ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈ ಸಲ ನಮ್ಮ ಕಡೆ ಉತ್ತಮ ಮಳೆಯಾಗಿ ರಾಗಿ ಹೊಲಗಳು ಮೈದುಂಬಿ ಬೆಳೆದಿವೆ. ನಮ್ಮ ಹೊಲಕ್ಕೆ ಈ ಬಾರಿಗೆ ಹಾರಕ (kodo millet) ಹಾಕಿದ್ದೆ. ನೈಸರ್ಗಿಕ ಕೃಷಿಯ ಕಾರಣಕ್ಕೆ ನಮ್ಮ ಹಾರಕದ ಗಿಡಗಳು ತುಂಬಾ ಚಿಕ್ಕದಾಗಿ ಬೆಳೆದಿದ್ದವು. ತುಂಬಾ ಮಂದವಾಗಿ ಚೆಲ್ಲಿದ್ದ ಕಾರಣಕ್ಕೂ, ಮಳೆ ಜಾಸ್ತಿ‌ ಆಗಿದ್ದ ಕಾರಣಕ್ಕೂ ಹಾಗೆ ಬೆಳೆದಿದ್ದವು ಅನಿಸುತ್ತೆ. ತುಂಬಾ ಚೆನ್ನಾಗಿ ಬೆಳೆದ ರಾಗಿ ಹೊಲಗಳನ್ನು ನೋಡಿ ಈ ಸಲ ನಮ್ಮ ಹಾರಕ ಹೋಯ್ತು ಅಂದುಕೊಂಡೆ. “ಎಲ್ಲಾರು ರಾಗಿ ಬೆಳೆದವ್ರೆ ಮಗ. ನಾವು ಅತ್ತಾಗ್ ರಾಗೀನೆ ಹಾಕ್ಬೇಕಿತ್ತು.” ಅಂತ ಅವ್ವ ಬೇರೆ ಬೇಸರ ಮಾಡಿಕೊಂಡಿತ್ತು. ಎತ್ತರಕ್ಕೆ ಬೆಳೆಯದ ಹಾರಕದ ಪೈರುಗಳ ಕಂಡು ಸೆಪ್ಟೆಂಬರ್ ಮಧ್ಯದಲ್ಲಿ ಹಾರಕದ ಹೊಲ ಉಳುಮೆ ಮಾಡಿ ಹುರುಳಿ ಚೆಲ್ಲುವ ಆಲೋಚನೆಯೂ ಬಂತು. ಯಾಕೋ ಒಳ ಮನಸ್ಸು ತಾಳಿದವನು ಬಾಳಿಯಾನು ಎಂದಿತು. ತುಂಬಾ ಪುಟ್ಟದಾಗಿ ಬೆಳೆದ ಹಾರಕದ ಗಿಡಗಳನ್ನು ಆಗಾಗ ಹೋಗಿ ನೋಡಿ ಪೇಚುಮೋರೆ ಹಾಕಿಕೊಂಡು ಸುಮ್ಮನೆ ಬರುತ್ತಿದ್ದೆ. ಅಕ್ಟೋಬರ್ ಕೊನೆಯ ವಾರ ಹೋಗಿ ಹೊಲದಲ್ಲೆಲ್ಲಾ ಅಡ್ಡಾಡಿದಾಗ ಪ್ರತಿ ಗಿಡದಲ್ಲಿಯೂ ಕಾಳು ಕಚ್ಚಿರುವುದ‌‌ ಕಂಡು ಅಚ್ಚರಿಯಾಯಿತು. ಒಂದೆರಡು ಗಿಡಗಳ ಕಾಳುಗಳನ್ನು ಕಿತ್ತು ತಿಂದಾಗ ಕಟುಮ್ ಕಟುಮ್ ಎನ್ನುವ ಹಾಗೆ ಶಬ್ದ ಬಂತು. ಗಟ್ಟಿ ಕಾಳುಗಳು ಹೊಲದ‌ ತುಂಬಾ ಇರುವುದ ಕಂಡು ಖುಷಿಯಾಯಿತು. ಮೊನ್ನೆ ಪುಕವೋಕರ ಪುಸ್ತಕ ಓದುವಾಗ “ನನ್ನ ಭತ್ತದ ಗಿಡಗಳು ಬೇರೆಯವರ ಭತ್ತದ ಗಿಡಗಳಿಗಿಂತ ಗಿಡ್ಡವಾಗಿದ್ದವು. ನೋಡಿದವರು ನಿಮ್ಮ ಬೆಳೆ ಚೆನ್ನಾಗಿ ಆಗೋದಿಲ್ಲ ಅನ್ನುತ್ತಿದ್ದರು. ಆದರೆ ನನಗೆ ಗಿಡಗಳು ಕಾಳು ಕಟ್ಟುತ್ತವೆ ಎಂಬ ನಂಬಿಕೆ ಇತ್ತು. ಅವರಲ್ಲಿ ಹುಲ್ಲಿನ ಪ್ರಮಾಣ ಜಾಸ್ತಿ ಇದ್ದು ಕಾಳಿನ ಪ್ರಮಾಣ ಕಡಿಮೆ‌ ಇರುತ್ತದೆ. ನನ್ನ ಹೊಲದಲ್ಲಿ ಕಾಳಿನ ಪ್ರಮಾಣ ಅವರ ಭತ್ತದ ಗದ್ದೆಗಿಂತ ತುಂಬಾ ಜಾಸ್ತಿ ಇರುತ್ತದೆ.” ಎನ್ನುವಂತಹ ಸಾಲುಗಳು ಕಂಡವು. ಪುಕವೋಕರ ಭತ್ತದ ಗಿಡಗಳಂತೆ ನಮ್ಮ ಹಾರಕದ ಗಿಡಗಳು ತುಂಬಾ ಪುಟ್ಟದಾಗಿ ಬೆಳೆದು ಒಳ್ಳೆಯ ಇಳುವರಿ ಕೊಟ್ಟಿವೆ. ಅಂದಹಾಗೆ ಸುಮಾರು ಎರಡು ಎಕರೆ ಹಾರಕ ಕಟಾವು ಮಾಡಲು ೨೩೦ woman hour ತೆಗೆದುಕೊಂಡಿದೆ. ನೈಸರ್ಗಿಕ ಕೃಷಿಯ ಶಕ್ತಿ ಇದು 


ನಟರಾಜು ಎಸ್ ಎಂ

About The Author

1 thought on ““ಹಾರಕ ಕಲಿಸಿದ ಪಾಠ”ನಟರಾಜು ಎಸ್ ಎಂ ಅವರ ವಿಶೇಷ ಲೇಖನ”

  1. ನೈಸರ್ಗಿಕ ಕೃಷಿಯಿಂದ ಬರುವ ಬೆಳೆ ಶಕ್ತಿಯುತವಾಗಿರುತ್ತದೆ. ಆರೋಗ್ಯಕರವೂ ಹೌದು.

Leave a Reply

You cannot copy content of this page

Scroll to Top