ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ–16
ಮತ್ತೊಮ್ಮೆ ವರ್ಗಾವಣೆ?

ಮೊದಲ ದಿನ ಮಂಡ್ಯ ಶಾಖೆಗೆ ಹೋದಾಗ…. ಅಲ್ಲಿಯ ವಿಶೇಷತೆ ಎಂದರೆ ಆಫೀಸಿನಲ್ಲಿ ಮಹಡಿ ಮೆಟ್ಟಿಲ ಕೆಳಗೆ ಒಂದು ಸ್ಟೋವ್ ಇಟ್ಟುಕೊಂಡು ಅಲ್ಲಿಯೇ ಕಾಫಿ ಟೀ ಮಾಡಿಕೊಡುತ್ತಿದ್ದ ಪುಟ್ಟ ಕ್ಯಾಂಟೀನ್. ಹೋದ ತಕ್ಷಣ ನಮ್ಮನ್ನು ಸ್ವಾಗತಿಸಿದ ಕೆಲವು ಉದ್ಯೋಗಿಗಳು ಅಲ್ಲಿಯೇ ಟೀ ಕೊಡಿಸಿ ನಂತರ ಶಾಖಾಧಿಕಾರಿಗಳ ಕೋಣೆಗೆ ಕರೆದುಕೊಂಡು ಹೋದರು. ಆಗ ಅಲ್ಲಿ ಪ್ರಭಾಕರ್ ಅವರು ಶಾಖಾಧಿಕಾರಿಗಳು. ಮುಂದೆ ಅವರು ವಲಯ ಮಟ್ಟದ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿದವರು.
ಮೊದಲಿಗೆ ಪರಿಚಯ ಮಾಡಿಕೊಂಡು ಮಾತನಾಡುವಾಗ ನಾನು ನನಗೆ ವರ್ಗಾವಣೆಯಲ್ಲಿ ಆಗಿರುವ ತೊಂದರೆಯ ಬಗ್ಗೆ ತಿಳಿಸಿ ಮರುದಿನ ವಿಭಾಗಾಧಿಕಾರಿಗಳ ಬಳಿ ಮಾತನಾಡಿ ಬಂದ ನಂತರ ವಿಭಾಗವನ್ನು ವಹಿಸಿ ಕೊಡುವಂತೆ ಕೇಳಿಕೊಂಡೆ. ಅದಕ್ಕೆ ಸಮ್ಮತಿಸಿದರು ಬೇರೆಯವರಿಗೆಲ್ಲ ವಿಭಾಗಗಳನ್ನು ವಹಿಸಿಕೊಟ್ಟು ನನಗೆ ಪಾಲಿಸಿ ಸೇವಾ ವಿಭಾಗದಲ್ಲಿ ಒಬ್ಬ ಹಿರಿಯ ಸಹಾಯಕರು ಅನಾರೋಗ್ಯ ನಿಮಿತ್ತ ಒಂದು ತಿಂಗಳಿನಿಂದ ರಜೆ ಇದ್ದಾರೆ. ಅವರ ಕೆಲಸಗಳು ಬಾಕಿ ಉಳಿದಿದೆ ಸದ್ಯಕ್ಕೆ ಅವುಗಳನ್ನು ಕ್ಲಿಯರ್ ಮಾಡಿಕೊಡಿ ಎಂದು ಹೇಳಿದರು.

ಆ ಸೀಟ್ ಪಾಲಿಸಿಗಳನ್ನು ವರ್ಗಾವಣೆ ಮಾಡುವ ಮತ್ತು ಪ್ರೀಮಿಯಂ ಗಳನ್ನು ಲೆಡ್ಜರ್ಗೆ ಪೋಸ್ಟ್ ಮಾಡುವ ಕೆಲಸ. ಆಗ ಕಂಪ್ಯೂಟರ್ ಬಳಕೆ ಇಲ್ಲದ ಕಾರಣ ನಗದು ವಿಭಾಗದಲ್ಲಿ ಕಟ್ಟಿದ ಪ್ರೀಮಿಯಂ ಗಳಿಗೆ ರಶೀದಿಯನ್ನು ನಕಲು ಪ್ರತಿ ಮಾಡಿಕೊಡುತ್ತಿದ್ದರು ಮೂಲ ಪ್ರತಿ ಪಾಲಿಸಿದಾರರಿಗೆ ಕೊಟ್ಟ ನಂತರ ಕಾಪಿಯನ್ನು ಈ ರೀತಿ ಇದ್ದ ಲೆಡ್ಜರ್ಗಳಿಗೆ ಪೋಸ್ಟ್ ಮಾಡಬೇಕಿತ್ತು. ಲೆಡ್ಜರುಗಳು ಪಾಲಿಸಿ ಸಂಖ್ಯೆ ಆಧಾರದಲ್ಲಿ ಇರುತ್ತಿದ್ದವು. ಪ್ರೀಮಿಯಂ ಯಾವ ಬಾಕಿಗೆ ಕಟ್ಟಿದ್ದಾರೆ ಹಾಗೂ ಅದನ್ನು ಕಟ್ಟಿದ ದಿನಾಂಕ ಎರಡನ್ನು ಆ ಲೆಡ್ಜರ್ ನಲ್ಲಿ ಪೋಸ್ಟ್ ಮಾಡಬೇಕಿತ್ತು ಒಂದೊಂದು ಪಾಲಿಸಿಗೆ ಒಂದೊಂದು ಲೆಡ್ಜರ್ ಹಾಳೆ ಅಂತಹ 200 250 ಹಾಳೆಗಳನ್ನು ಸೇರಿಸಿ ದಪ್ಪದಾದ ಒಂದು ಬೈಂಡರಿನಲ್ಲಿ ಸೇರಿಸಿ ಇಡುತ್ತಿದ್ದು ಅಂತಹ 200 300 ಬೈಂಡರ್ ಗಳು ಮಂಡ್ಯ ಶಾಖೆಯಲ್ಲಿ ಇತ್ತು. ಆಗಲೂ ಈಗಲೂ ಅದು ದೊಡ್ಡ ಶಾಖೆಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಟ್ಟಿದೆ. ಮುಂದೆ ಪಾಲಿಸಿಗಳು ಬೇರೆ ಶಾಖೆಗೆ ವರ್ಗಾವಣೆ ಆದಾಗ ಪಾಲಿಸಿ ಕಡೆತಗಳ ಜೊತೆಗೆ ಲೆಡ್ಜರ್ ಶೀಟ್ ಅನ್ನು ಸಹ ಸೇರಿಸಿ ವರ್ಗಾವಣೆ ಮಾಡಬೇಕಿತ್ತು ಎಲ್ಲವೂ ಆಗ ಮಾನ್ಯುಯಲ್ ಕೆಲಸ.
ಮೊದಲಿಗೆ ಲೆಡ್ಜರ್ ಪೋಸ್ಟಿಂಗ್ ಅನ್ನು ಮಾಡಬೇಕು ಎಂದಾಗ ಅದರ ಮಹತ್ವವನ್ನು ತಿಳಿಯಬೇಕು. ಕಟ್ಟಿದ ಪ್ರೀಮಿಯಂ ಲೆಡ್ಜರ್ ನಲ್ಲಿ ಸರಿಯಾಗಿ ಪೋಸ್ಟ್ ಆಗದಿದ್ದರೆ ಪ್ರೀಮಿಯಂ ಪಾವತಿ ಮಾಡಿದ್ದರು ಪಾಲಿಸಿ ಹೋಲ್ಡರರಿಗೆ ಅದು ಸಲ್ಲುವುದಿಲ್ಲ. ಅವರ ಬಳಿ ರಶೀದಿಯನ್ನು ಜೋಪಾನ ಮಾಡಿಟ್ಟುಕೊಳ್ಳದಿದ್ದಾಗ ತುಂಬಾ ಕಷ್ಟ. ಹಾಗಾಗಿ ಲೆಡ್ಜರ್ ಪೋಸ್ಟಿಂಗ್ ಆ ದಿನಗಳಲ್ಲಿ ತುಂಬಾ ಪ್ರಾಮುಖ್ಯತೆ ಪಡೆದ ಕೆಲಸ.
ಇನ್ನು ಫೈಲ್ಗಳನ್ನು ವರ್ಗಾವಣೆ ಮಾಡುವ ಕೆಲಸ. ಪಾಲಿಸಿದಾರರಿಂದ ಅರ್ಜಿ ಬಂದಾಗ ರೆಕಾರ್ಡ್ ಕೊಠಡಿಯಿಂದ ಅವರ ಪಾಲಿಸಿ ದಸ್ತಾವೇಜುಗಳನ್ನು ತರಿಸಿಕೊಂಡು ಅದರಲ್ಲಿನ ಸಹಿ ಹಾಗೂ ಅರ್ಜಿಯಲ್ಲಿನ ಸಹಿ ಎರಡನ್ನು ತಾಳೆ ಮಾಡಿ ನೋಡಿ ಅದು ಸರಿಯಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಪ್ರೀಮಿಯಂ ಲೆಡ್ಜರ್ ಮತ್ತು ಆ ಪಾಲಿಸಿಯಲ್ಲಿ ಸಾಲ ಏನಾದರೂ ಇದ್ದರೆ ಪತ್ರಗಳು ಮತ್ತು ಸಾಲ ಇಷ್ಟನ್ನು ಒಟ್ಟಿಗೆ ಸೇರಿಸಿ ಅವರು ಕೇಳಿದ ಶಾಖೆಗೆ ಒಂದು ಪತ್ರ ಬರೆದು ಅದರಲ್ಲಿ ಸಾಲ ಮತ್ತು ಪ್ರೀಮಿಯಂ ಕಟ್ಟಿದ ಇತ್ತೀಚಿನ ದಿನಾಂಕ ಎಲ್ಲವನ್ನು ನಮೂದಿಸಿ ಮಾಡಿ ಕಳಿಸಬೇಕಿತ್ತು. ಆ ಪತ್ರ ಮೂರು ಕಾಪಿ ಮಾಡಿ ಒಂದನ್ನು ಜೊತೆ ಸಂಬಂಧಿಸಿದ ಶಾಖೆಗೆ ಕಳುಹಿಸಿ ಮತ್ತೊಂದನ್ನು ಪಾಲಿಸಿ ದಾರರಿಗೆ ಕಳುಹಿಸಿ ಮೂರನೆಯ ಕಾಫಿಯನ್ನು ನಮ್ಮಲ್ಲಿಗೆ ಉಳಿದಿರುತ್ತಿದ್ದ ಡಾಕೆಟ್ ಕವರ್ ನಲ್ಲಿ ಹಾಕಿ ಮತ್ತೆ ರೆಕಾರ್ಡ್ ರೂಮಿಗೆ ಕಳಿಸುವುದು. ಇದು ನಗದು ಕಟ್ಟುವ ಪಾಲಿಸಿಗಳಿಗೆ ಸಂಬಂಧಿಸಿದ ಸಂಬಳದಲ್ಲಿ ಹಿಡಿಯುವ ಪಾಲಿಸಿಗಳ ವರ್ಗಾವಣೆಗೆ ವೇತನ ವಿಭಾಗಕ್ಕೆ ಕಳುಹಿಸಿ ಪ್ರೀಮಿಯಂ ಬಂದಿರುವ ದಿನಾಂಕ ಅವರು ನಮೂದಿಸಿ ಕೊಟ್ಟ ನಂತರ ಅದನ್ನು ವರ್ಗಾವಣೆ ಮಾಡುವುದು.
ರೆಕಾರ್ಡ್ ಕೊಠಡಿ ಎಂದು ಪಾಲಿಸಿ ದಸ್ತಾವೇಜುಗಳನ್ನು ಜೋಡಿಸಿ ಇಡುವ ಜಾಗ. ಪಾಲಿಸಿ ಮೊಟ್ಟಮೊದಲಿಗೆ ಮಾಡುವಾಗ ತೆಗೆದುಕೊಂಡ ಎಲ್ಲಾ ದಾಖಲಾತಿಗಳೊಂದಿಗೆ ಹಾಗಾಗಿ ನಡೆದ ಎಲ್ಲಾ ಅಂಶಗಳ ಕಚೇರಿ ಪ್ರತಿಗಳು ಅದರಲ್ಲಿ ಇರುತ್ತದೆ. ಇವುಗಳನ್ನು ದಪ್ಪದಾದ ಒಂದು ಉದ್ದ ಕಂದು ಬಣ್ಣ ಖಾಕಿ ಬಣ್ಣದ ಲಕೋಟೆಯ ಒಳಗೆ ಇಟ್ಟು ಅದರ ಒಂದು ತುದಿಯಲ್ಲಿ ಪಾಲಿಸಿ ಸಂಖ್ಯೆಯನ್ನು ಬರೆಯಲಾಗುತ್ತದೆ .ಸಂಖ್ಯೆಗಳ ಅನುಸಾರ ಅದನ್ನು ಜೋಡಿಸಿಟ್ಟಿರಲಾಗುತ್ತದೆ ಯಾರಿಗಾದರೂ ಯಾವುದಾದರೂ ಪಾಲಿಸಿಯ ಜಾಕೆಟ್ ಬೇಕಾದರೆ ಒಂದು ದಪ್ಪ ರಟ್ಟಿನ ಹಳೆ ಇರುತ್ತದೆ ಅದರ ಮೇಲೆ ಯಾವ ವಿಭಾಗದಿಂದ ತೆಗೆದುಕೊಂಡಿದೆ ಹಾಗೂ ದಿನಾಂಕ ಬರೆದುಕೊಳ್ಳುವವರ ಸಹಿ ಹಾಕಿ ರೆಕಾರ್ಡ್ ಕೊಠಡಿ ಮೇಲ್ವಿಚಾರಕರಿಗೆ ಕೊಡಬೇಕು ನಮಗೆ ಡಾಕೆಟನ್ನು ಕೊಟ್ಟಾಗ ನಾವು ಕೊಟ್ಟ ಚೀಟಿಯನ್ನು ಅಲ್ಲಿ ಇಟ್ಟಿರುತ್ತಾರೆ ಹಾಗಾಗಿ ಮತ್ತೆ ಯಾರಿಗಾದರೂ ಅದರ ಅವಶ್ಯಕತೆ ಬಂದಲ್ಲಿ ಯಾರ ಬಳಿ ಇದೆ ಎನ್ನುವ ಮಾಹಿತಿ ತಿಳಿಯುತ್ತದೆ.
ಆ ಸೀಟ್ನಲ್ಲಿ ಇದ್ದವರು ಒಂದು ತಿಂಗಳಿನಿಂದ ಕೆಲಸಕ್ಕೆ ಬಾರದೆ ಇದ್ದಿದ್ದರಿಂದ ವರ್ಗಾವಣೆ ಅರ್ಜಿಗಳು ಸಾಕಷ್ಟು ಇದ್ದವು. ಆದರೆ ಪ್ರೀಮಿಯಂ ಪೋಸ್ಟಿಂಗ್ ಕೆಲಸವು ಆಗದೇ ಇದ್ದಿದ್ದರಿಂದ ನಗದು ಕಟ್ಟುವ ಪಾಲಿಸಿಗಳ ವರ್ಗಾವಣೆ ಆ ಕೆಲಸ ಆಗುವ ತನಕ ಸಾಧ್ಯವಿರಲಿಲ್ಲ. ನಾನು ಮೊದಲಿಗೆ ಅರ್ಜಿಗಳನ್ನು ವೇತನ ಉಳಿತಾಯ ಮತ್ತು ನಗದು ಈ ರೀತಿ ಎರಡು ಭಾಗ ಮಾಡಿಕೊಂಡು ವೇತನ ಉಳಿತಾಯದ ಫೈಲ್ಗಳನ್ನು ರೆಕಾರ್ಡ್ ರೂಮಿನಿಂದ ತರಿಸಿ ಅವೆಲ್ಲವನ್ನು ಅರ್ಜಿಗಳೊಂದಿಗೆ ಹೊಂದಿಸಿ ವೇತನ ಉಳಿತಾಯ ವಿಭಾಗಕ್ಕೆ ಮೊದಲು ಕಳಿಸಿ ಕೊಟ್ಟೆ .ನಂತರ ಶುರು ಮಾಡಿದ್ದು ಲೆಡ್ಜರ್ ಪೋಸ್ಟಿಂಗ್ ನ ಕೆಲಸ.
ಮೊದಲಿಗೆ ಆಯಾ ದಿನದ ರಶೀದಿಗಳನ್ನು ತೆಗೆದುಕೊಂಡು ಸ್ಥೂಲವಾಗಿ ಪಾಲಿಸಿ ಸಂಖ್ಯೆಗಳ ಅನುಸಾರ ಜೋಡಿಸಿಟ್ಟುಕೊಂಡೆ.
ಹಾಗೆ ಎರಡು ಮೂರು ದಿನಗಳದನ್ನು ಜೋಡಿಸಿಕೊಂಡು ನಂತರ ಸಂಬಂಧಿಸಿದ ಫೋಲ್ಡರ್ ಗಳನ್ನು ತೆಗೆದು ಅವುಗಳಲ್ಲಿ ಪೋಸ್ಟ್ ಮಾಡಲು ಆರಂಭಿಸಿದೆ. ಹಾಗೆ ಮಾಡುವಾಗ ಕೆಲವೊಂದು ಅಡಚಣೆಗಳು ಎದುರಾದವು. ವಾಯಿದೆ ಮುಗಿದು ಹಣ ಪಾವತಿ ಆದ ಪಾಲಿಸಿಗಳ ಅಥವಾ ಇನ್ನಿತರ ಚಾಲ್ತಿಯಲ್ಲಿರದ ಅವಶ್ಯಕತೆ ಇರದ ಪಾಲಿಸಿಗಳ ಲೆಡ್ಜರ್ ಶೀಟ್ ಗಳು ಕಂಡು ಬಂದವು. ವರ್ಗಾವಣೆ ಆಗಿ ಶಾಖೆಗೆ ಬಂದ ಲೆಡ್ಜರ್ ಶೀಟ್ ಗಳು ಹಲವಾರು ಆಯಾ ಜಾಗಕ್ಕೆ ಸೇರಿರಲಿಲ್ಲ. ಹಾಗಾಗಿ ಮೊದಲು ಅವುಗಳ ಕೆಲಸ ಮುಗಿಸಿ ಪೋಸ್ಟಿಂಗ್ ಮಾಡಿದರೆ ಒಳ್ಳೆಯದು ಎಂದು ಸದ್ಯಕ್ಕೆ ಪೋಸ್ಟಿಂಗ್ ಅನ್ನು ನಿಲ್ಲಿಸಿ ಲೆಡ್ಜರ್ ಶೀಟ್ ಗಳನ್ನು ಆಯಾ ಫೋಲ್ಡರ್ರ್ ಗಳಿಗೆ ಸೇರಿಸುವ ಕೆಲಸ ಆರಂಭಿಸಿದೆ. ಆಗ ಅದಕ್ಕಾಗಿ ಒಂದು ಸಾಧನ ಇತ್ತು .ಅದರಿಂದ ಫೈಲ್ ಫೋಲ್ಡರ್ ಅನ್ನು ತೆಗೆದು ಬೇಕಾದ ಲೆಡ್ಜರ್ ಹಾಳೆ ಸೇರಿಸಿ ಅಥವಾ ಹೊರಗೆ ತೆಗೆದು ನಂತರ ಅದನ್ನು ಮತ್ತೆ ಫಿಟ್ ಮಾಡಬೇಕಿತ್ತು. ಆ ಕೆಲಸ ನನಗೆ ಮೊದಲು ಬರುತ್ತಿರಲಿಲ್ಲ ನಮ್ಮ ಅಧಿಕಾರಿಗಳು ಅದನ್ನು ಹೇಳಿಕೊಟ್ಟರು. ರಾವ್ ಅಂತ ಅಲ್ಲಿನ ಆಫೀಸರ್.
ಇಲ್ಲಿನ ಮತ್ತೊಂದು ವೈಶಿಷ್ಟ್ಯ ನಾನು ಗಮನಿಸಿದ್ದು ಎಂದರೆ ಬೇರೆ ಕಡೆ ಎಲ್ಲ ಪಾಲಿಸಿ ಸೇವಾ ವಿಭಾಗ ಕೆಳಗೆ ಇರುತ್ತದೆ ಆದರೆ ಇಲ್ಲಿ ಮಾತ್ರ ಮಹಡಿಯ ಮೇಲೆ ಇದ್ದುದು. ಲೆಡ್ಜರ್ ಕೊಠಡಿ ಹಾಗೂ ರೆಕಾರ್ಡ್ಸ್ ಕೊಠಡಿಗಳು ಮಹಡಿಯ ಮೇಲೆ ಇದ್ದುದು ಅದಕ್ಕೆ ಕಾರಣ ಎಂದೆನಿಸುತ್ತದೆ.
ಮಧ್ಯಾಹ್ನ 12 ಗಂಟೆಗೆ ಹಾಗೂ ಅಪರಾಹ್ನ ನಾಲ್ಕು ಗಂಟೆಗೆ ಕೆಳಗೆ ಇಳಿದು ಹೋಗುತ್ತಿದ್ದೆ. ಕೆಳಗೆ ಇದ್ದ ಗಾಯತ್ರಿ ಹಾಗೂ ಟೈಪಿಸ್ಟ್ ಮಂಜುಳಾ ಜೊತೆಗೆ ಅಲ್ಲಿನ ಮತ್ತೊಬ್ಬ ಸಹಾಯಕಿ ಸುಧಾ ಮತ್ತು ಭಾಗ್ಯ ಎಲ್ಲರೂ ಅಲ್ಲಿಗೆ ಬರುತ್ತಿದ್ದರು. ಒಂದು ಹತ್ತು ನಿಮಿಷ ಮಾತನಾಡುತ್ತಾ ಟೀ ಕುಡಿದು ಮತ್ತೆ ಕೆಲಸ ಆರಂಭಿಸುತ್ತಿರುವುದು .ಮಧ್ಯಾಹ್ನ ಊಟದ ಸಮಯದಲ್ಲಿ ಮಂಜುಳಾ ಮತ್ತು ಗಾಯತ್ರಿ ಮಹಡಿಯ ಮೇಲೆ ನನ್ನ ಸೀಟ್ ಬಳಿಗೆ ಬರುತ್ತಿದ್ದರು ಒಟ್ಟಿಗೆ ಊಟ ಮಾಡುತ್ತಿದ್ದೆವು.
ಹೀಗೆ ಮೊದಲ ದಿನದ ಕಾರ್ಯಕ್ರಮ ಮುಗಿಸಿ ಮಾರನೆಯ ದಿನ ಸೆಪ್ಟೆಂಬರ್ 4 ರವೀಶ್ ಅವರ ಹುಟ್ಟುಹಬ್ಬ ಹಾಗೂ ಅಂದೇ ಸುಂದರ ಮೂರ್ತಿಯವರು ಮೈಸೂರು ವಿಭಾಗ ಕಚೇರಿಗೆ ಬರಲು ಹೇಳಿದ್ದರಿಂದ ಅಂದಿಗೆ ರಜೆ ಅರ್ಜಿ ಕೊಟ್ಟು ಹೊರಟಿದ್ದಾಯಿತು.
ಮಾರನೆಯ ದಿನ ರವೀಶ್ ಅವರ ಹುಟ್ಟು ಹಬ್ಬದ ಮಾಮೂಲಿನ ಕಾರ್ಯಕ್ರಮದಂತೆ ಮೊದಲಿಗೆ ದೇವಸ್ಥಾನಕ್ಕೆ ಹೋಗಿ ನಂತರ ಮೈಸೂರು ವಿಭಾಗಿಯ ಕಚೇರಿಗೆ ಹೋದೆವು . ನಮ್ಮ ತಂದೆಯೂ ರಜೆ ಹಾಕಿ ನಮ್ಮೊಂದಿಗೆ ಬಂದಿದ್ದರು. ಆಗ ಅದು ನಜರ್ಬಾದ್ ನಲ್ಲಿ ಇದ್ದಿದ್ದು. ಈ ಮೊದಲೇ ಪರಿಚಯ ಇದ್ದ ನಾಗರಾಜ ಗುಪ್ತ ಪುರುಷೋತ್ತಮ್ ಕುಮಾರಸ್ವಾಮಿ ಇವರುಗಳೊಂದಿಗೆ ಬಾಲಾಜಿ ನರಸಿಂಹ ಮೊದಲಾದ ಕಾರ್ಮಿಕ ಸಂಘದ ಅಧಿಕಾರಿಗಳ ಪರಿಚಯವು ಆಯಿತು.
ಆಗ ಮೈಸೂರು ವಿಭಾಗದ ಕಾರ್ಮಿಕ ಮತ್ತು ಔದ್ಯೋಗಿಕ ಸಂಬಂಧಗಳ ವಿಭಾಗದ ವ್ಯವಸ್ಥಾಪಕರು ಅಪ್ಪಣ್ಣ ಎಂಬುವವರು. ಮೊದಲಿಗೆ ಅವರ ಕೊಠಡಿಗೆ ಸುಂದರಮೂರ್ತಿ ನಾನು ಪುರುಷೋತ್ತಮ್ ಹಾಗೂ ಕುಮಾರಸ್ವಾಮಿ ಅವರು ಹೋದೆವು. ಸಿದ್ಧಪಡಿಸಿಕೊಂಡಿದ್ದ ನನ್ನ ಅರ್ಜಿಯನ್ನು ಕೊಟ್ಟಾಗ ಅವರು ಅದನ್ನು ನೋಡಿ ಕೆಲವೊಂದು ಕಡತಗಳನ್ನು ಪರೀಕ್ಷಿಸಿ ಹೌದು ಇಲ್ಲಿ ತಪ್ಪಾಗಿದೆ ಎಂದು ಹೇಳಿದರು. ಬೆಂಗಳೂರು ವಿಭಾಗದಿಂದ ವರ್ಗಾವಣೆ ಆಗಿ ಬರುವ ಉದ್ಯೋಗಿಗಳ ಪಟ್ಟಿ ಮಾಡುವಾಗ ಮೊದಲ ಬ್ಯಾಚ್ನ ನಮ್ಮ ಪಟ್ಟಿ ಹಾಗೂ ಆಗಸ್ಟ್ ನಲ್ಲಿ ನೇಮಕವಾದ ಎರಡನೆಯ ಬ್ಯಾಚ್ನ ಮತ್ತೊಂದು ಪಟ್ಟಿ ಎರಡನ್ನು ಬೇರೆಬೇರೆಯಾಗಿ ತಯಾರು ಮಾಡಿ ವಯಸ್ಸಿನ ಅನುಸಾರ ಶಾಖೆಗಳನ್ನು
ಹಂಚಬೇಕಿತ್ತು ಆದರೆ ಕೈ ತಪ್ಪಿನಿಂದಾಗಿ ಎಲ್ಲಾ ಉದ್ಯೋಗಿಗಳ ಒಂದೇ ಪಟ್ಟಿಯನ್ನು ತಯಾರಿಸಿ ಆ ಪಟ್ಟಿಯಲ್ಲಿ ವಯಸ್ಸಿನಲ್ಲಿ ಅತ್ಯಂತ ಕಿರಿಯವಳಾದ ನನ್ನದು ಕಡೆಯ ಸ್ಥಾನ ಪಡೆದಿತ್ತು .ಹಾಗಾಗಿ ಬೇರೆಯವರಿಗೆಲ್ಲ ಶ್ರೀರಂಗಪಟ್ಟಣ ಮತ್ತು ನಂಜನಗೂಡು ಸಿಕ್ಕಿದ್ದು ನನಗೆ ಮಾತ್ರ ಅಲ್ಲಿ ಹೆಚ್ಚಿನ ಅವಕಾಶ ಇಲ್ಲದಿದ್ದರಿಂದ ದೂರದ ಮಂಡ್ಯಗೆ ಪೋಸ್ಟಿಂಗ್ ಆಗಿತ್ತು. ಈ ಪ್ರಮಾದವನ್ನು ಒಪ್ಪಿಕೊಂಡ ವ್ಯವಸ್ಥಾಪಕರು ಅರ್ಜಿಯನ್ನು ಪರಿಶೀಲಿಸುವುದಾಗಿ ಹೇಳಿದರು ಆದರೆ ಸುಂದರ ಮೂರ್ತಿ ಅವರು ಅಷ್ಟಕ್ಕೆ ಸುಮ್ಮನಾಗದೆ ನಾವು ವಿಭಾಗಿಯ ವ್ಯವಸ್ಥಾಪಕರನ್ನು ಸಹ ಭೇಟಿಯಾಗುತ್ತೇವೆ ಎಂದು ಹೇಳಿ ಅವರ ಕೋಣೆಗೆ ಕರೆದುಕೊಂಡು ಹೋದರು. ಆಗ ವೇಣುಗೋಪಾಲ್ ಅವರು ಮೈಸೂರು ವಿಭಾಗದ ಪ್ರಪ್ರಥಮ ವ್ಯವಸ್ಥಾಪಕರು. ನಮ್ಮೊಂದಿಗೆ ಕಾರ್ಮಿಕ ವಿಭಾಗದ ವ್ಯವಸ್ಥಾಪಕರು ಸಹ ಬಂದು ಇರುವ ಪರಿಸ್ಥಿತಿಯನ್ನು ವಿಭಾಗ ವ್ಯವಸ್ಥಾಪಕರಿಗೆ ವಿವರಿಸಿದರು. ಅವರು ಸಹ ತಾಳ್ಮೆಯಿಂದ ಎಲ್ಲವನ್ನು ಕೇಳಿಕೊಂಡು ಆಯಿತು ಈ ತಪ್ಪನ್ನು ಸರಿ ಮಾಡಿ ನಿಮಗೆ ಶ್ರೀರಂಗಪಟ್ಟಣ ಅಥವಾ ನಂಜನಗೂಡು ಯಾವುದು ಬೇಕು ಹೇಳಿ ಅಲ್ಲಿಗೆ ಪೋಸ್ಟ್ ಮಾಡಿ ಕೊಡುತ್ತೇವೆ ತಕ್ಷಣಕ್ಕೆ ಆಗುವುದಿಲ್ಲ 15 20 ದಿನಗಳ ನಂತರ ನಿಮಗೆ ಆದೇಶ ಬರುತ್ತದೆ ಎಂದರು.
ಆಗ ನಂಜನಗೂಡಿಗೆ ರೈಲು ಸಂಪರ್ಕ ಚೆನ್ನಾಗಿ ಇದ್ದುದರಿಂದಲೂ ನಮ್ಮ ಮನೆಯಿಂದ ಅಶೋಕಪುರಂ ರೈಲ್ವೆ ನಿಲ್ದಾಣ ನಡೆಯುವ ದೂರದಲ್ಲಿ ಈ ಇದರಿಂದಲೂ ಅನುಕೂಲವಾಗುತ್ತದೆ ಎಂದುಕೊಂಡು ನಂಜನಗೂಡಿಗೆ ಪೋಸ್ಟ್ ಮಾಡಲು ನನ್ನ ಅರ್ಜಿಯನ್ನು ಕೊಟ್ಟೆ. ಹೀಗೆ ತಕ್ಷಣವೇ ವರ್ಗಾವಣೆ ಮಾಡಿಕೊಡಲು ಒಪ್ಪುವುದಕ್ಕೆ ಸುಂದರಮೂರ್ತಿಯವರ ಸಹಕಾರವೇ ತುಂಬಾ ಮುಖ್ಯ ಕಾರಣ ಎನ್ನಬಹುದು.
ಮಾರನೆಯ ದಿನ ಮಂಡ್ಯ ಶಾಖೆಗೆ ಹಿಂದಿರುಗಿ ಶಾಖಾಧಿಕಾರಿಗಳಾದ ಪ್ರಭಾಕರ್ ಅವರಿಗೆ ಈ ವಿಷಯ ತಿಳಿಸಿ ಸದ್ಯದಲ್ಲೇ ನನಗೆ ವರ್ಗದ ಆದೇಶ ಬರುತ್ತದೆ ಎಂಬ ವಿಷಯವನ್ನು ಹೇಳಿದೆ .ಆಗವರು ಹಾಗದರೆ ಸದ್ಯಕ್ಕೆ ಈಗ ಇರುವ ಸೀಟ್ನಲ್ಲಿಯೇ ಕೆಲಸ ಮಾಡುತ್ತಿರಿ ಎಂದು ತಿಳಿಸಿದರು.
ನಾನು ಮೊದಲೇ ತಿಳಿಸಿದಂತೆ ಪಾಲಿಸಿ ಸಂಖ್ಯೆಗಳ ಅನುಸಾರ ಫೋಲ್ಡರ್ಗಳಲ್ಲಿ ಜೋಡಿಸಲಾಗುತ್ತದೆ ಹಾಗೂ ಆ ಫೋಲ್ಡರ್ ಗಳಿಗೆ ಒಂದೊಂದು ಸಂಖ್ಯೆ ಕೊಡುತ್ತೇವೆ ಆ ಸಂಖ್ಯೆಗಳ ಅನುಸಾರ ಅವುಗಳನ್ನು ಕಪಾಟುಗಳಲ್ಲಿ ಜೋಡಿಸಿ ಇಡುವುದು. ಹೀಗೆ ಪ್ರತಿಯೊಂದು ಫೋಲ್ಡರ್ಗಳಲ್ಲಿ ಯಾವ ಪಾಲಿಸಿ ಸಂಖ್ಯೆಯಿಂದ ಯಾವ ಪಾಲಿಸಿ ಸಂಖ್ಯೆ ತನಕ ಇರುತ್ತದೆ ಎನ್ನುವುದನ್ನು ಒಂದು ರಟ್ಟಿನ ಶೀಟ್ ನಲ್ಲಿ ಬರೆದು ಇಟ್ಟರೆ ಆಗ ಅದದೇ ಫೋಲ್ಡರ್ ತೆಗೆದುಕೊಳ್ಳಲು ಅನುಕೂಲ. ಹಳೆಯ ಶೀಟ್ ಗಳನ್ನು ತೆಗೆದು ಹೊಸ ಶೀಟ್ ಗಳನ್ನು ಸೇರಿಸಿದುದರಿಂದ ಈ ಮೊದಲೇ ಇದ್ದ ರಟ್ಟಿನ ಶೀಟ್ ಗಳು ಹೆಚ್ಚು ಉಪಯೋಗಕ್ಕೆ ಬರುವಂತೆ ಇರಲಿಲ್ಲ ಹಾಗಾಗಿ ಪ್ರತಿಯೊಂದು ಫೋಲ್ಡರ್ ನ ಮೊದಲ ಕೊನೆಯ ಸಂಖ್ಯೆ ಬರೆದು ಫೋಲ್ಡರ್ ಸಂಖ್ಯೆ ಬರೆದು ಹೊಸದಾಗಿ ತಯಾರಿಸಿದೆ .ಅವುಗಳನ್ನು ಗುಂಡಾಗಿ ಬಣ್ಣ ಬಣ್ಣದ ಸ್ಕೆಚ್ ಪೆನ್ಗಳಲ್ಲಿ ಬರೆದು ಎಲ್ಲವನ್ನು ನೀಟಾಗಿ ಅಂಟಿಸಿ ನೇತು ಹಾಕಿ ಅಂತೂ ಫೋಲ್ಡರ್ ರೂಮಿಗೆ ಹೊಸ ಕಳೆ ಬರುವಂತೆ ಮಾಡಿದೆ .ನಂತರ ಆಯಾ ದಿನಗಳ ರಶೀದಿಗಳ ಪೋಸ್ಟಿಂಗ್ ಕೆಲಸವನ್ನು ಆರಂಭಿಸಿದೆ.
ಹಳೆಯದನ್ನು ಮಾಡುತ್ತ ಈಗಿನದನ್ನು ಪೆಂಡಿಂಗ್ ಇಡುವ ಇಷ್ಟ ನನಗಿರಲಿಲ್ಲ. ಹಾಗಾಗಿ ಹಿಂದಿನ ದಿನದ ಪೋಸ್ಟಿಂಗ್ ಅನ್ನು ಮೊದಲು ಮುಗಿಸಿ ನಂತರ ಹಳೆಯ ಪೆಂಡಿಂಗ್ ಗಳ ಕೆಲಸವನ್ನು ಮಾಡುತ್ತಿದ್ದೆ. ದಿನಕ್ಕೆ ಐದು-ಆರು ದಿನಗಳ ಪ್ರೀಮಿಯಂ ಪೋಸ್ಟಿಂಗ್ ಮುಗಿಸಲು ಸಾಧ್ಯವಾಗುತ್ತಿತ್ತು ನನ್ನ ಕೆಲಸದ ವೈಖರಿ ನನ್ನ ಅಧಿಕಾರಿ ರಾವ್ ಅವರಿಗೆ ತುಂಬಾ ಇಷ್ಟ ಆಗಿಬಿಟ್ಟಿತ್ತು. ಎಷ್ಟೋ ದಿನಗಳಿಂದ ಹಾಗೆಯೇ ಬಿದ್ದಿದ್ದ ಕೆಲಸ ಸರಿ ಮಾಡುವ ಜೊತೆಗೆ ಫೋಲ್ಡರ್ಸ್ ಗಳ ಮರು ಜೋಡಣೆ ವಿಂಗಡಣೆ ಹಾಗೂ ಅವುಗಳ ಲಿಸ್ಟ್ ತಯಾರಿಸುವಿಕೆ ಅವರಿಗೆ ತುಂಬಾ ಖುಷಿ ಕೊಟ್ಟಿತ್ತು ಇವೆಲ್ಲವನ್ನೂ ಮೊದಲಿಗೆ ಮಾಡಿಕೊಂಡಿದ್ದರಿಂದ ನನಗೆ ಹಿಂದಿನ ಪೆಂಡಿಂಗ್ ಹಾಗೂ ಆಯಾ ದಿನಗಳ ಪೋಸ್ಟಿಂಗ್ ಮಾಡಲು ಬಹಳ ಸಹಾಯಕವಾಯಿತು.
ಅಷ್ಟರಲ್ಲಿ ವೇತನ ಉಳಿತಾಯದ ಪ್ರೀಮಿಯಂ ಪರಿಸ್ಥಿತಿಯನ್ನು ಉಲ್ಲೇಖಿಸಿ ಆ ವಿಭಾಗದಿಂದ ವರ್ಗಾವಣೆ ಫೈಲ್ ಗಳು ವಾಪಸ್ಸು ಬಂದಿದ್ದವು. ಅವುಗಳ ವರ್ಗಾವಣೆ ಮುಗಿಸಿ ವೇತನ ಉಳಿತಾಯದ ವರ್ಗಾವಣೆ ಅರ್ಜಿಗಳನ್ನು ಅಂದಂಧಿನ ದಿನದ್ದು ಮಾರನೆಯ ದಿನವೇ ಮಾಡಲು ಆರಂಭಿಸಿದೆ ಹಾಗಾಗಿ ಅದರಲ್ಲಿ ಪೆಂಡಿಂಗ್ ಪ್ರಶ್ನೆ ಬರಲಿಲ್ಲ.
ಕೆಲವೇ ದಿನಗಳಲ್ಲಿ ನಗದು ಪಾವತಿ ಮಾಡುವ ಪಾಲಿಸಿಗಳ ಹಳೆಯ ಒಂದು ತಿಂಗಳಿನ ಪೆಂಡಿಂಗ್ ಕೆಲಸ ಮುಗಿದಿತ್ತು ಅದರೊಂದಿಗೆ ನಾನು ಬಂದ ನಂತರ ಬಂದಿದ್ದ ಇತ್ತೀಚಿನ ಪಾವತಿಗಳ ಪೋಸ್ಟಿಂಗ್ ಸಹ ಮುಗಿದಿತ್ತು. ಆನಂತರ ಹಳೆಯ ವರ್ಗಾವಣೆ ಅರ್ಜಿಗಳ ವಿಲೇವಾರಿ ಆರಂಭಿಸಿ ಹಿಂದಿನ ದಿನದ ಪೋಸ್ಟಿಂಗ್ ನಂತರ ವರ್ಗಾವಣೆ ಕೆಲಸ ಈ ರೀತಿ ಮಾಡುತ್ತಾ ನಾನು ಅಲ್ಲಿಂದ ವರ್ಗವಾಗುವ ಒಳಗೆ ಹಳೆಯ ಪೆಂಡಿಂಗ್ ಕೆಲಸಗಳು ಅಷ್ಟು ಮುಗಿದಿತ್ತು ನಾನು ರಿಲೀವ್ ಆಗುವ ದಿನದ ಅರ್ಜಿಗಳು ಮಾತ್ರ ಬಾಕಿ ಉಳಿದಿದ್ದವು.
ಮಧ್ಯೆ ಒಂದು ದಿನ ಶಾಖಾಧಿಕಾರಿಗಳ ಕೋಣೆಗೆ ಹೋಗಲು ಬುಲಾವ್ ಬಂತು ಸಾಮಾನ್ಯ ಹಾಗೆ ಕರೆಸದೆ ಇದು ಇದರಿಂದ ನನಗೆ ಒಂದು ಸಣ್ಣ ಅಳುಕು. ಅಲ್ಲಿಗೆ ಹೋದಾಗ ಕಾಫಿ ಬಿಸ್ಕೆಟ್ ತರಿಸಿ ನನ್ನ ವರ್ಗಾವಣೆ ಆದೇಶವನ್ನು ನನಗೆ ನೀಡಿದರು ನಂಜನಗೂಡಿಗೆ ವರ್ಗಾವಣೆಯಾಗಿ ಅಕ್ಟೋಬರ್ ಒಂದರಂದು ರಿಲೀವ್ ಆಗಲು ಆದೇಶ ಬಂದಿತ್ತು. ನನ್ನ ಕಾರ್ಯ ವೈಖರಿಯನ್ನು ಬಹಳವೇ ಮೆಚ್ಚಿದ ಶಾಖಾಧಿಕಾರಿಗಳು ಒಂದು ತಿಂಗಳಲ್ಲಿ ಇಷ್ಟೆಲ್ಲಾ ಸಾಧಿಸಿದ್ದೀರಿ ನಿಮ್ಮಂಥ ಒಳ್ಳೆಯ ಕೆಲಸಗಾರರು ಹೆಚ್ಚು ದಿನ ನಮ್ಮಲ್ಲಿ ಇಲ್ಲದೆ ಹೋಗಿದ್ದು ನಿಜಕ್ಕೂ ನಮ್ಮ ಶಾಖೆಗೆ ಆದ ನಷ್ಟ ಎಂದೆಲ್ಲ ಹೊಗಳಿದರು. ಇದಕ್ಕೆಲ್ಲ ಮೂಲ ಕಾರಣ ನಮ್ಮ ತಂದೆ ಹೇಳುತ್ತಿದ್ದ ಮಾತುಗಳು ಯಾವುದೇ ಕೆಲಸವನ್ನು ಕೂಲಂಕಷವಾಗಿ ಕಲಿಯಬೇಕು. ನಂತರ ಅದನ್ನು ತಪ್ಪಿಲ್ಲದೆ ಮಾಡಿ ಆನಂತರ ಎಷ್ಟು ಶೀಘ್ರವಾಗಿ ಮುಗಿಸಲು ಸಾಧ್ಯ ಎಂದು ಯೋಚಿಸಿ ಅದರಂತೆ ಮಾಡಬೇಕು. ಅನ್ನ ಕೊಡುವ ಸಂಸ್ಥೆಗೆ ನಾವು ಎಷ್ಟು ಋಣಿಗಳಾಗಿದ್ದರು ಸಾಲದು. ಹಾಗಾಗಿ ಚೌಕಟ್ಟು ಹಾಕಿಕೊಳ್ಳದೆ ಕೆಲಸ ಮಾಡುವುದು ತುಂಬಾ ಮುಖ್ಯ ಎಂದು. ಈಗ ಎಷ್ಟು ವೃತ್ತಿಪರ ಸೆಮಿನಾರ್ಗಳಲ್ಲಿ ಹೇಳುವ ಔಟ್ ಆಫ್ ಬಾಕ್ಸ್ ಕಾನ್ಸೆಪ್ಟ್ ಅಂದರೆ ಇದೇ. ಅದನ್ನೇ ಅನುಸರಿಸಿದ ನನಗೆ ಚಿಕ್ಕಬಳ್ಳಾಪುರ ಶಾಖೆಯನ್ನು ಸಹ ತುಂಬಾ ಒಳ್ಳೆಯ ಹೆಸರಿತ್ತು ಇಲ್ಲಿ ಮಂಡ್ಯದಲ್ಲಿ ಸಹ ಬಹಳವೇ ಮೆಚ್ಚುಗೆ ಸಂದಿತು.
ಬಂದು ಒಂದೇ ತಿಂಗಳು ಆಗಿದ್ದರಿಂದ ಈ ಶಾಖೆಯಲ್ಲಿ ಊಟ ಕೊಡಿಸಲು ಹೋಗಲಿಲ್ಲ. ಮೈಸೂರಿನ ಫಾರಸ್ ಹೋಟೆಲ್ ನಿಂದ ಸಿಹಿ ತಂದೆ. ಹಂಚಿ ಆ ಶನಿವಾರ ಮಧ್ಯಾಹ್ನ ಮಂಡ್ಯ ಶಾಖೆಯಿಂದ ಬಿಡುಗಡೆ ಹೊಂದಿದೆ. ಗಾಯತ್ರಿ ದೇವಿ ತುಂಬಾನೇ ಬೇಸರ ಮಾಡಿಕೊಂಡಳು. ಇನ್ನು ಮುಂದೆ ನಾನು ರೈಲಿನಲ್ಲಿ ಓಡಾಡುತ್ತೇನೆ. ನೀನು ಜೊತೆ ಇರುವುದಿಲ್ಲವಲ್ಲ ಎಂದಳು.
ಮುಂದೆ ಮಂಜುಳಾ ಮತ್ತು ಗಾಯತ್ರಿಗೂ ನಂಜನಗೂಡಿಗೇ ವರ್ಗಾವಣೆ ಸಿಕ್ಕಿ ಮತ್ತೆ ಸೇರಿದೆವು. ಒಂದೇ ಒಂದು ತಿಂಗಳು ಮಾತ್ರ ಅಲ್ಲಿದ್ದರೂ ನನಗೂ ಆ ಶಾಖೆ ಬಿಡುವಾಗ ಕಣ್ಣೀರು ಬಂದಿತು. ಸಮಾರಂಭದಲ್ಲಿ ನನ್ನ ಅಧಿಕಾರಿ ರಾವ್ ಹಾಗೂ ಶಾಖಾಧಿಕಾರಿ ಪ್ರಭಾಕರ್ ರವರು ನನ್ನ ಕೆಲಸವನ್ನು ತುಂಬಾನೇ ಶ್ಲಾಘಿಸಿದರು. ನನಗೂ ಇದ್ದ ಅಲ್ಪ ಕಾಲದಲ್ಲಿ ಶಾಖೆಗೆ ಉಪಯೋಗವಾಗುವಂತಹ ಕೆಲಸ ಮಾಡಿದ ಸಾರ್ಥಕತೆ ಶಾಖಾಧಿಕಾರಿಗಳು.
(ಮುಂದುವರೆಯುವುದು)
ಸುಜಾತಾ ರವೀಶ್





ವೈಯಕ್ತಿಕ ಅನುಭವಗಳನ್ನು ಹೇಳುತ್ತಲಿದ್ದರೂ ಸಹ ಇದು ನಿಮ್ಮ ವೃತ್ತಿಯಲ್ಲಿನ ಸೂಕ್ಷ್ಮತೆಗಳನ್ನೂ ಹೇಳುತ್ತಿದೆ. ಈ ವಿಮಾ ಕ್ಷೇತ್ರದ ವೃತ್ತಿ ಪರಿಚಯ ಇರದವರಿಗೆ (ನನ್ನನ್ನೂ ಒಳಗೊಂಡಂತೆ) ಒಂದು ನವಿರಾದ ನೇರ ಕಲಿಕೆ. ಭಾವನಾತ್ಮಕವಾಗಿ ಬೆಸೆದುಕೊಳ್ಳುವ ಬಂಧ ಸಂಬಂಧಗಳು
ಬಿಟ್ಟು ಅಗಲುವಾಗ ಮಿಡಿಯುವ ತಂತುಗಳ ಮೂಲಕ ಆರ್ದ್ರತೆಯನ್ನು ಉಂಟು ಮಾಡುವುದೂ ಸಹ ನಮ್ಮ ಭಾವಕೋಶಗಳ ಜಗತ್ತಿನ ಅನಿವಾರ್ಯ ವಿಘಟನೆಯೇ.ಈ ವಿದಳನವನ್ನು ಉಲ್ಲೇಖಿಸುವಲ್ಲಿ ಸಹ ನೀವು ನಿಸ್ತಂತು ಭಾವಗಳ ಮೌನವನ್ನು ಕ್ಲುಪ್ತವಾಗಿ ವಿವರಿಸಿದ್ದೀರಿ. ಈ ಬಗೆಯ ಮೌನ ಭಾವಗಳ ವಿಯೋಗ ಗಾಢವಾದ ಕಾಡುವಿಕೆಯೂ ಹೌದು. ಇದೊಂದು ರೀತಿಯ ಶಬ್ದದೊಳಗಣ ನಿಶ್ಯಬ್ದದಂತೆ. ಕಾಣದೆ ಉರಿಯುವ ಪಾವಕದಂತೆ. ಮುಂದುವರೆಯಲಿ ಅನುಭವ ಸಂಕಥನ.
ನಿಮ್ಮ ಸ್ಪಂದನೆಯೇ ಒಂದು ಸುಂದರ ಓದು. ಲೇಖಕನ ಮನದ ಭಾವಗಳನ್ನು ಅರ್ಥೈಸಿಕೊಂಡು ಪರಾನುಭೂತಿಯಿಂದ ಬರೆಹದ ಸೂಕ್ಷ್ಮ ಅವಲೋಕನ ಮಾಡುವ ನಿಮ್ಮ ಗಂಭೀರ ಓದು ಮತ್ತು ಪ್ರೌಢ ಪ್ರತಿಕ್ರಿಯೆಗೆ ಸಾಸಿರ ನಮನಗಳು.
ಸುಜಾತಾ ರವೀಶ್
ತುಂಬಾ ವಿಷದವಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡಿದ ವೈಖರಿಗಳನ್ನು ವಿವರಿಸಿದ್ದೀರಿ. ನಿಮ್ಮ ಆಯಾ ಸಂಧರ್ಭಗಳ ವಿವರಗಳು, ವ್ಯಕ್ತಿಗಳ ಹೆಸರುಗಳು ನೆನಪಿಟ್ಟುಕೊಂಡು ಇಲ್ಲಿ ಉಲ್ಲೇಖಸಿರುವುದು ಸ್ಟುತ್ಯಾರ್ಹ. ನಾನೂ LIC ಕಚೇರಿಯಲ್ಲಿಯೇ ಕೆಲಸ ಮಾಡಿದ ಕಳೆದ ವರ್ಷ ನಿವೃತ್ತಿ ಹೊಂದಿದೆನು. ನೀವು ಕಚೇರಿ ಕೆಲಸದ ಬಗ್ಗೆ ಮಾಹಿತಿ ಕೊಟ್ಟಿರುವುದು ನನಗೆ ನಮ್ಮ ಹಳೆಯ ದಿನಗಳ ನೆನಪು ಮಾರುಕಳಿಸಿತು. ಲೇಖನದ ಕಂತುಗಳು ಚೆನ್ನಾಗಿ ಮೂಡಿಬರುತ್ತಿವೆ.
ಧನ್ಯವಾದಗಳು.
ಇತಿ.. ಪ್ರಸನ್ನ.
ನಿಮ್ಮ ಕೆಲಸದ ವೈಖರಿಯಿಂದ ಅಧಿಕಾರಿಗಳ ಮೆಚ್ಚುಗೆ ಗಳಿಸಿದ್ದು ಹೆಮ್ಮೆಯ ವಿಷಯ. ಚೆನ್ನಾಗಿ ಮೂಡಿ ಬರುತ್ತಿದೆ ನಿಮ್ಮ ವೃತ್ತಿ ವೃತ್ತಾನ್ತ.
– ಸುಧಾ ಗಾಯತ್ರಿ