ಯುವ ಸಂಗಾತಿ
ಮೇಘ ರಾಮದಾಸ್ ಜಿ.
“ಯುವಜನತೆ ವೈಜ್ಞಾನಿಕ
ಮನೋಭಾವನೆ ಬೆಳೆಸಿಕೊಳ್ಳಲಿ”

ಸಮಾಜದಲ್ಲಿ ಸಾಕಷ್ಟು ವಿಚಾರಗಳು ಯಾವುದೇ ಅರ್ಥ, ಹಿನ್ನೆಲೆ, ಕಾರಣಗಳಿಲ್ಲದೆ ನಡೆದುಕೊಂಡು ಬಂದಿವೆ. ಈಗಲೂ ಕೂಡ ನಡೆಯುತ್ತಿವೆ. ಆದರೆ ವಿಜ್ಞಾನ ಎಂಬ ಹೊಸ ಆಶಾಕಿರಣ ಇಂತಹ ಹಲವು ವಿಚಾರಗಳಿಗೆ ಪುರಾವೆ ನೀಡಿದೆ ಮತ್ತು ಸಾಕಷ್ಟು ವಿಚಾರಗಳು ಅವೈಜ್ಞಾನಿಕ ಎಂದು ಸಹ ಸಾಬೀತು ಮಾಡಿದೆ. ಇದರ ಜೊತೆಗೆ ಕೆಲವು ವಿಚಾರಗಳು ಜನರ ಜೀವನಕ್ಕೆ ಮತ್ತು ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಕೂಡ ತಿಳಿಸಿದೆ. ಆದರೆ ಇಂದಿಗೂ ಸಹಾ ಜನರು ಕೆಲವು ಮೂಢನಂಬಿಕೆಗಳನ್ನು ಚಾಲ್ತಿಯಲ್ಲಿರುವಂತೆ ನೋಡಿಕೊಂಡು ಬಂದಿದ್ದಾರೆ. ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ವಿವೇಕಾನಂದರು, ಇನ್ನೂ ಮುಂತಾದವರ ಪ್ರಕಾರ ಮೂಢನಂಬಿಕೆ ಹೋಗಲಾಡಿಸಲು ಇರುವ ದೊಡ್ಡ ಶಕ್ತಿ ಅದುವೇ ‘ ಶಿಕ್ಷಣ ‘. ಶಿಕ್ಷಣ ಮಾತ್ರ ಸಮಾಜವನ್ನು ಸ್ವಾಸ್ಥ್ಯದಿಂದ ಇಡಲು ಸಾಧ್ಯ ಎಂದು ನಂಬಿದ್ದರು.
ಆದರೆ ಇಂದಿನ ಯುವ ಜನತೆ ಶಿಕ್ಷಣವನ್ನು ಪಡೆದುಕೊಂಡಿದ್ದರೂ ಸಹ ಮತ್ತೆ ಅದೇ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ. ತಾವು ಕೇಳುವ ಮತ್ತು ನೋಡುವ ಎಲ್ಲ ವಿಚಾರಗಳನ್ನು ಚರ್ಚಿಸಿ, ವಿಮರ್ಶಿಸಿ, ವೈಜ್ಞಾನಿಕವಾಗಿ ಯೋಚಿಸದೆ ಎಲ್ಲವನ್ನು ಕಣ್ಣು ಮುಚ್ಚಿ ನಂಬುವ ಮನಸ್ಥಿತಿಗೆ ಯುವ ಜನತೆ ಬಂದಿದ್ದಾರೆ. ಈ ಮನಸ್ಥಿತಿಗೆ ಪ್ರೇರೇಪಿಸುತ್ತಿರುವುದು ಸಾಮಾಜಿಕ ಜಾಲತಾಣಗಳು ಎಂದರೆ ತಪ್ಪಾಗುವುದಿಲ್ಲ. ಎಲ್ಲವನ್ನು ಅಳೆದು ತೂಗಿ ಪರಾಮರ್ಶಿಸಿ ನಿರ್ಧರಿಸುವಂತಹ ಶಕ್ತಿ ಮತ್ತು ಯುಕ್ತಿಯನ್ನು ಬೆಳೆಸಿಕೊಳ್ಳಬೇಕಾದ ಯುವ ಜನತೆ ಅಂದತೆಯ ಮರೆಹೋಗಿದ್ದಾರೆ. ಎಲ್ಲಾ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಡೆದುಕೊಂಡು ಅದನ್ನು ನೇರವಾಗಿ ಹಾಗೆಯೇ ಎಲ್ಲೆಡೆ ಹರಿಬಿಡುವ ಖಯಾಲಿ ಆರಂಭವಾಗಿದೆ. ಹಂಚಿಕೊಳ್ಳುವ ಮೊದಲು ವಿಷಯಗಳನ್ನು ಫ್ಯಾಕ್ಟ್ ಚೆಕ್ ಮಾಡುವ ಹವ್ಯಾಸ ಇಲ್ಲವಾಗಿದ್ದು, ಅದನ್ನು ಬೆಳಸಿಕೊಳ್ಳಬೇಕಿದೆ. ಸರ್ಕಾರಗಳ ನಿಲುವುಗಳನ್ನು, ವಿದೇಶಿ ಸುದ್ದಿಗಳನ್ನು, ವಿಜ್ಞಾನ ತಂತ್ರಜ್ಞಾನ ಗಳಲ್ಲಿ ಆಗುತ್ತಿರುವ ಹೊಸ ಹೊಸ ಆವಿಷ್ಕಾರಗಳನ್ನು ತಿಳಿದು ಬೆಳೆಯಬೇಕಿರುವ ಯುವ ಜನತೆ ದೇಶಕ್ಕೆ ಮಾರಕವಾಗುವ ವಿಚಾರಗಳನ್ನೇ ತಿಳಿಯುತ್ತಿರುವುದು ಕಾಣಬಹುದಾಗಿದೆ.
ಈಗಿನ AI ಕಾಲಘಟ್ಟದಲ್ಲಿ ಎಲ್ಲವೂ ಕೃತಕ ಎಂಬುದು ಅರಿವಿದ್ದರೂ ಸಹಾ ಯುವಜನತೆ ಯಾವುದೇ ಯೋಚನೆಗಳಿಲ್ಲದೆ ನಕಾರಾತ್ಮಕ ವಿಚಾರಗಳನ್ನು, ಮೂಢನಂಬಿಕೆಗಳನ್ನು ಗಾಢವಾಗಿ ನಂಬುತ್ತಾ, ಇತರರಿಗೆ ಹಂಚುತ್ತಾ, ಕೆಲವೊಮ್ಮೆ ಹೇರುತ್ತಾ ತಮ್ಮ ಸಮಯ ಶಕ್ತಿ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಇತ್ತೀಚೆಗೆ ನಡೆದ ಹಲವಾರು ಅಹಿತಕರ ಘಟನೆಗಳಿಗೆ ಕಾರಣ ಇಂತಹ ಸುಳ್ಳು ಸುದ್ದಿಗಳೇ ಎಂಬುದು ಸ್ಪಷ್ಟವಾಗಿದೆ. ಎಲ್ಲರಿಗಿಂತ ಹೆಚ್ಚಾಗಿ ಯಾಕೆ ಯುವಜನತೆ ವೈಜ್ಞಾನಿಕ ಮನೋಭಾವನೆ ಮತ್ತು ವಿಮರ್ಶಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದಾದರೆ ದೇಶದಲ್ಲಿ ಅತೀ ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರು ಯುವಜನರೇ ಆಗಿದ್ದಾರೆ. ಗ್ಲೋಬಲ್ ಡಿಜಿಟಲ್ ರಿಪೋರ್ಟ್ 2025 ರ ಅನುಸಾರ ಭಾರತದ 1.46 ಶತಕೋಟಿ ಜನಸಂಖ್ಯೆಯಲ್ಲಿ 806 ದಶಲಕ್ಷ ( 55.3%) ಜನರು ಇಂಟರ್ನೆಟ್ ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರ ಸಂಖ್ಯೆ 491 ದಶಲಕ್ಷ (33.7%). ಈ ವರದಿಯ ಪ್ರಕಾರ ಭಾರತದಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರ ಸರಾಸರಿ ವಯಸ್ಸು 18 – 25 ಆಗಿದೆ.
ಭಾರತ ಯುವ ರಾಷ್ಟ್ರ. ಇಡೀ ದೇಶ ಯುವ ಶಕ್ತಿಯ ಮೇಲೆ ನಿಂತಿದೆ. ಅಬ್ದುಲ್ ಕಲಾಂ ಅವರ ಆಶಯದ ಅನುಸಾರ ಭಾರತ ಯುವಶಕ್ತಿಯಾಗಿ ಪ್ರಪಂಚದಲ್ಲೇ ಮಾದರಿ ರಾಷ್ಟ್ರವಾಗಬೇಕಿತ್ತು. ಆದರೆ ಇಂದು ಯಾರದ್ದೋ ಸ್ವಾರ್ಥದ ಇತಾಸಕ್ತಿಗೆ ಯುವಜನತೆ ಬಲಿಯಾಗುತ್ತಿದೆ. ಶಿಕ್ಷಣದ ಬದಲಿಗೆ ದ್ವೇಷವನ್ನು ತುಂಬಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಭಾಗವಾಗಬೇಕಿದ್ದ ಯುವಜನರು ಕೋಮುವಾದ, ಮೂಢನಂಬಿಕೆ, ರಾಜಕೀಯ ಸ್ಪಹಿತಾಸಕ್ತಿ ಮತ್ತು ವ್ಯಾಸನಗಳಿಗೆ ಬಲಿಯಾಗುತ್ತಿದ್ದಾರೆ. ಯುವಜನರ ಸವಾಲುಗಳಾದ ಉದ್ಯೋಗ, ವೃತ್ತಿ ಮಾರ್ಗದರ್ಶನ, ಆಪ್ತಸಮಾಲೋಚನೆ, ಕೌಶಲ್ಯಗಳಿಗಾಗಿ ದನಿಯಾಗಬೇಕಿದ್ದ ಯುವಜನರು ಧರ್ಮ, ಜಾತಿಗಾಗಿ ರಕ್ತ ಹರಿಸುತ್ತಿದ್ದಾರೆ. ಇದು ವಿನಾಶಕ್ಕೆ ಬರೆಯುತ್ತಿರುವ ಮುನ್ನುಡಿಯಾಗುತ್ತಿದೆ. ಈ ಎಲ್ಲದಕ್ಕೂ ಮುಖ್ಯ ಕಾರಣ ವೈಜ್ಞಾನಿಕ ಚಿಂತನೆ ಮತ್ತು ವಿಮರ್ಶಾತ್ಮಕ ಆಲೋಚನೆ ಇಲ್ಲದಿರುವುದಾಗಿದೆ. ದೇಶದ ಮೂಲ ಗ್ರಂಥವಾದ ಸಂವಿಧಾನದಲ್ಲಿಯೇ ಈ ವಿಷಯ ಅಡವಾಗಿದೆ. ಸಂವಿಧಾನ 51 (ಎ) ಅಡಿಯಲ್ಲಿ ತಿಳಿಸುವ 11 ಮೂಲಭೂತ ಕರ್ತವ್ಯಗಳಲ್ಲಿ 51(ಎ)(ಹೆಚ್) “ ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಗಳನ್ನು ಬೆಳೆಸುವುದು” ಎಂದು ತಿಳಿಸುತ್ತದೆ. ಈ ಕಾರಣಕ್ಕಾಗಿಯೇ ಈ ಚಿಂತನೆಗಳು ಈಗಾಗಲೇ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಹಾಗಾಗಿ ಇನ್ನು ಮುಂದಾದರೂ ಯುವಜನತೆ ಎಚ್ಚೆತ್ತುಕೊಳ್ಳದಿದ್ದರೆ ದೇಶ ಅಳಿವಿನ ಅಂಚಿಗೆ ತಲುಪುವುದು ನಿಶ್ವಿತವಾಗುತ್ತದೆ.
ಮೇಘ ರಾಮದಾಸ್ ಜಿ .

ಮೇಘ ರಾಮದಾಸ್ ಜಿ
ಯುವಜನ ಕಾರ್ಯಕರ್ತರು
ತುಮಕೂರು. 776090809 ಮೇ 7



