ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
“ಕನಸು”

ಮರುಭೂಮಿಯ ಮನಸುಗಳಲ್ಲಿ
ಚಿಗುರೊಡೆದ ಕನಸುಗಳ ಗಂಟೊತ್ತು ಚಂದಿರನೂರಿನ ಅಂಗಳಕ್ಕೆ ಗುಳೆಯೊರಟ ಅಲೆಮಾರಿ ನಾನು
ಅದೆಲ್ಲೋ ಅಂತರ್ಜಾತಿಯ ಮದುವೆಯಂತೆ
ಮತ್ತೆಲ್ಲೋ ಸಹಪಂಕ್ತಿ ಭೋಜನವಂತೆ
ಸಡಿಲಗೊಳ್ಳುತ್ತದೆ ಗಂಟು ನನಸಾಗುವ ತವಕದಲಿ
ಪ್ರೇಮಿಗಳ ಶವ ಪತ್ತೆ, ಮರ್ಯಾದ ಹತ್ಯೆಯ ಅನುಮಾನ
ಮನೆ ಬಾಡಿಗೆಗೆ ಜಾತಿ ಅಡ್ಡ ದೇವಸ್ಥಾನ ಪ್ರವೇಶ ನಿರಾಕರಣೆ
ಬಿಗಿದುಕೊಳ್ಳುತ್ತದೆ ಗಂಟು ಭಸ್ಮವಾಗುವ ಭಯದಲಿ
ಅತ್ಯಾಚಾರಕ್ಕೆ ಬಾಲಕಿ ಬಲಿ, ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಸಾವು..ಬೆದರುತ್ತಿವೆ ಕನಸುಗಳು ಗಂಟಿನೊಳಗೆ ಸಾವು ತಂದ ನೋವಿನಲಿ
ದುಡ್ಡಿಗಾಗಿ ಲಿಂಗ ಪತ್ತೆ ಗಂಡಿಗಾಗಿ ಭ್ರೂಣಹತ್ಯೆ,
ಮಗು ಮಾರಾಟ,ಬದುಕು ನಿತ್ಯ ಹೆಣಗಾಟ
ಹೈರಾಣಾಗುತ್ತಿವೆ ಕನಸುಗಳು ಹೆಣವಾಗುವ ಋಣದಲಿ
ಅಲ್ಲೊಮ್ಮೆ ಇಲ್ಲೊಮ್ಮೆ ಗಂಟು ಬಿಚ್ಚುತ್ತೇನೆ
ಪಾಪ ನನಸಾಗದಿರುವ ಕನಸುಗಳು ಮತ್ತೇ ಗಂಟಿನೊಳಗೆ ಬಂಧಿಯಾಗುತ್ತವೆ
ಬಂಧಿಯಾದ ಕನಸುಗಳ ಗಂಟ ಬಿಗಿದಪ್ಪಿ
ಮತ್ತೇ ಹೊರಡುತ್ತೇನೆ ಚಂದಿರನೂರಿನ ಕಡೆಗೆ
ಗುಳೆಯೊರಟ ಅಲೆಮಾರಿಯಂತೆ …
ಶೋಭಾ ಮಲ್ಲಿಕಾರ್ಜುನ್




