ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ಪರ್ಶ ಎಂಬ ಭಾವದ ಬಗ್ಗೆ ಬರೆಯಲು ಕುಳಿತರೆ ಎಲ್ಲರ ಮನಸಲೂ ಸ್ವಲ್ಪ ಮುಜುಗರ,ಕಸಿವಿಸಿ ಆಗುವಆದು ಸಹಜವೇ.ಆದರೆ ಸವಿಸ್ಪರ್ಶದ ನಾನಾ ಪಾತ್ರಗಳನು,ಮುಖಗಳನು ನೆನೆಯುತಾ ಹೋದರೆ ನಮಗೆ ಇದರ ಸುಂದರವಾದ ಅಭಿವ್ಯಕ್ತಿ ಹೀಗೂ ಇರಬಹುದೆಂಬ ಸತ್ಯ ಅರಿವಾಗುತ್ತದೆ.

ಸ್ಪರ್ಶ ಎಂದರೇನು? ಅದು ಬರಿಯ  ಕೈಗಳ,ಕಾಲುಗಳ,ಬೆರಳುಗಳ ಸಂವಹನವೇ ಅಥವಾ ಅರಿಯಲಾರದ ಭಾವದ ಒಂದು ದಿವ್ಯತೆಯ ಸ್ಪಂದನೆಯೇ ? ಹೌದು..ಸ್ಪರ್ಶವೆಂದರೆ ಬರಿಯ ಒಂದು feel ಅಥವಾ touch ಎಂಬ ಭಾವವೊಂದೇ ಅಲ್ಲ, ಅದನು ಮೀರಿದಂತಹ ಒಂದು ನೈಜತೆಯ ಸ್ಪರ್ಶ, ಆಧ್ಯಾತ್ಮಿಕ ಸ್ಪರ್ಶ,ಭಕ್ತಿಯ ಸ್ಪರ್ಶ,ಒಂದು ಭರವಸೆಯ ಸ್ಪರ್ಶ, ಮನಕೆ ಒದಗುವಂತಹ ಒಂದು ಶಾಂತಿಯ ಸ್ಪರ್ಶ..ಹೀಗೆ ಎಲ್ಲಾ ತರಹದ ಭಾವವನು ಕ್ರೋಡೀಕರಿಸಿದ ಒಂದು ಸವಿಭಾವವಿದೆ ಈ *ಸ್ಪರ್ಶ* ಎಂಬ ಎರಡಕ್ಷರದ ಪದದ ಮಡಿಲಲಿ.

 ಸ್ಪರ್ಶ ಎಂದೊಡನೆ ಮನದಿ ಮೊದಲು ಮೂಡುವುದೇ ತನ್ನ ಪುಟ್ಟ ಮಗುವಿಗೆ ಅದರ ತಾಯಿ ನೀಡುವ ಒಂದು ಅಮೋಘವಾದ,ಆಪ್ಯಾಯಮಾನವಾದ,ಪದಗಳಲಿ ವಿವರಿಸಲಾರದ ತನ್ನ ಮಡಿಲಿನ ಸ್ಪರ್ಶ.ಬೇರೆಯವರ ಬಳಿಗೆ ಅಳುತಾ ಹೋಗುವ ಮಗು ತನ್ನ ಅಮ್ಮನ ತೋಳಿಗೆ ಬಂದಾಗ ಸುಮ್ಮನಾಗಿ ಅವಳ ಮೊಗವನು ನೋಡಿ ನಗುವುದೇ ಅವಳ ಮಡಿಲಿನ ಸ್ಪರ್ಶವೇ ಅದಕೆ ಸಾಕ್ಷಿ.ತನ್ನ ಹಸುಕಂದಗೆ ಹಾಲೂಡಿಸುವುದರಿಂದ ಹಿಡಿದು ಅದಕೆ ಎಣ್ಣೆ ಹಚ್ಚಿ ತೀಡಿ,ಬಿಸಿಬಿಸಿ ನೀರಿನ ಜಳಕ ಮಾಡಿಸಿ,ಸಾಂಬ್ರಾಣಿಯ ಹೊಗೆಯಲಿ ಅದರ ತಲೆಗೂದಲನು ಒಣಗಿಸಿ,ಬೆಚ್ಚಗಿನ ತನ್ನ ಸೀರೆಯ ಜೋಲಿಯಲಿ ಮಲಗಿಸುವ ತನಕ ಅವಳ ಸ್ಪರ್ಶದ ಅರಿವು ಮಗುವಿಗಿರುತ್ತದೆ.ಅದೇ ಸುಂದರ ಭಾವದಲಿ ಕಂದ ಆರಾಮಾಗಿ ಏಳೆಂಟು ಗಂಟೆ ಮಲಗುತ್ತದೆ ಸಹ.ತಾಯಿಯ ಮೊದಲ ಸ್ಪರ್ಶ ಅದಕೆ ಗರ್ಭದಲಿಯೇ ತಿಳಿದಿರುವುದಂತೂ ಆ ಭಗವಂತ ಹೆಣ್ಣಿಗೆ ನೀಡಿದ ಒಂದು ವರವೆಂದರೆ ತಪ್ಪಾಗಲಾರದು.

  ಇನ್ನು ತಂದೆ ತನ್ನ ಮಗಳ ನೆತ್ತಿ ಸವರಿ ಬೆನ್ನು ತಟ್ಟಿ ಅವಳ ಎಲ್ಲಾ ಸಾಧನೆಗಳಿಗೂ ಪ್ರೋತ್ಸಾಹ ನೀಡುವಾಗಿನ ಆ ಸ್ಪರ್ಶದ ಸವಿಭಾವವ ಸಂತಸದಿಂದ ಅನುಭಾವಿಸುವ  ಮಗಳಿಗೇ ಅದು ಗೊತ್ತಿರುತ್ತದೆ.ತನ್ನ ಹೆಗಲ ಮೇಲೆ ಕೈ ಹಾಕಿಯೊ ಅಥವಾ ಕೈಯನು ರಕ್ಷಣೆಯಿಂದ ಭದ್ರವಾಗಿ ಹಿಡಿದು ಮಾರ್ಕೆಟ್ಟಿಗೋ,ವಾಕಿಂಗಿಗೋ ಅಥವಾ ಸಾಮಾನು ತರಲು ಅಂಗಡಿಗೆ ಹೊರಟಾಗಲಂತೂ ಆ ಮಗಳು ಅತ್ಯಂತ ಖುಷಿಪಡುವ ಕಾರಣವಾಗುತ್ತದೆ.
ಮತ್ತೊಂದು ಸ್ಪರ್ಶದ ಉದಾಹರಣೆ ಹೇಳುವುದಾದರೆ ಗುರುಗಳು ತನಗೆ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ತನ್ನ ಶಿಷ್ಯವೃಂದದವರಿಗೆ ಪ್ರೀತಿಯಿಂದ ತಲೆ ನೇವರಿಸಿ ಭುಜ ತಟ್ಟಿ “ಇದೇ ರೀತಿ ಇನ್ನಷ್ಟು ಚೆನ್ನಾಗಿ ಓದಿ ಒಳ್ಳೆಯ ನಾಗರಿಕರಾಗಿ ಉನ್ನತಿ ಪಡೆಯಿರಿ ನಿಮ್ಮ ಬದುಕಲಿ” ಎಂದು ಹೇಳುತಾ ಅವರಿಗೆ ಆಶೀರ್ವದಿಸಿ ಕಳಿಸಿದಾಗಲಂತೂ ಆ ಶಿಷ್ಯರಿಗೆ ಕಣ್ಣಲಿ ಆನಂದಬಾಶ್ಪವಾಗದೇ ಇರದು.

ಇನ್ನೊಂದು ಮಧುರ ಸ್ಪರ್ಶದ ಬಗ್ಗೆ ಹೇಳುವುದಾದರೆ ನಲ್ಲ ನಲ್ಲೆಯರ ಪ್ರೀತಿಯ ಒಲುಮೆಯ ಸ್ಪರ್ಶವೂ ಚೆಂದವೇ.ಆ ನವಜೋಡಿಗಳ ಬಾಳಿನ ಸಾರ್ಥಕತೆಯು ಅದರಲಿ ಅಡಗಿರುತ್ತದೆ ಎಂದರೆ ಅತಿಶಯೋಕ್ತಿಯಾಗದು.

ಇನ್ನು ಬಾಳಿನ ಮುಸ್ಸಂಜೆಯಲಿರುವ ವೃಧ್ದ ದಂಪತಿಗಳಿಬ್ಬರು ತಮ್ಮ ಕಾಲದ ಬದುಕನು ನೆನೆಯುತಾ ಪರಸ್ಪರರ ಪ್ರೇಮದ ಆಸರೆಯಾಗಿ ಬಿಗಿಯಾಗಿ ಕೈಕೈ   ಹಿಡಿದು ಹೋಗುವ ದೃಶ್ಯವಂತೂ ನೋಡಲು ಬಲು ಆಪ್ಯಾಯಮಾನವಾಗಿರುತ್ತದೆ.

ಇನ್ನು ತಾವು ಬೆಳೆಸುವ ಗಿಡಗಳನು ಪ್ರೀತಿಯಲಿ ಸ್ಪರ್ಶಿಸಿ ಸಹಜವಾಗಿ ಅವುಗಳೊಟ್ಟಿಗೆ ಮಾತಾಡಿ ನೀರು ಹಾಕುವುದನೂ ನಾವು ಗಮನಿಸುತ್ತಿರುತ್ತೇವೆ. ಹಾಗೆಯೇ ತಾವು ಸಾಕುವ  ಪ್ರಾಣಿಗಳಿಗೆ ಪ್ರೀತಿಯಿಂದ ಸ್ಪರ್ಶಿಸಿ ಅವುಗಳ ಮೈದಡವಿ ಮಾತಾಡಿಸಿ ಸಂತಸ ಪಡುವವರನೂ ಕಂಡಿರುತ್ತೇವೆ.ಹಾಗೆಯೇ ತೀರಾ ಕಾಯಿಲೆಯಿಂದ ನರಳುವವರಿಗೆ ನಾವು ನೋಡುವ ಹಾಗು ನೀಡುವ ಸಾಂತ್ವಾನದ ಸ್ಪರ್ಶವೂ ಅವರಿಗೆ ಬೇಗ ಗುಣವಾಗುವುದು ಅಂತಲೂ ಹೇಳಬಹುದಾಗಿದೆ.

ಹೀಗೇ ಸವಿಸ್ಪರ್ಶದ ಅಭಿವ್ಯಕ್ತಿಯು ಬದುಕಿನ ನಾನಾ ಸ್ತರಗಳಲಿ ನಾವು ಕಾಣಬಹುದಾಗಿದೆ ಹಾಗೂ ಅದರ ಭಾವಗಳನು  ಅರ್ಥೈಸಿಕೊಳ್ಳಬಹುದು ಅಲ್ಲವೇ ?

—————-

About The Author

Leave a Reply

You cannot copy content of this page

Scroll to Top