ಪುಸ್ತಕ ಸಂಗಾತಿ
ವಿಜಯನಾಗ್ ಜಿ.
“ಜಪಾನಿನ ಸಾಹಿತ್ಯ ಚರಿತ್ರೆ”



ಆರ್. ದಿಲೀಪ್ ಕುಮಾರ್
ಪ್ರಿಯ ವಿಜಯ್
ನೀವು ಶ್ರದ್ಧೆ ಶ್ರಮಗಳಿಂದ ಅಧ್ಯಯನ ನಡೆಸಿ ರಚಿಸಿರುವ ‘ಜಪಾನಿನ ಸಾಹಿತ್ಯ ಚರಿತ್ರೆ’ ಕೃತಿಯನ್ನು ಓದಿದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ನೆಲ, ಭಾಷೆ, ಸಾಹಿತ್ಯ ಕೃತಿಗಳ ಬಗೆಗೆ ಅಭಿಮಾನದಷ್ಟೇ, ಒಂದು ಅಂತರವನ್ನು ಕಾಯ್ದುಕೊಂಡು ರಚಿಸಬೇಕೆನ್ನುವ ಪರಂಪರೆಯನ್ನು ಒಪ್ಪುವವರು ಮಾತ್ರ ಹೀಗೆ ಬರೆಯಲು ಸಾಧ್ಯ.
ಒಂದು ಅಂತರವನ್ನು ಕಾಯ್ದುಕೊಳ್ಳದೆ ಚರಿತ್ರೆಯನ್ನು ದಾಖಲಿಸುವ ಕೆಲಸವು ಸದ್ಯದಲ್ಲಿ ಕೆಡುಕಿನ ಬೀಜಗಳನ್ನು ಬಿತ್ತುತ್ತದೆ. ಅಂತರ ಕಾಯ್ದಕೊಳ್ಳದ ಚರಿತ್ರೆಯ ದಾಖಲೀಕರಣ ಪ್ರಕ್ರಿಯೆಯು ಅಕ್ಷರವಂತರು ಬದುಕುತ್ತಿರುವ ಸಮಾಜಕ್ಕೆ ಕೊಡುವ ಕೆಟ್ಟ ಕೊಡುಗೆಯಾಗುತ್ತದೆ. ಎಂದು ಬಲವಾಗಿ ನಂಬಿರುವ ನಿಮ್ಮಂತಹವರು ಸಾಹಿತ್ಯ ಚರಿತ್ರೆಯನ್ನು, ಅದು ನಿರ್ಮಾಣವಾಗಲು ಬುನಾದಿಯಾದ ಭೌಗೋಳಿಕ, ರಾಜಕೀಯ, ಭಾಷಿಕ ಪರಿಸರಗಳನ್ನು ಹೀಗೆ ಕಟ್ಟಿಕೊಟ್ಟಿರುವುದು ಯಥೋಚಿತವಾಗಿದೆ.
ಬುದ್ಧ ಗುರುವಿನ ಆದಿಯಾಗಿ ಮನುಜಕುಲದೊಳಗಿನ ಕೆಡುಕಿನ ಬೇರನ್ನು ಕತ್ತರಿಸುವ, ಕತ್ತರಿಸಿ ಆ ಬೇರನ್ನು ಸೂರ್ಯನ ಬಿಸಿಲಿಗೆ ಎತ್ತಿ ಹಿಡಿದು ಮತ್ತೆಂದೂ ಚಿಗುರದಂತೆ ಮಾಡುವ ಕೆಲಸವನ್ನು ಮಾಡಿದ್ದಾರೆಂದು ಹೇಳುವ ನಾವು, ಬದಲಾಗುತ್ತಿಲ್ಲವೆಂಬುದಕ್ಕೆ ಸದ್ಯದಲ್ಲಿ ಸಾಕ್ಷಿಯಾಗಿ ನಡೆ, ನುಡಿಗಳ ಹೆಜ್ಜೆಗುರುತುಗಳನ್ನು ಬಿಡುತ್ತಲೇ ಇದ್ದೇವೆ. ಆ ಕಾರಣದಿಂದ ಸದ್ಯದ ನಮ್ಮ ಬದುಕು ‘ನರನ ದುರಿತಾಂಕುರದ ಬೇರಿನ ಬೇಗೆ’ ಎಂದು ಕುಮಾರವ್ಯಾಸ ಹೇಳುತ್ತಾನಲ್ಲ, ಆ ಬೇಗೆಯನ್ನು ಸಂತಸವಾಗಿಟ್ಟುಕೊಂಡು ನಡೆಸುತ್ತಿರುವ ‘ಅನುದಿನದ ದಂದುಗ’ ಅನಿಸುತ್ತಿದೆ. ಇದು ಬದಲಾಗಬೇಕೆಂದರೆ ಚರಿತ್ರೆಯನ್ನು ಮಮಕಾರವಿಲ್ಲದೆ ಓದುವ, ಅರ್ಥೈಸಿಕೊಳ್ಳುವ ಮತ್ತೆಂದೂ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಹೆಜ್ಜೆಗಳನು ಇಡುವ ಕೆಲಸವನ್ನು ಮಾಡಬೇಕೆಂದು ಈ ಕೃತಿಯನ್ನು ಓದಿದೊಡನೆಯೆ ಮನಸ್ಸಿಗೆ ಬಂತು.
ಜಪಾನಿನ ನೆಲ ಕೆಡುಕಿನ ಫಲವನ್ನು ಉಂಡಿರುವ ಚರಿತ್ರೆಯನ್ನು ಓದಿದರೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಆಗುತ್ತದೆ. ಅಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗೆಗೆ ಅಧ್ಯಯನದಿಂದ ಅಪಾರವಾದ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡಿರುವ ನಿಮ್ಮಂತಹವರು ಮಾತ್ರ ಸಿಟ್ಟು, ಸೆಡವುಗಳಿಗೆ ಅವಕಾಶವನ್ನು ಕೊಡದೆ, “ಹಿಂದೆ ನಡೆದ ಘಟನೆಯಿದು, ನೋಡಿ” ಎಂದು ದಾಖಲಿಸುವಾಗ ನಿಲ್ಲುವ ನಿರ್ಮಮಕಾರದ ಸ್ಥಿತಿಯನ್ನು ಕಂಡರೆ ಬೆರಗಾಗುತ್ತದೆ. ಜಪಾನಿನ ನೆಲದಲಿ ಕೆಡುಕಿನ ಕಲೆಗಳನು ಬರೆದವರು ಇಂದು ಜಾಗತಿಕ ಮಟ್ಟದಲ್ಲಿ ಬಲು ಎತ್ತರದಲ್ಲಿ ನಿಂತು ಸಬಲರೆಂದು ಬೀಗಬಹುದು, ಆದರೆ ಚರಿತ್ರೆಯ ಅಧ್ಯಯನ ಅವರು ಬಿದ್ದಿರುವ ಪಾತಾಳವನ್ನು ಕಾಣಿಸುತ್ತಿದೆ. ಆ ದಿನ ಒಂದಷ್ಟು ಕ್ಷಣಗಳು ಕೆಡುಕನ್ನು ಹಿಡಿದು ತಡೆದು ನಿಲ್ಲಿಸಿದ್ದಿದ್ದರೆ ಕಾಲಕ್ಕೊಂದು ಘನತೆ – ಗೌರವಗಳು ಇರುತ್ತಿತ್ತೆಂದು ಅನಿಸುತ್ತದೆ. ಚಿಟ್ಟೆಯೊಂದು ಥಟ್ಟನೆ ಹಾರಿದಷ್ಟು ಕ್ಷಣದಲ್ಲಿ ಎಲ್ಲವೂ ನಡೆದು ಹೋಗಿದೆ. ಅದರ ಚಹರೆಗಳು ಇಂದಿಗೂ ಅಲ್ಲಿ ಉಳಿದಿದೆ.
ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೆ ನೀವು ಮಾಡುತ್ತಿರುವ ಕೆಲಸ ನನ್ನಂತಹ ನೂರಾರು ಜನರಿಗೆ ಸಂತಸವನ್ನು ತಂದಿದೆ. ಭಾರತೀಯ ಮತ್ತು ಭಾರತದಿಂದ ಹೊರಗಿನ ಭಾಷೆಗಳ ಅಧ್ಯಯನ ನಡೆಸುವ, ಅನುವಾದವನ್ನೂ ಮಾಡುವ ನಿಮ್ಮನ್ನು ಕಂಡರೆ ವ್ರತ ಹಿಡಿದವರ ಹಾಗೆ ಕಾಣಿಸುತ್ತೀರಿ. ಸೃಜನಶೀಲ ಕೃತಿಗಳನ್ನು ವೇಗವಾಗಿ ನೀವು ಕನ್ನಡಕ್ಕೆ ತರುತ್ತಿರುವುದನ್ನು ಕಂಡರೆ ಸಂತಸದ ಜೊತೆಗೆ ಅಸೂಯೆ ಹುಟ್ಟುತ್ತದೆ. ನನ್ನಿಂದ ಅನುವಾದ ಮಾಡಲಾಗುತ್ತಿಲ್ಲವಲ್ಲ ಎಂದು. ನಿಮ್ಮ ಅನುವಾದದ ಕೆಲಸ ಭರದಿಂದ ಸಾಗಲಿ ಎಂದು ಹಾರೈಸುವೆ.
ಸಸ್ನೇಹಪೂರ್ವಕವಾಗಿ
ಆರ್. ದಿಲೀಪ್ ಕುಮಾರ್




