ಕಾವ್ಯ ಸಂಗಾತಿ
ಪ್ರೇಮಾ
“ಮರಳಿ ಅರಳುವ ಹೂವುಗಳು”


ಬಂಗಾರದ ನೇಸರ ಬಂದಾಯ್ತು
ಸಂಜೆ ವೇದಿಕೆ ಸಜ್ಜಾತು
ಉದ್ಯಾನ ವನದ ಬೆಂಚ್
ಕೈ ಬೀಸಿ ಕರಿತಿತ್ತು
ಏನೆನ್ನಲಿ ನಾ…
ವಿನಿಮಯದ ವೇದಿಕೆ?
ಒದ್ದೆ ಕಣ್ಣೊಂದು ಹಂಚುವ ಸಮಯ
ನಡುಗುವ ಕೈಯೊಂದು ಕಣ್ಣೊರೆಸುವ ಸಮಯ
ಒರಟು ತುಟಿಯಲ್ಲಿ ಗಟ್ಟಿ ದನಿ ಸೇರಿ
ನೊಂದು ನಗುವ ಜಟ್ಟಿಗಳು
ಬರಡಲ್ಲ ಇವು ಎರಡು ಮೂರು
ಹೂವು ಬಿಟ್ಟ ಮರಗಳು
ಸಂಭ್ರಮಿಸುವವು ಕಣ್ಣೊರೆಸಿ
ವಿದೇಶ ಸುದ್ದಿಯ ಕೊಂಚ ಹಂಚಿ
ಮಗ ಮೊಮ್ಮಗ ಸೊಸೆಗೆ
ನೂರು ದೇವರ ನೆನಸಿ ಹರಸಿ
ಸಂಭ್ರಮದ ಸಿಂಗಾರದ ತೇರುಗಳು
ಹೊರ ಬೆಚ್ಚನೆಯ ಉಡುಗೆಯಲಿ
ಬಚ್ಚಿಟ್ಟ ಬಿಸಿ ಉಸಿರುಗಳು
ಡಾಲರ್ ಪೌಂಡ್ ಗಳ ಮಾತುಗಳು
ಮರೆಯಲ್ಲಿ ಕರವಸ್ತ್ರ ಒದ್ದೆಗೆ
ಜಾಗ ಹುಡುಕುವ ಜೀವಗಳು
ಇವು ಮತ್ತೆ ಮರಳಿ ಅರಳುವ
ನಮ್ಮ ನಿಮ್ಮಲ್ಲರ ಬೆಲೆ ಬಾಳುವ
ಹೂವುಗಳು
ಪ್ರೇಮಾ




ತುಂಬಾ ಸಂತೋಷ ಸರ್
ತುಂಬು ಹೃದಯದಿಂದ ಧನ್ಯವಾದಗಳು ತಮ್ಮೆಲ್ಲರಿಗೂ