ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
“ಮಾರ್ಧನಿ”


ಅಂದು ಇದೇ ಹಾದಿಯಲ್ಲಿ
ಸಮತೆಯ ಶಿಲ್ಪಿಯಂತೆ ನಡೆದೆ ನಡೆದೆ
ಬೆಂದ ಕಾಲುಗಳು
ಬಸವಳಿದು ರೋದಿಸಿದವು
ದಿಕ್ಕು ದಿಕ್ಕಿಗೂ ಕೂಗಿ ಕರೆದ ಮಾರ್ಧನಿಯೂ ಮರಳಿ ಬಂದಿತು
ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಜನಗಳ ಮಧ್ಯೆ
ನನ್ನದೇ ಕನಸುಗಳ ಹಾದಿಗೆ
ರೆಕ್ಕೆ ಬಿಚ್ಚಿ ಹಾರಾಡೆ ಹಾರಾಡಿದೆ
ಸಂತಸದ ದಿನಗಳನ್ನು ಮೆಲುಕು ಹಾಕುತ್ತಾ
ಅಂದಿನಿಂದ ಇಂದಿನವರೆಗೂ ಹಾಗೇ ಇದೆ
ಅಂತರಾತ್ಮದ ಅರಿವಿನ ಪ್ರಜ್ಞೆಗೆ
ಮೂಕ ಸಾಕ್ಷಿಯಾಗಿ
ಕಂಗಳಲ್ಲಿ ತುಂಬಿದ ಕನಸುಗಳಿಗೆ
ಸೋತು ಹೋಗಿದ್ದೇನೆ
ದುಡಿದು ಸವೆಸಿದ ಹಾದಿಗೆ
ಹೂವಿನ ಪರಿಮಳ ಹಾಸಿ
ಮೆಲುಕು ಹಾಕುತ್ತಿರುವೆ.
ಸಮಾನತೆಯ ಹರಿಕಾರ
ಬಾಬು ಜಗಜ್ಜೀವನರಾವ್
ನೆಹರು ಭೋಸರ ಅಂತರಾತ್ಮದ
ಸ್ವಾತಂತ್ರ್ಯದ ಕಿಚ್ಚಿನ ರಕುತದ
ಕಲೆಗಳು ಮಾಯವಾಗಿಲ್ಲ
ಮಾಯದ ಜಿಂಕೆ ಬೆನ್ನತ್ತಿದ
ರಾವಣನ ಅರಿ ರಾಮನ
ರಾಮರಾಜ್ಯದ ಪರಿಕಲ್ಪನೆ
ಸುಡುವ ಕಾಲು ನೆಲದಲ್ಲಿ
ತಂಪು ತಂಗಾಳಿ ಸೂಸಿದ
ಚಳಿ ಮಳೆ ಗಾಳಿ ಬಿಸಿಲಿಗೆ
ಬೆವರು ಸುರಿಸಿದ ಕಂಗಳು
ಇನ್ನೂ ಸಂತಸ ಕಂಡಿಲ್ಲಾ
ಸಂತರು ಶರಣರು ದಾಸರು
ಇದೆ ಹಾದಿಯಲ್ಲಿ ನಡೆದು ಹೋದ
ಹೆಜ್ಜೆ ಗುರುತುಗಳ ಪಾದಗಳು
ನಮ್ಮ ನಮ್ಮ ಜಗುಲಿಯ ಮೇಲೆ
ಹಾಗೇ ಕುಳಿತುಕೊಂಡು
ರಾರಾಜಿಸುತ್ತಿವೆ
ನಮ್ಮದೇ ಕಟ್ಟೆಯೊಳಗೆ
ಬಂಧಿಸಿ ಪರದೆಯೊಳಗೆ
ಮಡಿ ಮಾಡಿ ಶೋಷಣೆಯ
ಸುಲಿಗೆಯೊಳಗೆ ಬಂದಿಖಾನೆ
ಆಗಿದ್ದಾವೆ ನಮ್ಮ ನಮ್ಮ
ದೇವರುಗಳು
ನಾಡು ಸಮತೆಯ ಗೂಡು
ಹುಡುಕುತ್ತಿರುವೆ
ಅಲ್ಲಿ ಇಲ್ಲಿ ಬಸವಣ್ಣ, ಬುದ್ಧ ಗಾಂಧಿ ಯ ಪೋಟೋಗಳ ಮೇಲೆ
ಕುಳಿತ ಧೂಳು ವರೆಸುತ್ತ
ಕಣ್ಣಗಲ ಮಾಡಿ ವರುಷಕ್ಕೊಮ್ಮೆ
ತಳಿರು ತೋರಣ ಕಟ್ಟಿ
ಸಿಂಗರಿಸಿ ಧ್ವಜವು ಹಾರಿಸಿ
ಜೈಕಾರ ಕೂಗುವ ನಮ್ಮೆದೆಯ
ಗಟ್ಟಿ ಕೂಗಿಗೆ ಎಚ್ಚರಗೊಂಡು
ಬಾಬಾಸಾಹೇಬ ಅಂಬೇಡ್ಕರ್
ಕರದೊಲ್ಲೊಂದು ಹೊತ್ತಿಗೆಯನು
ಓದುತ್ತಾ ತಿಳಿಯ ಪಡಿಸುವ
ಚಿತ್ರಣ ಕಣ್ಣಿಗೆ ಹಬ್ಬವಾಗಿಸಿದೆ
ನಾಡು ತೆಂಗು ಬಾಳೆ ಶ್ರೀಗಂಧ
ಗುಡಿ ಗೋಪುರ ದೊಳಗೆ
ಬಚ್ಚಿಕೊಂಡು ತಿರುಗುವ
ಅಲೆಮಾರಿಯಂತೆ
ನಮ್ಮ ನಮ್ಮ ಬದುಕು
ಎಲ್ಲಿಂದ ? ಬರಬೇಕು
ಸಮಾನತೆ…
—-
ಡಾ ಸಾವಿತ್ರಿ ಕಮಲಾಪೂರ



