ಲಹರಿ

ಜೀವನ ಅನ್ನೋ ಸೈಕಲ್

ಶಂಭುಗೌಡ ಆರ್.ಜಿ.

ಹುಟ್ಟೆಂಬುದ ಹುಟ್ಟಿದಾಗಿಂದ ಜೀವನ ಅನ್ನೋ ಸೈಕಲ್ ಹತ್ತಿ ಪೆಟಲ್ ತುಳ್ದಿದ್ದೋ ತುಳಿದಿದ್ದು…ಮಾರ್ಗ ಮಧ್ಯದಲ್ಲಿ ಹೆಸರಿಲ್ಲದ ಕಾಣದ ಕೈ ಒಂದು ಬೀಸಾಕಿದ ಬಿಕನಾಸಿ ಮುಳ್ಳು ಅಂಟಿಲ್ಲದಿದ್ದರೂ ಅಂಟ್ಕೊಂಡು ಪಂಚರ್ ಆಗಿ ಪಂಚರಂಗಿ ಟೈಟಲ್ ಇರೋ ಪಂಚರ್ ಅಂಗಡಿಯವರೆಗೂ ನಟರಾಜ ಸರ್ವಿಸ್ ನಲ್ಲಿ ನಡೆದು ರಿಪೇರಿ ಮಾಡಿಸಿ ಮತ್ತದೇ ಸೈಕಲ್ ಹತ್ತಿ ಕಾಣದ ಕನಸುಗಳ ಮೂಟೆಗಳನ್ನ ಹೊತ್ತು ಮತ್ತದೇ ಹೆಸರಿಲ್ಲದ ನನಸಿನ ನಗರಿಯತ್ತ ಪಯಣ ಶುರು.ಮಾರ್ಗ ಮಧ್ಯದಲ್ಲಿ ಬೇಟಿಯಾಗೋ ಅಪರಿಚಿತ ಮುಖಗಳನ್ನ ಪರಿಚಯಕ್ಕೂ ಪರಿಚಿತರಾದಾಗ ಸ್ನೇಹಿತರು ಅನ್ನೋ ಹಣೆಪಟ್ಟಿ ಕೊಟ್ಟು ಮಾಡಬೇಕಾಗಿರೋ ಕ್ಯಾಮೆಗಳಿಗೆಲ್ಲ ಸಾತ್ ಕೊಡ್ತಾ ಬಿಟ್ಟಿ ಬಿಕನಾಸಿ ಕನಸುಗಳಿಗೆಲ್ಲ ನನಸಿನ ಬಣ್ಣ ಹಚ್ಚೋ ಜಿದ್ದಿಗೆ ಬಿದ್ದು ನಾನ್ ಸ್ಟಾಪ್ ಜರ್ನಿ ಬೆನ್ನತ್ತಿ ರೂಲ್ಸ್ ಗಳಿರೋದೆ ಬ್ರೇಕ್ ಮಾಡೋಕೆ ಅನ್ನೋ ಮಾಡರ್ನ್ ಗಾಧೆಯನ್ನ ಜಪಿಸ್ತಾ ಸಿಗ್ನಲ್ ಜಂಪ್ ಮಾಡಿ ಗಾಡ್ ಅನ್ನೋ ಟ್ರಾಪಿಕ್ ಪೋಲಿಸ್ ಹತ್ರ ಸಿಕ್ ಹಾಕೊಂಡಾಗ ಹಿಂದಿರುಗಿ ನೋಡಿದ್ರೆ ಜೊತೆಗಿದ್ದವರು ಅಡ್ರಸ್ ಇಲ್ಲದಂಗೆ ಮಾಯಬಜಾರ್ ಅತ್ತ ಮುಖ ಮಾಡಿ ಮಾಯ ಆಗಿರ್ತಾರೆ. ಕಾಲಿಯಾಗಿರೋ ನಮ್ ಹಣೆ ಮೇಲೆ ಹೆಸರಿಲ್ಲದವ ಗೀಚಿ ಹೋದದ್ದು ಇದೇ ಇರಬಹುದೇನೋ ಅಂದ್ಕೊಂಡು ಜೇಬಲ್ಲಿದ್ದಷ್ಟು ಪೈನ್ ಕಟ್ಟಿ ಶಾತಂ ಪಾಪಂ ಅಂತ ನಮಗ ನಾವೇ ಕೆನ್ನೆಗೆ ಹೊಡೆಕೊಂಡು ತಿರುಗಿ ಬಂದು ಮತ್ತದೇ ಸೈಕಲ್ ಹತ್ತುವಾಗಲೇ ನಾವೆಲ್ಲಿಗೆ ಹೋಗಬೇಕಾಗಿತ್ತು ಅನ್ನೋ ಕಾಣದಿರೋ ಅಡ್ರಸ್ ಒಂದು ಕಾಣೋಕ ಶುರು ಆಗುತ್ತೆ ನೋಡಿ.ಆದ್ರೇನು ಪ್ರಯೋಜನ,ನಾವು ಹೋಗಬೇಕಾದ ಊರಿಂದ ನಾವಿರೋ ಊರು ಅದೆಷ್ಟೋ ಮೈಲುಗಟ್ಟಲೆ ದೂರ.ಹಿಂದಿರುಗಿ ನೋಡಿದ್ರೆ ಅಯ್ಯೋ ಸಾವು ಅನ್ನೋ ದಪ್ಪ ಅಕ್ಷರದಲ್ಲಿರೋ ಊರಿನ ಹೆಸರಿನ ಫಲಕ ಕಣ್ಣಿಗೆ ನಾಟೋ ತರ..ಭಯಾನಕ ಸನ್ನಿವೇಷದ ಪರದೆ ಯಾವ ದಾರಿ ಹಿಡಿದು ಬಂತೋ ಅದೇ ದಾರಿಯಲ್ಲಿ ಬಂದಷ್ಟೇ ವೇಗದಲ್ಲಿ ಮೈ ಕೊರಿಯೋ ಚಳಿಯಲ್ಲೂ ಬೆವರ ಹನಿಗಳ ಕಾಣಿಕೆ ಕೊಟ್ಟು ಕಾಣೆಯಾಗಿ ಬಿಡುತ್ತೆ.ಕೀಸೆಯಿಂದ ಕರ್ಚಿಪ್ ತೆಗೆದು ಬೆವರ ಹನಿಗಳನ್ನೆಲ್ಲ ಸಾವಕಾಶವಾಗಿ ನೇವರಿಸಿ ಅವುಗಳ ಮೈ ತೊಳೆದು ಅದೇ ಕರ್ಚಿಪ್ನಲ್ಲಿ ನೀಟಾಗಿ ಕೀಸೆಯಲ್ಲೆತ್ತಿಟ್ಕೊಂಡು ಬಂದ ದಾರಿಗೆ ಸುಂಕವಿಲ್ಲದವರಂತೆ ಕಣ್ ಮುಂದಿರೋ ದಾರಿ ಹಿಡಿದು ಜೀವನದಲ್ಲಿ ಆಡೋರ ಬಾಯಿಗೆ ಸಿಕ್ಕಿ ದಂಡಪಿಂಡ ಅನ್ನೋ ಬಿರುದಾಂಕಿತರಾಗೋ ಬದಲು ಹುಟ್ಟೆಂಬ ನೆಪ ದ ನೆನಪಾಗಿ ಏನಾದ್ರೂ ಒಸಿ ಕಿಸಿಯೋಣ ಅಂತ ಅಂದ್ಕಂಡು ಅಂದ್ಕೊಳ್ಳದೇ ಇರೋದನ್ನ ಲೈಪ್ ನಲ್ಲಿ ಅಂದ್ಕೊಂಡದ್ದಕ್ಕಿಂತ ಹೆಚ್ಚಾಗಿ ಕಾಣದಿರೋ ಕನಸನ್ನ ಕಸಿ ಮಾಡಿ ನನಸೆಂಬ ಹಣ್ಣನ್ನ ಕೈಯಲ್ಲಿ ಹಿಡಿದುಕೊಂಡು ವಿಜಯಶಾಲಿಯಾಗಿರೋ ಸಾರ್ಥಕತೆಯ ಭಾವ ನಮ್ಮೊಳಗೆ,ನಮ್ಮಷ್ಟಕ್ಕೆ ಮಾತ್ರ ಹುಟ್ಟಿದಂತೆ.ಸ್ವಲ್ಪ ವರುಷಗಳು ಹೊರಳಿದ ಮೇಲೆ ಜೀವನದಲ್ಲಿ ನಮಗಿಂತ ಹೆಚ್ಚಾಗಿ ಕಿಸಿದವರ ಪೋಟೋ ಪೇಪರ್ನಲ್ಲೋ, ಟೀವಿಯಲ್ಲೋ,ಅಕ್ಕ-ಪಕ್ಕದ ಮನೆಯವರ ನಾಲಿಗೆಯಲ್ಲಿ ಹೊರಳಾಡ್ತಿರೋದನ್ನ ಮುಚ್ಚಿಕೊಳ್ಳೋಕೆ ಬಾಗಿಲಿಲ್ಲದ ಕಿವಿಯಲ್ಲಿ ಇಷ್ಟ ಇರದಿದ್ದರೂ ಕಷ್ಟವಾಗದೇ ಸರಾಗವಾಗಿ ಕೇಳಿಸಿಕೊಂಡಾಗ ಚಾಪೆ ಸುತ್ತಿ ಹೊಡೆದಂಗಾಗಿರುತ್ತೆ.ಅವಾಗಲೇ ಗೊತ್ತಾಗಿದ್ದು ಜೀವನದಲ್ಲಿ ಯಾರೂ ಕಿಸಿಲಾರದ ಮಹಾನ್ ಏನನ್ನೂ ನಾವು ಕಿಸಿದಿಲ್ಲ ಅಂತ.ಮನುಷ್ಯನ ಈ ಸಹಜ ಯೋಚನೆಗೆ ಅಸೂಯೆ ಅಂತ ಕರಿಬೇಕೋ?? ಅಥವಾ ನಮ್ಮಷ್ಟಕ್ಕೆ ನಮಗೇ ಇರೋ ಅಸಮಧಾನ ಅಂತ ಕರಿಬೇಕೋ?? ಗೊತ್ತಿಲ್ಲ.ಆದ್ರೆ ಒಂದಂತೂ ಸತ್ಯ. ಅಂದ್ಕೊಂಡಂತೆ ಆದೋರು ಬೆರಳೆಣಿಕೆಯಾದರೆ ಅಂದ್ಕಂಡಿದ್ ಒಂದಾದ್ರೆ ಆಗಿದ್ದೇ ಮತ್ತೊಂದ್ ಅಂತಿರೋರು ಸಾಕಷ್ಟು. ಈ ರೀತಿಯ ಲೆಕ್ಕಾಚಾರದಲ್ಲಿ ನಾವೇನೋ ಒಂದು ಆಗಿದೀವಿ ಅನ್ನೋದನ್ನೇ ಮರೆತು ಬಿಟ್ಟಿರ್ತೀವಿ.ಪಾಲಿಗೆ ಬಂದಿದ್ ಪಂಚಾಮೃತ ಅಂತ ಕಣ್ಣಿಗ್ ಒತ್ಕಂಡು ನಮ್ಮಷ್ಟಕ್ಕೆ ನಾವ್ ನಮ್ಮದೆಷ್ಟೋ ಅಷ್ಟನ್ನ ನಮ್ಮ ಮತಿಯ ಮಿತಿಯೊಳಗೆ ಮಾಡ್ತಾ ಸಾಗಿದ್ರೆ ಈ ಜೀವನ ಸರಾಗವಾಗಿ ಸಾಗುತ್ತೆ.ಜೀವನ ಕಲ್ಪವೃಕ್ಷವಾಗುತ್ತದೆ.

         - ನೀವೇನಂತೀರಿ...??
====================================================================

Leave a Reply

Back To Top