ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ-21


ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೧
೦೨.೧೨.೧೯೯೧ ಅಂದು ಸೋಮವಾರ ನನ್ನ ವೃತ್ತಿ ಬದುಕಿನ ನಾಲ್ಕನೆಯ ಹಂತ ಆರಂಭವಾಗುತ್ತಿತ್ತು. ಈ ಹಿಂದೆ ವೃತ್ತಿ ನಿರ್ವಹಿಸಿದ ಚಿಕ್ಕಬಳ್ಳಾಪುರ, ಮಂಡ್ಯ ಹಾಗೂ ನಂಜನಗೂಡು ಇವು ಮೂರೂ ಶಾಖಾ ಕಚೇರಿಗಳು. ಈಗ ನಾನು ಕೆಲಸ ಮಾಡಬೇಕಿದ್ದು ವಿಭಾಗಿಯ ಕಚೇರಿಯಲ್ಲಿ. ಸ್ವಾಭಾವಿಕವಾಗಿಯೇ ಸ್ವಲ್ಪ ಹೊಸ ರೀತಿಯ ಕೆಲಸ ಹೊಸ ಚಾಲೆಂಜ್. ಒಂದು ರೀತಿಯ ಅಳುಕು ಆದರೂ ಹುಮ್ಮಸ್ಸು. ನಾನು ಚಿಕ್ಕಬಳ್ಳಾಪುರದಿಂದ ವರ್ಗವಾಗಿ ಬಂದ ತಕ್ಷಣವೇ ನಮ್ಮ ತಂದೆಗೆ ಟ್ರಿಚಿಗೆ ವರ್ಗವಾಗಿತ್ತು. ನಮ್ಮ ತಾಯಿಗೆ ಆಗಾಗ್ಯೆ ಅಲ್ಲಿಗೆ ಹೋಗಿ ಇರುತ್ತಿದುದರಿಂದ ನನ್ನ ತಂಗಿಯರು ಇಬ್ಬರೇ ಇರಬೇಕೆಂದು ನಾವಿಬ್ಬರು ಬೇರೆ ಮನೆ ಮಾಡದೆ ಅಮ್ಮನ ಮನೆಯಲ್ಲಿ ಇದ್ದೆವು. ಹಾಗಾಗಿ ನಾನು ಮತ್ತು ನನ್ನ ತಂಗಿ ಛಾಯಾ ಒಟ್ಟಿಗೆ ಹೊರಡಬೇಕಿತ್ತು. ಆಗ ಕುವೆಂಪು ನಗರಕ್ ಕೆ ಬ್ಲಾಕ್ ನಿಂದ ಕೇಂದ್ರೀಯ ನಿಲ್ದಾಣಕ್ಕೆ 80ನೇ ನಂಬರ್ ಬಸ್ ಇರುತ್ತಿತ್ತು. 9:30ಗೆ ಸರಿಯಾಗಿ ಒಂದು ಬಸ್ ಇತ್ತು, ಅದರಲ್ಲಿ ಹೋದರೆ 10 ಗಂಟೆ 10 ನಿಮಿಷ ಅಥವಾ 10 ಕಾಲಿಗೆ ಬಸ್ ಸ್ಟಾಂಡ್ ತಲುಪುತ್ತಿತ್ತು ಅಲ್ಲಿಂದ 10 ನಿಮಿಷ ನಡೆದುಕೊಂಡು ಹೋದರೆ ನಮ್ಮ ವಿಭಾಗೀಯ ಕಚೇರಿ ಅಲ್ಲಿಂದ ಚೂರು ಮುಂದೆ ಹೋದರೆ ನನ್ನ ತಂಗಿ ಕೆಲಸ ಮಾಡುತ್ತಿದ್ದ ಶಾಖೆ ಎರಡು. ನಾನು ಮೊದಲು ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾಗ ಅದು ಪೈಲೆಟ್ ಸರ್ಕಲ್ ನಲ್ಲಿ ಇತ್ತು . ಈಗ ಸಬರ್ಬ್ ಬಸ್ಟ್ಯಾಂಡ್ ಎದುರಿಗೆ ಬಂದಿತ್ತು. ವಿಭಾಗೀಯ ಕಚೇರಿಯಿಂದ ಅಲ್ಲಿಗೆ ಐದು ನಿಮಿಷದ ನಡಿಗೆ ಅಷ್ಟೇ. ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಳಿದ ನಂತರ ಆಗ ಕಾಂಪೌಂಡ್ ಇರದ ಟೌನ್ ಹಾಲ್ ಬಯಲಿನಿಂದ ಬಂದು ಗೋವರ್ಧನ್ ಹೋಟೆಲ್ ಕಾಂಪ್ಲೆಕ್ಸ್ ಮುಂದಿನಿಂದ ಬಂದು ರಣಜಿತ್ ಟಾಕೀಸಿನ ಬಳಿ ಎಡಕ್ಕೆ ಹೊರಳಿ ಸ್ವಲ್ಪ ಮುಂದೆ ಬಂದು ನಾನು ಬಲಕ್ಕೆ ತಿರುಗಿ ಕೊಂಡರೆ ಇನ್ನು ಸ್ವಲ್ಪ ಮುಂದೆ ಹೋದರೆ ಶಾಖೆ 2. ಅಲ್ಲಿಂದ ವಿಭಾಗಿಯ ಕಚೇರಿಗೂ ಅಷ್ಟೇ ಚರ್ಚ್ ಒಳಗಿನಿಂದ ಬಂದರೆ ಇನ್ನೂ ಹತ್ತಿರ ಆಗುತ್ತಿತ್ತು.
ನಮ್ಮ ಶಾಖೆ ಇದ್ದದು ಮಧ್ವೇಶ ಕಾಂಪ್ಲೆಕ್ಸ್ ನಲ್ಲಿ. ಈಗ ಅಲ್ಲಿ ರಿಜಿಸ್ಟರ್ ಆಫೀಸ್ ಇದೆ. ಪಕ್ಕದಲ್ಲಿ ಕೆನರಾ ಬ್ಯಾಂಕ್ ವಿಭಾಗ ಕಛೇರಿ. ಅಲ್ಲಿಗೆ ಸಂದರ್ಶನಕ್ಕೆ ಬಂದಿದ್ದು ನೆನಪಾಗುತ್ತಿತ್ತು ಕೆಲಸ ಸಿಕ್ಕಿದರೆ ಅಲ್ಲಿ ಇರಬೇಕಿತ್ತು ಈಗ ಪಕ್ಕದಲ್ಲಿ ಇದ್ದೇನೆ ಎಂದು ಸಮಾಧಾನ ಮಾಡಿಕೊಂಡಿದ್ದೆ. ಅಲ್ಲೇ ಈಗ ಎದುರುಗಡೆ ಕೇಂದ್ರ ಗ್ರಂಥಾಲಯದ ಹೊಸ ಕಟ್ಟಡ ಆಗಿದೆ. ಆಗಲೇ ಆ ಗ್ರಂಥಾಲಯ ಇದ್ದಿದ್ದರೆ ಎಷ್ಟೊಂದು ಪುಸ್ತಕಗಳನ್ನು ತೆಗೆದುಕೊಂಡು ಬಂದು ಓದಬಹುದಿತ್ತು ಎಂದು ಅನ್ನಿಸುತ್ತೆ.
ನಿಗಮಕ್ಕೆ ಸೇರಿದ ನಂತರ ಮೊಟ್ಟ ಮೊದಲ ಬಾರಿಗೆ ಒಬ್ಬಳೇ ಬಂದು ರಿಪೋರ್ಟ್ ಆಗಿದ್ದು. ಮೊದಲಿಗೆ ನಮ್ಮ ಕಾರ್ಮಿಕ ಸಂಘದವರನ್ನು ಭೇಟಿಯಾದದ್ದು. ತರಬೇತಿ ಸಮಯದಲ್ಲಿ ಆಕ್ತಳಾಗಿದ್ದ ನಂದಶ್ರೀ ಸಹಿತ ವಿಭಾಗೀಯ ಕಚೇರಿಗೆ ಬಂದಿದ್ದಳು ಅವಳು ಕಚೇರಿ ಸೇವಾ ವಿಭಾಗದಲ್ಲಿ ಇದ್ದರೆ ನನ್ನದು ಹೊಸ ವ್ಯವಹಾರಗಳ ವಿಭಾಗ ಒಂದೇ ಹಾಲ್ನಲ್ಲಿ ಇದ್ದದ್ದು. ಅದುವರೆಗೆ ಹೊಸ ವಿಭಾಗ ವ್ಯವಹಾರ ವಿಭಾಗದಲ್ಲಿ ಒಬ್ಬರೇ ಸಹಾಯಕರು ರಾಮನ್ ಎನ್ನುವವರು ಇದ್ದಿದ್ದಂತೆ. ಈಗ ಹೊಸದಾಗಿ ನನ್ನನ್ನು ಕೊಟ್ಟಿದ್ದರು. ಒಬ್ಬರು ಸಹಾಯಕ ವಿಭಾಗಾಧಿಕಾರಿಗಳು ಮೊದಲೇ ನಾನು ಹೇಳಿದ ಆಚಾರ್ಯ ಅವರು ಆಡಳಿತ ಅಧಿಕಾರಿ ಎಸ್ಎಂಎಸ್ ಗೋಪಾಲನ್ ಅವರು ಅಲ್ಲಿ ಉನ್ನತ ದರ್ಜೆ ಸಹಾಯಕರಾಗಿ ವಿದ್ಯಾರಣ್ಯ ಎನ್ನುವವರು ಇದ್ದರು ಸಹಾಯಕರು ನಾನು ಮತ್ತು ರಾಮನ್ ಎನ್ನುವವರು. ಪ್ರತಿ ಆಡಳಿತ ವಿಭಾಗಾಧಿಕಾರಿಗಳಿಗೆ ಒಬ್ಬರು ಶೀಘ್ರ ಲಿಪಿಕಾರ್ತಿ ಇರುತ್ತಾರೆ ಆ ವಿಭಾಗದಲ್ಲಿ ಸುವರ್ಣ ಅವರು ಶೀಘ್ರ ಲಿಪಿಗಾತಿ ಆಗಿದ್ದರು. ನಾನು ಹೋದ ಒಂದು ವಾರದಲ್ಲೇ ವಿದ್ಯಾರಣ್ಯ ಅವರು ಸಹಾಯಕ ಆಡಳಿತ ಅಧಿಕಾರಿಯಾಗಿ ಭಡ್ತಿ ಹೊಂದಿ ಬೇರೆ ಊರಿಗೆ ವರ್ಗಾವಣೆ ಹೊಂದಿದ್ದರು. ಅವರ ವಿದಾಯ ಸಮಾರಂಭಕ್ಕೆ ಎಂದು ಹತ್ತಿರದಲ್ಲೇ ಇದ್ದ ಸಂದೇಶ ಹೋಟೆಲಿಗೆ ಹೋಗಿದ್ದೆವು. ಬಾಸುಂದಿ ಮತ್ತು ಮಸಾಲೆ ದೋಸೆ ತೆಗೆದುಕೊಂಡಿದ್ದೆವು. ಅದೇ ಮೊಟ್ಟ ಮೊದಲು ಶಾಖೆ ಗೆ ಸಂಬಂಧಿಸಿದ ಪಾರ್ಟಿ ಅಂತ ಹೋಗಿದ್ದು . ವಿಭಾಗಿಯ ಕಚೇರಿಗಳಲ್ಲಿ ಇಡೀ ಕಛೇರಿಗೆ ಸಂಬಂಧಿಸಿದಂತೆ ವಿದಾಯ ಸಮಾರಂಭ ಅಥವಾ ಔತಣಕೂಟ ಯಾವುದೇ ಇರದೆ ಆಯಾ ವಿಭಾಗಗಳಿಗೆ ಸಂಬಂಧಿಸಿದಂತೆ ಮಾತ್ರ ಇರುತ್ತದೆ ಎನ್ನುವುದು ತಿಳಿಯಿತು.
ಇನ್ನು ಇಲ್ಲಿಯ ಕೆಲಸದ ವೈಖರಿ ಸ್ವಲ್ಪ ವಿಭಿನ್ನ. ಶಾಖೆಗಳಲ್ಲಿ ಹೊಸ ಪಾಲಿಸಿ ಮಾಡಲು ಪ್ರಸ್ತಾವನೆಗಳು ಬರುತ್ತದೆ ಎಂದು ಹೇಳಿದ್ದೆ ಅಲ್ಲವೇ? ಅವುಗಳಲ್ಲಿ ಕೆಲವು ಹೆಚ್ಚಿನ ಮೊತ್ತದ್ದಾಗಿದ್ದು ಮಿತಿಯನ್ನು ಶಾಖೆಯ ಮೀರಿರುತ್ತದೆ .ವಿಭಾಗಾಧಿಕಾರಿಗಳ ಸಹಿ ಬೇಕಾಗಿರುತ್ತದೆ ಇನ್ನು ಕೆಲವುಗಳಲ್ಲಿ ಪಾಲಿಸಿದ್ದಾರರು ಕೆಲವೊಂದು ಕಾಯಿಲೆಗಳಿಂದ ಅಥವಾ ಸಾಮಾನ್ಯಕ್ಕಿಂತ ವಿಭಿನ್ನವಾದ ಪರಿಸ್ಥಿತಿಯಲ್ಲಿ ಇದ್ದರೆ ಶಾಖೆಯ ಮಟ್ಟದಲ್ಲಿ ಅವುಗಳನ್ನು ಪರಿಗಣಿಸಲು ಆಗುವುದಿಲ್ಲ. ಅಂತಹ ಪ್ರಸ್ತಾವನೆಗಳು ಸಹ ವಿಭಾಗೀಯ ಕಚೇರಿಗೆ ಬರುತ್ತದೆ. ಹೀಗೆ ವಿವಿಧ ಶಾಖೆಗಳಿಂದ ಬರುವ ಪ್ರಸ್ತಾವನೆಗಳನ್ನು ಶಾಖಾವಾರು ಒಂದೊಂದು ರಿಜಿಸ್ಟರ್ ನಲ್ಲಿ ಮೊದಲು ಎಂಟ್ರಿ ಮಾಡಬೇಕಿತ್ತು. ಅವುಗಳನ್ನು ಉನ್ನತ ದರ್ಜೆ ಸಹಾಯಕರು ಅಥವಾ ಆಡಳಿತ ಅಧಿಕಾರಿಗಳು ಪರಿಶೀಲಿಸಿ ವಿಭಾಗ ಮಟ್ಟದಲ್ಲಿ ಆಗುತ್ತದೆ ಅಥವಾ ವಲಯ ಮಟ್ಟಕ್ಕೆ ಅಥವಾ ಕೇಂದ್ರ ಕಚೇರಿಗೆ ಕಳಿಸಬೇಕು ಎಂಬುದನ್ನು ನಿರ್ಧಾರ ಮಾಡಿ ಆ ಪ್ರಸ್ತಾವನೆಗಳ ಮೇಲೆ ಬರೆಯುತ್ತಿದ್ದರು.
ಹೆಚ್ಚಿನ ಮೊತ್ತಕ್ಕೆ ಮಾತ್ರ ಸಂಬಂಧಿಸಿದ್ದಾದರೆ ವಿಭಾಗೀಯ ವ್ಯವಸ್ಥಾಪಕರ ಸಹಿ ಆದರೆ ಸಾಕಾಗುತ್ತಿತ್ತು. ಕೆಲವೊಂದು ವೈದ್ಯಕೀಯ ವರದಿಗಳು ಇರುತ್ತಿದ್ದವು ಅವುಗಳನ್ನು ಪರಿಶೀಲಿಸಲು ಡಿಎಂಆರ್
ಅವರ ಬಳಿಗೆ ಕಳುಹಿಸಿ ಅವರ ವರದಿ ಬಂದ ನಂತರ ಮತ್ತಷ್ಟು ವೈದ್ಯಕೀಯ ವರದಿಗಳ ಅಗತ್ಯವಿದೆಯೇ ಅಥವಾ ವರದಿಯ ಆಧಾರದಲ್ಲಿ ಪ್ರಸ್ತಾವನೆ ಪರಿಗಣಿಸಬಹುದೇ ಎಂಬುದು ನಿರ್ಧಾರವಾಗುತ್ತಿತ್ತು ಹೀಗೆ ಆ ಸಮಯದಲ್ಲಿ ಇದ್ದ ಡಿ ಎಂ ಆರ್ ಅವರೇ ಡಾಕ್ಟರ್ ರಾಜಗೋಪಾಲ್. ದಿನದಲ್ಲಿ ಒಂದು ಬಾರಿ ಅಥವಾ ಹೆಚ್ಚು ಪ್ರಸ್ತಾವನೆಗಳು ಇಲ್ಲದಿದ್ದಾಗ ಎರಡು ದಿನಕ್ಕೆ ಒಂದು ಬಾರಿ ಪ್ರಸ್ತಾವನೆ ಹಾಗೂ ವೈದ್ಯಕೀಯ ವರದಿಗಳನ್ನು ಕಳುಹಿಸಿಕೊಡಲಾಗುತ್ತಿತ್ತು ಅವುಗಳನ್ನು ತೆಗೆದುಕೊಂಡು ಹೋಗಲು ಅವರದೇ ಒಬ್ಬ ಸಿಬ್ಬಂದಿ ಬರುತ್ತಿದ್ದರು ಫೋನ್ ಮಾಡಿ ಹೇಳಬೇಕಿತ್ತು.
ಈ ರೀತಿ ಅಂಗೀಕೃತವಾದ ಪ್ರಸ್ತಾವನೆಗಳನ್ನು ಮತ್ತೆ ಶಾಖಾ ಕಚೇರಿಗೆ ವಾಪಸ್ಸು ಕಳುಹಿಸುವುದು. ಮತ್ತೆ ಏನಾದರೂ ವರದಿ ಅಥವಾ ಅಗತ್ಯತೆಗಳು ಇದ್ದರೆ ಶಾಖೆಗಳಿಗೆ ಫೋನ್ ಮಾಡಿ ತರಿಸಿಕೊಳ್ಳುವುದು ಇವೆಲ್ಲ
ನಾವು ಸಹಾಯಕರ ಕೆಲಸ. ಅಲ್ಲದೆ ವಲಯ ಕಛೇರಿ ಕೇಂದ್ರ ಕಚೇರಿಗೆ ಹೋಗಬೇಕಾದ ಫೈಲ್ಗಳನ್ನು ಅದಕ್ಕೆ ಇದ್ದ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಟಪಾಲಿಗೆ ಕಳುಹಿಸುವುದು. ಮತ್ತೆ ಅಲ್ಲಿಂದ ಬಂದ ವರದಿಗಳ ಪ್ರಕಾರ ಶಾಖೆಗೆ ಪತ್ರ ಮುಖೇನ ಅಥವಾ ಫೋನ್ ಮುಖೇನ ತಿಳಿಸುವುದು ಇವು ನಮ್ಮ ಕಾರ್ಯವ್ಯಾಪ್ತಿಗೆ ಬರುತಿತ್ತು.
ಪ್ರತಿ ತಿಂಗಳು ಡಿ ಎಂ ಆರ್ ಅವರಿಗೆ ಕಳುಹಿಸಿದ ಫೈಲುಗಳು ಅವುಗಳಿಗೆ ಸಂಬಂಧಿಸಿದಂತೆ ಕೊಡಬೇಕಾದ ಮೊತ್ತ ಇವುಗಳನ್ನು ಗುರುತು ಹಾಕಿ ಬಿಲ್ ತಯಾರಿಸಿ ಲೆಕ್ಕಪತ್ರ ವಿಭಾಗಕ್ಕೆ ಕಳುಹಿಸಬೇಕಿತ್ತು.
ಅಂಗೀಕೃತವಾದ ಪಾಲಿಸಿಗಳಿಗೆ 9 ಸಂಖ್ಯೆಯ ಪಾಲಿಸಿ ನಂಬರ್ ಗಳನ್ನು ಕೊಡುತ್ತಿದ್ದೆವು. ಶಾಖೆಯಲ್ಲಿ ವಿಭಾಗಿಯ ಕಚೇರಿಯಿಂದ ಒಂದು ಬ್ಲಾಕ್ ನಮಗೆ ಕಳುಹಿಸಿ ಕೊಡುತ್ತಿದ್ದರು. ಅದರ ಪ್ರಕಾರ ನಂಬರ್ ಕೊಡುತ್ತಿದ್ದೆವು. ಇಲ್ಲಿ ವಿಭಾಗಿಯ ಕಚೇರಿಯಲ್ಲಿ ಆ ರೀತಿಯ ಬ್ಲಾಕ್ ಗಳನ್ನು ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಆಯಾ ಶಾಖೆಗೆ ಕೊಟ್ಟಿರುವ ಬಜೆಟ್ ನ ಆಧಾರದ ಮೇಲೆ ಬ್ಲಾಕ್ ಗಳನ್ನು ನೀಡಬೇಕಿತ್ತು.
ಆ ಮಧ್ವೇಷ ಕಾಂಪ್ಲೆಕ್ಸ್ ನ ನೆಲಮಟ್ಟದಲ್ಲಿ ಅಂಗಡಿಗಳು ಹೋಟೆಲ್ ಗಳು ಇದ್ದವು. ಮೂರು ಮಹಡಿಗಳು ಮಹಡಿ ಎರಡೂ ಕಡೆಗಳಿಂದಲೂ ಹತ್ತಬಹುದಿತ್ತು .ಮಧ್ಯ ಒಂದು ವಿಶಾಲವಾದ ಪೋರ್ಟಿಕೋ ತರಹ ಇತ್ತು. ಮೊದಲ ಮಹಡಿ ಹತ್ತಿದ ನಂತರ ಬಲಗಡೆ ಒಂದು ಪೋರ್ಷನ್ ನಲ್ಲಿ ನಮ್ಮದೇ ಗೃಹ ನಿರ್ಮಾಣ ವಿಭಾಗ ಇತ್ತು .ಎಡಗಡೆ ಸ್ಟೇಷನರಿ ಸ್ಟೋರ್ ರೂಮ್ ಇತ್ತು. ಮಿಕ್ಕ ಜಾಗದಲ್ಲಿ ವಿಜಯ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿತ್ತು. ಎರಡನೆಯ ಮಹಡಿಯ ಒಂದು ಭಾಗದಲ್ಲಿ ನಮ್ಮ ಪಿ ಅಂಡ್ ಜಿ ಎಸ್ ಯೂನಿಟ್ ನ ಆಫೀಸ್ ಇತ್ತು. ಮತ್ತೊಂದು ಭಾಗದಲ್ಲಿ ಲೆಕ್ಕಪತ್ರಗಳ ವಿಭಾಗ ಮತ್ತು ಗಣಕಯಂತ್ರ ವಿಭಾಗಗಳು ಇದ್ದವು. ಮೂರನೆಯ ಮಹಡಿಯಲ್ಲಿ ವಿಭಾಗೀಯ ವ್ಯವಸ್ಥಾಪಕರ ಕಚೇರಿ ಕಾರ್ಮಿಕ ಸೇವಾ ವಿಭಾಗ ಕಚೇರಿ ಸೇವಾ ವಿಭಾಗ ಹಾಗೂ ನಮ್ಮ ಹೊಸ ವ್ಯವಹಾರಗಳ ವಿಭಾಗಗಳು ಇದ್ದವು.
ನಾನು ಹೋಗಿ ಕೆಲ ದಿನಗಳಾದ ನಂತರ ಪಿ ಅಂಡ್ ಜಿ ಎಸ್ ವಿಭಾಗವನ್ನು ಶಾಖೆ ಎರಡರ ಕಚೇರಿಗೆ ಸ್ಥಳಾಂತರಿಸಿದರು. ಹಾಗೂ ಅಲ್ಲಿ ತೆರವಾದ ಜಾಗದಲ್ಲಿ ವಿಭಾಗೀಯ ವ್ಯವಸ್ಥಾಪಕರ ಕಚೇರಿ ನಮ್ಮ ಹೊಸ ವ್ಯವಹಾರಗಳ ವಿಭಾಗ ಹಾಗೂ ಪ್ಲಾನಿಂಗ್ ವಿಭಾಗ ಇವುಗಳನ್ನು ಸ್ಥಳಾಂತರಿಸಿದರು .ಅಲ್ಲಿಗಿಂತ ಹೆಚ್ಚು ವಿಶಾಲವಾದ ಜಾಗ ಹಾಗೂ ಕಿಟಕಿಯ ಪಕ್ಕ ಇದ್ದಿದರಿಂದ ಗಾಳಿ ಬೆಳಕುಗಳು ಚೆನ್ನಾಗಿ ಬರುತ್ತಿತ್ತು ಒಂದು ರೀತಿ ಆರಾಮವಾಯಿತು.
ವಿಭಾಗಿಯ ಕಚೇರಿಯ ಗ್ರಂಥಾಲಯವು ಸಹ ನಮ್ಮ ಹೊಸ ವ್ಯವಹಾರ ವಿಭಾಗದ ಪಕ್ಕದಲ್ಲಿಯೇ ಇತ್ತು. ವಿಭಾಗೀಯ ಕಚೇರಿ ಹೊಸದಾಗಿ ಆರಂಭವಾಗಿದ್ದರಿಂದ ಇನ್ನು ಗ್ರಂಥಾಲಯ ಪೂರ್ಣವಾಗಿ ಸಿದ್ಧವಾಗಿರಲಿಲ್ಲ. ನಾವು ಹೋಗುವ ವೇಳೆಗೆ ಪುಸ್ತಕಗಳ ಖರೀದಿಗಳೆಲ್ಲ ನಡೆದು ಪುಸ್ತಕಗಳನ್ನು ಜೋಡಿಸಿಟ್ಟು ವಿತರಣೆ ಆರಂಭವಾಯಿತು. ಪ್ರತಿ ಗುರುವಾರ ಬೆಳಗಿನ ಸೆಷನ್ನನಲ್ಲಿ ಅಲ್ಲದ್ದ ಚೀಟಿಗಳಲ್ಲಿ ಬೇಕಾದ ಪುಸ್ತಕ ಆಯ್ಕೆ ಮಾಡಿ ಬರೆದಿಟ್ಟರೆ ೪_೩೦ ಕ್ಕೆ ಹೋಗಿ ಸಹಿ ಹಾಕಿ ತೆಗೆದುಕೊಳ್ಳಬೇಕಿತ್ತು. ತುಂಬಾ ಉತ್ತಮ ಪುಸ್ತಕಗಳು ಕನ್ನಡದಲ್ಲಿ ಅನೇಕವನ್ನು ಓದಿಯಾಗಿತ್ತು .ಆದರೂ ಮತ್ತೊಂದು ಓದು ಪ್ರಾರಂಭವಾಯಿತು ಇಂಗ್ಲಿಷ್ ಪುಸ್ತಕಗಳು ಸಹ ತುಂಬಾ ಇದ್ದವು ಇದುವರೆಗೆ ಹೆಚ್ಚು ಇಂಗ್ಲೀಷ್ ಪುಸ್ತಕಗಳನ್ನು ಓದದಿದ್ದ ನಾನು ರಾಬಿನ್ ಕುಕ್, ಆರ್ಥರ್ ಹ್ಯಾಲಿ ಜೆಫ್ರಿ ಆರ್ಚರ್ ಹೆರಾಲ್ಡ್ ರಾಬಿನ್ಸ್ ಸಿಢ್ನಿ ಷಡಲ್ಡಾನ್ ಇವರೆಲ್ಲರನ್ನು ಓದಲು ಆರಂಭಿಸಿದ್ದು ಆಗಲೇ. ಈಗ ಮತ್ತೆ ಫೇಸ್ಬುಕ್ ಮೂಲಕ ಸಂಪರ್ಕದಲ್ಲಿರುವ ಶ್ರೀನಾಗೇಶ್ ಅವರು ಆಗ ಅಲ್ಲಿ ಸಹಾಯಕ ಆಡಳಿತ ಅಧಿಕಾರಿಗಳಾಗಿದ್ದರು. ಎಷ್ಟೋ ಒಳ್ಳೆಯ ಪುಸ್ತಕಗಳನ್ನು ನನಗೆ ಓದಲು ಮಾರ್ಗದರ್ಶನ ಮಾಡಿದವರು ಅವರೇ. ಅಷ್ಟೇ ಅಲ್ಲದೆ ಆಗಾಗ ಓದಿದ ಪುಸ್ತಕಗಳ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದವು. ಶಾಖಾ ಕಚೇರಿಯಂತೆ ಇಲ್ಲಿಯೂ ಮನರಂಜನಾ ಕ್ಲಬ್ ಇದ್ದು ನಿಯತಕಾಲಿಕೆಗಳು ಬರುತ್ತಿದ್ದವು.. ಇಂಗ್ಲಿಷಿನ ವುಮನ್ಸ್ ಎರಾ ಫೆಮೀನಾಗಳು ಸಹ ಇಲ್ಲಿ ಸಿಗುತ್ತಿದ್ದು ವಿಶೇಷ . ಅಷ್ಟೇ ಅಲ್ಲದೆ ಹಿಂದಿ ವಿಭಾಗ ಇಲ್ಲೇ ಇದ್ದುದರಿಂದ ಹಿಂದಿ ಗೃಹ ಶೋಭಾ ಸಹಿತ ಸಿಗುತ್ತಿತ್ತು. ಅಚ್ಚುಕಟ್ಟಾಗಿ ಹಿಂದಿನ ಸಂಚಿಕೆಗಳನ್ನು ಸಹ ಜೋಡಿಸಿ ಇಟ್ಟಿರುತ್ತಿದ್ದುದರಿಂದ ಅವೆಲ್ಲವುಗಳನ್ನು ತೆಗೆದುಕೊಂಡು ಹೋಗಿ ಓದುತ್ತಿದ್ದೆ ಆಗ ಹಿಂದಿ ಗೃಹ ಶೋಭಾ ದಲ್ಲಿ ಸ್ವೆಟರ್ ನಿಟಿಂಗ್ ನ ವಿಶೇಷ ಸಂಚಿಕೆಗಳು ಬರುತ್ತಿದ್ದು ಅನೇಕ ವಿನ್ಯಾಸಗಳು ಸಿಗುತ್ತಿದ್ದವು. ಅವುಗಳನ್ನು ಜೆರಾಕ್ಸ್ ಮಾಡಿ ಈಗಲೂ ಇಟ್ಟುಕೊಂಡಿದ್ದೇನೆ.
ಸಂಜೆ ಆಫೀಸು ಮುಗಿದ ನಂತರವೂ ಕೇಂದ್ರ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದೆವು. ಹೆಚ್ಚು ಕಡಿಮೆ ಅದೇ ಸಮಯಕ್ಕೆ ಶಾಖೆ 2 ರಿಂದ ನನ್ನ ತಂಗಿಯೂ ಬಂದಿರುತ್ತಿದಳು.ಅವಳಿಗೆ ಅಲ್ಲಿ ವಿಕ್ರಯ ವಿಭಾಗ ಕೊಟ್ಟಿದ್ದರು. ಮತ್ತೆ 80ನೇ ನಂಬರ್ ಬಸ್ ಹಿಡಿದು ಮನೆಗೆ ಹೋಗುವುದು. ಆಗೆಲ್ಲಾ ಹೆಚ್ಚಿನ ಸಂಖ್ಯೆಯ ಬಸ್ ಗಳು ಇಲ್ಲದಿದ್ದುದರಿಂದ ಮತ್ತು ಎಲ್ಲರ ಬಳಿ ವಾಹನಗಳೂ ಇಲ್ಲದಿದುದರಿಂದ ತುಂಬಾ ರಷ್ಇರುತ್ತಿತ್ತು. ವಿವೇಕಾನಂದ ನಗರದಿಂದ ಹೊರಡುತ್ತಿದ್ದ ಬಸ್ ನಮ್ಮ ಸ್ಟಾಪ್ ಗೆ ಬರುವ ವೇಳೆಗೆ ಸೀಟ್ಗಳು ಇರಲಿ ನಿಲ್ಲಲು ಸರಿಯಾಗಿ ಜಾಗ ಸಿಕ್ಕಿದರೆ ಪುಣ್ಯ ಎನ್ನುವಂತಿತ್ತು. ಬರುವಾಗ ಮಾತ್ರ ಬಸ್ ಖಾಲಿ ಇರುತ್ತಿದ್ದರಿಂದ ಕೆಲವೊಮ್ಮೆ ಸೀಟ್ ಸಿಗುತ್ತಿತ್ತು.
ಅಷ್ಟೆಲ್ಲ ಶ್ರಮ ಇದ್ದರು ಆಗ ಚಿಕ್ಕವಯಸಾದುದರಿಂದಲೋ ಏನೋ ಉತ್ಸಾಹ ತಗ್ಗಿರಲಿಲ್ಲ. ಅಷ್ಟೊಂದು ಸುಸ್ತು ಬಳಲಿಕೆಗಳು ಇರುತ್ತಿರಲಿಲ್ಲ .ಈಗ ಕಾರ್ ನಲ್ಲಿ ಹೋಗಿ ಬಂದರು ಸಹ ಬಂದೊಡನೆ ಉಸ್ಸಪ್ಪಾ ಅಂತ ಕುಳಿತರೆ ಸಾಕಪ್ಪ ಎನಿಸುವಂತೆ ಇರುತ್ತದೆ. ಕಾಲಾಯ ತಸ್ಮೈ ನಮಃ ಎನ್ನಲೇ ಬೇಕು.(ಮುಂದುಬರೆಯುವುದು)
ಸುಜಾತಾ ರವೀಶ್

೯



