ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನಗೆ ವಹಿಸಿದ್ದ ಕಮಿಷನ್ ಕೆಲಸದ ಜೊತೆಗೆ ಜಯಶ್ರೀ ಅವರು ನೋಡಿಕೊಳ್ಳುತ್ತಿದ್ದ ಅಪ್ರೈಸಲ್ ಕೆಲಸವನ್ನು ಸಹ ಅವರ ಜೊತೆ ಕುಳಿತು ಮಾಡುತ್ತಾ ಕಲಿತೆ .ಆಗ ಎಲ್ಲವೂ ಕಂಪ್ಯೂಟರ್ ಇಲ್ಲದೆ ಮಾಡುತ್ತಾ ಇದ್ದುದರಿಂದ ಸಮಯವೂ ಸಹ ಬಹಳವೇ ಹಿಡಿಯುತ್ತಿತ್ತು, ಅದರಲ್ಲೂ ಪಾಲಿಸಿ ಲ್ಯಾಪ್ಸ್ ಆಗಿದ್ದ ಸ್ಟೇಟ್ಮೆಂಟ್ ಅಂತು ನಮ್ಮ ಶಾಖೆಯ ಕಮಿಷನ್ ಬಿಲ್ ಮಾತ್ರವಲ್ಲದೆ ಬೇರೆ ಶಾಖೆಗಳಿಂದ ಬರುವ ಕಮಿಷನ್ ಬಿಲ್ ಸಹ ಅವಲೋಕಿಸಿ ಮಾಡಬೇಕಿತ್ತು. ಆ ಕೆಲಸಗಳನ್ನೆಲ್ಲ ಜಯಶ್ರೀ ಅವರು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದು ಅವರು ಮಾಡುತ್ತಿದ್ದ ರೀತಿಯಲ್ಲಿಯೇ ನನಗೂ ಸಹ ಹೇಳಿ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ತುಂಬಾ ಅನುಕೂಲವಾಗಿತ್ತು. ಈ ಮಧ್ಯೆ ವಾರ್ಷಿಕವಾಗಿ ಬರುವ ಆಡಿಟ್ ಮತ್ತು ಇನ್ಸ್ಪೆಕ್ಷನ್ ಗಳು ಸಹ ಬಂದು ನಾವು ಮಾಡುತ್ತಿದ್ದ ಕೆಲಸಗಳು ಸಮರ್ಪಕವಾಗಿದೆಯೇ ಅಥವಾ ಬೇರೆ ಇನ್ನೇನಾದರೂ ಬದಲಾವಣೆಗಳು ಬೇಕೆ ಎನ್ನುವುದನ್ನು ತಿಳಿದುಕೊಳ್ಳಲು ಸಹಾಯವಾಯಿತು. ನಾವು ಕಾಲೇಜಿನಲ್ಲಿ ಓದುವಾಗ ಪಿಯುಸಿಯಲ್ಲಿ ನಮ್ಮ ಪ್ರಾಧ್ಯಾಪಕರಾದ ಚಂದ್ರಮೋಹನ್ ಅವರು ರಿಜಿಸ್ಟರ್ ನಲ್ಲಿನ ಕಾಲಂಗಳಲ್ಲಿ ಅಂಕೆಗಳು ಸಮರ್ಪಕವಾಗಿ ಹೇಗೆ ಒಂದರ ಕೆಳಗೆ ಒಂದು ಬರಬೇಕು ಎಂದು ಹೇಳಿದ್ದು ಅಚ್ಚು ಒತ್ತಿದ ಹಾಗೆ ಮನಸ್ಸಿನಲ್ಲಿ ನೆಲೆಸಿತ್ತು .ಹಾಗಾಗಿಯೇ ಕಮಿಷನ್ ರಿಜಿಸ್ಟರಿನ ಕಾಲಂಗಳಲ್ಲಿ ಸಂಖ್ಯೆಗಳು ಒಂದರ ಕೆಳಗೆ ಒಂದು ಆಯಾಯ ಸ್ಥಾನಗಳಲ್ಲಿ ಬರೆಯುವ ಅಭ್ಯಾಸ ಆಗಿದ್ದರಿಂದ ಅದು ನೋಡಲು ಚೆನ್ನಾಗಿ ಕಾಣುವುದರ ಜೊತೆಗೆ ಕೂಡಲು ಕಳೆಯಲು ಎಲ್ಲಾ ಸಹಾಯಕವಾಗಿದ್ದವು.
ಈ ನನ್ನ ಕೆಲಸದ ಅಂಶವನ್ನು ಆಡಿಟ್ ನವರು ಬಹಳವಾಗಿಯೇ ಪ್ರಶಂಸಿಸಿ ಶಾಖಾ ವ್ಯವಸ್ಥಾಪಕರ ಬಳಿಯೂ ಸಹ ಹೇಳಿದ್ದರು. ನನಗೂ ಸಹ ಅದು ತುಂಬಾ ಖುಷಿ ಕೊಟ್ಟಿತು. ಅಲ್ಲದೆ ನಾನು ಕೆಲಸ ಮಾಡಿದ ಅವಧಿಯ ಕೆಲಸದಲ್ಲಿ ಏನೊಂದೂ ತಪ್ಪುಗಳು ಸಹ ಕಾಣಿಸದೆ ಇದ್ದದ್ದು ನನ್ನ ಸಂತಸಕ್ಕೆ ಮತ್ತಷ್ಟು ಇಂಬು ಕೊಟ್ಟಿತು.

ಸರಿ ೧೯೯೦ರ ಜುಲೈ ಬಂದಿತು. ಈಗಾಗಲೇ ಕೆಲಸಕ್ಕೆ ಸೇರಿ ಒಂದು ವರ್ಷ ಆಗಿತ್ತು ಆದರೆ ವರ್ಗಾವಣೆಯ ಸುದ್ದಿಯೇ ಇರಲಿಲ್ಲ. ನಂತರದಲ್ಲಿ ಬೆಂಗಳೂರಿನ ಕಾರ್ಮಿಕ ಸಂಘದ ಕಾರ್ಯದರ್ಶಿಗಳಾದ ಸುಂದರ ಮೂರ್ತಿ ಅವರು ಒಮ್ಮೆ ನಮ್ಮ ಶಾಖೆಗೆ ಬಂದಿದ್ದು ನಮ್ಮ ವಿಭಾಗದಿಂದ ಮೈಸೂರಿಗೆ ವರ್ಗಾವಣೆ ಬಯಸಿದವರ ಪಟ್ಟಿ ಸಿದ್ಧವಾಗಿದೆ. ಅಲ್ಲಿಯೂ ಸಹ ವರ್ಗಾವಣೆಗಳನ್ನು ಮಾಡುವ ಪ್ರಕ್ರಿಯೆ ಆರಂಭವಾಗಿದ್ದು ಆಗಸ್ಟ್ ಕೊನೆಯ ವಾರದಲ್ಲಿ ವರ್ಗಾವಣೆ ಆಗುತ್ತದೆ ಎಂಬ ಭರವಸೆ ಕೊಟ್ಟರು.

ಅವರು ಹೇಳಿದಂತೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿಗೆ ವರ್ಗಾವಣೆ ಬಯಸಿದವರಿಗೆಲ್ಲ ವರ್ಗಾವಣೆ ಸಿಕ್ಕಿತು. ಆದರೆ ಬೇರೆ ಡಿವಿಷನ್ ಗಳಿಗೆ ವರ್ಗಾವಣೆ ಬಯಸಿದವರದು ಇನ್ನು ಸಹ ಆಗಿರಲಿಲ್ಲ. ನಂತರ ಮೂರನೆಯ ವಾರದಲ್ಲಿ ಅದು ಸಹ ಬಂದಿತು. ನನಗೆ ಮಂಡ್ಯ ಶಾಖೆಗೆ ವರ್ಗಾವಣೆ ಆಗಿತ್ತು ನನ್ನ ತಂಗಿಗೆ ಶ್ರೀರಂಗಪಟ್ಟಣ ಶಾಖೆಗೆ ವರ್ಗವಾಗಿತ್ತು. ನನ್ನ ಗೆಳತಿಯರಾದ ನನ್ನದೇ ಬ್ಯಾಚ್ನ ಗೌರಿ ನಂದಶ್ರೀ ಪದ್ಮಾವತಿ ಪ್ರತಿಭಾ ಇವರೆಲ್ಲರಿಗೂ ಸಹ ಶ್ರೀರಂಗಪಟ್ಟಣ ಶಾಖೆ ಸಿಕ್ಕಿತ್ತು.

ಆ ವೇಳೆಗೆ ಕಾರ್ಮಿಕ ಸಂಘದವರು ಕೊಟ್ಟ ಮಾಹಿತಿಯ ಪ್ರಕಾರ ಯಾವುದೇ ವರ್ಗಾವಣೆಗಳನ್ನು ಅವರ ವಯಸ್ಸಿಗೆ ಅನುಗುಣವಾಗಿ ಮಾಡುತ್ತಾರೆ. ಹಿರಿಯರನ್ನು ಅವರು ಕೇಳಿದ ಕಡೆಗೆ ಅಥವಾ ಅಲ್ಲಿ ಲಭ್ಯವಿಲ್ಲದಿದ್ದಾಗ ಆದಷ್ಟು ಹತ್ತಿರದ ಜಾಗಗಳಿಗೆ ಕೊಡುತ್ತಾರೆ .ವಯಸ್ಸಿನಲ್ಲಿ ಕಿರಿಯರಾದವರನ್ನು ಅವರಿಗಿಂತ ದೂರದ ಊರುಗಳಿಗೆ ಪೋಸ್ಟ್ ಮಾಡುತ್ತಾರೆ ಎಂದು. ಆ ಲೆಕ್ಕದಲ್ಲಿ ನೋಡಿದರೆ ನನ್ನ ತಂಗಿಗಿಂತ ನನಗೆ ಹತ್ತಿರದ ಪ್ರದೇಶಕ್ಕೆ ಸಿಗಬೇಕಿತ್ತು . ಟ್ರಂಕ್ ಕಾಲ್ ಬುಕ್ ಮಾಡಿ ಸುಂದರ ಮೂರ್ತಿ ಅವರಿಗೆ ನನ್ನ ಸಂದೇಹ ತಿಳಿಸಿದಾಗ ಅವರು ಮೊದಲು ಅವರದೇ ವಿಭಾಗದ ಅಭ್ಯರ್ಥಿ ಉದ್ಯೋಗಿಗಳಿಗೆ ವರ್ಗಾವಣೆಗಳನ್ನು ಕೊಟ್ಟು ನಂತರ ಉಳಿದ ಜಾಗಗಳಿಗೆ ಬೇರೆ ವಿಭಾಗದಿಂದ ಬಂದವರನ್ನು ಹಾಕುತ್ತಾರೆ ಎಂದರು. ಅಯ್ಯೋ ನಾನು ಮೈಸೂರು ವಿಭಾಗದ ಸಹಾಯಕ ಹುದ್ದೆಗೆ ಅರ್ಜಿ ಹಾಕಬೇಕಿತ್ತು. ಆಗ ಹತ್ತಿರದಲ್ಲೇ ಸಿಗುತ್ತಿತ್ತು ಎಂಬ ಭಾವನೆ ಮೂಡಿ ಬೇಸರವಾಯಿತು.

ವರ್ಗಾವಣೆಯ ವಿಷಯ ಫೋನ್ ಮೂಲಕ ತಿಳಿದದ್ದು. ಟಪಾಲಿನಲ್ಲಿ ವರ್ಗಾವಣೆ ಆದೇಶ ಬಂದಾಗ ಕೂಲಂಕಷವಾಗಿ ನೋಡಿದೆ. ಬೆಂಗಳೂರು ವಿಭಾಗದಿಂದ ಮೈಸೂರು ವಿಭಾಗಕ್ಕೆ ಹೋದವರ ಪಟ್ಟಿ ಅದು. ಹಾಗೆ ನೋಡುತ್ತಿರುವಾಗ ನನಗಿಂತ ಜೂನಿಯರ್ ಆದವರಿಗೂ ಶ್ರೀರಂಗಪಟ್ಟಣ ನಂಜನಗೂಡು ಸಿಕ್ಕಿ ಆ ಪಟ್ಟಿಯಲ್ಲಿ ನಾನೊಬ್ಬಳೇ ಮಂಡ್ಯ ಶಾಖೆಗೆ ಪೋಸ್ಟಿಂಗ್ ಆಗಿದದ್ದು. ಈ ಮೊದಲೇ ಹೇಳಿದಂತೆ ನಮ್ಮ ಪಟ್ಟಿಯಲ್ಲಿ ನನ್ನದು ಮೊದಲ ಹೆಸರು ಆಗಿದ್ದು ಎಸ್ ಆರ್ ನಂಬರ್ ಗಳನ್ನು ಸಹ ಆ ಆಧಾರದಲ್ಲಿಯೇ ಕೊಟ್ಟಿರುತ್ತಾರೆ .ನಮ್ಮ ಬ್ಯಾಚ್ನಲ್ಲಿ 28 ಜನ ಇದ್ದು ನನ್ನ ಎಸ್ ಆರ್ ನಂ.೫೦೮೫೦೪. ನಮ್ಮ ಪಟ್ಟಿಯಲ್ಲಿನ ಕಡೆಯ ಎಸ್ ಆರ್ ನಂಬರ್ ೫೦೮೫೩೧.
ಅಲ್ಲಿಂದ ಮುಂದಿನ ಎಸ್ ಆರ್ ನಂಬರ್ಗಳು ಆಗಸ್ಟ್ ನಲ್ಲಿ ನಿಯುಕ್ತಿ ಆದವರದು. ಹಾಗಾಗಿ ಅವರು ನಮಗಿಂತ ಜೂನಿಯರ್ ಆಗಿರುತ್ತಾರೆ ನಿಗಮದ ನಿಯಮದ ಪ್ರಕಾರ ಮೊದಲು ಬ್ಯಾಚ್ ನ ಗರಿಷ್ಠತೆ ನೋಡುತ್ತಾರೆ ಅದೇ ಬ್ಯಾಚ್ನವರಾದರೆ ವಯೋ ಗರಿಷ್ಠತೆ ಆಧಾರ. ಹಾಗಾಗಿ ಎಲ್ಲೋ ಏನೋ ಎಡವಟ್ಟಾಗಿದೆ. ನನಗೆ ಅನ್ಯಾಯವಾಗಿದೆ ಎನಿಸಲು ಆರಂಭವಾಯಿತು .ಮತ್ತೆ ಸುಂದರ ಮೂರ್ತಿ ಅವರಿಗೆ ಟ್ರಂಕ್ ಕಾಲ್ ಮಾಡಿದ್ದು ಅವರಿಗೆ ನನ್ನ ಈ ಸಂದೇಹವನ್ನು ಹೇಳಿದಾಗ ಅವರು ಕಾರ್ಮಿಕ ಸಂಬಂಧಿ ಇಲಾಖೆಗೆ ಹೋಗಿ ನೋಡಿದಾಗ ನನ್ನ ವಾದ ಸರಿ ಎನ್ನಿಸಿತು. ಆದರೆ ಆದೇಶ ಬಂದು ಆಗಿಬಿಟ್ಟಿದ್ದರಿಂದ ನೀವು ಮೊದಲು ಹೋಗಿ ಮಂಡ್ಯ ಶಾಖೆಗೆ ರಿಪೋರ್ಟ್ ಮಾಡಿಕೊಳ್ಳಿ ನಂತರ ನಾನು ಮೈಸೂರಿಗೆ ಬರುತ್ತೇನೆ ಅಲ್ಲಿನ ವಿಭಾಗ ವ್ಯವಸ್ಥಾಪಕರ ಬಳಿ ಮಾತನಾಡೋಣ ಎಂದರು. ಆದರೆ ನನಗೆ ಇನ್ನೂ ಭಯ ಒಂದು ಬಾರಿ ಹೋಗಿ ರಿಪೋರ್ಟ್ ಮಾಡಿಕೊಂಡರೆ ಮತ್ತೆ ಅವರು ಸರಿ ಮಾಡುತ್ತಾರೋ ಇಲ್ಲವೋ ಎಂದು.‌ ಅಲ್ಲದೆ ಮತ್ತೆ ಮತ್ತೆ ನನ್ನ ದುರದೃಷ್ಟದ ಪರೀಕ್ಷೆ ಹೀಗೆ ಆಗುತ್ತಲೇ ಇದೆಯಲ್ಲ ಎನ್ನುವ ಬೇಸರ ಬೇರೆ. ಅಂತೂ “ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರೇ” ಎನ್ನುವ ಗಾದೆ ಮತ್ತೊಮ್ಮೆ ನನ್ಮ ವಿಷಯದಲ್ಲಿ ನಿಜವಾಗಿತ್ತು.

ಅದೇ ಸಮಯದಲ್ಲಿ ಶಾಖೆಯ ಇನ್ನೊಬ್ಬರಿಗೆ ಪದೋನ್ನತಿ ಆಗಿ ಕೋಲಾರಕ್ಕೆ ವರ್ಗವಾಗಿದ್ದರಿಂದ ಅವರು ಮತ್ತು ನಾನು ಸೇರಿ ಶಾಖೆಯಲ್ಲಿ ಭೋಜನಕೂಟದ ವ್ಯವಸ್ಥೆ ಮಾಡಿದ್ದೆವು. ಅಂತೂ ಸೆಪ್ಟೆಂಬರ್ ಒಂದರ ಶನಿವಾರ ಚಿಕ್ಕಬಳ್ಳಾಪುರದಿಂದ ವರ್ಗಾವಣೆಯಾಗಿ ಹೊರಟೆ. ಮೊಟ್ಟ ಮೊದಲು ಕೆಲಸ ಮಾಡಿದ ಊರು ಎಂದು ಈಗಲೂ ನನಗೆ ಅದರ ಬಗ್ಗೆ ಅಭಿಮಾನ. ಆದರೆ ಒಮ್ಮೆಯೂ ಮತ್ತೆ ಆ ಶಾಖೆಗೆ ಹೋಗಲು ಇದುವರೆಗೂ ಆಗಿಲ್ಲ ಅನ್ನುವುದು ಬೇಸರದ ಸಂಗತಿ .‌ಚಿಕ್ಕಬಳ್ಳಾಪುರ ಶಾಖೆಯ ಕೋಡ್ ನಂಬರ್ ೬೦೬ . ಈಗಲೂ ಆ ಶಾಖೆಯ ವಿಷಯ ಕೇಳಿದಾಗ ಅಥವಾ ಕೋಡ್ ನಂಬರ್ ನೋಡಿದಾಗ ಹಳೆಯ ನೆನಪುಗಳೆಲ್ಲ ಕಾಡುತ್ತವೆ. ಅಲ್ಲಿ ಕಳೆದ ದಿನಗಳ ಸವಿ ನೆನಪುಗಳು ಮೂಡುತ್ತವೆ.

ಇನ್ನೇನು ಹೊರಟುಬಿಡುತ್ತೇವಲ್ಲ ಎಂದು ನಾನು ಜಯಶ್ರೀ ಮತ್ತು ಅವರ ಮಗಳು ಸಂಗೀತ ಸ್ಟುಡಿಯೋಗೆ ಹೋಗಿ ಫೋಟೋ ತೆಗೆಸಿಕೊಂಡೆವು. ಮಾತನಾಡಿಕೊಳ್ಳದಿದ್ದರು ಮೂರು ಜನರು ಪಿಂಕ್ ಬಣ್ಣದ ಉಡುಪು ಧರಿಸಿದ್ದು ನಮ್ಮ ಒಂದೇ ರೀತಿಯ ಯೋಚನೆಯ ಸಾಕ್ಷಿ ಎಂದು ಅನಿಸಿತು. ನಾನು ಮತ್ತು ಜಯಶ್ರೀ ಆ ವೇಳೆಗೆ ನಮ್ಮ ಆಫೀಸಿನ ಬಳಿಗೆ ಆಗಿದ್ದ ಹೊಸ ಹೋಟೆಲ್ ಒಂದಕ್ಕೆ ಒಟ್ಟಿಗೆ ಹೋಗಿ ಬಂದೆವು. ಒಂದು ಸುಂದರ ಗೋಡೆ ಗಡಿಯಾರವನ್ನು ಅವರು ನನಗೆ ಉಡುಗೊರೆಯಾಗಿ ನೀಡಿದರು ನಾನು ಏನೋ ಉಡುಗೊರೆ ಕೊಟ್ಟೆ ಏನು ಎಂಬುದು ಸರಿಯಾಗಿ ನೆನಪಿಲ್ಲ. ನಡೆಸುತ್ತಿದ್ದ ಮಿನಿ ಬ್ಯಾಂಕ್ ಅನ್ನು ಅಂದಿನ ದಿನದವರೆಗೆ ಲೆಕ್ಕ ಹಾಕಿ ನಾನು ಕಟ್ಟಿದ ಹಣ ಮತ್ತು ಸಂಗ್ರಹವಾದ ಬಡ್ಡಿಯ ಭಾಗದ ಮೊತ್ತದಲ್ಲಿ ನಾನು ತೆಗೆದುಕೊಂಡಿದ್ದ ಸಾಲವನ್ನು ಕಳೆದು ಹಣ ಕೊಟ್ಟರು. ಮತ್ತೆ ಅಲ್ಲಿಗೆ ಹೋಗುವ ಸಾಧ್ಯತೆ ಇಲ್ಲವಾದ್ದರಿಂದ ಆರಂಭಿಸಿದ ಬ್ಯಾಂಕ್ ಅಕೌಂಟ್ ಅನ್ನು ಕ್ಲೋಸ್ ಮಾಡಿ ಆ ಮೊತ್ತವನ್ನು ತೆಗೆದುಕೊಂಡಿದ್ದು ಆಯಿತು.

ನನ್ನ ಮೊಟ್ಟಮೊದಲ ಬೀಳ್ಕೊಡುಗೆಯ ಕಾರ್ಯಕ್ರಮವು ಶನಿವಾರ ಮಧ್ಯಾಹ್ನವೇ ನಡೆಯಿತು. ನನಗೆ ನೆರವಾದ ಎಲ್ಲರಿಗೂ ಧನ್ಯವಾದ ತಿಳಿಸಿ. ಇದು ನನ್ನ ತವರು ಮನೆ ಇದ್ದಂತೆ, ಬಿಟ್ಟು ಹೋಗಲು ತುಂಬಾ ಬೇಸರವಾಗುತ್ತದೆ ಎಂದು ಹೇಳಿದ್ದೆ. ಅಲ್ಲದೆ ಕಣ್ಣಲ್ಲಿ ನೀರು ತುಂಬಿಕೊಂಡು ಸಾಕಷ್ಟು ಅತ್ತೂ ಸಹ ಇದ್ದೆ.

ಶುಕ್ರವಾರವೇ ರವೀಶ್ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಶನಿವಾರ ಬೆಳಗ್ಗಿನಿಂದ ನಮ್ಮ ಮನೆಯಲ್ಲಿ ಅಡುಗೆ ತಿಂಡಿ ಏನೂ ಮಾಡಬೇಡಿ. ಎಲ್ಲವನ್ನು ಪ್ಯಾಕ್ ಮಾಡಿ ಎಂದು  ಓನರ್ ಸುಬ್ಬಲಕ್ಷ್ಮಮ್ಮ ಹಾಗೂ ನಮ್ಮ ಚಿಕ್ಕಮ್ಮ ಹೇಳಿದ್ದರಿಂದ ಎಲ್ಲವನ್ನೂ ಪ್ಯಾಕ್ ಮಾಡಿಕೊಳ್ಳಲು ಸಾಧ್ಯವಾಯಿತು.

ಹೆಚ್ಚಿನ ಸಾಮಾನುಗಳು ಇರಲಿಲ್ಲ .ಅಲ್ಲದೆ ಕೆಲವೊಂದು ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಬಂದದ್ದರಿಂದ ಬಸ್ ನಲ್ಲಿಯೇ ಸಾಗಿಸಿಕೊಂಡು ಬರಲು ಸಾಧ್ಯವಾಯಿತು. ಚಿಕ್ಕಬಳ್ಳಾಪುರದಿಂದ ಮೈಸೂರಿಗೆ ನೇರ ಬಸ್ 11 ಗಂಟೆಗೆ ಇತ್ತು.‌ ಬೆಳಿಗ್ಗೆ ಚಿಕ್ಕಮ್ಮನ ಮನೆಯಲ್ಲಿ ತಿಂಡಿ ತಿಂದುಕೊಂಡು ಬಸ್ ಸ್ಟ್ಯಾಂಡಿಗೆ ಬಂದು ನೇರ ಬಸ್ ನಲ್ಲಿ  ಹತ್ತಿ ಮೈಸೂರು ತಲುಪಿದಾಗ ಸಂಜೆಯಾಗಿತ್ತು.
ದೂರದಿಂದ ಚಾಮುಂಡಿ ಬೆಟ್ಟ ಕಂಡಾಗ ಮನಸ್ಸಿಗೆ ಏನೋ ಒಂದು ತರಹ ಸಂತೋಷ ಅಲ್ಲಿಂದಲೇ ಕೈಮುಗಿದು ನಾಳೆ ಪೋಸ್ಟಿಂಗ್ ಸಮಯಕ್ಕೆ ಒಳ್ಳೆಯದಾಗುವ ಹಾಗೆ ಮಾಡಮ್ಮ ಎಂದು ಮತ್ತೊಮ್ಮೆ ಕೇಳಿಕೊಂಡೆ.

ಸೋಮವಾರ ಮಂಡ್ಯಗೆ ಹೊರಡಲು ತಯಾರಾಗಿ 9 ಗಂಟೆಗೆ ಬಸ್ ಸ್ಟ್ಯಾಂಡ್ ತಲುಪಿದೆ ನನ್ನೊಂದಿಗೆ ಮಂಡ್ಯಗೆ ರವೀಶ್ ಹೊರಟಿದ್ದರು. ಮೈಸೂರು ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿಗೆ ಕಾಯುವಾಗ ಜೀವವಿಮಾ ನಿಗಮದ ಮಂಡ್ಯ ಶಾಖೆಯ ಕೆಲವರು ಸಿಕ್ಕಿದರು. ಅದರಲ್ಲಿ ಒಬ್ಬಳು ಗಾಯತ್ರಿ ದೇವಿ. ಮಂಡ್ಯ ಶಾಖೆಗೆ ಅವಳು ಅಂದೇ ರಿಪೋರ್ಟ್ ಆಗಲು ಹೊರಟಿದ್ದಳು. ಆಗ ತಾನೇ ತರಬೇತಿ ಮುಗಿಸಿ ಮಂಡ್ಯ ಶಾಖೆಗೆ ರಿಪೋರ್ಟ್ ಆಗಲು ಹೊರಟಿದ್ದ ಮತ್ತೊಬ್ಬರು ಮಂಜುನಾಥ. ಅವನು ಸೆಂಟ್ ಥಾಮಸ್ ಶಾಲೆಯಲ್ಲಿ ನನ್ನ ಸಹಪಾಠಿ ಆಗಿದ್ದು ಆಗಿನಿಂದ ಪರಿಚಿತ ಹೋಗೋ ಬಾರೋ ಎಂದು ಕರೆಯುವಷ್ಟು ಹಳೆಯ ಸ್ನೇಹಿತ. ಅವನು ನನ್ನನ್ನು ನೋಡಿ ಹತ್ತಿರ ಬಂದು ಮಾತನಾಡಿಸಿ ನಂತರ ರವೀಶಗ್ ಹಾಗೂ ಗಾಯತ್ರಿಯ ತಂದೆ ಇಬ್ನರಿಗೂ ನೀವೇಕೆ ಮತ್ತೆ ಬರುತ್ತೀರಿ ಹಾಗೂ ಶ್ರಮಪಡುತ್ತೀರಿ ನಾನು ಮತ್ತು ಇನ್ನೊಬ್ಬ ಗೆಳೆಯ ಇದ್ದೇವೆ. ಒಟ್ಟಿಗೆ ಹೋಗುತ್ತೇವೆ ಬಿಡಿ ಎಂದು ಹೇಳಿದ. ಸರಿ ಸಂಜೆ ಆರೂವರೆಗೆ ಕರೆದುಕೊಂಡು ಹೋಗಲು ಬರುತ್ತೇನೆ ಎಂದು ಹೇಳಿ ರವೀಶ್ ಅವರು ಹೊರಟರು.

ಅಲ್ಲಿ ಮಂಡ್ಯ ಶಾಖೆಯಲ್ಲಿ ಕೆಲವು ದಿನ ನಂತರ ಮೈಸೂರಿನ ಶಾಖೆ ಎರಡರಲ್ಲಿ ಒಂದಷ್ಟು ದಿನ ನನ್ನ ಸಹೋದ್ಯೋಗಿ ಆಗಿದ್ದ ಮಂಜುನಾಥ ನಾನು ರೊಟ್ಟಿ ತೆಗೆದುಕೊಂಡು ಹೋದಾಗಲೆಲ್ಲ ಜಾಸ್ತಿ ತಗೊಂಡು ಬಾ ಇಲ್ಲದಿದ್ದರೆ ನಿನ್ನ ಬಾಕ್ಸನ್ನೇ ನಾನು ತೆಗೆದುಕೊಂಡು ಬಿಡುತ್ತೇನೆ ಎಂದು ತಮಾಷೆ ಮಾಡುತ್ತಿದ್ದವನು. ಪಾಪ ಬಹಳ ಚಿಕ್ಕ ವಯಸ್ಸಿನಲ್ಲಿ ಹೋಗಿಬಿಟ್ಟ. ಅವನ ನೆನಪು ಬಂದಾಗ ಅವನು ಮಾಡುತ್ತಿದ್ದ ಹಾಸ್ಯ ನೆನಪಿಗೆ ಬಂದು ಮನಸ್ಸು ಭಾರವಾಗುತ್ತದೆ.

ಮಂಡ್ಯದ ಬಸ್ ಸ್ಟ್ಯಾಂಡ್ ಗೆ ಮೊದಲೇ ಜೀವವಿಮ ನಿಗಮದ ಕಚೇರಿ .ಈ ಮುಂಚೆ ಹೇಳಿದಂತೆ ಊರ ಆಚೆಗೆ ಯಾವಾಗಲೂ ನಮ್ಮ ಕಚೇರಿಗಳು ಕಟ್ಟಲ್ಪಡುವುದು ಆದರೆ ನಂತರದಲ್ಲಿ ಊರೇ ಬೆಳೆದು ಶಾಖೆ ಊರಿನ ಮಧ್ಯ ಸೇರಿಕೊಂಡು ಬಿಡುವುದು ನಾನು ಗಮನಿಸಿದ ಸಂಗತಿ. ಆಗ ನಮ್ಮ ಶಾಖೆಯ ಮುಂದೆಯೇ ಒಂದು ಸ್ಟಾಪ್ ಕೊಡುತ್ತಿದ್ದರು. ಹಾಗಾಗಿ ಅಲ್ಲಿಯೇ ಇಳಿದುಬಿಡುತ್ತಿದ್ದೆವು .ಸಂಜೆ ಬರುವಾಗಲೂ ಅಷ್ಟೇ ರಸ್ತೆಯ ಆ ಪಕ್ಕದಲ್ಲಿ ಬಸ್ ಸ್ಟ್ಯಾಂಡಿಗೆ ನಡೆದು ಹೋಗುತ್ತಿರುವುದು. ಯಾವುದಾದರೂ ಮೈಸೂರು ಬಸ್ ಕಂಡ ತಕ್ಷಣ ಕೈ ತೋರಿಸಿದರೆ ನಿಲ್ಲಿಸುತ್ತಿದ್ದರು.  ಆಗ ಹೆಚ್ಚು ಕಡಿಮೆ ಒಂದು ಗಂಟೆ 15 ನಿಮಿಷ ಪ್ರಯಾಣದ ಅವಧಿ ತೆಗೆದುಕೊಳ್ಳುತ್ತಿದ್ದು ಈಗಂತೂ 40 ನಿಮಿಷಕ್ಕೆ ಮಂಡ್ಯ ತಲುಪಿ ಬಿಡಬಹುದು.
(ಮುಂದಿನ ವಾರ-ಮುಂದುವರೆಯುವುದು)


About The Author

7 thoughts on “”

  1. ಪೂರಕ ಚಿತ್ರಗಳೊಂದಿಗೆ ಅಚ್ಚುಕಟ್ಟಾಗಿ ಪ್ರಕಟಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು

    ಸುಜಾತಾ ರವೀಶ್

  2. ವೃತ್ತಿ ಬದುಕಿನ ನಿತ್ಯ ಘನೆಗಳನ್ನು ಅದ್ಬುತವಾಗಿ ಅನಾವರಣಗೊಳಿಸಿದ್ದೀರಿ ಮೇಡಂ, ಧನ್ಯವಾದಗಳು
    By Dr Danamma Zalaki

  3. ಸಂಕೀರ್ಣ ಮತ್ತು ಆಗಿನ ತಲ್ಲಣಗಳನ್ನೂ ಮೃದುವಾದ ಹಗುರು ಭಾಷೆಯಲ್ಲಿ ಹೇಳುವುದೂ ಸಹ ಆ ಕಾಲಘಟ್ಟವನ್ನು ಪುನರ್ನವೀಕರಿಸಿದ ಹಾಗೆ. ಅದರಲ್ಲಿ ನಿಮ್ಮ ಯಶಸ್ಸು ಕಾಣುತ್ತದೆ. ತಾಕಲಾಟಗಳ ತೊಟ್ಟಿಲುಗಳನ್ನು ದಾಟದಿದ್ದರೆ ಮುಂದಿನ ತಡೆರಹಿತ ಮೆಟ್ಟಿಲುಗಳನ್ನು ಏರಲಾದೀತೇ ಎನ್ನುವುದಕ್ಕೆ ಸೋದಾಹರಣೆ ನಿಮ್ಮ ಲೇಖನ.ಈ ಕಾರಣದಿಂದಲೇ ಅಧೋಮುಖೀ ಸಂಕಟಗಳು ಹೊರ ಗಾಯಗಳ ಸ್ವರೂಪದಲ್ಲೇ ಇರಬೇಕೆಂದಲ್ಲ.ಅದು ಮೂಗೇಟಿನ ತರಹ. ಕಣ್ಣಿಗೆ ಕಾಣಿಸದೆ ನೋವುಂಟು ಮಾಡುವಂಥದ್ದು. ಅಧೋಮುಖಿಯಾಗಿಸಿ ಹಿಂತಿರುಗಿ ನೋಡಿದಾಗ ಅದು ನಮ್ಮ ಇವತ್ತಿನ ಊರ್ಧ್ವಕ್ಕೆ ಕಾರಣವಾದುದು ಸ್ಪಷ್ಟವಾಗುತ್ತದೆ. ಹೀಗಾಗಿಯೇ ನಿಮ್ಮ ಈ ನೆನಪುಗಳ ಮೆರೆವಣಿಗೆ( ಮೆರವಣಿಗೆ ತಪ್ಪು ಹಾಗಾಗಿ) ಸಂದುದರ ಮೆಲುಕಿನ ಬರೆವಣಿಗೆಗೆ ಜೀವತ್ರಾಣವಾಗಿದೆ.ಇದು ಸಂತತವಾಗಲಿ.

    1. ನಿಮ್ಮ‌ ಸ್ಪಂದನೆಯ ನುಡಿಗಳು ತುಂಬಾ ಹೃದಯಸ್ಪರ್ಶಿ. ಇಂತಹ ಪ್ರಬುದ್ಧ ಪ್ರತಿಕ್ರಿಯೆಗಾಗಿ ನಿಮಗೆ ಅನಂತ ಧನ್ಯವಾದಗಳು .

      ಸುಜಾತಾ ರವೀಶ್

  4. ವೃತ್ತಿ ಜೀವನದ ತಲ್ಲಣಗಳನ್ನು ವಿವರಿಸುವ ಬರೆಹ‌ ಮನ ಮುಟ್ಟುವಂತಿದೆ ಸುಜಾತಾ…. ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇನೆ…..ಎ. ಹೇಮಗಂಗಾ

  5. ಚಂದ್ರಮೋಹನ್ ರವರ ಹೆಸರನ್ನು ಉಲ್ಲೇಖಿಸುದ್ದು
    ನೋಡಿ ಹಳೆಯ ನೆನಪು ಮರುಕಳಿಸಿತು. ಸುಂದರ ಅನುಭವಗಳು. ನೋವು ನಲಿವು, ಆಗಲಿಕೆ, ಭಯ ಉತ್ಸಾಹ, ಕಣ್ಣೀರು.

    ಸುಧಾ ಗಾಯತ್ರಿ

Leave a Reply

You cannot copy content of this page

Scroll to Top