ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಸ್ಟೇಟಿನ ದೊಡ್ಡ ಬಂಗಲೆಯ ಆವರಣದಲ್ಲಿಯೇ ಇರುವ ಮುಖ್ಯ ಕಚೇರಿಗೆ ಹೋಗಿ ಸಣ್ಣ ಸಾಹುಕಾರರನ್ನು ಕಂಡು ತನ್ನ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಬೇಕು ಮತ್ತು ದೀಪಾವಳಿ ಹಬ್ಬಕ್ಕೆ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಬೇಕು ಅಥವಾ ಸಿಹಿ ತಿನಿಸುಗಳನ್ನು ಮಾಡಿಕೊಡಬೇಕು ಎಂದು ಯೋಚಿಸುತ್ತಾ ಮಕ್ಕಳಿಬ್ಬರನ್ನು ಕರೆದು… “ನಾನು ಸಣ್ಣ ಸಾಹುಕಾರರನ್ನು ಭೇಟಿ ಮಾಡಿ ದೀಪಾವಳಿ ಹಬ್ಬಕ್ಕೆ ತೋಟದ ಕೆಲಸಗಾರರಿಗೆ ಕೊಡುವಂತೆ ಬೋನಸ್ ಅಥವಾ ಸ್ವಲ್ಪವಾದರೂ ಧನ ಸಹಾಯ ಮಾಡುವಂತೆ ಕೇಳಿಕೊಂಡು ಬರುತ್ತೇನೆ…. ನಾನು ಬರುವುದು ಎಷ್ಟೇ ಹೊತ್ತಾದರೂ ಪರವಾಗಿಲ್ಲ ನೀವು ನನ್ನ ಬಗ್ಗೆ ಚಿಂತಿಸದಿರಿ…. ಸಾಹುಕಾರರನ್ನು ಕಂಡು ಅವರಿಂದ ಸಹಾಯವನ್ನು ಪಡೆದು ಆದಷ್ಟು ಬೇಗ ಬರುತ್ತೇನೆ”… ಎಂದು ಹೇಳಿ ದೂರದಲ್ಲಿರುವ ದೊಡ್ಡ ಬಂಗಲೆಯ ಕಡೆಗೆ ಸುಮತಿ ಹೊರಟಳು. ಮಕ್ಕಳು ಅಮ್ಮ ಹೇಳಿದಂತೆ ಮನೆಯ ಕೆಲಸಗಳನ್ನು ಮುಗಿಸಿ ಎಂದಿನಂತೆ ತೋಟದಲ್ಲಿ ಅಡ್ಡಾಡಲು ಹೋದರು. ದೀಪಾವಳಿ ಹಬ್ಬದ ಸಮಯವಾಗಿದ್ದರಿಂದ ತೋಟದ ಕೂಲಿಕಾರ್ಮಿಕರಿಗೆ ರಜೆ ಇತ್ತು. ಬೋನಸ್ ಸಿಕ್ಕಿದ ಸಂತೋಷದಲ್ಲಿ ಮಕ್ಕಳಿಗೆ ಹೊಸ ಬಟ್ಟೆ, ಸಿಹಿ ತಿಂಡಿ, ಪಟಾಕಿಗಳನ್ನು ತಂದುಕೊಟ್ಟು ಸಂಭ್ರಮಿಸುತ್ತಿದ್ದರು. ಇದನ್ನು ಕಂಡ ಸುಮತಿಯ ಮಕ್ಕಳು ….”ಅಮ್ಮ ಸಣ್ಣ ಸಾಹುಕಾರರನ್ನು ಭೇಟಿ ಮಾಡಲು ಹೋಗಿದ್ದಾರೆ…. ನಮಗೂ ಹೊಸಬಟ್ಟೆ ಸಿಹಿ ತಿಂಡಿ ಹಾಗೂ ಪಟಾಕಿಗಳನ್ನು ಅಮ್ಮ ತರುತ್ತಾರೆ”….. ಎಂದು ಹೇಳುತ್ತಾ ಪರಸ್ಪರ ಸಮಾಧಾನ ಪಡೆಸಿಕೊಂಡರು. ಚಳಿಗಾಲವಾದ್ದರಿಂದ ತಂಪಾದ ಗಾಳಿಯು ಬೀಸುತಿದ್ದುದರಿಂದ ಚಳಿಯಾಗುತ್ತಿತ್ತು. ಹಾಗಾಗಿ ತೋಟದಲ್ಲಿ ಹೆಚ್ಚು ಹೊತ್ತು ಸುತ್ತಾಡಿ ನಲಿದಾಡದೆ ಅಕ್ಕ ತಂಗಿ ಇಬ್ಬರೂ ಮನೆಯ ಕಡೆಗೆ ನಡೆದರು. 

ಬಹುಶಃ ಇಷ್ಟೊತ್ತಿಗೆಲ್ಲ ಅಮ್ಮ ಬಂದಿರುತ್ತಾರೆ ಎಂದು ಇಬ್ಬರೂ ಉತ್ಸುಕರಾಗಿ ಓಡೋಡಿ ಬಂದು ಬಾಗಿಲ ಕಡೆಗೆ ನೋಡಿದರು. ಹಾಕಿದ ಬೀಗ ಹಾಗೆಯೇ ಇತ್ತು. ಬೆಳಗ್ಗೆ ಸಣ್ಣ ಸಾಹುಕಾರರನ್ನು ಭೇಟಿ ಮಾಡಲೆಂದು ಹೋದ ಅಮ್ಮ ಮಧ್ಯಾಹ್ನ ಕಳೆದರೂ ಬರೆದಿದ್ದ ಕಾರಣ, ಊಟ ಮಾಡುವ ಮನಸ್ಸು ಬಾರದೆ, ಬಾಗಿಲ ಬೀಗವನ್ನು ತೆರೆಯದೆ ಕೀಲಿ ಕೈಯನ್ನು ಕೈಯಲ್ಲಿ ಹಿಡಿದು ಅಮ್ಮನನ್ನು ಹುಡುಕುತ್ತಾ ಹೊರಟರು. ಮುಖ್ಯ ರಸ್ತೆಯಲ್ಲಿ ಸುಮಾರು ದೂರದವರೆಗೆ ನಡೆದರು. ಅಲ್ಲೆಲ್ಲಿಯೂ ಅಮ್ಮ ಕಾಣ ಸಿಗಲಿಲ್ಲ. ಹಾಗಾಗಿ ರೊಬಸ್ಟಾ ಕಾಫಿಯ ಗಿಡಗಳ ತೋಟದ ಒಳಗಿನ ಕಾಲುದಾರಿಯಲ್ಲಿ ಅಮ್ಮನನ್ನು ಹುಡುಕುತ್ತಾ ನಡೆದರು. ಅದೇ ದಾರಿಯಲ್ಲಿ ಆಲೆ ಹಣ್ಣಿನ ಮರವಿತ್ತು. ಮಧ್ಯಾಹ್ನದ ಊಟವನ್ನು ಮಾಡಿರದ ಕಾರಣ ಇಬ್ಬರಿಗೂ ಬಹಳ ಹಸಿವಾಗಿತ್ತು. ಆಲೆ ಹಣ್ಣಿನ ಮರದ ಬುಡಕ್ಕೆ ಬಂದರು. ಜೋರಾಗಿ ಬೀಸಿದ ಗಾಳಿಯಿಂದಾಗಿ ಮರದಿಂದ ಐದಾರು ಹಣ್ಣುಗಳು ಉದುರಿದ್ದವು. ಇಬ್ಬರೂ ಹಣ್ಣುಗಳನ್ನು ಎತ್ತಿಕೊಂಡು ಎರಡೆರಡು ಹಣ್ಣುಗಳನ್ನು ತಿಂದು ಉಳಿದೆರಡು ಹಣ್ಣುಗಳನ್ನು ಅಮ್ಮನಿಗಾಗಿ ಕೈಯಲ್ಲಿ ಹಿಡಿದುಕೊಂಡರು. ಬಹಳ ಸಿಹಿಯಾದ ತಿರುಳುಳ್ಳ ಸಪೋಟದಂತಹ ಹಣ್ಣಿನಂತೆ ಇದ್ದು ಹಣ್ಣಾದರೂ ಹೊರಮೈ ಹಸಿರಾಗಿರುತ್ತಿತ್ತು. ಹಣ್ಣನ್ನು ಕಚ್ಚಿದರೆ ಮೇಣವು ಒಸರುತ್ತಿತ್ತು. ಆದರೂ ಅಕ್ಕ-ತಂಗಿಯರು ತಪ್ಪದೇ ಆಲೆ ಹಣ್ಣನ್ನು ಈ ಕಾಲುದಾರಿಯಲ್ಲಿ ಬಂದಾಗ ಹುಡುಕಿ ತಿನ್ನುತ್ತಿದ್ದರು. ಹಣ್ಣು ತಿಂದಾಗ ಹಸಿವು ಸ್ವಲ್ಪ ಶಮನವಾಯಿತು. ನಂತರ ಅಮ್ಮನನ್ನು ಹುಡುಕಿಕೊಂಡು ಅದೇ ಕಾಲುದಾರಿಯಲ್ಲಿ ಮುನ್ನಡೆದರು. ಎಲ್ಲಿ ನೋಡಿದರೂ ಅಮ್ಮ ಕಾಣಿಸುತ್ತಿಲ್ಲ. ಬೆಳಗ್ಗೆ ತಿಂಡಿ ತಿಂದು ಹೋದ ಅಮ್ಮ ಮಧ್ಯಾಹ್ನ ಊಟಕ್ಕೆ ಏನು ಮಾಡಿದರು? 

ಬಹುಶಃ ಅಮ್ಮ ಏನೂ ತಿಂದಿರಲಕಿಲ್ಲ ಶುಗರ್ ಲೋ ಆಗಿ ತೋಟದ ನಡುವೆ ಎಲ್ಲಾದರೂ ಪ್ರಜ್ಞೆ ತಪ್ಪಿ ಬಿದ್ದಿರುವರೇ ಎನ್ನುತ್ತಾ ಗಿಡದ ನೆರಳುಗಳಲ್ಲಿ ಅಮ್ಮನನ್ನು ಹುಡುಕಾಡಿದರು. ಅಂದು ಸುಮತಿ ಉಟ್ಟಿದ್ದ ಸೀರೆಯು ಸಣ್ಣ ಸಾಹುಕಾರರ ಪತ್ನಿ ಅಮ್ಮ ಕೊಟ್ಟಿದ್ದ ಹಸಿರು ಎಲೆಗಳಿಂದ ಕೂಡಿದ ಬಿಳಿ ಬಣ್ಣ ಮಿಶ್ರಿತ ಸೀರೆಯಾಗಿತ್ತು. 

ಅಕ್ಕ ತಂಗಿಯರು ಅದನ್ನೇ ಗಮನದಲ್ಲಿಟ್ಟುಕೊಂಡು ಹುಡುಕುತ್ತಿದ್ದರಿಂದ ರೊಬಸ್ಟಾ ಗಿಡಗಳ ನೆರಳಿನಲ್ಲಿ ಕಾಣುತ್ತಿದ್ದ ಬಿಸಿಲು ನೆರಳಿನ ಬಿಂಬಗಳು ಅಮ್ಮ ಉಟ್ಟಿದ್ದ ಸೀರೆ ಎಂದು ಅನಿಸಿ ಅಲ್ಲಿ ಓಡಿ ಹೋಗಿ ನೋಡುವರು. ಅಮ್ಮನನ್ನು ಕಾಣದೆ ನಿರಾಶರಾಗಿ ಆತಂಕ ಪಟ್ಟು…” ಅಮ್ಮಾ….ಅಮ್ಮಾ… ಎಲ್ಲಿದ್ದೀಯಾ?… ಬೇಗ ಬಾಮ್ಮ”…. ಎಂದು ಇಬ್ಬರೂ ಅಳುವಿನ ಧ್ವನಿಯಲ್ಲಿ ಕೂಗಿದರು.

ಆದರೆ ಅಮ್ಮ ತಮ್ಮ ಧ್ವನಿಗೆ ಓಗೊಡುವುದು ಕೇಳಿಸುತ್ತಿರಲಿಲ್ಲ. ಇಬ್ಬರಿಗೂ ಅಳು ತಡೆಯಲಾಗಲಿಲ್ಲ ಬಿಕ್ಕಳಿಸಿದರು. ಅದೇ ವೇಳೆಗೆ ಅದೇ ಕಾಲುದಾರಿಯಲ್ಲಿ ಇವರು ವಾಸವಿದ್ದ ತೋಟದ ಕೂಲಿ ಕಾರ್ಮಿಕನೊಬ್ಬ ತೂರಾಡುತ್ತಾ ಇವರ ಮುಂದೆ ಬಂದು ನಿಂತನು. ಕಣ್ಣು ಮಿಟುಕಿಸುತ್ತಾ ಇವರಿಬ್ಬರನ್ನು ನೋಡುತ್ತಾ… “ಏನು ಟೀಚರಮ್ಮನ ಮಕ್ಕಳೇ…. ತೋಟದಲ್ಲಿ ನೀವೇನು ಮಾಡುತ್ತಿದ್ದೀರಿ…. ಎಂದಾಗ ಆತನ ಬಾಯಿಂದ ಬಂದ ಸಾರಾಯಿಯ ದುರ್ಗಂಧಕ್ಕೆ ಇಬ್ಬರೂ ಮೂಗು ಮುಚ್ಚಿಕೊಂಡರು. ಆದರೆ ಆತನಿಗೆ ಇದಾವ ಪರಿವೆಯೂ ಇರಲಿಲ್ಲ. ಇನ್ನೂ ಅವರ ಹತ್ತಿರ ಬಂದು…” ಎಲ್ಲಿಗೆ ಹೋಗುತ್ತಿರುವಿರಿ ಮಕ್ಕಳೇ”… ಎಂದು ತೊದಲಿದ. ಬೇರೆ ದಾರಿ ಕಾಣದೆ ಎರಡನೇ ಮಗಳು…” ನೀವು ಬರುವಾಗ ನಮ್ಮ ಅಮ್ಮನನ್ನು ಈ ದಾರಿಯಲ್ಲಿ ಕಂಡಿರಾ”…. ಎಂದು ಕೇಳಿದಳು. ಅದಕ್ಕೆ ಆತ ತೂರಾಡುತ್ತಾ ನಿಲ್ಲಲಾಗದೆ ಇವರ ಮೇಲೆ ಮುಗ್ಗರಿಸಿ ಬೀಳುವಂತೆ ಮುಂದೆ ವಾಲಿದ. 

ಇಬ್ಬರೂ ಹೆದರಿ ಪಕ್ಕಕ್ಕೆ ಸರಿದರು. ಆತ ಕಂಠಪೂರ್ತಿ ಕುಡಿದಿದ್ದರೂ ತೂರಾಡುತ್ತಾ ಕೆಳಗೆ ಬೀಳದೆ ಅಲ್ಲೇ ನಿಂತಿದ್ದ. ಅಕ್ಕ-ತಂಗಿಯರನ್ನು ದಿಟ್ಟಿಸಿ ನೋಡುತ್ತಾ… “ನಿಮ್ಮ ಅಮ್ಮ ಟೀಚರಮ್ಮ ದೊಡ್ಡ ಬಂಗಲೆಯ ಹತ್ತಿರ ಇರುವ ಆಫೀಸಿನ ಹತ್ತಿರ ಕುಳಿತಿದ್ದರು…. ಏನಾಯ್ತು ಮಕ್ಕಳೇ”…. ಎಂದು ಅವರ ಹೆಗಲ ಮೇಲೆ ಕೈ ಇಡಲು ಪ್ರಯತ್ನಿಸಿದ ಕೂಡಲೇ, ಅಕ್ಕ-ತಂಗಿಯರಿಬ್ಬರೂ ಹೆದರಿ ಒಬ್ಬರ ಕೈ ಇನ್ನೊಬ್ಬರು ಹಿಡಿದು ಅಲ್ಲಿಂದ ತಿರುಗಿ ನೋಡದೆ ಓಡಿದರು. ಆ ಕೂಲಿ ಕಾರ್ಮಿಕ… “ಹ್ಹ…ಹ್ಹ”… ಎಂದು ನಗುತ್ತಾ…”ಹೆದರಬೇಡಿ ಮಕ್ಕಳೇ… ನನ್ನನ್ನು ಕಂಡು ಅದೇಕೆ ಹೀಗೆ ಓಡುತ್ತಿರುವಿರಿ”…. ಎಂದನು. 

ಅಕ್ಕ-ತಂಗಿಯರಿಬ್ಬರು ಆತನ ಮಾತಿಗೆ ಕಿವಿಗೊಡದೆ ಆದಷ್ಟು ಬೇಗ ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವ ಆತುರದಲ್ಲಿದ್ದರು. ಅಲ್ಲಿಂದ ಮುಂದೆ ಸಾಗುವಾಗ ತೋಟದ ನಡುವೆ ದೊಡ್ಡದೊಂದು ಕೆರೆ ಇತ್ತು. ಕೆರೆಯ ಕಟ್ಟೆಯ ಹತ್ತಿರ ನಿಂತು…” ಅಮ್ಮಾ… ಅಮ್ಮಾ”… ಎಂದು ಜೋರಾಗಿ ಕೂಗಿದರು. ಕೆರೆಯ ಏರಿಯನ್ನು ದಾಟುವಾಗ ಸುಸ್ತಾಗಿ ಅಮ್ಮ ಕೆರೆಯಲ್ಲಿ ಬಿದ್ದಿರುವಳೇ ಎಂದು ಬಗ್ಗಿ ನೋಡಿದರು. ಅಲ್ಲಿ ಅಮ್ಮನನ್ನು ಕಾಣದಿದ್ದಾಗ ತುಸು ನೆಮ್ಮದಿಯಿಂದ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡು….”ಆ ಕುಡುಕ ಹೇಳಿದ್ದು ನಿಜವಿರಬೇಕು… ನಾವಿಬ್ಬರೂ ದೊಡ್ಡ ಬಂಗಲೆಯ ಹತ್ತಿರ ಹೋಗಿ ಅಮ್ಮನನ್ನು ಹುಡುಕೋಣ”,.. ಎನ್ನುತ್ತಾ ಕಡಿದಾದ ಗುಡ್ಡದ ಮಾರ್ಗದಲ್ಲಿ ಇಬ್ಬರೂ ಮುನ್ನಡೆದರು. ಓಡು ನಡಿಗೆಯಲ್ಲಿ ದೊಡ್ಡ ಗೇಟಿನ ಪಕ್ಕದಲ್ಲಿರುವ ಸಣ್ಣ ಗೇಟಿನ ಚಿಲಕವನ್ನು ನಿಧಾನವಾಗಿ ತೆಗೆದು ಬಂಗಲೆಯ ಹತ್ತಿರವಿರುವ ಆಫೀಸಿನ ಕಡೆಗೆ ನಡೆದರು. ಆಫೀಸಿನ ಮೆಟ್ಟಿಲಿನ ಮೇಲೆ ಗೋಡೆಗೆ ಒರಗಿ ಕಣ್ಣುಮುಚ್ಚಿ ಸುಮತಿ ಕುಳಿತಿರುವುದು ಕಂಡಿತು. …”ಅಮ್ಮಾ ….ಎಂದು ಒಕ್ಕೊರಲಿನಿಂದ ಕೂಗುತ್ತಾ, ಅಕ್ಕ ತಂಗಿಯರು ಇಬ್ಬರೂ ಕಣ್ಣುಮುಚ್ಚಿ ಕುಳಿತಿದ್ದ ಅಮ್ಮನ ಬಳಿಗೆ ಓಡಿದರು. 


About The Author

1 thought on “”

Leave a Reply

You cannot copy content of this page

Scroll to Top