಡಿದ ಅಡುಗೆಯನ್ನು ಒಂದೂ ಮರೆಯದೆ ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಇಟ್ಟು ಅಡುಗೆ ಬುಟ್ಟಿಯನ್ನು ಪೂಜಿಸಿ ನಂತರ ಬಿಳಿ ಧೋತರದ ಅರಿವೆಯಲ್ಲಿ ಬುಟ್ಟಿಯನ್ನು ಇಟ್ಟು ಗಟ್ಟಿಯಾಗಿ ಕಟ್ಟಿ ಜೋಪಾನವಾಗಿ ತಂದು ಬಂಡಿಯಲ್ಲಿಡುತ್ತಾರೆ. ಮನೆಯ ಎಲ್ಲಾ ಹೆಣ್ಣು ಮಕ್ಕಳು, ಬಂಧು ಬಾಂಧವರು, ಮಕ್ಕಳು ಬಂಡಿಯಲ್ಲಿ ಹೊರಡುತ್ತಾರೆ. ಗುಡ್ಡಗಳ ದಾರಿ ಹಿಡಿದು ಎರೆ ಹೊಲದ ಕಡೆಗೆ ಎತ್ತುಗಳು ದಾರಿ ತುಳಿಯುತ್ತಿದ್ದಂತೆ ದಿಬ್ಬಣದ ವೈಭವದಂತೆ ಕಾಣುತ್ತದೆ.
ಹೊಲದಲ್ಲಿ ದಟ್ಟ ಜೋಳದ ಬೆಳೆಯ ಮಧ್ಯೆ ತೆನೆ ತುಂಬಿದ ಐದು ಜೋಳದ ದಂಟುಗಳನ್ನು ಸೇರಿಸಿ ಕಟ್ಟಿ ಬುಡದಲ್ಲಿ ಐದು ಕಲ್ಲು ಅಥವಾ ಮಣ್ಣಿನ ಹೆಂಟೆಯನ್ನು ಇಟ್ಟು ಪಾಂಡವರ ಪೂಜೆ ಮಾಡುವರು (ಇದು ವನವಾಸದಲ್ಲಿದ್ದ ಪಾಂಡವರು ಕಷ್ಟಪಟ್ಟು ಕೃಷಿಗೈದ ನೆನಪಂತೆ) ಪೂಜೆಯ ನಂತರ ಮಾಡಿದ ಅಡುಗೆಯ ನೈವೇದ್ಯವನ್ನು ಇಡೀ ಹೊಲದ ತುಂಬ ಚರಗ ಚೆಲ್ಲುವ ವಿಧಿಯಾಚರಣೆ ಹುಲ್ಲುಲ್ಲಿಗೋ ……. ಚಲ್ಲಾಂಬರಿಗೋ ಎನ್ನುತ್ತಾ ಎಲ್ಲ ಅಡುಗೆ ಪದಾರ್ಥಗಳನ್ನು ಇಷ್ಟಿಷ್ಟು ಹೊಲದ ತುಂಬ ಚೆಲ್ಲಾಡುತ್ತ ನೀರನ್ನು ಸಿಂಪಡಿಸುತ್ತ ಭೂತಾಯಿ ಬಯಕೆಯನ್ನು ತೀರಿಸುತ್ತಾರೆ . ನಂತರ ಬನ್ನಿ ಗಿಡದ ಬುಡದಲ್ಲಿ ಲಕ್ಷ್ಮಿ ಪೂಜೆ ಮತ್ತು ಬನ್ನಿ ಗಿಡದ ಪೂಜೆ ನಡೆಯುತ್ತದೆ. ಎಲ್ಲ ಪೂಜಾ ವಿಧಿಗಳು ಮುಗಿದ ನಂತರ ಎಲ್ಲರೂ ಊಟಕ್ಕೆ ಕುಳಿತುಕೊಳ್ಳುವರು. ಮಾಡಿದ ಅಡುಗೆಯ ಪದಾರ್ಥಗಳು ತಾಟಿನಲ್ಲಿ (ತಟ್ಟೆ) ಸಾಲಲಾರದಷ್ಟು ಏನೇನು ತಿನ್ನುವುದು ಎಂಬ ಗೊಂದಲವಾಗುತ್ತದೆ. ಊಟದ ನಡುವೆ ಬಾಡಿಸಿಕೊಳ್ಳಲು ಅಲ್ಲೇ ಹೊಲದಲ್ಲಿಯೇ ಇದ್ದ ಹಸಿ ಉಳ್ಳಾಗಡ್ಡಿ, ಮೆಂತ್ಯ ಪಲ್ಯ, ಹತ್ತರಕಿಯನ್ನು ತಂದು ಇಡುವರು. ಹೀಗೆ ಹಿರಿಯರು ಬಂದು ಬಾಂಧವರು ಸ್ನೇಹಿತರು, ಮಕ್ಕಳು ಹರಟುತ್ತ ಸುಖ ದುಃಖ ಮಾತನಾಡುತ್ತಾ ಪರಸ್ಪರರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಂತೋಷದಿಂದ ನಗುನಗುತ್ತ ಊಟ ಮಾಡುತ್ತಾರೆ. ಊಟದ ನಂತರ ಮಕ್ಕಳೆಲ್ಲ ಸುಲಗಾಯಿ ಎಂದರೆ ಹಸಿ ಕಡಲೆಯನ್ನು ತಿನ್ನಲು ಓಡುವರು. ಮನೆಯ ಹೆಣ್ಣು ಮಕ್ಕಳೆಲ್ಲ ಜೋಳದ ಬೆಳೆಯ ಮಧ್ಯೆ ಬೆಳೆದ ಪುಟ್ಟಿ ಹಣ್ಣನ್ನು (ಸೌತೆ ಹಣ್ಣು) ಹುಡುಕಾಡುವ ನೆಪದಲ್ಲಿ ಇಡೀ ಹೊಲವನ್ನೆಲ್ಲ ಸುತ್ತಾಡಿ ಸುಲಗಾಯಿ ಪುಟ್ಟಿ ಹಣ್ಣು ಕಡಗಾಯಿ(ಕಸುಕಾದ ದೊಡ್ಡ ಸೌತೆಕಾಯಿ ಇದನ್ನು ಉಪ್ಪಿನಕಾಯಿ ಹಾಕಲು ಬಳಸುತ್ತಾರೆ) ಇವನ್ನೆಲ್ಲ ಸಂಗ್ರಹಿಸಿಕೊಂಡು ಬರುತ್ತಾರೆ. ಅಷ್ಟೊತ್ತಿಗೆ ಇಳಿ ಹೊತ್ತು.
ಹೊತ್ತು ಜಾರುತ್ತಿದ್ದಂತೆ ಎತ್ತಿನ ಕೊರಳು ಕಟ್ಟುತ್ತಿದ್ದ ಯಜಮಾನನನ್ನ ನೋಡಿ ಎಲ್ಲರೂ ಬಂದು ಬಂಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಚರಗದ ಸಂಭ್ರಮವನ್ನು ಮೆಲುಕು ಹಾಕುತ್ತಾ ಬೆಳೆಯ ಸಮೃದ್ಧಿಯ ನಿರೀಕ್ಷೆಯಲ್ಲಿ ಮತ್ತೊಂದು ಎಳ್ಳು ಅಮಾವಾಸ್ಯೆಯನ್ನು ಎದುರು ನೋಡುತ್ತ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ.


About The Author

Leave a Reply

You cannot copy content of this page

Scroll to Top