ಕಾವ್ಯ ಸಂಗಾತಿ
ರಾಮ ಪ್ರಸಾದ್ ಬಿ.ವಿ.
“ಲಂಪಟ ಗಂಡಸಿನ ಆತ್ಮ ನಿವೇದನೆ”

ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು
ಇರೋ ತಂಕ ಖುಷಿಯಾಗಿರಬೇಕ್
ಇದೆಲ್ಲಾ ನಂಗೊತ್ತು ……
ಆದರೂ ಯಾಕೆ ಎಲ್ಲೋ ಸ್ವಲ್ಪ
ಮನಸ್ಸಲ್ಲಿ ಬೇಜಾರು?
ತಿಂತೀನಿ, ಕುಡಿತೀನಿ
ಮಜಾ ಮಾಡ್ತೀನಿ,
ನಿಮ್ಮಪ್ಪಂದು ದುಡ್ಡಾ?
ದಗಾ ಮೋಸಾ ಮಾಡಿದ್ರೇಳಿ-
ಹಿಂಗೆಲ್ಲಾ ಅಂತೀನಿ, ನಿಜಾ ……
ಆದರೂ ಯಾಕೆಲ್ಲೋ ಬೇಜಾರು?
ಅವಳೂ ಬೇಕು ಇವಳೂ ಬೇಕು
ಇನ್ನೊಬ್ಳಿದ್ರೆ ಅವಳೂ ಬೇಕು
ಎದುರಿಗೆ ಇರೋದಷ್ಟೇ ನಿಜಾ,
ಇದರಲ್ಲೇನೂ ಮೋಸ ಇಲ್ಲ
ಕೊಲೆ ಸುಲಿಗೆ ಅಲ್ವಲ್ಲಾ-ಅಂತಿರ್ತೀನಿ,…
ಆದರೂ ಯಾಕೆ ಸ್ವಲ್ಪ ಬೇಜಾರು?
ಮೇಲ್ ಮೇಲೆ ಕಾಣೋದಷ್ಟೇ ಸತ್ಯ
ಒಳಗೆ ಪಳಗೆ ಇಲ್ಲ
ಅರ್ಥ ಪರ್ಥ ಅನ್ನೋದಿಲ್ಲ
ಆತ್ಮ ಮನಸ್ಸು ಇಲ್ಲೇ ಇಲ್ಲ
ಇರೋದೊಂದೇ, ದೇಹ-
ಅಂತಿರ್ತೀನಿ, ಆದರೂ. ..
ಯಾಕೋ ಸ್ವಲ್ಪ ಬೇಜಾರು.
ಎಲ್ಲೋ ದೂರದ ಕೊಳಲು,
ಮರದ ಕೆಳಗೆ ಕೂತವರ ಯಾವುದೋ ಮಾತು,
ಕೇಳತ್ತಲ್ಲಾ, ಅದೇನು?
ಇರೋದು ಬಿಟ್ಟು ಇನ್ನು ಏನಾದ್ರು
ಇರೋದು ನಿಜಾ ಅಲ್ಲಾ ತಾನೆ,……
ಆದರೂ ಯಾಕೆ ತಪ್ಪು ಮಾಡ್ತಾ
ಇದೀನೇನೋ ಅನ್ನೋ ಹಾಗೆ-
ಯಾವುದೋ ಸಾಗರ ದಾಟಿ ಬರುವ,
ಎಲ್ಲೋ ಒಳಗೊಳಗಿಂದ ಬರುವ,
ಈ ವಿಷಾದ, ದುಃಖ?-
ಅಯ್ಯೋ ಹಾಗೇನಿಲ್ಲ
ಎಲ್ಲೋ ಸ್ವಲ್ಪ ಬೇಜಾರಷ್ಟೇ,
ಆದರೂ……. ಬೇಜಾರಷ್ಟೇನೇ?

ರಾಮ ಪ್ರಸಾದ್ ಬಿ.ವಿ.




Bold Exposure of The Truth. Congratulations prof. Ramprasad B V.
Thank you
Nice sir
Thank you
ಕೊನೆ ಮೂರು ಖಂಡಿಕೆ.. ಪದ್ಯದ ಕಡೆ ಸಾಗಿದೆ.. ಮೊದಲಿಂದ ಬೇಜಾರಿನ ಭಾವಕ್ಕೆ ವಾಚ್ಯರ್ಥ್ ಹೆಚ್ಚಾಗಿದೆ.. ನೀವು ಪದ್ಯ ಬರೆಯ ಬಲ್ಲಿರಿ ಆದರೆ ಸ್ವಲ್ಪ ದ್ಯಾನಿಸಿ.. ಮತಿಸಿ.. ಬರೀರಿ… ಲೇಖನ ಓದುವೆ…
Thank you