ಕಾವ್ಯಯಾನ

ಮುಖವಾಡ

ಸುಜಾತ ರವೀಶ್

ಮುಖವಾಡ
***
ಕಿತ್ತೊಗೆಯಬೇಕೆನಿಸುತಿದೆ ಅಂಟಿಕೊಂಡಿರುವ ಈ ಮುಖವಾಡಗಳ
ಬಿಸಿ ಧಗೆಯ ಕುಲುಮೆಯಲ್ಲಿ ಉಬ್ಬೆಗೆ ಹಾಕಿದಂತಿದೆ
ನೈಜತೆಯ ಶುದ್ದ ಹವೆಯಲ್ಲಿ ಮನ ಉಸಿರಾಡಬಯಸುತಿದೆ.

ಮನದಲ್ಲಿ ಜ್ವಾಲಾಮುಖಿ ಸಿಡಿಯುವಂತಿದ್ದರೂ
ಲಾವಾರಸ ಹೊರಚಿಮ್ಮದಂತೆ ಜಾಗೃತಿ ವಹಿಸಬೇಕಾಗಿದೆ
ಶಾಂತತೆಯ ಮುಖವಾಡ ತೊಟ್ಟು ಬದುಕು ದೂಡಬೇಕಾಗಿದೆ.

ಗೋಸುಂಬೆಯ ಹಾಗೆ ಬಣ್ಣ ಬದಲಿಸುತಿರುವವರ ನೋಡಿದಾಗೆಲ್ಲ
ಮುಖಕ್ಕೆ ರಾಚುವಂತೆ ಬೈದುಬಿಡಬೇಕೆಂದೆನಿಸಿದರೂ
ಸಭ್ಯತೆಯ ಮುಖವಾಡ ಧರಿಸಬೇಕಾಗಿದೆˌನಟಿಸಬೇಕಾಗಿದೆ.

ಪರಂಪರಾನುಗತ ಉರುಳುಗಳಿಂದ ಬಿಡಿಸಿಕೊಳ್ಳಬೇಕೆನಿಸಿದರೂ
ಹಕ್ಕಿಯಂತೆ ಸ್ವೇಚ್ಛೆಯಾಗಿ ನೀಲನಭದಿ ವಿಹರಿಸಬೇಕೆಂದರೂ
ಮತ್ತೆ ಸಂಪ್ರದಾಯದ ಮುಖವಾಡದ ಹಿಂದೆ ನಿಲ್ಲಬೇಕಾಗಿದೆ.

ಆಸೆ ಅಕಾಂಕ್ಷೆ ಅಭಿಪ್ರಾಯದ ಹೊರೆ ಬಲವಂತವಾದಾಗಲೆಲ್ಲಾ
ಎಲ್ಲವನೂ ಬಿಸುಟು ಸ್ವಚ್ಛಂದವಾಗಿಬಿಡಬೇಕೆನ್ನಿಸಿದರೂ
ಸಂಬಂಧಗಳ ಮುಖವಾಡದ ಮರೆಯಲಿ ನಗಲೇಬೇಕಾಗಿದೆ.

ಇದು ನಮಗೇನೂ ಹೊಸದಲ್ಲˌಕಷ್ಟವೂ ಅಲ್ಲ ಬಿಡಿ
ಮುಖವಾಡಗಳ ತಯಾರಿˌಧರಿಸಲು ತರಬೇತಿ ಬಾಲ್ಯದಿಂದಲೇ
ತೊಟ್ಟಿದ್ದೇವೆ ತೊಡುತ್ತಲೇ ಇರುತ್ತೇವೆ ಮುಖವಾಡಗಳ ಬೇಡಿ.

ಕನ್ನಡಿಯ ಮುಂದೆ ಮುಖವಾಡವಿರದೆ ನಿಂತಾಗಲೆಲ್ಲಾ
ನನ್ನ ಮುಖ ನನದೆನಿಸುವುದಿಲ್ಲˌಯಾವುದೋ ಅಪರಿಚಿತತೆ
ನನ್ನತನ ಉಳಿಯಲು ಸಮಯವೇ ಇಲ್ಲವೆಂಬ ವಿಷಣ್ಣತೆ
ಬರುತಿದೆ ಕರೆˌಮುಖವಾಡ ಧರಿಸಿ ಹೊರಟೆˌಬರಲೇ?

===============================

Leave a Reply

Back To Top