ಶಿಕ್ಷಕ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು… ಶಿಕ್ಷಕರ ಅಳಲು”

ನಾಡಿನ ಸಮಸ್ತ ಜನತೆಗೆ ನಮಸ್ಕಾರ
ಯಾರು ಅಂತ ಗೊತ್ತಾಗ್ಲಿಲ್ವಾ? ನಾನೇ ಕಣ್ರೀ. ಕಳೆದ ತಿಂಗಳಿಡೀ ಬಳಪಾ ಹಿಡಿದಾ ಭಗವಂತ ಅಂತ ನೀವೆಲ್ಲಾ ಹೊಗಳಿ ನನ್ನನ್ನ ಆಟ್ಟಕ್ಕೆ ಏರಿಸಿದ್ರಲ್ಲ…. ಹಾಂ! ಅದೇ ಮೇಷ್ಟ್ರು ನಾನು. ಶಾಲೆ ಕಾಲೇಜುಗಳಲ್ಲಿ ಪಾಠ ಮಾಡುವ ಮೇಷ್ಟ್ರು ಕಣ್ರೀ.
ತುಂಬಾ ಅನ್ಯಾಯ.. ಇನ್ನೂ ಒಂದು ನಾಲ್ಕು ದಿವಸ ಆದ್ರೂ ನಿಮ್ಮ ಸ್ಟೇಟಸ್ ಗಳಲ್ಲಿ ನಿಮ್ಮ ಸ್ಟೋರಿಗಳಲ್ಲಿ ನಿಮ್ಮ ವಾಲ್‌ಗಳಲ್ಲಿ ನಾನು ರಾರಾಜಿಸ್ತೀನಿ ಅನ್ಕೊಂಡಿದ್ದೆ. ಇಷ್ಟು ಬೇಗ ಮರೆತು ಬಿಟ್ರಾ ಹೇಗೆ?
ಇರ್ಲಿ ಬಿಡಿ, ನಾವು ಬಡಪಾಯಿ ಮೇಷ್ಟ್ರುಗಳು.. ಅರೆ! ಹೀಗೆ ನಾನು ಬಡಪಾಯಿ ಮೇಷ್ಟ್ರು ಅಂತ ಬರೆದಾಗ ನನಗೆ ಒಂದು ವಿಷಯ ನೆನಪಿಗೆ ಬಂತು. ಹೀಗೆಯೇ ಒಂದು ಸಾರಿ ನಮ್ಮ ಪ್ರೀತಿಯ ಗುರುರಾಜ ಕರ್ಜಗಿಯವರು ಶಾಲೆಯಲ್ಲಿ ಓದುತ್ತಿದ್ದಾಗ ಅವರ ಶಿಕ್ಷಕರು ‘ನನ್ನ ಪ್ರೀತಿಯ ಶಿಕ್ಷಕ’ ಎಂಬ ಪ್ರಬಂಧವನ್ನು ಬರೆಯಲು ಕೊಟ್ಟರಂತೆ. ಅದಕ್ಕೆ ನಮ್ಮ ಕರ್ಜಗಿ ಅವರು ನಮ್ಮ ಶಿಕ್ಷಕರು ತುಂಬಾ ಬಡ ಮೇಷ್ಟ್ರು ಪೂರ್ ಟೀಚರ್ ಎಂದು ಇಂಗ್ಲಿಷಿನಲ್ಲಿ ಬರೆದಿದ್ದರಂತೆ. ಇದನ್ನು ಓದಿದ ಗುರುರಾಜ ಕರ್ಜಗಿ ಅವರ ಮೇಷ್ಟ್ರಿಗೆ ತುಂಬಾ ಬೇಸರ ಆಗಿತ್ತಂತೆ. ಅತ್ಯಂತ ಕೋಪದಿಂದ ಅವರು ಎರಡೆರಡು ನಾಮ ವಿಶೇಷಣಗಳನ್ನ ಹಾಕ್ಬಾರ್ದು ಅಂತ ನಿನಗೆ ಗೊತ್ತಿಲ್ವಾ .ಮೇಷ್ಟ್ರು ಅಂದ್ರೇನೆ ಬಡಪಾಯಿ ಅಂತ ಅರ್ಥ. ಇದೇನು ನೀನು ಬಡಪಾಯಿ ಮೇಷ್ಟ್ರು, ಬಡ ಮೇಷ್ಟ್ರು ಅಂತ ಬರೆದು ಎರಡೆರಡು ನಾಮ ವಿಶೇಷಣಗಳನ್ನ ಹಾಕಿದ್ದೀಯಾ ಅಂತ ನಮ್ಮ ಕರ್ಜಗಿ ಸರ್ ಗೆ ಬೈದ್ಬಿಟ್ಟಿದ್ದರಂತೆ…. ಹೆ ಹೆ! ನಮ್ಮ ಮೇಷ್ಟ್ರುಗಳ ಬಾಳೇ ಇಷ್ಟು ಅಲ್ವಾ!
ಈ ಹಿಂದೆ ನಾವು ಚಿಕ್ಕವರಿದ್ದಾಗ ನಮ್ಮ ಶಾಲೆಯ ಮೇಷ್ಟ್ರನ್ನು ಕಂಡ್ರೆ ನಾವೆಲ್ಲ ಗಡಗಡ ನಡುಗ್ತಾ ಇದ್ವಿ. ಇನ್ನು ಮೇಷ್ಟ್ರು ಮಗ್ಗಿ ಹೇಳು ಅಂತ ಕೈಯಲ್ಲಿ ರೂಲು ಕಟ್ಟಿಗೆ ಹಿಡಿದು ನಿಂತ್ರೆ ಸಾಕ್ಷಾತ್ ಯಮಧರ್ಮರಾಯ ಬಂದ ಎಂಬಂತೆ ನಮ್ಮ ತೊಡೆಗಳಲ್ಲಿ ನಡುಕ ಪ್ರಾರಂಭವಾಗುತ್ತಿತ್ತು. ಇನ್ನು ಹೇಳುವ ಮಗ್ಗಿಯಲ್ಲಿ ಏನಾದ್ರೂ ತಪ್ಪಿದ್ರೆ ಮಾತ್ರ ಬೆರಳು ಮೇಲೆ ಮಾಡಿ ಗಂಟಿನ ಜಾಗದಲ್ಲಿ ಬಡಿದರೆ ಸಾಯುವವರೆಗೂ ನೆನಪಿಡಬೇಕು ಆ ರೀತಿ ಮಗ್ಗಿ ಬಾಯಿ ಪಾಠ ಆಗ್ತಿತ್ತು. ಹಾಗೆಂದು ನಾವೇನು ಮನೆಯಲ್ಲಿ ಹೋಗಿ ಈ ವಿಷಯವನ್ನು ಹೇಳ್ತಾ ಇರಲಿಲ್ಲ, ಯಾಕೆಂದರೆ ಮೇಷ್ಟ್ರು ಹೊಡೆದ ಕಾರಣವನ್ನು ತಿಳಿದು ಸರಿಯಾಗಿ ಹೇಳದೆ ಹೋದ ಕಾರಣಕ್ಕೆ ಮನೆಯಲ್ಲಿ ಮತ್ತೊಂದೆರಡು ಏಟು ಹೆಚ್ಚಾಗಿ ಬೀಳುತ್ತಿತ್ತು. ಬಹುಶಹ ಅಂದು ನಮ್ಮ ಶಿಕ್ಷಕರು ಹಾಗೆ ವರ್ತಿಸಿದ್ದ ಕಾರಣಕ್ಕೆ ನಾವು ಎಲ್ಲ ವಿಷಯಗಳಲ್ಲಿ ತುಸು ಹೆಚ್ಚೇ ಪರಿಣತಿಯನ್ನು ಸಾಧಿಸಿದ್ದೆವು ಎಂದರೆ ತಪ್ಪಿಲ್ಲ. ಬೇಕಿದ್ರೆ ಈಗಲೂ ಕೇಳಿ. ನಾವು ಚಿಕ್ಕವರಿದ್ದಾಗ ಕಲಿತ ಬಳ್ಳಿಗಳು, ಮಗ್ಗಿಗಳು, ದಿನಕರ ದೇಸಾಯಿಯವರ ಚುಟುಕಗಳು ಪಂಜೆ ಮಂಗೇಶರಾಯರ, ಪದ್ಯಗಳು ಇಂದಿಗೂ ನಾಲಿಗೆಯ ತುದಿಯಲ್ಲಿ ನಲಿದಾಡುತ್ತವೆ.
ಬಹುಶಹ ನಮ್ಮದೇ ತಲೆಮಾರು ಇರಬೇಕು ಅತ್ತ ನಮ್ಮ ಮೇಷ್ಟ್ರುಗಳಿಂದ ಏಟು ತಿಂದು ಇದೀಗ ನಮ್ಮ ಮಕ್ಕಳ ತಲೆಮಾರಿನವರಿಂದ, ವಿದ್ಯಾರ್ಥಿಗಳಿಂದ ಕೂಡ ಏಟಿಗಿಂತಲೂ ಹೆಚ್ಚು ನೋವು ಕೊಡುವ ಪಾಲಕರ ಮಾತಿನ ಪ್ರಹಾರವನ್ನು ಸಹಿಸುವವರು.ಇನ್ನು ನಮ್ಮ ಉತ್ತರ ಕರ್ನಾಟಕದ ಮೇಷ್ಟ್ರ ಬವಣೆಯನ್ನು ಅವರ ಮಾತಿನಲ್ಲಿ ಕೇಳುವುದಾದರೆ
ಒಟ್ಟಿಗೆ ನಾವು ಮಾಸ್ತರ್ ಮಂದಿ ಏನ್ ಮಾಡಿದ್ರು ತಪ್ಪ ನೋಡ್ರಿ…. ಬಾಳ ಹೊತ್ತ ವಿವರಣೆ ಕೊಟ್ಟು ಪಾಠ ಹೇಳಿದ್ರೆ ಶುರುವಾತು ನೋಡಪ್ಪ ಇವರ ಭಾಷಣ, ಮುಗಿಯುವುದಿಲ್ಲ ಇನ್ನ ಅಂತ ಅನಸ್ಕೊಬೇಕು. ಕೊರೀತಾನಪ್ಪ ಬೋರು ಅಂತನೂ ಅನತಾರ.ಹೋಗ್ಲಿ ಬಿಡು ಅಂತ ಇದ್ದಷ್ಟೇ ಪಾಠವನ್ನು ಹೇಳಿದರೆಪುಸ್ತಕ ಓದಿ ಹೇಳತಾರೆ…. ಏನು ಡೀಟೇಲ್ ಆಗಿ ಹೇಳಂಗೆ ಇಲ್ಲ, ಪುಸ್ತಕದೊಳಗಿಂದ್ ಓದಿ ಹೇಳಾಕ ಇವರಿಗೆ ಪಗಾರ ಬ್ಯಾರೆ ಕೊಡಬೇಕು ಅಂಬೋ ಮಾತು ಬ್ಯಾರೆ.
ಇನ್ನು ಕ್ರಿಯಾ ಚಟುವಟಿಕೆ ಅಂತ ಹೇಳಿ ನಾವು ಹೇಳಿದ್ರ… ತಾವೇನು ಮಾಡಿ ತೋರ್ಸಂಗಿಲ್ರೀ ಎಲ್ಲಾ ಹುಡುಗರು ಕೈಲೆ ಮಾಡಸತಾರೆ ಅಂತ ನಮ್ಮ ಮಕ್ಕಳ ಪಾಲಕರು ಹೇಳ್ತಾರೆ. ಬಿಟ್ಟಿ ಬ್ಯಾಸರ ಇವರಿಗ್ ಕಲ್ಸಾಕ ಅಂತಾರ
ಸಾಂಪ್ರದಾಯಿಕ ರೀತಿಯ ಪಾಠ ಮಾಡಿದ್ರ ಹೊಸಾದು ಏನು ಕಲ್ಸಂಗಿಲ್ಲ, ಹಳೆ ಆಲದ ಮರಕ್ಕೆ ಜೋತು ಬಿದ್ದಾರ ಅಂತಾರ. ಅದೇನೋ ಕಲಿಕೆ ಬಂದಾವಲ್ರಿ ಅವಾ ಬೇಕಂತಾರ.ಅರ್ಥ ಆಗ್ದಿದ್ರೂ ಪರವಾಗಿಲ್ಲ ಟಸ್ ಪುಸ್ ಇಂಗ್ಲಿಷ್ ನ್ಯಾಗ್ ಹೇಳಿದರೆ ಖುಷಿ ಪಡ್ತಾರೆ… ಅಚ್ಚ ಕನ್ನಡದಾಗ್ ಪಾಠ ಮಾಡಿದ್ರ… ಕನ್ನಡ ಸಾಲಿ ಮಾಸ್ತರ ಇವ್ರು ಇವಕ್ಕ ಎಲ್ಲಿ ಬರಬೇಕ ಇಂಗ್ಲೀಷು ಅಂತಾರ… ಹೆಂಗ್ ಹೇಳಿದ್ರ ಇವರಿಗೆ ಸಮಾಧಾನ ಆಕ್ಕೇತ್ರಿ ಇವರಿಗೆ.
ಆಟ, ವ್ಯಾಯಾಮ, ಲೇಜಿಮ್ ಕಲಿಸಿದರೆ ಬರೀ ಗ್ರೌಂಡ್ ನಲ್ಲಿ ಕಲೇ ಹಾಕ್ತಾರ. ಹುಡುಗರ್ನ ಕಂಟ್ರೋಲ್ ಮಾಡಾಕ್ ಬರಂಗಿಲ್ಲ. ಅವರ ಪಿರಿಯಡ್ ಬರೇ ಗದ್ದಲ ಮಾಡತಾರ ಅಂತ ಹೇಳತಾರ.
ಇನ್ ನಾವ್ ಮಾಸ್ತರ್ಗಳು ಬೈದ್ರಂತೂ ಮುಗದ ಹೋತು. ಮರು ದಿವ್ಸ ಮುಂಜಾನೆ ಸಾಲಿಗ್ ಬಂದ್ ಭಯಂಕರವಾಗಿ ಕೂಗಾಡುತ್ತಾ ನಾವ ನಮ್ಮ ಮಕ್ಕಳಿಗೆ ಒಂದು ದಿನ ಕೈ ಎತ್ತಿಲ್ಲ … ನೀವ್ಯಾರ್ರಿ ಅವರಿಗೆ ಹೊಡಿಯೋಕೆ. ಪೊಲೀಸ್ ಕಂಪ್ಲೇಂಟ್ ಕೊಡ್ತೀವಿ ಎಂದು ಹೆದರಿಸುವ ಆಶೀರ್ವದಿಸುವ ಕೈಗಳಿಂದ ಕ್ಷಮೆ ಕೇಳಿಸುವ ಕ್ರಿಯೆಗಳು ನಡೆದು ನಾವು ಶಿಕ್ಷಕರ ನೈತಿಕ ಬಲವನ್ನು ಕುಗ್ಗಿಸುತ್ತಾರೆ.
ನಾವೇನು ಬೇಕಂತ ಹೊಡೆದಿರ್ತೀವೆನು? ಮಕ್ಕಳಿಗೆ ತುಸು ಕಠಿಣ ಶಿಸ್ತೀಲೆ ಹೇಳ್ಕೊಟ್ರ ಮುಂದೆ ಅವರ ಬದುಕಿಗೆ ಅನುಕೂಲ ಅನ್ನೂದು ನಮ್ಮ ಭಾವ ಅಷ್ಟೇ. ತಾವು ಮನೆಯಲ್ಲಿ ಮಕ್ಕಳನ್ನು ಅವರು ಮೊಂಡಾಗುವಂತೆ ಹೇಗೆ ಬೇಕಾದರೂ ಹೊಡೆಯಲಿ ಬಡಿಯಲಿ ಅದು ಅವರ ಹಕ್ಕು. ಇನ್ನು ಮನೆಯಲ್ಲಿ ವಿಪರೀತ ತುಂಟತನ, ಮೊಂಡುತನ ಮಾಡುವ ಮಕ್ಕಳ ಕುರಿತು ತಾವೇ ದೂರು ನೀಡುವ ನಮ್ಮ ಮಾತು ಕೇಳೋದಿಲ್ಲ ನೀವೇ ಹೇಳಿ ಎಂದು ನಮ್ಮಂತ ಶಿಕ್ಷಕರಿಗೇ ಅಲವತ್ತುಕೊಳ್ಳುವ ಪಾಲಕರು ಶಿಕ್ಷಕರೇನಾದರೂ ಮುಂದುವರೆದು ಮಕ್ಕಳಿಗೆ ಒಂದೇಟು ಹಾಕಿದರೆ ಅವರ ಜನ್ಮವನ್ನು ಜಾಲಾಡಿ ಬಿಡುತ್ತಾರೆ.. ಹಾಗೆಂದು ಹೋಗಲಿ ಬಿಡು ಎಂದು ಶಿಕ್ಷಕರು ಸುಮ್ಮನಾದರೆ ಮಕ್ಕಳ ಬಗ್ಗೆ ಒಂಚೂರು ಕಾಳಜಿ ಇಲ್ಲ ಆ ಮಾಸ್ತರಿಗೆ ಎಂಬ ಮಾತನ್ನು ಕಡ್ಡಾಯವಾಗಿ ಕೇಳಬೇಕಾಗುತ್ತದೆ.
ಮಕ್ಕಳಿಗೆ ದತ್ತ ಚಟುವಟಿಕೆಗಳನ್ನು ನೀಡಿದರೆ ಅವರು ಮಕ್ಕಳ ಮೇಲೆ ಒತ್ತಡ ಹಾಕುತ್ತಾರೆಂದು ನೀಡದೆ ಇದ್ದರೆ ಅಯ್ಯೋ! ಆ ಶಿಕ್ಷಕರು ಮಕ್ಕಳನ್ನು ಪರಿಗಣಿಸುವುದೇ ಇಲ್ಲ ಎಂದು ಮಾತನಾಡುತ್ತಾರೆ.
ಸರಕಾರದ ಯಾವುದೋ ನಿಯಮಾವಳಿಗಳ ಪರಿಣಾಮವಾಗಿ ಅವರಿಗೆ ವರ್ಗಾವಣೆ ಇಲ್ಲವೇ ಪ್ರಮೋಷನ್ ಆಗದೆ ಇದ್ದರೆ ಎಷ್ಟೋ ವರ್ಷದಿಂದ ಇಲ್ಲೇ ಬಿದ್ದಾರ…ಇವರನ್ನು ಬೇರೆ ಕಡೆ ಮೂಸಿ ನೋಡೋರ ಇಲ್ಲ ಎಂದು ಹೇಳುವ ಇವರುಗಳು ಕಾಲಕಾಲಕ್ಕೆ ಅವರಿಗೆ ಎಲ್ಲ ಅನುಕೂಲಗಳು ಸಮಯಾನುಸಾರವಾಗಿ ದೊರಕಿ ವರ್ಗಾವಣೆ ಮತ್ತು ಪ್ರಮೋಷನ್ ಗಳು ಉಂಟಾದರೆ ಏನು ಮಾಡಾಕ ಆಗದೆ ಇದ್ರೂ ಸರಿಯಾದ ಡಾಕುಮೆಂಟ್ ಒದಗಿಸಿ ತನಗೆ ಅನುಕೂಲ ಮಾಡಿಕೊಳೋದ್ರಲ್ಲಿ ಶಾಣೆ ಅದಾರ ಅಂತ ಹೇಳುತ್ತಾರೆ.
ಮುಖ್ಯೋಪಾಧ್ಯಾಯರ ಮಾತುಗಳನ್ನು ಅವರು ಪಾಲಿಸಿದರೆ ಅವರ ಬಾಲ ಬಡುಕರೆಂದೂ, ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಚಿಂತನೆಗಳನ್ನು ಹೇಳಿದರೆ , ತಮ್ಮದೇ ತಾವು ಸಾಧಿಸ್ತಾರೆ ಎಂಬ ಬಿರು ಮಾತುಗಳು ಪಾಲಕರ ಬಾಯಿಂದ ಉದುರುತ್ತವೆ.
ಕಚೇರಿಯ ಮತ್ತು ಶಾಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪುಸ್ತಕಗಳನ್ನು ನಿಧಾನವಾಗಿ ಪರೀಕ್ಷಿಸಿ ವಿಲೇವಾರಿ ಮಾಡುವ ಶಿಕ್ಷಕರು ಲೇಟ್ ಲತೀಫ್ ಎಂದು ಕರೆಯುವ ಇವರುಗಳು ಶಿಕ್ಷಕರು ಶಾಲೆ ಬಿಟ್ಟ ಕೂಡಲೇ ಮನೆಗೆ ಧಾವಿಸಿ ಓಡಿದರೆ ಇಷ್ಟ ಅವಸರ ಇದ್ದರೆ ನೌಕರಿ ಯಾಕೆ ಮಾಡಬೇಕು ಎಂದು ಶರ ಬರೆಯುತ್ತಾರೆ
.. ಒಟ್ಟಿನಲ್ಲಿ ನಾವು ಮಾಸ್ತರ್ ಮಂದಿ ಏನು ಮಾಡಿದರೂ ತಪ್ಪು…. ಹಾಗಾದ್ರೆ ಸರಿ ಯಾವುದು ಅಂತ ನಾವು ಪಾಲಕರನ್ನಾಗಿ ಕೇಳಕ್ಕೆ ಹೋದರೆ ಒಬ್ಬೊಬ್ಬರು ತಲೆಗೊಂದರಂತೆ ಮಾತನಾಡುತ್ತಾರೆ. ಒಟ್ಟಿನಲ್ಲಿ ತಮ್ಮ ಮಕ್ಕಳಿಗೆ ತಮ್ಮ ಯಾವುದೇ ಪ್ರಯತ್ನವಿಲ್ಲದೆಯೇ, ಮಕ್ಕಳಿಗೆ ಯಾವುದೇ ಅಂಕೆ ಅಂಕುಶಗಳಿಲ್ಲದೆ ಕೇವಲ ಶಿಕ್ಷಕರ ಕಾಳಜಿಯಿಂದಲೇ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಆಸೆ ಪಾಲಕರದ್ದು. ಅವರದ್ದು ತಪ್ಪಿಲ್ಲ ಬಿಡಿ ಎಲ್ಲೋ ಒಬ್ಬ ಶಿಕ್ಷಕರು ತಾಳ್ಮೆ ಕಳೆದುಕೊಂಡು ಹಿಗ್ಗಾಮುಗ್ಗ ಹೊಡೆಯುವುದನ್ನು ವಿಡಿಯೋ ಮಾಡಿ ಹೊರಗೆ ಬಿಟ್ಟರೆ ಅದು ಇಡೀ ಶಿಕ್ಷಕ ಸಮೂಹವನ್ನು ಬಾಧಿಸುತ್ತದೆ ಎಂಬುದು ಜನರಿಗೆ ಗೊತ್ತಿಲ್ಲ. ಯಾವ ರೀತಿ ಒಂದೇ ಕೈಯಲ್ಲಿ ಚಪ್ಪಾಳೆ ಆಗೋದಿಲ್ಲೋ ಹಾಗೆ ಶಿಕ್ಷಕರೊಬ್ಬರಿಂದಲೇ ತಪ್ಪು ಘಟಿಸುವುದಿಲ್ಲ.
ಇದೀಗ ನಮ್ಮನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯಕ್ಕೆ ಹಾಕ್ಯಾರ. ನಮಗೆ ಕೊಟ್ಟಿರುವ ಮನೆಗಳಲ್ಲಿ ನಮ್ಮನ್ನು ಕೆಲ ವಿದ್ಯಾವಂತ ನಾಗರಿಕರು ಅನುಮಾನದಿಂದ ನೋಡಿ ಮನೀ ಹೊರಗೆ ನಿಲ್ಲಿಸಿ , ಗಂಟೆಗಟ್ಟಲೆ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ ದಾಖಲಾತಿಗಳನ್ನು ಸರಿಯಾಗಿ ತೋರಿಸದೆ ಸತಾಯಿಸುತ್ತಾರೆ. ಮತ್ತೆ ಕೆಲ ಗ್ರಾಮೀಣ ಭಾಗಗಳಲ್ಲಿ
ಅವಿದ್ಯಾವಂತ ಸಭ್ಯ ಜನರು ತಮಗೆ ನಾವು ಪರಿಚಿತರಲ್ಲದೇ ಹೋದರೂ ನಮ್ಮನ್ನು ಕೂರಿಸಿ ಉಪಚಾರ ಮಾಡಿ ಮಾಧ್ಯಮಗಳಲ್ಲಿ ಕೋರಿಕೊಂಡ ಹಾಗೆ ಎಲ್ಲ ದಾಖಲೆಗಳನ್ನು ನಮ್ಮ ಮುಂದಿಡುತ್ತಾರೆ. ಸಾಧ್ಯವಾದಷ್ಟು ಸರಿಯಾದ ರೀತಿಯಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ, ಇದನ್ನು ನೋಡಿದಾಗ ಶಿಕ್ಷಕರು ಎನಿಸಿಕೊಂಡಿರುವ ಸಾಕ್ಷರರು ಹಾಗೂ ಅಶಿಕ್ಷಿತರು ಎಂದೆನಿಸಿಕೊಂಡ ನಿರಕ್ಷರಿಗಳಲ್ಲಿ ಯಾರು ತಿಳಿವಳಿಕೆಯುಳ್ಳವರು ಎಂಬ ಭಾವ ಮನದಲ್ಲಿ ಮೂಡಿ ತುಸು ಗೊಂದಲವಾಗುತ್ತದೆ.ಯಾರಿಗೆ ಹೇಳೋಣ ರೀ ನಾವು ನಮ್ಮ ಪ್ರಾಬ್ಲಮ್ಮನ….
ವೀಣಾ ಹೇಮಂತ್ ಗೌಡ ಪಾಟೀಲ್


