ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ–15
ಮೈಸೂರು ವಿಭಾಗಕ್ಕೆ ಅರ್ಜಿ

ನಾವು ಅರ್ಜಿ ಹಾಕಿದಾಗ ಮೈಸೂರು ಸಹ ಬೆಂಗಳೂರು ವಿಭಾಗದ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಕೆಲಸದ ಆದೇಶ ಬರುವ ವೇಳೆಗೆ ಮೈಸೂರು ವಿಭಾಗ ಜುಲೈ ೧೯೮೮ ರಲ್ಲಿ ಸ್ಥಾಪಿತವಾಗಿತ್ತು. ಆದರೆ ನಿಯುಕ್ತಿ ಪ್ರಕ್ರಿಯೆಗಳು ಬೆಂಗಳೂರು ವಿಭಾಗದಲ್ಲಿ ನಡೆದದ್ದರಿಂದ ನಮಗೆ ಬೆಂಗಳೂರು ವಿಭಾಗದ ವ್ಯಾಪ್ತಿಗೆ ಒಳಪಟ್ಟ ಚಿಕ್ಕಬಳ್ಳಾಪುರ ಶಾಖೆಗೆ ಹಾಜರಾಗಲು ಆದೇಶ ಬಂದಿತ್ತು. ಈ ನಡುವೆ ಮೈಸೂರಿನ ವಿಭಾಗದಲ್ಲಿಯೂ ಸಹ ನಿಯುಕ್ತಿ ಪ್ರಕ್ರಿಯೆಗಳು ಆರಂಭವಾಗಿ ಸಹಾಯಕ ಟೈಪಿಸ್ಟ್ ಮತ್ತು ಶೀಘ್ರ ಲಿಪಿಕಾರರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು ಬೆಂಗಳೂರಿನ ಕಾರ್ಮಿಕ ಸಂಘದ ಮುಖ್ಯಸ್ಥರನ್ನು ಕೇಳಿದಾಗ ಇನ್ನೇನು ನಮ್ಮ ಕನ್ಫರ್ಮೇಶನ್ ಆದ ತಕ್ಷಣ ಮೈಸೂರಿಗೆ ವರ್ಗಾವಣೆ ಸಿಗುವುದರಿಂದ ಅರ್ಜಿ ಸಲ್ಲಿಸದಿದ್ದರೆ ಒಳ್ಳೆಯದು. ಅದರಲ್ಲೂ ಸಹಾಯಕ ಮತ್ತು ಟೈಪಿಸ್ಟ್ ಹುದ್ದೆ ಈಗಿರುವ ಹುದ್ದೆಯೇ ಆದ್ದರಿಂದ ಆರು ತಿಂಗಳು ಸರ್ವಿಸ್ ಕಡಿಮೆಯಾಗುತ್ತದೆ .ಅರ್ಜಿ ಹಾಕುವುದು ಬೇಡ ಎಂದರು .ಆದರೆ ಶೀಘ್ರ ಲಿಪಿಕಾರರ ಹುದ್ದೆಗೆ ಸ್ವಲ್ಪ ಹೆಚ್ಚು ಸಂಬಳ ಸಿಗುತ್ತಿದ್ದು ಅದು ವಿಭಾಗೀಯ ಕಚೇರಿಗಳಲ್ಲಿ ಮಾತ್ರ ಇರುವ ಹುದ್ದೆ ಆದ್ದರಿಂದ ಮೈಸೂರಿನಲ್ಲಿಯೇ ಇರಬಹುದು ಹಾಗೂ ವೇತನವು ಸ್ವಲ್ಪ ಹೆಚ್ಚು ಎಂದು ಹೇಳಿ ಅದಕ್ಕೆ ಮಾತ್ರ ಅರ್ಜಿ ಸಲ್ಲಿಸಿದೆ. ರೈಲ್ವೆ ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂಗಿ ಛಾಯಾ ಸಹ ಜೀವ ವಿಮಾ ನಿಗಮದ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಳು. ಶೀಘ್ರ ಲಿಪಿಕಾರರ ಹುದ್ದೆಗೆ ಆಂಗ್ಲ ಭಾಷೆಯ ಪರೀಕ್ಷೆ ಮಾತ್ರ ಇತ್ತು. ಈಗಾಗಲೇ ಈ ಮುಂಚೆ ತಯಾರಾದದ್ದು ಎಲ್ಲಾ ಮರೆತು ಹೋಗಿದ್ದರಿಂದ ಕೆಲವು ಪ್ರಶ್ನೆ ಪತ್ರಿಕೆಗಳನ್ನು ತರಿಸಿಕೊಂಡು ಅವುಗಳನ್ನು ಮಾತ್ರ ಅಭ್ಯಾಸ ಮಾಡಿದೆ .ನನ್ನ ತಂಗಿ ಕೆಲಸಕ್ಕೆ ಹೋಗಿ ಬಂದು ತರಬೇತಿ ಕಾರ್ಯಗಾರಗಳಿಗೆ ಹೋಗಲು ಕಷ್ಟವಾದಿದ್ದರಿಂದ ಕೆಲವು ಮಾತ್ರ ಅಟೆಂಡ್ ಮಾಡಿದ್ದಳು. ನಮ್ಮ ಫೆಡರೇಶನ್ ಕಾರ್ಯಾಗಾರಗಳು ದೂರ ಇದ್ದಿದ್ದರಿಂದ ಹಾಗೂ ಎ ಐ ಇ ಎ ಕಾರ್ಮಿಕ ಸಂಘದ ತರಬೇತಿ ಕೇಂದ್ರ ಹತ್ತಿರವಿದುದರಿಂದ ಒಂದೆರಡು ಬಾರಿ ಅಲ್ಲಿಗೆ ಹೋಗಿದ್ದಳು. ಸೆಪ್ಟೆಂಬರ್ 12ರಿಂದ ನಮಗೆ ತರಬೇತಿ ಅವಧಿ ಆರಂಭವಾಗಿದ್ದುದರಿಂದ ಸಾಂದರ್ಭಿಕ ರಜೆ ತೆಗೆದುಕೊಳ್ಳಲು ಆಗುತ್ತಿತ್ತು. ಹಾಗಾಗಿ ಲಿಖಿತ ಪರೀಕ್ಷೆ ಇದ್ದ ಭಾನುವಾರದ ಹಿಂದಿನ ದಿನ ಶನಿವಾರವೇ ಮೈಸೂರಿಗೆ ಹೋಗಿದ್ದೆ. ಹಾಗೂ ಪ್ರಥಮ ಬಾರಿಗೆ ಸಾಂದರ್ಭಿಕ ರಜೆ ಸೋಮವಾರ ಮತ್ತು ಮಂಗಳವಾರ ತೆಗೆದುಕೊಂಡಿದ್ದು ಬುಧವಾರ ಮೈಸೂರಿನಿಂದ ವಾಪಸ್ ಆದೆ. ಆಂಗ್ಲ ಭಾಷೆಯ ಪರೀಕ್ಷೆ ಮಾಮೂಲಿನಂತೆ ಚೆನ್ನಾಗಿಯೇ ಮಾಡಿದ್ದೆ. ಅದರಲ್ಲಿ ಉತ್ತೀರ್ಣಳೂ ಆದೆ. ನನಗಿಂತ ತುಂಬಾ ಜಾಣೆ ಆದಾ ಛಾಯ ಸಹ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಳು.
ಶೀಘ್ರಲಿಪಿಕಾರರ ಹುದ್ದೆಗೆ ಒಂದು ಸ್ಕಿಲ್ ಟೆಸ್ಟ್ ಇರುತ್ತದೆ. ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಪರೀಕ್ಷೆಗಳನ್ನು ಮಾಡಿ ಮುಗಿಸಿಕೊಂಡು ಈಗಾಗಲೇ ಎರಡು ವರ್ಷಗಳು ಮೇಲೆ ಆಗಿದ್ದರಿಂದ ನನಗೆ ಅದರಲ್ಲಿ ಸ್ಪೀಡ್ ಇರಲಿಲ್ಲ. ಆಫೀಸಿನಲ್ಲಿದ್ದ ಟೈಪಿಂಗ್ ಮಿಷಿನಿನಲ್ಲಿ ಭೋಜನ ವಿರಾಮದ ಸಮಯದಲ್ಲಿ ಸ್ವಲ್ಪ ಅಭ್ಯಾಸ ಮಾಡಿಕೊಂಡೆ. ಆದರೆ ಶಾರ್ಟ್ ಹ್ಯಾಂಡ್ ಉಕ್ತಲೇಖನ ಕೊಡುವವರು ಯಾರು ಇಲ್ಲದ್ದರಿಂದ ಅದರ ಅಭ್ಯಾಸ ಸರಿಯಾಗಿ ಆಗಲಿಲ್ಲ. ಈ ಪರೀಕ್ಷೆಯು ಕೂಡ ಒಂದು ಭಾನುವಾರವೇ ಇದ್ದಿದ್ದು ಆಗ ಒಂದು ದಿನ ಸಾಂದರ್ಭಿಕ ರಜೆ ತೆಗೆದುಕೊಂಡು ಹೋಗಿ ಮಂಗಳವಾರ ವಾಪಸಾದೆ. ಸ್ಕಿಲ್ ಟೆಸ್ಟ್ ಗೆ ಹೋದಾಗ ಉಕ್ತ ಲೇಖನವನ್ನೇನೋ ತೃಪ್ತಿಕರವಾಗಿ ತೆಗೆದುಕೊಂಡೆ. ಆದರೆ ನನಗೆ ಕೊಟ್ಟಿದ್ದ ಟೈಪಿಂಗ್ ಮಿಷನ್ ಅಷ್ಟು ಚೆನ್ನಾಗಿ ಇರದ್ದಿದುದರಿಂದ ಮಧ್ಯೆ ಕೈಕೊಟ್ಟಿತು. ಈಗಾಗಲೇ ತಾತ್ಕಾಲಿಕವಾಗಿ ಕೆಲವರು ಅಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದರು ಅವರುಗಳಿಗೆ ಅಲ್ಲಿನ ಮಿಷಿನ್ ಗಳ ಅಭ್ಯಾಸವಾಗಿದ್ದವು ಸ್ವಾಭಾವಿಕವಾಗಿ ಚೆನ್ನಾಗಿಯೇ ಟೈಪ್ ಮಾಡಿದ್ದರು ಅಲ್ಲದೆ ವಿಷಯಗಳು ಸಹ ಈಗಾಗಲೇ ಮಾಡಿದ ಕೆಲಸದ್ದರಿಂದ ಅವರಿಗೆ ಸರಾಗವಾಗಿತ್ತು. ನನ್ನ ಟೈಪಿಂಗ್ ಬಗ್ಗೆ ನನಗೇ ಸಮಾಧಾನ ಇರಲಿಲ್ಲ .ಇನ್ನು ಪರೀಕ್ಷೆ ಪಾಸ್ ಆಗುತ್ತದೆಯೇ? ಮೈಸೂರಿಗೆ ಬಂದು ಬೇಗ ವಾಪಸ್ಸು ಬಂದುಬಿಡಬಹುದು ಎಂಬ ನನ್ನ ಆಸೆ ಟುಸ್ ಆಯಿತು.
ನನ್ನ ತಂಗಿಗೆ ಸಂದರ್ಶನಕ್ಕೆ ಬಂದು ಚೆನ್ನಾಗಿ ಮಾಡಿದ್ದಳು. ನಂತರ ಆದೇಶ ಪತ್ರಗಳು ಬಂದು ಅವಳಿಗೆ ಅರಸೀಕೆರೆಗೆ ಪ್ರಥಮ ನಿಯುಕ್ತಿ ಆಗಿತ್ತು. ಇಲ್ಲಿ ರೈಲ್ವೆ ನಲ್ಲಿ ಅವಳು ಮೈಸೂರಿನಲ್ಲಿಯೇ ಇದ್ದಳು. ಈಗ ಅರಸೀಕೆರೆಗೆ ಹೋಗುವುದು ಬೇಡವೋ ಎಂಬ ಡೋಲಾಯಮಾನ ಪರಿಸ್ಥಿತಿ. ನಿರ್ಧಾರ ತೆಗೆದುಕೊಳ್ಳಲು ಸಹ ಕಷ್ಟವಾಯಿತು. ಆದರೆ ಕಾರ್ಮಿಕ ಸಂಘದವರು ರೈಲ್ವೆ ಗಿಂತ ಇಲ್ಲಿ ಹೆಚ್ಚಿನ ಅವಕಾಶಗಳು ಇದೆ ಹೊರಗೆ ಹೋದರು ಒಂದು ವರ್ಷದಲ್ಲಿ ಮತ್ತೆ ಮೈಸೂರಿಗೆ ವಾಪಸ್ ಆಗಬಹುದು ಎಂದು ಹೇಳಿದ್ದರಿಂದ ರೈಲ್ವೆ ಬಿಟ್ಟು ಜೀವವಿಮ ನಿಗಮಕ್ಕೆ ಸೇರುವ ನಿರ್ಧಾರ ಮಾಡಿದಳು. ಈ ಮಧ್ಯೆ ಅವಳಿಗೆ ಆಯ್ಕೆಯಾದ ವಿಷಯ ಪೋಸ್ಟಿಂಗ್ ಆದ ವಿಷಯ ಎಲ್ಲವನ್ನು ಎ ಐ ಇ ಎ ಕಾರ್ಮಿಕ ಸಂಘದವರೇ ಬಂದು ತಿಳಿಸಿದರು. ಏಕೋ ನಮ್ಮ ಫೆಡರೇಶನ್ ನವರು ನನ್ನ ತಂಗಿಯೇ ತಾನೆ ಎಂಬ ಉಡಾಫೆಯಿಂದಲೋ ಏನೋ ಯಾವ ವಿಷಯ ತಿಳಿಸಲು ಮುಂದೆ ಬರಲಿಲ್ಲ .ಹೀಗಾಗಿ ತನಗೆ ಸಹಾಯ ಮಾಡಿದ ಕಾರ್ಮಿಕ ಸಂಘಕ್ಕೆ ಸೇರುವೆ ಎಂದು ಅವಳು ನಿರ್ಧಾರ ಮಾಡಿದಳು. ರೈಲ್ವೆ ನಲ್ಲಿನ ಕಾರ್ಮಿಕ ಸಂಘಗಳ ಸದಸ್ಯರ ಮಧ್ಯೆ ಇದ್ದ ತಿಕ್ಕಾಟ ಘರ್ಷಣೆಗಳು ಎಲ್ಲವನ್ನು ನೋಡಿದ್ದ ನಮ್ಮ ತಂದೆ ನಮ್ಮಿಬ್ಬರಿಂದ ಭಾಷೆ ತೆಗೆದುಕೊಂಡರು .ಕಾರ್ಮಿಕ ಸಂಘಗಳ ವಿಷಯ ಮನೆಯಲ್ಲಿ ಹಾಗೂ ನಮ್ಮ ನಡುವೆ ಎಂದಿಗೂ ಬರಬಾರದು ಹಾಗೂ ಆ ವೈಷಮ್ಯ ನಮ್ಮ ನಡುವೆ ಎಂದೂ ಬರಬಾರದು ಮತ್ತು ಇರಬಾರದು ಎಂದು . ಅಂದಿನಿಂದ ಇಂದಿನವರೆಗೂ ನಮ್ಮ ತಂದೆಗೆ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ ಎಂಬ ಸಮಾಧಾನ ತೃಪ್ತಿ ನಮಗಿದೆ. ಅಲ್ಲದೆ ಬೇರೆ ರಂಗಗಳಂತೆ ಕಾರ್ಮಿಕ ಸಂಘಗಳ ಸದಸ್ಯರ ಮಧ್ಯೆ ಯಾವ ರೀತಿಯ ದ್ವೇಷ ನಮ್ಮ ಜೀವವಿಮಾ ನಿಗಮದ ಕಾರ್ಮಿಕ ಸಂಘಗಳ ಮಧ್ಯೆ ಇಲ್ಲ .ಎಲ್ಲರೂ ಸ್ನೇಹಿತರಂತೆ ಹೊಂದಿಕೊಂಡು ಹೋಗುತ್ತಾರೆ ಕೆಲವೊಂದು ವಿಷಯಗಳಲ್ಲಿ ಮಾತ್ರ ವೈರುಧ್ಯ ಬರುತ್ತದೆ. ಆದರೆ ವೃತ್ತಿ ಜೀವನವೇ ಬೇರೆ ವೈಯುಕ್ತಿಕ ಜೀವನವೇ ಬೇರೆ ಎಂಬ ಪಾಲಿಸಿ ನಮ್ಮೆಲ್ಲರದು.
ಸರಿ ಡಿಸೆಂಬರ್ 12 ಬಂದಿತ್ತು ಅಂದು ನಮ್ಮ ಕನ್ಫರ್ಮೇಶನ್ ಆಗುವ ದಿನ. ನಂತರದ ಒಂದು ವಾರದಲ್ಲಿ ಕನ್ಫರ್ಮೇಶನ್ ಪತ್ರಗಳು ಬಂದವು ಆದರೆ ನನ್ನ ಕನ್ಫರ್ಮೇಶನ್ ಆದೇಶ ಆ ಪತ್ರಗಳ ಜೊತೆ ಇರಲಿಲ್ಲ ನನಗಂತೂ ಬಹಳ ಗಾಬರಿಯಾಯಿತು ಇದೇನಪ್ಪ ನನ್ನ ಅದೃಷ್ಟ ನನಗೆ ಕನ್ಫರ್ಮೇಶನ್ ಆಗಲಿಲ್ಲವೇ ಎಂದು ಅಳು ಬರುವ ಹಾಗೆ ಆಯಿತು. ಬರುವ ಹಾಗೆ ಏನು ಕಣ್ಣೀರು ತುಂಬಿಕೊಂಡಿಯೇ ಹೋಯಿತು ಅದನ್ನು ನೋಡಿದ ಜಯಶ್ರೀ ಪ್ರಭಾಕರ್ ಹಾಗೂ ನಮ್ಮ ಶಾಕಾಧಿಕಾರಿಗಳ ಬಳಿ ಮಾತನಾಡಿದಾಗ ನಂತರ ನಮ್ಮ ಶಾಖಾಧಿಕಾರಿಗಳು ಬೆಂಗಳೂರಿನ ಕಾರ್ಮಿಕ ವಿಭಾಗಕ್ಕೆ ಫೋನಾಯಿಸಿ ಕೇಳಿದರು. ಆಗ ನನ್ನ ವೈಯುಕ್ತಿಕ ಫೈಲ್ ಎಲ್ಲೋ ಸೇರಿಕೊಂಡಿದ್ದು ಸಿಗುತ್ತಿಲ್ಲ. ಹಾಗಾಗಿ ಕನ್ಫರ್ಮೇಶನ್ ಪತ್ರ ತಯಾರಿಸಿಲ್ಲ .ಮತ್ತೇನು ತೊಂದರೆ ಇಲ್ಲ .ಇನ್ನೊಂದು ವಾರದಲ್ಲಿ ಕಳಿಸಿ ಕೊಡುವುದಾಗಿ ಹೇಳಿದರಂತೆ. ಶಾಖಾಧಿಕಾರಿಗಳು ಅದನ್ನು ನನಗೆ ತಿಳಿಸಿದಾಗ ಸಮಾಧಾನ ಆಯಿತು. ಆದರೂ ಆ ಒಂದೆರಡು ಗಂಟೆ ಒಂದು ರೀತಿಯ ಒತ್ತಡಕ್ಕೆ ಒಳಗಾಗಿದ್ದೆ. ಏನಪ್ಪಾ ಇದು ಪಾಪಿ ಸಮುದ್ರ ಹೊಕ್ಕರು ಮೊಳಕಾಲುದ್ದ ನೀರು ಎನ್ನುವ ಗಾದೆ ನನಗೇ ಏಕೆ ಅನ್ವಯವಾಗುತ್ತಿದೆ . ಕೆಲಸ ಸಿಕ್ಕರು ಕನ್ಫರ್ಮೇಶನ್ ಆದೇಶ ಬರಲಿಲ್ಲವಲ್ಲ ಎಂದೆಲ್ಲ ಯೋಚಿಸಿ ತಲೆ ಕೆಟ್ಟು ಹೋಗಿತ್ತು.
ಕನ್ಫರ್ಮೇಶನ್ ಆದಕಾರಣ ನಾವು ನಾಲ್ಕು ಜನ ಅಂದರೆ ನಾಗ ನಾನು ನಾಗರಾಜ್ ಮಾಧವನ್ ಮತ್ತು ನಾಗಲಕ್ಷ್ಮಿ ಸೇರಿ ಇಡೀ ಶಾಖೆಗೆ ಊಟವನ್ನು ಏರ್ಪಡಿಸಿದೆವು. ಆಗೆಲ್ಲಾ ಅದೇ ಅಭ್ಯಾಸ. ಲಕ್ಷಣವಾಗಿ ಬಾಳೆಎಲೆ ಹಾಕಿ ಒಬ್ಬಟ್ಟಿನ ಊಟ. ತುಂಬಾ ಚೆನ್ನಾಗಿ ಇತ್ತು. ಕನ್ಫರ್ಮೇಶನ್ ಆದೇಶ ಬಂದ ನಂತರ ಡಿಗ್ರಿ ಸರ್ಟಿಫಿಕೇಟ್ ಅನ್ನು ಕೊಟ್ಟರೆ ಗ್ರಾಜುಯೇಷನ್ ಅಲೋಯನ್ಸ್ ಎಂದು ಒಂದು ಮೊತ್ತ ಸಂಬಳದಲ್ಲಿ ಹೆಚ್ಚಾಗುತ್ತಿತ್ತು ಹಾಗೆ ಡಿಗ್ರಿ ಸರ್ಟಿಫಿಕೇಟ್ ಅನ್ನು ಕೊಟ್ಟು ಅದನ್ನು ಸಹ ಪಡೆದಾಯಿತು.
ನಮ್ಮ ತಂದೆಯ ಸಹೋದ್ಯೋಗಿಯ ಮಗಳು ವಸುಧಾ ಸಹ ಟೈಪಿಸ್ಟ್ ಆಗಿ ಅರಸೀಕೆರೆಗೆ ನಿಯುಕ್ತಿ ಆಗಿದ್ದರಿಂದ ನನ್ನ ತಂಗಿ ಮತ್ತು ವಸುಧಾ ಸೇರಿ ಅಲ್ಲಿ ಒಂದು ಸಣ್ಣ ಮನೆ ಮಾಡಿಕೊಂಡು ಇದ್ದರು. ಆ ಸಮಯದಲ್ಲಿ ನಮ್ಮಿಬ್ಬರ ಮಧ್ಯ ತುಂಬಾ ಪತ್ರ ಓಡಾಟಗಳು ನಡೆಯುತ್ತಿದ್ದವು. ಅವಳು ಸಹ ವಿಕ್ರಿಯ ವಿಭಾಗದಲ್ಲೇ ಇದ್ದುದ್ದರಿಂದ ನಾವು ಸೇರಿದಾಗ ಆಫೀಸಿನ ವಿಷಯಗಳು ಹೆಚ್ಚು ಮಾತನಾಡುತ್ತಿದ್ದೆವು. ನನ್ನ ಮತ್ತೊಬ್ಬ ತಂಗಿ ಮತ್ತಿತರರು ಸಾಕು ಆಫೀಸಿನ ವಿಷಯ ಎಂದು ಹೇಳುವವರೆಗೂ ಮಾತುಕತೆಗಳು ಮುಂದುವರೆಯುತ್ತಲೇ ಇದ್ದವು.
ಮತ್ತೆ ಸಂಕ್ರಾಂತಿಗೆ ಮೈಸೂರಿಗೆ ಹೋಗಿ ಬಂದು ಅಲ್ಲಿಂದ ಎಳ್ಳು ತಂದು ಇಲ್ಲಿ ಸಹ ಬೀರಿದ್ದಾಯಿತು.. ಈ ಮಧ್ಯೆ ಬೆಂಗಳೂರಿಗೆ ಆಸ್ಪತ್ರೆಯ ಓಡಾಟ ನಡೆಯುತ್ತಲೇ ಇತ್ತು.
ಆದರೆ ಏನೂ ಯಶಸ್ಸು ಸಿಗಲಿಲ್ಲ.
ಪರೀಕ್ಷೆಗೆ ಮುನ್ನ ತಯಾರಿಗೆ ರಜೆ ಕೊಟ್ಟಿದ್ದರಿಂದ ಡಿಪ್ಲೋಮೋ ಓದುತ್ತಿದ್ದ ನನ್ನ ತಂಗಿ ವೈಶಾಲಿ ಸ್ವಲ್ಪ ದಿನದ ಮಟ್ಟಿಗೆ ನಮ್ಮ ಮನೆಗೆ ಬಂದಿದ್ದಳು. ಅವಳಿಗೆ ಶೀಘ್ರ ಲಿಪಿ ಉಕ್ತಲೇಖನ ಕೊಟ್ಟು ಅಭ್ಯಾಸಕ್ಕೆ ನಾನು ಸಹಾಯ ಮಾಡುತ್ತಿದ್ದೆ. ಅವಳು ಬಂದಾಗ ಹೊರಗಡೆ ಎಲ್ಲೂ ಪ್ರವಾಸಕ್ಕೆ ಹೋಗಲಿಲ್ಲ. ಒಂದೆರಡು ಸಿನಿಮಾಗೆ ಹೋಗಿದ್ದೆವು ಅಷ್ಟೇ, ಆದರೆ ಅವಳನ್ನು ವಾಪಸ್ಸು ಕಳಿಸುವಾಗ ಒಂದು ಡ್ರೆಸ್ ತೆಗೆದುಕೊಳ್ಳೋಣ ಎಂದು ಅವಳು ಬಯಸಿದ್ದ ಆ ಧೋತಿ ಚೂಡಿದಾರ್ ಇಡೀ ಪೇಟೆ ಬೀದಿ ಹುಡುಕಿದರೂ ಸಿಕ್ಕದೆ ಕಾಲು ನೋಯಿಸಿಕೊಂಡಿದ್ದು ಮಾತ್ರ ಇನ್ನು ನೆನಪಿನಲ್ಲಿದೆ. ಹಾಗೆಯೇ ಮುಖ್ಯರಸ್ತೆಯಲ್ಲಿದ್ದ ಏಕೈಕ ಹೋಟೆಲಿಗೆ ಹೋಗಿ ಮಸಾಲೆ ದೋಸೆ ಐಸ್ ಕ್ರೀಮ್ ತಿಂದದ್ದು ನೆನಪಿನಲ್ಲಿದೆ. ಅಂದು ಅಲ್ಲಿನ ಸರ್ವರ್ ಗೆ ನಾನು ಒಂದು ರೂಪಾಯಿ ಟಿಪ್ಸ್ ಕೊಟ್ಟಿದ್ದನ್ನು ಈಗಲೂ ನೆನೆಸಿಕೊಂಡು ಹಾಸ್ಯ ಮಾಡುತ್ತಿರುತ್ತಾಳೆ ನನ್ನ ತಂಗಿ.
ಹೀಗಿರುವಾಗ ಮಾರ್ಚ್ ತಿಂಗಳಿನಲ್ಲಿ ನನ್ನ ಆತ್ಮೀಯ ಗೆಳತಿ ಶಶಿಯ ಮದುವೆ ಎಂಬ ವಿಷಯ ಹಾಗೂ ಕರೆಯೋಲೆ ಬಂದಿತ್ತು. ಅವಳ ಮದುವೆಗೆ ಒಳ್ಳೆಯ ಉಡುಗೊರೆ ನೀಡಬೇಕೆಂದು ಮೊಟ್ಟಮೊದಲ ಬಾರಿಗೆ ಮಿನಿ ಬ್ಯಾಂಕಿನಲ್ಲಿ ಸಾಲ ಮಾಡಿದೆ. ಒಂದು ಚಂದದ ಗೋಡೆ ಗಡಿಯಾರ ಅವಳಿಗೆ ಉಡುಗೊರೆ ಕೊಟ್ಟೆ . ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಅವಳ ಮದುವೆ ನಡೆದದ್ದು ಮೊನ್ನೆಯೂ ಸಹ ಉತ್ತರಾದಿ ಮಠಕ್ಕೆ ಹೋದಾಗ ಆ ಛತ್ರವನ್ನು ನೋಡಿ ಅಂದಿನ ದಿನವನ್ನು ನೆನಪಿಗೆ ತಂದಿತ್ತು.
ಬ್ಯಾಂಕ್ ಅಕೌಂಟ್ ತೆಗೆಯಲೇಬೇಕು ಎಂದು ಹೇಳಿದ್ದರಿಂದ ಮೊದಲ ಬಾರಿ ಬ್ಯಾಂಕ್ ಅಕೌಂಟ್ ನನ್ನ ಹೆಸರಿನಲ್ಲಿ ಆರಂಭವಾಯಿತು ಆದರೆ ಎಲ್ಲಾ ವಹಿವಾಟುಗಳನ್ನು ಕಚೇರಿಯಿಂದ ದಿನ ಬ್ಯಾಂಕಿಗೆ ಹೋಗುತ್ತಿದ್ದ ಉದ್ಯೋಗಿ ಒಬ್ಬರು ಮಾಡಿಕೊಡುತ್ತದೆ ಇದರಿಂದ ಬ್ಯಾಂಕ್ ಗೆ ಒಂದು ಬಾರಿಯೂ ಮುಖತಃ ಹೋಗಲೇ ಇಲ್ಲ .ಕಡೆಗೆ ಅಲ್ಲಿಂದ ವರ್ಗವಾಗಿ ಬರುವಾಗ ಅಕೌಂಟ್ ಮುಕ್ತಾಯಗೊಳಿಸಲು ಸಹ ಉದ್ಯೋಗಿಯ ಮುಖಾಂತರವೇ ಮಾಡಿದ್ದು.
ಸಾಂದರ್ಭಿಕ ರಜೆಯ ಜೊತೆಗೆ 11 ದಿನ ಕೆಲಸ ಮಾಡಿದರೆ ಒಂದು ದಿನ ಪ್ರಿವಿಲೆಜ್ ಲೀವ್( ಪಿಎಲ್) ನಮ್ಮ ಖಾತೆಗೆ ಬರುತ್ತದೆ. ಕೆಲವು ಕಡೆ ಅದನ್ನು ಸಂಪಾದಿತ ರಜೆ ಅಂದರೆ ಅರ್ನಡ್ ಲೀವ್ ಎಂದು ಸಹ ಹೇಳುತ್ತಾರೆ. ಡಿಸೆಂಬರ್ 12ಕ್ಕೆ ನಮ್ಮ ಕನ್ಫರ್ಮೇಶನ್ ಆದ ನಂತರ ಈ ರಜೆ ನನ್ನ ಅಕೌಂಟಿಗೆ ಜಮಾ ಆಗಲು ಆರಂಭವಾಗಿತ್ತು. ಐದು ಆರು ದಿನ ಇತ್ತು ಅಷ್ಟೇ .ಆದರೆ ಆಗ ಕನಿಷ್ಠ ಏಳು ದಿನವಾದರೂ ಹಾಕಬೇಕಿತ್ತು. ಮದುವೆ ವಾರದ ಮಧ್ಯ ಇದ್ದುದರಿಂದ ನಾಲ್ಕು ದಿನ ರಜೆಯಾದರೂ ಬೇಕೇ ಇತ್ತು. ಆಗ ನನಗೆ ಹಿರಿಯ ಸಹೋದ್ಯೋಗಿಗಳು ಕೊಟ್ಟ ಉಪಾಯ ಪಿಎಲ್ ಅನ್ನು ಕಾಯಿಲೆಯ ಕಾರಣಕ್ಕಾಗಿ ತೆಗೆದುಕೊಳ್ಳುವುದು. ಆಗ ಎರಡು ಅಥವಾ ಮೂರು ದಿನ ಬೇಕಾದರೂ ತೆಗೆದುಕೊಳ್ಳಬಹುದು .ಆದರೆ ಡಾಕ್ಟರರ ಒಂದು ಸರ್ಟಿಫಿಕೇಟ್ ರಜೆಯ ಅರ್ಜಿಯೊಂದಿಗೆ ಲಗತ್ತಿಸಬೇಕಿತ್ತು. ಹೀಗೆ ಮೊಟ್ಟ ಮೊದಲ ಬಾರಿಗೆ ರಜೆ ಹಾಕಿದಾಗ ಡಾಕ್ಟರ್ರ ಸರ್ಟಿಫಿಕೇಟ್ ಕೊಟ್ಟು ರಜೆ ಹಾಕಿ ಗೆಳತಿಯ ಮದುವೆ ಮುಗಿಸಿ ವಾಪಸ್ಸಾದೆ.
ನಮಗೆ ಕನ್ಫರ್ಮೇಶನ್ ಆದ ತಕ್ಷಣವೇ ಶಾಖಾಧಿಕಾರಿಗಳು ಪಾಲಿಸಿ ಮಾಡಲು ಹೇಳಿದರು ಆಗ ತೆಗೆದುಕೊಂಡ ಪಾಲಿಸಿಗಳನ್ನು ನಿವೃತ್ತಿಯ ತನಕ ಅಂದರೆ 37 ವರ್ಷಗಳ ಅವಧಿ ವರೆಗೆ ಪಾಲಿಸಿ ತೆಗೆದುಕೊಂಡಿದ್ದೆ .ವಿಮೆಯ ಹಣವು ಅಷ್ಟೇ ಕಡಿಮೆ ಹಾಗೆ ಪ್ರೀಮಿಯಂ ಸಹ ಕಡಿಮೆ.
ನಂತರ ಮಾರ್ಚ್ ನಲ್ಲಿ ಉದ್ಯೋಗದ ಅವಧಿಯಲ್ಲಿನ ಪ್ರಪ್ರಥಮ ವರ್ಷಾಂತ್ಯದ ಅನುಭವ ಆಯಿತು. ಮಾರ್ಚ್ ಕಡೆಯ ವಾರ ಹಾಗೂ ಏಪ್ರಿಲ್ ನ ಮೊದಲ ಎಂಟು ಹತ್ತು ದಿನಗಳು ನಡೆಯುವ ವಹಿವಾಟುಗಳು ಆಗ ಮಾಡಬೇಕಾದ ವಿಶೇಷ ಕೆಲಸಗಳು ಇವೆಲ್ಲವೂ ಹೊಸ ರೀತಿಯ ಅನುಭವ ಕೊಟ್ಟವು. ಅಂದಿನಿಂದ ಈಗಿನವರೆಗೂ ಹಾಗೆ ವರ್ಷಾಂತ್ಯದ ಕೆಲಸಗಳು ಎಂದರೆ ಶೈಕ್ಷಣಿಕ ವರ್ಷದ ಕಡೆಯ ಪರೀಕ್ಷೆಗಳು ಇದ್ದಂತೆ. ಅದು ಮುಗಿಯುವವರೆಗೂ ಒಂದು ರೀತಿಯ ಒತ್ತಡ. ಮುಗಿದ ಮೇಲೆ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಯಂತೆ ಒಂದು ರೀತಿಯ ಸಮಾಧಾನದ ಭಾವ.
ಮುಂದಿನ ವರ್ಷ ಆರಂಭಕ್ಕಾಗಿ ಹೊಸ ಪಾಲಿಸಿ ನನ್ನಿಂದಲೇ ಆಗಬೇಕು ಎಂದು ಶಾಖಾಧಿಕಾರಿಗಳು ಹೇಳಿದ್ದರಿಂದ ಆಗ ಒಂದು ಮನಿ ಬ್ಯಾಕ್ ಪಾಲಿಸಿ ಮತ್ತು ಇನ್ನೊಂದು ಎಂಡೋಮೆಂಟ್ ಪಾಲಿಸಿಗಳನ್ನು ತೆಗೆದುಕೊಂಡು ಆಯಿತು. ಆ ಎರಡು ಪಾಲಿಸಿಗಳು ಈಗಾಗಲೇ ಮೆಚೂರ್ ಆಗಿ ಹಣವನ್ನು ತೆಗೆದುಕೊಂಡು ಮುಗಿಯಿತು. “ನನ್ನಿಂದ ಬೋಣಿ ಆಗುತ್ತಿರುವುದು ಒಳ್ಳೆಯ ಬಿಸಿನೆಸ್ ನಡೆಯಲಿ” ಎಂದು ದೇವರನ್ನು ಕೇಳಿಕೊಂಡು ಅಂದು ಪ್ರಥಮ ಪ್ರಪೋಸಲ್ ಪೇಪರ್ ಗಳನ್ನು ಕೊಟ್ಟಿದ್ದೆ .ಆ ವರ್ಷದ ಹೊಸ ವ್ಯವಹಾರ ಚೆನ್ನಾಗಿ ಆಗಿ ಚಿಕ್ಬಳ್ಳಾಪುರ ಶಾಖೆ ತನ್ನ ಗುರಿ ಸಾಧಿಸಿತು ಎಂದು ತಿಳಿದು ನಂತರದಲ್ಲಿ ಖುಷಿ ಆಯಿತು.
ಕನ್ಫರ್ಮೇಶನ್ ಆದ ನಂತರ ಮೊಟ್ಟಮೊದಲಿಗೆ ಮಾಡಿದ ಕೆಲಸವೆಂದರೆ ನಮ್ಮ ವರ್ಗಾವಣೆ ಅರ್ಜಿಗಳನ್ನು ಸಲ್ಲಿಸಿದ್ದು. ಮೈಸೂರಿಗೆ ಅರ್ಜಿ ಸಲ್ಲಿಸುವಾಗ ಮೈಸೂರು ನಗರ ಹಾಗೂ ಹತ್ತಿರವೇ ಇದ್ದ ಶ್ರೀರಂಗಪಟ್ಟಣ ಮತ್ತು ನಂಜನಗೂಡುಗಳಿಗೆ ನಮ್ಮ ಆದ್ಯತೆಗಳನ್ನು ಕೊಡಬೇಕು ಎಂದು ಕಾರ್ಮಿಕ ಸಂಘದ ಮುಖ್ಯಸ್ಥರಾದ ಕಾರ್ಯದರ್ಶಿ ಸುಂದರ ಮೂರ್ತಿ ಅವರು ಈಗಾಗಲೇ ತಿಳಿಸಿದ್ದರು. ಅದರಂತೆಯೇ ಅರ್ಜಿಗಳನ್ನು ಕೊಟ್ಟಿದ್ದೆ. ಅದು ಪ್ರಪ್ರಥಮ ವರ್ಗಾವಣೆ ಕೋರಿ ಸಲ್ಲಿಸಿದ ಅರ್ಜಿ. ಅಲ್ಲಿಂದ ಮುಂದೆ 2004ರಲ್ಲಿ ಈಗ ಇರುವ ಮೈಸೂರು ಐದು ಶಾಖೆಗೆ ಬರುವ ತನಕ ಪ್ರತಿಯೊಂದು ಶಾಖೆಯಲ್ಲೂ ರಿಪೋರ್ಟ್ ಮಾಡಿಕೊಂಡ ತಕ್ಷಣ ವರ್ಗಾವಣೆ ಅರ್ಜಿ ಸಲ್ಲಿಸುವುದು ವಾಡಿಕೆ ಆಗಿಬಿಟ್ಟಿತ್ತು. ಒಂದು ಕೈಯಲ್ಲಿ ರಿಪೋರ್ಟಿಂಗ್ ಪತ್ರ ಮತ್ತೊಂದು ಕೈಯಲ್ಲಿ ವರ್ಗಾವಣೆ ಕೋರಿಕೆ ಸಲ್ಲಿಕೆ ಅರ್ಜಿ. ಇಲ್ಲಿಗೆ ಬಂದ ನಂತರ ಬೇರೆಲ್ಲಿಗೂ ಅರ್ಜಿ ಸಲ್ಲಿಸದೆ ಅಲ್ಲಿಂದ ಇಂದಿನವರೆಗೂ ಇದೇ ಶಾಖೆಯಲ್ಲಿ ಮುಂದುವರೆದಿದ್ದೇನೆ ಎಂಬ ಹೆಮ್ಮೆ ಹಾಗೂ ಸಂತೋಷ ಮತ್ತು ಒಂದು ರೀತಿಯ ನಿರಾಳ ಭಾವ.
(ಮುಂದಿನ ವಾರ, ಮುಂದುವರೆಯುತ್ತದೆ)
ಸುಜಾತಾರವೀಶ್





ಚೆಂದದ ಅಭಿವ್ಯಕ್ತಿ ಮೇಡಂ
ಚಂದದ ಬರಹ
ಧನ್ಯವಾದಗಳು.
ಸುಜಾತಾ ರವೀಶ್
ಧನ್ಯವಾದಗಳು.
ಸುಜಾತಾ ರವೀಶ್
ನಿಮ್ಮ ವೃತ್ತಿ ಜೀವನದ ನೆನಪುಗಳ ಮೆರವಣಿಗೆ ಹೀಗೆಯೇ ಮುಂದುವರೆಯಲಿ ಎಂದು ಹಾರೈಸುತ್ತೇನೆ ಸುಜಾತಾ….ಎ.ಹೇಮಗಂಗಾ
ತುಂಬು ಹೃದಯದ ಧನ್ಯವಾದಗಳು ಹೇಮಾ