ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ದಾರಿ ಬಿಡಿ ದಾರಿ ಬಿಡಿ
ದಲಿತರೆಂಬ ಕುರಿಗಳು ಮಂದಗತಿಯಲಿ
ಒಂದರ ಮೇಲೊಂದು  ಮುಗಿಬಿದ್ದು
 ನೆಲಕಚ್ಚಿ ಮೌನದಿ ಬಸವಳಿದು
ತೆವಳುತ್ತ ಸಾಗುತಿವೆ ದಾರಿಗುಂಟ
ತಮ್ಮದೇ ಚೌಕಟ್ಟಿನ ಆಯದಲ್ಲಿ  ದಾರಿ ಬಿಡಿ!.

ತಲೆ ತಗ್ಗಿಸಿ ಕೈ ಕಟ್ಟಿ ನಿಂತು
ನಿಟ್ಟುಸಿರಿಗೂ ಲೆಕ್ಕಯಿಟ್ಟು
ಅಂಗಳದಂಚಿಗೆ ಸೆರಗೊಡ್ಡಿ
ಹಸಿದೊಡಲಿನ ಹಸಿವಿಂಗಿಸಲು
ಒಂದೊತ್ತಿನ ತುತ್ತು ಕೂಳಿಗಾಗಿ
ಕೆರಕ್ಕಿಂತ ಕೀಳಾಗಿ ನಿಂತಿಹರು
ಇದಿಷ್ಟೇ ಬದುಕೆಂದು ನರಳುತಿಹರು

ಹಗಲು ಇರುಳು ಗಾಣದೆತ್ತಿನಂತೆ
ಹೊಲಗದ್ದೆ ತೋಟಗಳಲ್ಲಿ ದುಡಿದು
ಪೈರ ಒಪ್ಪಾಗಿಸಿ ಒಟ್ಟಿ ಕೈ ಚಾಚಿದವರು
ಸಾವು ನೋವಿಗೆ ದೈವ ಮೊರೆ ಹೋಗಿ
ಮೂಢನಂಬಿಕೆಯ ಹೊತ್ತು ಮೆರೆಸಿದವರು
ಸ್ವಂತಿಕೆಯ ಮಾರಿಕೊಂಡವರು!.
ದಲಿತ ಬಲಿತನಾಗುವುದೆಂತು?

ಕಣ್ಣುಂಟು,ಕಿವಿಯುಂಟು,ಮೂಗುಂಟು
ಹಸಿದಾಗ ಅನ್ನ ತಿನ್ನುವುದು
ನೊಂದಾಗ ಕಣ್ಣೀರು ಬರುವುದುಂಟು
ನಿದ್ರೆಗೆ ಎಲ್ಲ ಮರೆತು ಮಲಗುವುದುಂಟು
ಕಾಸಿದ್ದರೆ ಆಸೆಗಳುಂಟು,ಇಲ್ಲ ನಿರಾಶೆಗಳುಂಟು
ಬಡವ ಬಲ್ಲಿದನೆಂಬ ಬೇಧ ಭಾವ ಯಾಕುಂಟು?
ಪ್ರಶ್ನೆಗೆ ಉತ್ತರ ಹುಡುಕಲು ಹೊಂಟವರು.

ಎಷ್ಟಂತ ತುಳಿಯುವಿರಿ? ಮುಗ್ದತೆಯ ಕೊಂದು
ಅರಮನೆ ಅಂಗಾಲಿಗೆ ದಲಿತರ ರಕ್ತವಂಟಿದೆ!.
ಸುಖದ ಮಹಲುಗಳು ದಲಿತರ ಹೆಗಲುಗಳು!.
ಬಿಡಿಗಾಸಿಗೂ ತತ್ತರಿಸುತಿವೆ, ಇರುಳುಗಳು
ದಲಿತರೆಂಬ ಪಟ್ಟ ಕಿತ್ತು ಬಿಸಾಕಲು ಕೈಗಳಿಲ್ಲ!.
ಎಲ್ಲವನ್ನೂ ಕಳೆದುಕೊಂಡು ರಸ್ತೆಗಿಳಿದವರು
ತಮ್ಮ ಅಸ್ತಿತ್ವದ ನೆಲೆ ಹುಡುಕುವವರು.

ಮನುಷ್ಯ ಮನುಷ್ಯನಾಗಿ ಬದುಕಲೆಂದು
ಅಸಮಾನತೆ ಅಸ್ಪೃಶ್ಯತೆ ನಿವಾರಣೆಗೆ
ಅಳಿದುಳಿದ ತಾಕತ್ತಿನ ನಿಟ್ಟುಸಿರು
ಧಿಕ್ಕಾರವಿದೆ ದಲಿತನೆಂಬ ಹಣೆ ಪಟ್ಟಿಗೆ
ಬುದ್ದ ಬಸವ ಅಂಬೇಡ್ಕರ್ ರರ
ಇವ ನಮ್ಮವನೆಂಬ ಆತ್ಮಸಂಧಾನಕೆ
ಒಕ್ಕೊರಲಿನ ದಿಟ್ಟ ಹೆಜ್ಜೆಗೆ ದಾರಿ ಬಿಡಿ….
ದಲಿತ ಬಲಿತನಾದರೆ ಒಳಿತೆಂಬ ಭಾವದಿ!.


About The Author

7 thoughts on “ಶಿವಲೀಲಾ ಶಂಕರ್‌ ಅವರ ಕವಿತೆ,”ದಲಿತ ಬಲಿತನಾಗುವುದೆಂತು?””

  1. ಇಲ್ಲಿನ ಪ್ರತಿಯೊಂದು ಸಾಲುಗಳು ಹೃದಯಸ್ಪರ್ಶಿಯಾಗಿವೆ ಹಾಗೂ ಭಾವನಾಭರಿತವಾಗಿವೆ.ಮತ್ತೆ ಮತ್ತೆ ಓದಬೇಕೆಂಬ ಹಂಬಲ ಓದುಗರಲ್ಲಿ ತುಂಬುತ್ತದೆ.
    ಇಂತಹ ಕವನ ಬರೆದು ತಮಗೆ ಅಭಿನಂದನೆಗಳು .

  2. ಮೌಲಿಕ ಚಿಂತನೆಗಳನ್ನೊಳಗೊಂಡ ಕವನ..ಪ್ರತಿಯೊಂದು ಚರಣದ ಸಾಲುಗಳು ಚಿಂತನೆಗೆ ಒಡ್ಡುತ್ತವೆ.-ಬಾಲಚಂದ್ರ.ಹೆಗಡೆ.ಮುಂಡಗೋಡ.

  3. ತುಂಬ ಸುಂದರವಾದ ಮನ ಮುಟ್ಟುವ ತಟ್ಟುವ ಅಧ್ಭುತ ಸಾಲುಗಳು……..

Leave a Reply

You cannot copy content of this page

Scroll to Top